More

    ದೇಶೀಯ ಕ್ರಿಕೆಟಿಗೂ ಪ್ರೇಕ್ಷಕರಿಗೆ ಪ್ರವೇಶವಿಲ್ಲ, ಆಟಗಾರರು ಹಸ್ತಲಾಘವ ನೀಡುವಂತಿಲ್ಲ

    ನವದೆಹಲಿ: ವರ್ಷ ಬದಲಾಗಿರುವ ನಡುವೆಯೂ ಕೋವಿಡ್-19 ಭೀತಿ ಇನ್ನೂ ಮುಂದುವರಿದಿರುವುದರಿಂದ ಬಿಸಿಸಿಐ, ಮುಂಬರುವ ದೇಶೀಯ ಕ್ರಿಕೆಟ್ ಋತುವಿಗೆ ಕೆಲ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಜನವರಿ 10ರಂದು ಆರಂಭಗೊಳ್ಳಲಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಗೆ 30 ಪುಟಗಳ ಸುದೀರ್ಘ ಗುಣಮಟ್ಟದ ಕಾರ್ಯವಿಧಾನವನ್ನು (ಎಸ್‌ಒಪಿ) ಬಿಡುಗಡೆ ಮಾಡಿರುವ ಬಿಸಿಸಿಐ, ಪಂದ್ಯಗಳನ್ನು ವೀಕ್ಷಿಸಲು ಪ್ರೇಕ್ಷಕರಿಗೆ ಕ್ರೀಡಾಂಗಣದೊಳಗೆ ಪ್ರವೇಶ ನೀಡದಿರಲು ನಿರ್ಧರಿಸಿದೆ.

    ಕೇಂದ್ರ ಕ್ರೀಡಾ ಸಚಿವಾಲಯ ಇತ್ತೀಚೆಗೆ ಬಿಡುಗಡೆಗೊಳಿಸಿರುವ ಎಸ್‌ಒಪಿಯಲ್ಲಿ ಮುಂಬರುವ ದಿನಗಳಲ್ಲಿ ಕ್ರೀಡಾ ಸ್ಪರ್ಧೆಗಳಲ್ಲಿ ಶೇ. 50 ಪ್ರೇಕ್ಷಕರು ಭಾಗವಹಿಸಲು ಅವಕಾಶ ಮಾಡಿಕೊಟ್ಟಿದೆ. ಆದರೆ ಬಿಸಿಸಿಐ ಯಾವುದೇ ರೀತಿಯ ಅಪಾಯ ಎದುರಾಗದಿರುವಂತೆ ತಡೆಗಟ್ಟುವ ಸಲುವಾಗಿ, ಬಹುತೇಕ ಐಪಿಎಲ್ ಮಾದರಿಯ ಮಾರ್ಗಸೂಚಿಗಳನ್ನೇ ಪಾಲಿಸಲು ಮುಂದಾಗಿದೆ. ಆದರೆ ಐಪಿಎಲ್ ವೇಳೆ ಆಟಗಾರರಿಗೆ ಮುಷ್ಟಿ ತಾಗಿಸಲು (ಫಿಸ್ಟ್ ಬಂಪ್) ಅವಕಾಶ ನೀಡಲಾಗಿತ್ತು. ಆದರೆ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಪಂದ್ಯದ ಬಳಿಕ ಆಟಗಾರರು ಕೈಕುಲುಕುವುದು ಅಥವಾ ಇತರ ಯಾವುದೇ ರೀತಿಯ ದೈಹಿಕ ಸ್ಪರ್ಶ ಸಾಧಿಸುವುದನ್ನು ನಿರ್ಬಂಧಿಸಲಾಗಿದೆ.

    ಇದನ್ನೂ ಓದಿ: ಟೀಮ್ ಇಂಡಿಯಾ ವೇಗಿ ಮೊಹಮದ್ ಶಮಿ ತಮ್ಮನಿಗೆ ಬಂಗಾಳ ತಂಡದಲ್ಲಿ ಸ್ಥಾನ

    ಕರೊನಾ ಹಾವಳಿಯ ನಡುವೆಯೂ ದೇಶೀಯ ಕ್ರಿಕೆಟ್ ಪಂದ್ಯಗಳನ್ನು ಸುರಕ್ಷಿತ ವಾತಾವರಣದಲ್ಲಿ ಆಯೋಜಿಸುವ ಸಲುವಾಗಿ ತಂಡಗಳು ಪ್ರಯಾಣ, ವಾಸ್ತವ್ಯ, ತರಬೇತಿ ಮತ್ತು ಪಂದ್ಯಗಳ ವೇಳೆ ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸಬೇಕಾಗಿದೆ. ಕೋವಿಡ್-19ರಿಂದಾಗಿ ಈ ಬಾರಿ ದೇಶೀಯ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುವ ರೀತಿಯನ್ನು ಬದಲಾಯಿಸಿಕೊಳ್ಳಬೇಕಾಗಿದೆ ಎಂದು ಬಿಸಿಸಿಐ ರಾಜ್ಯ ತಂಡಗಳಿಗೆ ನೀಡಿರುವ ‘ಆರೋಗ್ಯ ಮತ್ತು ಸುರಕ್ಷಾ’ ಮಾರ್ಗಸೂಚಿಯಲ್ಲಿ ತಿಳಿಸಿದೆ. ಪಂದ್ಯದ ಬಳಿಕ ಆಟಗಾರರು ಮಾಧ್ಯಮಗಳೊಂದಿಗೆ ಮುಖಾಮುಖಿಯಾಗಿ ಮಾತನಾಡುವುದನ್ನೂ ನಿರ್ಬಂಧಿಸಲಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕವಷ್ಟೇ ಸುದ್ದಿಗೋಷ್ಠಿಗಳನ್ನು ಸಂಯೋಜಿಸಲು ಅವಕಾಶವಿರುತ್ತದೆ ಎಂದು ಬಿಸಿಸಿಐ ತಿಳಿಸಿದೆ.

    ಪಂದ್ಯದ ವೇಳೆ ಉಭಯ ತಂಡಗಳ ಮಾಹಿತಿಯನ್ನು ಪೇಪರ್ ಶೀಟ್‌ಗಳ ಮೂಲಕ ಹಂಚಿಕೊಳ್ಳುವಂತಿಲ್ಲ. ಬದಲಾಗಿ ಈ ಬಾರಿ ‘ಇಲೆಕ್ಟ್ರಾನಿಕ್ ಟೀಮ್ ಶೀಟ್’ಗಳನ್ನು ಹಂಚಿಕೊಳ್ಳಬೇಕೆಂದು ಬಿಸಿಸಿಐ ಸೂಚಿಸಿದೆ. ದೈಹಿಕ ಅಂತರ ಕಾಯ್ದುಕೊಳ್ಳಲು ಅವಕಾಶ ಕಲ್ಪಿಸುವ ಸಲುವಾಗಿ ಡಗೌಟ್ ಅನ್ನು ವಿಸ್ತಾರವಾಗಿ ರೂಪಿಸಲು ಕೂಡ ನಿರ್ಧರಿಸಲಾಗಿದೆ. ದೇಶೀಯ ಕ್ರಿಕೆಟ್‌ಗಾಗಿ ಈಗಾಗಲೆ 6 ನಗರಗಳಲ್ಲಿ ಜೈವಿಕ-ಸುರಕ್ಷಾ ವಾತಾವರಣವನ್ನು ನಿರ್ಮಿಸಲಾಗಿದ್ದು, ಶನಿವಾರ ಎಲ್ಲ ತಂಡಗಳು ಇದಕ್ಕೆ ಪ್ರವೇಶ ಪಡೆಯಲಿವೆ.

    ಬಿಸ್ಕಿಟ್ ಜಾಹೀರಾತಿನಲ್ಲಿ ನಟಿಸಿ ಗಮನಸೆಳೆದ ಕ್ರಿಕೆಟ್ ದಿಗ್ಗಜನ ಪುತ್ರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts