More

    ಜಿಲ್ಲೆಯ ಮಕ್ಕಳಿಗೂ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ

    ಮಡಿಕೇರಿ:

    ಪ್ರತಿ ವರ್ಷವೂ ಯುಪಿಎಸ್‌ಸಿ ಪರೀಕ್ಷೆ ಫಲಿತಾಂಶ ಬಂದಾಗ ಸಾಮಾನ್ಯವಾಗಿ ಕೊಡಗಿನವರಿಗೆ ನಿರಾಸೆ ಕಾದಿರುತ್ತದೆ. ಫಲಿತಾಂಶ ಪಟ್ಟಿಯಲ್ಲಿ ಹುಡುಕಿದರೆ ಜಿಲ್ಲೆಯಿಂದ ಒಬ್ಬರ ಹೆಸರೂ ಇರುವುದಿಲ್ಲ.

    ಆದರೆ ಈ ವರ್ಷ ಕೇಂದ್ರ ಲೋಕಸೇವಾ ಆಯೋಗದ ೨೦೨೪ನೇ ಸಾಲಿನ ಫಲಿತಾಂಶ ಪ್ರಕಟವಾದ ವೇಳೆ ಕೊಡಗಿನ ಕೆ.ಎಲ್. ಸೂರಜ್ ಯುಪಿಎಸ್‌ಸಿ ಪರೀಕ್ಷೆಯಲ್ಲಿ ೭೧೩ನೇ ರ‌್ಯಾಂಕ್ ಪಡೆದಿರುವುದು ಸ್ವಲ್ಪ ಖುಷಿ ಕೊಟ್ಟಿದೆ.

    ಕ್ರೀಡೆ, ಸೈನ್ಯ, ಸಿನಿಮಾ, ವೈಮಾನಿಕ, ಶಿಕ್ಷಣ, ನ್ಯಾಯಾಂಗ ಸೇರಿದಂತೆ ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕೊಡಗಿನವರು ನಾಗರಿಕ ಸೇವಾ ಸೇವಾ ಕ್ಷೇತ್ರದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಕಂಡು ಬರುತ್ತಾರೆ. ಜಿಲ್ಲೆಯಲ್ಲಿ ಬುದ್ಧಿವಂತರ ಸಂಖ್ಯೆಗೇನೂ ಕಡಿಮೆ ಇಲ್ಲ. ಸೂಕ್ತ ಮಾರ್ಗದರ್ಶನ, ತರಬೇತಿ ಸಿಕ್ಕಿದರೆ ಇಲ್ಲಿಯ ಯುವ ಜನಾಂಗವೂ ಯುಪಿಎಸ್‌ಸಿ, ಕೆಪಿಎಸ್‌ಸಿಯಂತಹ ನಾಗರಿಕ ಸೇವಾ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಬಲ್ಲರು ಎನ್ನುವುದು ಸ್ಥಳೀಯರ ಸಾರ್ವತ್ರಿಕ ಅಭಿಪ್ರಾಯ.

    ಕೊಡಗಿನಲ್ಲಿ ಕಳೆದ ವರ್ಷ ಪ್ರತ್ಯೇಕ ವಿಶ್ವವಿದ್ಯಾಲಯ ಆಗಿದೆ. ಸರ್ಕಾರಿ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜು ಕೂಡ ಇದೆ. ವರ್ಷಂಪ್ರತಿ ಸಾವಿರಾರು ಸಂಖ್ಯೆಯಲ್ಲಿ ಪದವೀಧರರು ಹೊರಬರುತ್ತಿದ್ದಾರೆ. ಇಂಥವರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾರ್ಗದರ್ಶನ ಮತ್ತು ಉನ್ನತ ಮಟ್ಟದ ತರಬೇತಿ ಕೊಡುವ ಸಂಸ್ಥೆಯೊಂದರ ತುರ್ತು ಅಗತ್ಯ ಜಿಲ್ಲೆಗೆ ಇದೆ. ಇದರಿಂದ ನಾಗರಿಕ ಸೇವಾ ಕ್ಷೇತ್ರದಲ್ಲೂ ಕೊಡಗಿನವರು ಹೆಸರು ಮಾಡಬಲ್ಲರು.
    ಜಿಲ್ಲೆಯ ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ವೃತ್ತಿಪರ ಕೋರ್ಸ್‌ಗಳ ಕಡೆಗೆ ಇರುವ ಆಸಕ್ತಿ ನಾಗರಿಕ ಸೇವೆಗಳಲ್ಲಿ ಕಂಡುಬರುತ್ತಿಲ್ಲ. ಈ ನಿಟ್ಟಿನಲ್ಲಿ ಹೆಚ್ಚು ಯುವಕರು ನಾಗರಿಕ ಸೇವಾ ಪರೀಕ್ಷೆಗಳ ಕಡೆಗೆ ಆಸಕ್ತರಾಗಲು ಏನು ಮಾಡಬಹುದು ಎನ್ನುವುದರ ಬಗ್ಗೆ ವಿಜಯವಾಣಿ ಓದುಗರು ಲೌಡ್ ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

    ಕೊಡಗಿನಲ್ಲಿ ಒಳ್ಳೆಯ ಕೋಚಿಂಗ್ ಸೆಂಟರ್ ಅಗತ್ಯ ಇದೆ. ದೂರದ ಊರುಗಳಿಗೆ ಹೋಗಿ ಕೋಚಿಂಗ್ ಪಡೆಯುವುದು ಕಷ್ಟದ ಕೆಲಸ. ಮಧ್ಯಮ ವರ್ಗದ ಜನರಿಗೆ ಇದು ಹೊರೆಯಾಗಲಿದೆ. ಇಲ್ಲಿಯೇ ಉತ್ತಮವಾದ ಕೋಚಿಂಗ್ ಸೆಂಟರ್ ಆರಂಭವಾಗಬೇಕು ಮತ್ತು ವಿದ್ಯಾರ್ಥಿಗಳಲ್ಲಿ ಇದರ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ಆಗಬೇಕು.
    ನೂತನ್, ಗೋಣಿಕೊಪ್ಪ ನಿವಾಸಿ

    ಬೇರೆ ಕಡೆಗಳಲ್ಲಿ ಸಣ್ಣ ವಯಸ್ಸಿನಿಂದಲೇ ಮಕ್ಕಳಲ್ಲಿ ಲೋಕಸೇವೆಯ ಬಗ್ಗೆ ಇರುವ ಆಸಕ್ತಿ ಗುರುತಿಸಿ ಅವರಿಗೆ ಓದಿನ ಜೊತೆಯಲ್ಲಿಯೇ ವಿಶೇಷ ತರಬೇತಿ ನೀಡಲಾಗುತ್ತದೆ. ಅಂತಹ ಕೆಲಸ ನಮ್ಮ ಜಿಲ್ಲೆಯಲ್ಲಿ ಆಗಬೇಕು. ಈಗಷ್ಟೇ ಅಲ್ಲೊಂದು ಇಲ್ಲೊಂದು ಕೋಚಿಂಗ್ ಸೆಂಟರ್ ಆರಂಭಗೊಂಡಿದೆ. ಮುಂದೆ ದೆಹಲಿ ಮುಂತಾದ ಕಡೆ ನೀಡುವ ಹಾಗೆ ಗುಣಮಟ್ಟದ ಕೋಚಿಂಗ್ ಸಿಕ್ಕಲ್ಲಿ ಇನ್ನಷ್ಟು ಜನರು ಆಯ್ಕೆ ಆಗಿ ಬರುತ್ತಾರೆ.
    -ಡಾ. ರೇವತಿ ಪೂವಯ್ಯ, ಪ್ರಾಧ್ಯಾಪಕರು, ಕಾವೇರಿ ಕಾಲೇಜು, ಗೋಣಿಕೊಪ್ಪ

    ಕೇಂದ್ರ ಲೋಕಸೇವಾ ಆಯೋಗದ ಪ್ರಸಕ್ತ ಸಾಲಿನ ಫಲಿತಾಂಶ ಕೊಡಗಿಗೆ ಹೆಮ್ಮೆ ತಂದಿದೆ. ಮುಂದಿನ ದಿನಗಳಲ್ಲಿ ನಮ್ಮ ಜಿಲ್ಲೆಯಿಂದ ಈ ರೀತಿಯ ಹೆಚ್ಚು ಹೆಚ್ಚು ಸಾಧಕರು ರೂಪುಗೊಳ್ಳಲಿ.
    ವಿದ್ಯಾರ್ಥಿಗಳಲ್ಲಿ ಓದಿನ ಜತೆಗೆ ವೃತ್ತಿಪರ ಕೋರ್ಸ್‌ಗಳ ಮಹತ್ವದ ಬಗ್ಗೆ ಹೆಚ್ಚು ಮಾಹಿತಿ ನೀಡಿ ಸಾಧಕರ ಪರಿಚಯ ಮಾಡಿಕೊಡಬೇಕು. ನಮ್ಮ ಕೊಡಗಿನ ವಿದ್ಯಾರ್ಥಿಗಳಿಗೆ ಲೋಕಸೇವಾ ಹುದ್ದೆಗೆ ಸೇರಲು ಆಸಕ್ತಿ ಇದ್ದರೂ ಸರಿಯಾದ ಮಾರ್ಗದರ್ಶನ ಇಲ್ಲವಾಗಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ತರಬೇತಿ ಕೇಂದ್ರಗಳ ಕೊರತೆ ಎದುರಿಸುತ್ತಿದ್ದಾರೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಕ್ಕಳನ್ನು ಚಿಕ್ಕ ವಯಸ್ಸಿನಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ಪೋಷಕರು ಪ್ರೋತ್ಸಾಹಿಸುತ್ತಾರೆ. ನಮ್ಮ ಜಿಲ್ಲೆಯಲ್ಲಿಯೂ ಇಂಥ ಬೆಳವಣಿಗೆ ಆಗಬೇಕು.
    ಕೃತಿಕಾ ಕೆ.ಕೆ., ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಂಕನಹಳ್ಳಿ

    ನಾಗರಿಕ ಸೇವೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಇದರೊಂದಿಗೆ ಜಿಲ್ಲೆಯಲ್ಲಿ ಯಾವುದೇ ತರಬೇತಿ ಕೇಂದ್ರಗಳಿಲ್ಲ. ಪರೀಕ್ಷೆ ಯಾವ ರೀತಿ ಇರುತ್ತದೆ, ಯಾವ ಯಾವ ಭಾಷೆಗಳಲ್ಲಿ ಲಭ್ಯವಿದೆ ಎಂಬ ಮಾಹಿತಿ ದೊರೆಯಬೇಕು. ಪತ್ರಿಕೆಗಳಲ್ಲಿ ಇದರ ಬಗ್ಗೆ ಮಾಹಿತಿ ನೀಡಬೇಕು. ಪದವಿ ಕಾಲೇಜುಗಳಲ್ಲಿ ಇದರ ಕುರಿತು ವಿಶೇಷ ಉಪನ್ಯಾಸ ಏರ್ಪಡಿಸಿ ಆರಂಭದಿಂದಲೇ ನಾಗರಿಕ ಸೇವೆಯ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ಆಗಬೇಕು.
    ಸೀಮಾ, ಉಪನ್ಯಾಸಕಿ, ವಿರಾಜಪೇಟೆ

    ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ಇವತ್ತಿಗೂ ಗ್ರಾಮೀಣ ಮಕ್ಕಳಿಗೆ ಸಾಧ್ಯವಾಗುತ್ತಿಲ್ಲ. ನಗರ ಪ್ರದೇಶಗಳಲ್ಲಿ ಕೋಚಿಂಗ್ ಸೆಂಟರ್‌ಗಳಿವೆ. ಹೆಚ್ಚಿನ ಶುಲ್ಕ ಇದೆ. ಕೊಡಗು ಜಿಲ್ಲೆಯಲ್ಲಿ ಸರ್ಕಾರದ ವತಿಯಿಂದ ತರಬೇತಿಗೆ ಸೌಲಭ್ಯ ಒದಗಿಸಬೇಕು. ಓದುವ ಮಕ್ಕಳಿಗೆ ಉಚಿತ ಶಿಕ್ಷಣದೊಂದಿಗೆ ಉಚಿತ ತರಬೇತಿ ನೀಡಬೇಕು. ಯುಪಿಎಸ್‌ಸಿ, ಐಎಎಸ್, ಐಪಿಎಸ್ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಹೆಚ್ಚಿಸಬೇಕು.
    ಎಚ್.ಆರ್. ಜೀವಿತಾ, ವಿದ್ಯಾರ್ಥಿ, ಹಿರಿಕರ ಗ್ರಾಮ

    ಕೊಡಗಿನಲ್ಲಿ ವೃತ್ತಿಪರ ಶಿಕ್ಷಣದ ಬಗ್ಗೆ ಹೆಚ್ಚಿನ ಒಲವು ಕಂಡುಬರುತ್ತಿದೆ. ನಾಗರಿಕ ಸೇವಾ ಪರೀಕ್ಷೆಗಳು ಕಠಿಣ ಎಂಬ ಭಯವೂ ಕಾರಣವಾಗಿರಬಹುದು. ಲಿಖಿತ ಪರೀಕ್ಷೆಗಳಲ್ಲಿ ಉತ್ತೀರ್ಣ ಆದರೂ ಮೌಖಿಕ ಪರೀಕ್ಷೆಗಳಲ್ಲಿ ಹಿನ್ನಡೆ ಆಗುತ್ತಿದೆ. ಇಲ್ಲಿ ಪ್ರಶ್ನೆಗಳು ತುಂಬಾ ಕಷ್ಟಕರವಾಗಿರುತ್ತದೆ. ಇದನ್ನು ಎದುರಿಸಲು ಮಕ್ಕಳಿಗೆ ಶಾಲಾ ಹಂತದಲ್ಲೇ ಲೋಕ ಸೇವಾ ಪರೀಕ್ಷೆ ಬಗ್ಗೆ ಮಾಹಿತಿ ಕೊಡುತ್ತಾ ಬರಬೇಕು. ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನ ಹೆಚ್ಚುವಂತೆ ವಾತಾವರಣ ನಿರ್ಮಿಸಬೇಕು. ಪರೀಕ್ಷೆ ಕಠಿಣ ಎನ್ನುವ ಮನೋಭಾವನೆ ಬಾರದಂತೆ ನೋಡಿಕೊಂಡು, ಇದನ್ನು ಯಾರು ಬೇಕಾದರೂ ಎದುರಿಸಬಹುದು ಎನ್ನುವ ತಿಳುವಳಿಕೆ ಮೂಡಿಸಬೇಕು. ದೇಶದ ವಿವಿಧ ಭಾಗಗಳಲ್ಲಿ ಇಂಥ ಪರೀಕ್ಷೆಯನ್ನು ಯಶಸ್ವಿಯಾಗಿ ಪಾಸಾದವರ ಬಗ್ಗೆ ಪರಿಚಯ ಮಾಡಿಕೊಡಬೇಕು.
    ಕಲ್ಯಾಟಂಡ ಶಾರದಾ, ಮುಖ್ಯ ಶಿಕ್ಷಕಿ, ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆ, ನಾಪೋಕ್ಲು

    ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳ ಬಗ್ಗೆ ಗ್ರಾಮೀಣ ಪ್ರದೇಶಗಳ ಪೋಷಕರಿಗೆ ಮತ್ತು ವಿದ್ಯಾರ್ಥಿಗಳಲ್ಲಿ ಅರಿವು ಕಡಿಮೆಯಿರುತ್ತದೆ. ಹೆಚ್ಚು ಯುವಕರು ನಾಗರಿಕ ಸೇವಾ ಪರೀಕ್ಷೆಗಳ ಕಡೆಗೆ ಆಸಕ್ತರಾಗಲು ಸರ್ಕಾರ ಅಲ್ಲಲ್ಲಿ ಶಿಬಿರಗಳನ್ನು ನಡೆಸಿ ಜಾಗೃತಿ ಮೂಡಿಸಬೇಕು. ಗ್ರಾಮೀಣ ಭಾಗದ ಕಾಲೇಜುಗಳಲ್ಲಿ ಹೆಚ್ಚು ಹೆಚ್ಚು ಆಸಕ್ತಿ ಮೂಡಿಸಿದರೆ ಭವಿಷ್ಯದಲ್ಲಿ ಕೊಡಗು ಜಿಲ್ಲೆಯಿಂದಲೂ ನಾಗರಿಕ ಸೇವೆಗೆ ಸಾಕಷ್ಟು ಜನರು ಲಭ್ಯರಾಗುತ್ತಾರೆ.
    ವಿ.ಆರ್. ಶ್ರೀನಿವಾಸ್, ಉದ್ಯಮಿ, ಕುಶಾಲನಗರ.

    ಯುಪಿಎಸ್‌ಸಿ ಎನ್ನುವುದು ದೊಡ್ಡ ಪಯಣ. ಇದರಲ್ಲಿ ಸಾಗಬೇಕು ಎಂದರೆ ಬದ್ಧತೆ ಬೇಕು. ಜತೆಗೆ ಪೋಷಕರ ಸಹಕಾರವೂ ಇರಬೇಕು. ನಮ್ಮ ಶ್ರಮದ ಜತೆ ಅದೃಷ್ಟವೂ ಕೈ ಹಿಡಿಯಬೇಕು. ಯುಪಿಎಸ್‌ಸಿಯಲ್ಲಿ ಸಾಧನೆ ಮಾಡಬೇಕು ಎನ್ನುವ ಗುರಿ ಇರುವರಿಗೆ ಇಲ್ಲಿ ಫಲಿತಾಂಶ ಕಷ್ಟವಲ್ಲ. ಕೊಡಗಿನ ಮಟ್ಟಿಗೆ ಹೇಳುವುದಾದರೆ ಇಲ್ಲಿ ಸಿಗವ ಅವಕಾಶಗಳನ್ನು ಬಳಸಿಕೊಂಡು ಉನ್ನತ ಸಾಧನೆ ಕಡೆಗೆ ಗಮನ ಹರಿಸಿದರೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಬಹುದು.
    ಕೆ.ಎಲ್. ಸೂರಜ್, ವಿರಾಜಪೇಟೆ (೨೦೨೪ರ ಯುಪಿಎಸ್‌ಸಿ ೭೧೩ನೇ ರ‌್ಯಾಂಕ್)

    ಸುಲಭವಾಗಿ ಉದ್ಯೋಗ ಸಿಗಬಹುದಾದ ವೃತ್ತಿಪರ ಕೋರ್ಸ್‌ಗಳತ್ತ ವಿದ್ಯಾರ್ಥಿಗಳು ಮತ್ತು ಪೋಷಕರು ಆಕರ್ಷಿತರಾಗುವುದು ಸಹಜ. ಇದಕ್ಕೆ ಬಡತನ, ಸಾಮಾಜಿಕ ಪರಿಸ್ಥಿತಿಗಳೂ ಕಾರಣವಾಗಿರಬಹುದು.
    ನಾಗರಿಕ ಸೇವಾ ಪರೀಕ್ಷೆ ಬಗ್ಗೆ ಪ್ರೌಢಶಾಲಾ ಮಟ್ಟದಿಂದಲೇ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಬೇಕು. ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ತರಬೇತಿ ಸಿಕ್ಕರೆ ಪರೀಕ್ಷೆ ಎದುರಿಸಲು ಸಮಸ್ಯೆಯಾಗುವುದಿಲ್ಲ. ಹಣವಿದ್ದವರಿಗೆ ಯುಪಿಎಸ್ಸಿ ಎಂಬ ಭಾವನೆ ಹೋಗಲೇಬೇಕು. ಇಂಥ ಪರೀಕ್ಷೆಗಳು ಯಾವ ರೀತಿಯಲ್ಲಿ ಇರುತ್ತದೆ, ಅದನ್ನು ಹೇಗೆ ಎದುರಿಸಬಹುದು ಎನ್ನುವುದರ ಬಗ್ಗೆ ಶಾಲೆಗಳಲ್ಲಿ ಶಿಕ್ಷಕರು ಮಾರ್ಗದರ್ಶನ ಕೊಡಬೇಕು. ಸರ್ಕಾರದ ಹುದ್ದೆಗಳನ್ಮು ನಿರ್ವಹಿಸಬೇಕಿರುವುದರಿಂದ ಪದವಿ ಹಂತದಲ್ಲಿ ಯುಪಿಎಸ್‌ಸಿ ಪರೀಕ್ಷೆ ಬಗ್ಗೆ ಸರ್ಕಾರವೇ ಉಚಿತ ತರಬೇತಿ ಕೊಡುವಂತಾಗಬೇಕು.
    ಹರೀಶ್ ಕುಮಾರ್, ಕೃಷಿಕ, ಕುಮಾರಳ್ಳಿ ಗ್ರಾಮ.

    ಜಿಲ್ಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಕಡೆ ಆಸಕ್ತಿ ಕಡಿಮೆ ಇದೆ. ಮಾಹಿತಿ ,ಮಾರ್ಗದರ್ಶನ ಕೊರತೆ ಹಾಗೂ ಸುಸಜ್ಜಿತ ಕೋಚಿಂಗ್ ಸೆಂಟರ್ ಅಭಾವ ಇದಕ್ಕೆ ಪ್ರಮುಖ ಕಾರಣ. ಇದರಿಂದ ಸ್ಥಳೀಯ ಆಡಳಿತದಲ್ಲಿ ದೂರದ ಜಿಲ್ಲೆಯ ಸಿಬ್ಬಂದಿ ನೇಮಕಗೊಂಡು ತಮ್ಮ ಪ್ರೊಬೇಷನರಿ ಅವಧಿ ಮುಗಿಸಿ ವರ್ಗವಾಗಿ ಹೋಗುತ್ತಾರೆ. ಇದರಿಂದ ಜಿಲ್ಲೆಯಲ್ಲಿ ಅಧಿಕಾರಿ ಸಿಬ್ಬಂದಿ ಕೊರತೆಗೆ ಕಾರಣವಾಗಿದೆ. ಶಿಕ್ಷಣಸಂಸ್ಥೆಗಳು ಶಿಕ್ಷಣದ ಜತೆಗೆ ಉದ್ಯೋಗಾಧಾರಿತ ಸ್ಪರ್ಧಾತ್ಮಕ ಪರೀಕ್ಷೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು.
    ಅಶೋಕ್, ಜ್ಯೋತಿ ನಗರ, ಸಿದ್ದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts