More

    ಫೋನ್ ಚಾರ್ಜ್​ ಮಾಡುವ ಅಗತ್ಯವೇ ಇಲ್ಲ: ಶೀಘ್ರದಲ್ಲೇ ಬರಲಿದೆ 50 ವರ್ಷ ಬಾಳಿಕೆ ಬರುವ ಬ್ಯಾಟರಿ!!

    ಬೀಜಿಂಗ್​: ಬ್ಯಾಟರಿ ಖಾಲಿಯಾಗಿ ಮೊಬೈಲ್​ಫೋನ್​ ಬಂದಾದರೆ ಜೀವವೇ ಹೋದಂತಾಗುತ್ತದೆ. ಆದರೆ, ಈಗ ಹೊಸ ಬ್ಯಾಟರಿಯೊಂದನ್ನು ಸಂಶೋಧನೆ ಮಾಡಲಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡುವ ಅಗತ್ಯವೇ ಇಲ್ಲ. ಇದು 50 ವರ್ಷಗಳವರೆಗೆ ಬಾಳಿಕೆ ಬರುತ್ತದೆ.

    ಚಾರ್ಜಿಂಗ್ ಅಥವಾ ನಿರ್ವಹಣೆಯ ಅಗತ್ಯವಿಲ್ಲದೆ 50 ವರ್ಷಗಳವರೆಗೆ ವಿದ್ಯುತ್ ಉತ್ಪಾದಿಸಬಹುದು ಎಂದು ಹೇಳಲಾಗುವ ಹೊಸ ಬ್ಯಾಟರಿಯನ್ನು ಚೀನಾದಲ್ಲಿ ಸ್ಟಾರ್ಟ್-ಅಪ್ ಕಂಪನಿಯೊಂದು ಅಭಿವೃದ್ಧಿಪಡಿಸಿದೆ. ದಿ ಇಂಡಿಪೆಂಡೆಂಟ್​ನಲ್ಲಿ ಈ ಕುರಿತು ವರದಿಯೊಂದು ಪ್ರಕಟವಾಗಿದೆ. ಈ ಕಂಪನಿಯು ಪರೀಕ್ಷೆಯನ್ನು ಪೂರ್ಣಗೊಳಿಸಿದ ನಂತರ ಮತ್ತು ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಪಡೆದ ನಂತರ ಬ್ಯಾಟರಿಯ ಸಾಮೂಹಿಕ ಉತ್ಪಾದನೆಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸುವ ನಿರೀಕ್ಷೆಯಿದೆ.

    ಬೀಜಿಂಗ್ ಮೂಲದ ಬೀಟಾವೋಲ್ಟ್ ಅಭಿವೃದ್ಧಿಪಡಿಸಿದ ಪರಮಾಣು ಬ್ಯಾಟರಿ ಇದಾಗಿದೆ. “ನ್ಯೂಕ್ಲಿಯರ್” (ಪರಮಾಣು) ಪದವನ್ನು ಓದಿದ ನಂತರ ಬೃಹತ್ ಗಾತ್ರವನ್ನು ಊಹಿಸಬೇಡಿ. ಒಂದು ನಾಣ್ಯಕ್ಕಿಂತ ಚಿಕ್ಕದಾದ ಮಾದರಿಗೆ 63 ಐಸೊಟೋಪ್‌ಗಳನ್ನು ಅಳವಡಿಸುವಲ್ಲಿ ಈ ಸಂಸ್ಥೆ ಯಶಸ್ವಿಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

    ಪರಮಾಣು ಶಕ್ತಿಯ ವಾಮನ ರೂಪದ ವಿಶ್ವದ ಮೊದಲ ಬ್ಯಾಟರಿ ಇದಾಗಿದೆ ಎಂದು ಸಂಸ್ಥೆ ಹೇಳಿದೆ.

    ಮುಂದಿನ ಪೀಳಿಗೆಯ ಬ್ಯಾಟರಿಯನ್ನು ಈಗಾಗಲೇ ಪರೀಕ್ಷಿಸಲಾಗುತ್ತಿದ್ದು, ಫೋನ್‌ಗಳು ಮತ್ತು ಡ್ರೋನ್‌ಗಳಂತಹ ವಾಣಿಜ್ಯ ಅಪ್ಲಿಕೇಶನ್‌ಗಳಿಗಾಗಿ ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ ಎಂದು ಬೀಟಾವೋಲ್ಟ್​ ಹೇಳಿದೆ.

    “ಪರಮಾಣು ಶಕ್ತಿ ಬ್ಯಾಟರಿಗಳು ಏರೋಸ್ಪೇಸ್, ಎಐ ಉಪಕರಣಗಳು, ವೈದ್ಯಕೀಯ ಉಪಕರಣಗಳು, ಮೈಕ್ರೊಪ್ರೊಸೆಸರ್‌ಗಳು, ಸುಧಾರಿತ ಸಂವೇದಕಗಳು, ಸಣ್ಣ ಡ್ರೋನ್‌ಗಳು ಮತ್ತು ಮೈಕ್ರೋ-ರೋಬೋಟ್‌ಗಳಂತಹ ಉಪಕರಣಗಳಲ್ಲಿ ದೀರ್ಘಕಾಲೀನ ವಿದ್ಯುತ್ ಪೂರೈಕೆಯ ಅಗತ್ಯಗಳನ್ನು ಪೂರೈಸಬಲ್ಲವು” ಎಂದು ಕಂಪನಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

    ಈ ಬ್ಯಾಟರಿಯು 15 x 15 x 5 ಮಿಲಿ ಮೀಟರ್‌ಗಳನ್ನು ಅಳತೆ ಹೊಂದಿದೆ. ನ್ಯೂಕ್ಲಿಯರ್ ಐಸೊಟೋಪ್‌ಗಳು ಮತ್ತು ಡೈಮಂಡ್ ಸೆಮಿಕಂಡಕ್ಟರ್‌ಗಳ ವೇಫರ್-ತೆಳುವಾದ ಪದರಗಳಿಂದ ಮಾಡಲ್ಪಟ್ಟಿದೆ. ನ್ಯೂಕ್ಲಿಯರ್ ಬ್ಯಾಟರಿಯು ಪ್ರಸ್ತುತ 3 ವೋಲ್ಟ್‌ಗಳಲ್ಲಿ 100 ಮೈಕ್ರೋವ್ಯಾಟ್‌ಗಳಷ್ಟು ಶಕ್ತಿಯನ್ನು ಉತ್ಪಾದಿಸುತ್ತದೆ. 2025 ರ ವೇಳೆಗೆ 1-ವ್ಯಾಟ್ ವಿದ್ಯುತ್ ಉತ್ಪಾದನೆಯನ್ನು ತಲುಪುವುದು ಗುರಿ ಇಟ್ಟುಕೊಳ್ಳಲಾಗಿದೆ. ಇದರಲ್ಲಿನ ವಿಕಿರಣವು ಮಾನವ ದೇಹಕ್ಕೆ ಯಾವುದೇ ಅಪಾಯವನ್ನುಂಟು ಮಾಡುವುದಿಲ್ಲ ಎಂದು ಬೀಟಾವೋಲ್ಟ್ ಹೇಳಿದೆ, ಇದನ್ನು ಪೇಸ್‌ಮೇಕರ್‌ಗಳಂತಹ ವೈದ್ಯಕೀಯ ಸಾಧನಗಳಲ್ಲಿ ಕೂಡ ಬಳಸಬಹುದಾಗಿದೆ ಎಂದು ಕಂಪನಿ ತಿಳಿಸಿದೆ.

    ಪರಮಾಣು ಶಕ್ತಿಯ ಬ್ಯಾಟರಿಗಳು ಪರಿಸರ ಸ್ನೇಹಿಯಾಗಿರುತ್ತವೆ. ಕೊಳೆಯುವಿಕೆಯ ಅವಧಿಯ ನಂತರ, 63 ಐಸೊಟೋಪ್​ಗಳು ತಾಮ್ರದ ಸ್ಥಿರ ಐಸೊಟೋಪ್ ಆಗಿ ಬದಲಾಗುತ್ತವೆ, ಇದು ವಿಕಿರಣಶೀಲವಲ್ಲ. ಅಲ್ಲದೆ, ಪರಿಸರಕ್ಕೆ ಯಾವುದೇ ಬೆದರಿಕೆ ಅಥವಾ ಮಾಲಿನ್ಯವನ್ನು ಉಂಟು ಮಾಡುವುದಿಲ್ಲ ಎಂದೂ ಕಂಪನಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts