More

    ಹಾರಂಗಿಯಲ್ಲಿ ಆಪತ್ಕಾಲಕ್ಕೆ ನೀರು ಲಭ್ಯ

    ಸುನಿಲ್ ಪೊನ್ನೇಟಿ ಮಡಿಕೇರಿ:

    ಮಲೆನಾಡು ಜಿಲ್ಲೆ ಕೊಡಗಿನಲ್ಲೂ ಬರದ ಪರಿಣಾಮ ಗಾಢವಾಗಿ ತಟ್ಟಿದೆ. ಜೀವನದಿ ಕಾವೇರಿ ಹರಿವು ನಿಲ್ಲಿಸಿ ಈಗಲೇ ಒಂದು ತಿಂಗಳು ಕಳೆದಿದೆ. ಚಿಕ್ಲಿಹೊಳೆ ಜಲಾಶಯದಲ್ಲಿ ಡಿಸೆಂಬರ್‌ನಲ್ಲೇ ನೀರು ಖಾಲಿಯಾಗಿದೆ. ಆದರೆ ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿ ಅಣೆಕಟ್ಟೆಯಲ್ಲಿ ಮಾತ್ರ ಕಳೆದ ವರ್ಷಕ್ಕಿಂತ ಹೆಚ್ಚು ನೀರಿನ ಸಂಗ್ರಹ ಇದೆ. ಅಧಿಕಾರಿಗಳ ಯೋಜಿತ ಕಾರ್ಯನಿರ್ವಹಣೆಯಿಂದ ಇದು ಸಾಧ್ಯವಾಗಿದ್ದು, ಕೆಳಪಾತ್ರದ ಜನ-ಜಾನುವಾರುಗಳಿಗೆ ಆಪತ್ಕಾಲಕ್ಕೆ ಸಾಕಾಗುವಷ್ಟು ನೀರು ಇಲ್ಲಿದೆ.

    ೨೦೨೨ರ ಮುಂಗಾರಿಗೆ ಹೋಲಿಸಿದರೆ ೨೦೨೩ರ ಮುಂಗಾರು ಕೊಡಗಿನಲ್ಲಿ ನಿರೀಕ್ಷೆಯಂತೆ ಅಬ್ಬರಿಸಲಿಲ್ಲ. ಮಳೆಯ ಪ್ರಮಾಣ ಸಾಧಾರಣಕ್ಕಿಂತ ತುಂಬಾ ಕಡಿಮೆ ಇದೆ. ೨೦೨೨ರಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿದಿತ್ತು. ಆದರೆ ಈ ಮುಂಗಾರಿನಲ್ಲಿ ಮಳೆಯ ಪ್ರಮಾಣ ಕಡಿಮೆ ಆಗಿದ್ದರೂ ಕೊಡಗಿನ ಏಕೈಕ ದೊಡ್ಡ ಅಣೆಕಟ್ಟೆ ಹಾರಂಗಿಯಲ್ಲಿ ಕಳೆದ ಸಾಲಿಗಿಂತ ಅಧಿಕ ನೀರಿನ ಸಂಗ್ರಹ ಇದೆ. ಜೀವನದಿ ಕಾವೇರಿ ವಾಲ್ನೂರು ಬಳಿಯಿಂದ ತನ್ನ ಹರಿವು ಕ್ಷೀಣಿಸಿದ್ದರೂ ಕಾವೇರಿಯ ಉಪನದಿ ಹಾರಂಗಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಮಟ್ಟ ಉತ್ತಮವಾಗಿದೆ.

    ೨೮೫೯ ಅಡಿ ಎತ್ತರದ ಅಣೆಕಟ್ಟೆಯಲ್ಲಿ ಸೋಮವಾರ (ಏ.೨೯)ದ ಮಾಹಿತಿ ಪ್ರಕಾರ ೨೮೨೪.೫೫ ಅಡಿಗಳಷ್ಟು ನೀರಿದೆ. ಹಿಂದಿನ ವರ್ಷ ಉತ್ತಮ ಮುಂಗಾರು ಆಗಿದ್ದರೂ ಕಳೆದ ವರ್ಷದ ಇದೇ ದಿನ ೨೮೨೦.೪೨ ಅಡಿಗಳಷ್ಟು ಮಾತ್ರ ನೀರು ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು ೪ ಅಡಿಗಳಷ್ಟು ಹೆಚ್ಚಿನ ನೀರು ಜಲಾಶಯದಲ್ಲಿ ಇದೆ.

    ೮.೫ ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ ೩.೦೬೦ ಟಿಎಂಸಿ ನೀರಿನ ಸಂಗ್ರಹವಿದ್ದು, ಡೆಡ್ ಸ್ಟೋರೇಜ್ ಹೊರತುಪಡಿಸಿದರೆ ೨.೩೦೯ ಟಿಎಂಸಿ ಬಳಕೆಗೆ ಯೋಗ್ಯ ನೀರಿನ ಸಂಗ್ರಹ ಇಲ್ಲಿದೆ. ಕಳೆದ ವರ್ಷ ಇದೇ ದಿನ ಇದ್ದ ೨.೭೦೮ ಟಿಎಂಸಿ ನೀರಿನ ಸಂಗ್ರಹದಲ್ಲಿ ಡೆಡ್ ಸ್ಟೋರೇಜ್ ಕಳೆದು ಕೇವಲ ೧.೯೫೮ ಟಿಎಂಸಿ ಮಾತ್ರ ನೀರಿನ ಸಂಗ್ರಹ ಇತ್ತು.

    ಈಗ ನೀರಿನ ಒಳಹರಿವು ೧೫೯ ಕ್ಯೂಸೆಕ್ಸ್‌ಗಳಿದ್ದು, ೨೦೦ ಕ್ಯೂಸೆಕ್ಸ್ ನೀರು ನದಿಗೆ ಬಿಡಲಾಗುತ್ತಿದೆ. ಕಾಲುವೆಗಳಿಗೆ ನೀರು ಹರಿಸುತ್ತಿಲ್ಲ. ಕಳೆದ ವರ್ಷ ಇದೇ ದಿನ ೪೯ ಕ್ಯೂಸೆಕ್ಸ್ ನೀರಿನ ಒಳಹರಿವು ಇತ್ತು. ನದಿಗೆ ೫೦ ಕ್ಯೂಸೆಕ್ಸ್ ಮತ್ತು ಕಾಲುವೆಗೆ ೪೦ ಕ್ಯೂಸೆಕ್ಸ್ ನೀರು ಬಿಡಲಾಗುತ್ತಿತ್ತು.
    ಈ ವರ್ಷ ಇಲ್ಲಿಯ ತನಕ ಅಣೆಕಟ್ಟೆಗೆ ೨೮.೧೦೭ ಟಿಎಂಸಿ ನೀರು ಹರಿದು ಬಂದಿದ್ದು, ನದಿ ಮೂಲಕ ಕಾವೇರಿ ನದಿಗೆ ೧೯.೪೮೪ ಟಿಎಂಸಿ ನೀರು ಬಿಡಲಾಗಿದೆ. ಕಾಲುವೆಗೆ ೭.೩೨೮ ಟಿಎಂಸಿ ನೀರು ಹರಿಸಲಾಗಿದೆ. ಇಷ್ಟಾದರೂ ಏಪ್ರಿಲ್ ಕೊನೆಯ ವಾರದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು ೪ ಅಡಿ ಹೆಚ್ಚು ನೀರಿದ್ದರೆ. ಸುಮಾರು ೧.೫ ಟಿಎಂಸಿ ನೀರಿನ ಹೆಚ್ಚುವರಿ ಸಂಗ್ರಹ ಇದೆ.

    ೪ ವರ್ಷಕ್ಕೆ ಒಮ್ಮೆ ಬರ ಸಾಮಾನ್ಯ ಎನ್ನುವ ನಂಬಿಕೆಯಿಂದ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ನೀರಿನ ನಿರ್ವಹಣೆಯನ್ನು ವೈಜ್ಞಾನಿಕ ರೀತಿಯಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದರಿಂದ ಈ ರೀತಿಯಲ್ಲಿ ನೀರು ಉಳಿಸಿಕೊಳ್ಳಲು ಸಾಧ್ಯವಾಗಿದೆ. ಉಳಿದೆಲ್ಲಾ ಜಲಾಶಯಗಳು ಬರಿದಾಗಿದ್ದರೂ ಮಳೆಗಾಲದಲ್ಲಿ ಕೆಳಪಾತ್ರದಲ್ಲಿ ಪ್ರವಾಹ ತಪ್ಪಿಸಲು ಹೆಚ್ಚುವರಿ ನೀರನ್ನು ಹರಿಸಿದ ನಂತರವೂ ಈ ಪ್ರಮಾಣದಲ್ಲಿ ಇಲ್ಲಿ ನೀರು ಉಳಿಸಿಕೊಳ್ಳಲು ಕರಾರುವಕ್ಕಾದ ಲೆಕ್ಕಾಚಾರವೇ ಕಾರಣವಾಗಿದೆ.

    ಮೊದಲೆಲ್ಲಾ ಜೂನ್, ಜುಲೈ, ಆಗಸ್ಟ್‌ನಲ್ಲಿ ಮಳೆ ಜೋರಾಗಿ ಬರುತ್ತಿತ್ತು. ಈಗ ಮಳೆಯ ಚಕ್ರ ಸ್ವಲ್ಪ ಮುಂದಕ್ಕೆ ಹೋಗಿ ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಮಳೆ ಆಗುವಂತಾಗಿದೆ. ಹಾಗಾಗಿ ಬೆಳೆಗಳಿಗೆ ನೀರಿನ ಬಳಕೆ ಪ್ರಮಾಣದಲ್ಲೂ ವ್ಯತ್ಯಾಸವಾಗಿದ್ದು, ಅಣೆಕಟ್ಟೆಯಿಂದ ಕಾಲುವೆಗಳಿಗೆ ಹರಿಸಿದ ನೀರಿನ ಪ್ರಮಾಣವೂ ಕಡಿಮೆ ಆಗಿದೆ. ಈ ಕಾರಣದಿಂದಲೂ ಜಲಾಶಯದಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚು ನೀರು ಇರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

    ಕೊಡಗು, ಮೈಸೂರು ಹಾಗೂ ಹಾಸನ ಜಿಲ್ಲೆಗಳ ಒಟ್ಟು ೧,೩೪,೮೯೫ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ಹಾರಂಗಿ ಜಲಾಶಯದಿಂದ ನೀರಾವರಿಯ ಅನುಕೂಲತೆ ಇದೆ. ಇಷ್ಟು ಪ್ರದೇಶದಲ್ಲಿ ಒಂದು ಬೆಳೆ ಬೆಳೆಯಲು ವರ್ಷಕ್ಕೆ ೧೮ ಟಿಎಂಸಿ ನೀರು ಬೇಕಾಗುತ್ತದೆ. ೮.೫ ಟಿಎಂಸಿ ಸಾಮರ್ಥ್ಯದ ಜಲಾಶಯ ೨ ಬಾರಿ ಗರಿಷ್ಠ ಪ್ರಮಾಣದಲ್ಲಿ ಭರ್ತಿ ಆದರೆ ಮಾತ್ರ ಅಚ್ಚುಕಟ್ಟು ಪ್ರದೇಶದ ರೈತರು ಸಮೃದ್ಧ ಬೆಳೆ ತೆಗೆಯಬಹುದು. ಈ ವರ್ಷ ಮಳೆಯ ಏರಿಳಿತದ ಕಾರಣದಿಂದ ಕಟ್ಟು ಪದ್ಧತಿಯಲ್ಲಿ ರೈತರಿಗೆ ನೀರು ಕೊಡಲಾಗಿತ್ತು. ಬೇಸಿಗೆ ಬೆಳೆಗೆ ನೀರು ಕೊಡುವುದನ್ನು ನಿಲ್ಲಿಸಿ ೩ ದಶಕಗಳೇ ಕಳೆದಿವೆ.

    ಕಾವೇರಿ ನದಿಪಾತ್ರದಲ್ಲಿ ಬರುವ ಜನವಸತಿ ಪ್ರದೇಶಗಳು ಕುಡಿಯುವ ನೀರಿಗಾಗಿ ನದಿ ಮೂಲವನ್ನೇ ಅವಲಂಭಿಸಿವೆ. ಹಾರಂಗಿ ನದಿ ಕೂಡಿಗೆಯಲ್ಲಿ ಕಾವೇರಿ ನದಿ ಸೇರಿದ ನಂತರ ಕೆಆರ್‌ಎಸ್ ತನಕ ಕುಡಿಯುವ ನೀರಿನ ಯೋಜನೆಯ ಸುಮಾರು ೩೦ ಘಟಕಗಳು ಇವೆ. ಹಾರಂಗಿ ಅಣೆಕಟ್ಟೆಯಿಂದ ಈಗ ಪ್ರತಿದಿನ ೨೦೦ ಕ್ಯೂಸೆಕ್ ನೀರು ನದಿಗೆ ಹರಿಸಲಾಗುತ್ತಿದ್ದು, ಕಾವೇರಿ ನದಿಯ ನೀರಿನ ಮೂಲ ಸದ್ಯಕ್ಕೆ ಹಾರಂಗಿ ಅಣೆಕಟ್ಟೆಯೇ ಆಗಿದೆ. ಜೂನ್ ತನಕ ಮಳೆ ಆಗದಿದ್ದರೂ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗುವಷ್ಟು ನೀರಿನ ಸಂಗ್ರಹ ಈಗ ಹಾರಂಗಿ ಜಲಾಶಯದಲ್ಲಿದೆ.

    ವೈಜ್ಞಾನಿಕ ರೀತಿಯಲ್ಲಿ ನೀರು ನಿರ್ವಹಣೆಯನ್ನು ಅಚ್ಚುಕಟ್ಟಾಗಿ ಮಾಡಿರುವುದರಿಂದ ಇದು ಸಾಧ್ಯವಾಗಿದೆ. ಈ ವರ್ಷ ಇನ್ನು ಬೆಳೆಗಳಿಗೆ ನೀರು ಬಿಡುವುದಿಲ್ಲ. ಇಲ್ಲಿರುವ ನೀರನ್ನು ಜನ-ಜಾನುವಾರುಗಳಿಗೆ ಕುಡಿಯಲು ಬಳಸಲಾಗುತ್ತದೆ. ಮಳೆ ಬಾರದಿದ್ದರೂ ಈಗ ಇಲ್ಲಿರುವ ನೀರು ಕುಡಿಯುವ ನೀರಿನ ಉದ್ದೇಶಕ್ಕೆ ಜೂನ್ ತನಕ ಸಾಕಾಗುತ್ತದೆ.
    ರಘುಪತಿ, ಅಧೀಕ್ಷಕ ಅಭಿಯಂತರ, ಕಾವೇರಿ ನೀರಾವರಿ ನಿಗಮ
    
    ಹಿರಿಯ ಅಧಿಕಾರಿಗಳ ಮಾರ್ಗದರ್ಶನಲ್ಲಿ ತುಂಬಾ ಚೆನ್ನಾಗಿ ಲೆಕ್ಕಾಚಾರ ಮಾಡಿರುವುದರಿಂದ ಜಲಾಶಯದಲ್ಲಿ ಕಳೆದ ಬಾರಿಗಿಂತ ಹೆಚ್ಚು ನೀರು ಸಂಗ್ರಹ ಸಾಧ್ಯವಾಗಿದೆ. ಕಳೆದ ಮೂರು ವರ್ಷಗಳಿಂದಲೂ ಇದೇ ರೀತಿಯ ವ್ಯವಸ್ಥೆಯನ್ನೂ ರೂಢಿಸಿಕೊಂಡು ಬರಲಾಗುತ್ತಿದೆ. ಅತ್ಯಾಧುನಿಕ ವಿಧಾನಗಳ ಮೂಲಕ ನೀರು ನಿರ್ವಹಣೆ ಮಾಡುತ್ತಿರುವುದರಿಂದ ಕರಾರುವಕ್ಕಾದ ಲೆಕ್ಕಾಚಾರವೂ ಸಾಧ್ಯವಾಗುತ್ತದೆ.
    	ಸಿದ್ದರಾಜು, ಸಹಾಯಕ ಅಭಿಯಂತರ, ಹಾರಂಗಿ ಅಣೆಕಟ್ಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts