More

    ನಮೋ ಭೂತಾತ್ಮ 2 ಚಿತ್ರದ ವಿಮರ್ಶೆ: ಹಾಸ್ಯಭರಿತ ಮನರಂಜನೆ ನೀಡುವ ಭೂತ

    ಚಿತ್ರ: ನಮೋ ಭೂತಾತ್ಮ 2
    ನಿರ್ದೇಶನ: ಮುರಳಿ ಮಾಸ್ಟರ್
    ನಿರ್ಮಾಣ: ಸಂತೋಷ್ ಶೇಖರ್
    ತಾರಾಗಣ: ಕೋಮಲ್ ಕುಮಾರ್. ಲೇಖ ಚಂದ್ರಾ, ಗೋವಿಂದೇಗೌಡ, ಮೋನಿಕಾ ಗೌಡ, ವರುಣ್ ರವಿ ಮುಂತಾದವರು

    | ಪ್ರಮೋದ ಮೋಹನ ಹೆಗಡೆ

    ಹಾರರ್ ಜಾನರ್‌ನ ಸಿನಿಮಾ ಎಂದಕೂಡಲೇ ಸಾಮಾನ್ಯವಾಗಿ ಕೆಲವು ನಿರೀಕ್ಷೆಗಳಿರುತ್ತವೆ. ಆಗಾಗ ತೆರೆಯ ಮೇಲೆ ಇದ್ದಕ್ಕಿದ್ದಂತೆ ದೆವ್ವ ಅಥವಾ ಇನ್ನೇನಾದರು ಬಂದು ಬೆಚ್ಚಿಬೀಳಿಸಬೇಕು, ಒಂದು ಕಿಟಕಿ ಅಥವಾ ಬಾಗಿಲನ್ನು ತೆರೆಯುವ ಸದ್ದು ಕೂಡ ಪ್ರೇಕ್ಷಕನ ಮನಸ್ಸಿನಲ್ಲಿ ಸಣ್ಣ ನಡುಕ ಹುಟ್ಟಿಸಬೇಕು, ಮತ್ತು ಇವೆಲ್ಲವೂ ಅನಿರೀಕ್ಷಿತ ಸಮಯದಲ್ಲಿ ಆಗಬೇಕು. ಹಾಗಾದರೆ ಮಾತ್ರ ಅದೊಂದು ಒಳ್ಳೆಯ ಹಾರರ್ ಸಿನಿಮಾ ಎಂದೆನಿಸಿಕೊಳ್ಳುತ್ತದೆ. ಆದರೆ, ಹಾರರ್ ಜತೆ ಹಾಸ್ಯವನ್ನು ಬೆರೆಸಿ ಮಾಡುವಾಗ ಸ್ವಲ್ಪ ಮಟ್ಟಿಗೆ ವಿನಾಯಿತಿ ಪಡೆಯಬಹುದು. ಇಲ್ಲಿ ತಮಾಷೆ ಹಾಗೂ ಮನರಂಜನೆ ಮಾತ್ರ ಮುಖ್ಯ. ಇಂತಹದೊಂದು ಪ್ರಯೋಗದ ವಿ. ಮುರಳಿ ನಿರ್ದೇಶನದ, ಕೋಮಲ್ ಕುಮಾರ್ ಮುಖ್ಯ ಭೂಮಿಕೆಯಲ್ಲಿರುವ ಸಿನಿಮಾ ‘ನಮೋ ಭೂತಾತ್ಮ 2’. 2014ರಲ್ಲಿ ತೆರೆಕಂಡ ‘ನಮೋ ಭೂತಾತ್ಮ’ ಚಿತ್ರದ ಸೀಕ್ವೆಲ್ ಇದು. ಅದರಲ್ಲೂ ಕೋವಲ್ ನಾಯಕರಾಗಿದ್ದರು. ಆದರೆ, ಈ ಚಿತ್ರದಲ್ಲಿ ಹಾರರ್ ಸನ್ನಿವೇಶಗಳ ಜತೆಗೆ ಹಾಸ್ಯದ ಅಂಶಗಳೂ ಭರಪೂರಾಗಿವೆ.

    ಇದನ್ನೂ ಓದಿ: ಐಟಂ ಸಾಂಗ್​ಗೆ ಟಾಪ್​ ನಾಯಕಿಯರ ಹುಡುಕಾಟದಲ್ಲಿದೆ ‘ಪುಷ್ಪಾ 2’ ಚಿತ್ರತಂಡ; ಯಾವ ನಟಿಗೆ ಸಿಗಲಿದೆ ಈ ಅವಕಾಶ?

    ಐದು ಜನರ ಗೆಳೆಯರ ಗುಂಪೊಂದು ಹೇಗೆ ಅವಾಂತರಗಳನ್ನು ಸೃಷ್ಟಿಸಿಕೊಂಡು ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡು ಪರದಾಡುತ್ತಾರೆ ಎನ್ನುವುದರ ಸುತ್ತ ಚಿತ್ರದ ಕಥೆ ಸುತ್ತುತ್ತದೆ. ಯಾವುದೋ ಅಪರಿಚಿತ ಮನೆಯೊಳಗೆ ಸಿಲುಕಿ, ಹೊರಬರಲು ಆಗದೇ ಒದ್ದಾಡುವಾಗ ಆಗುವ ಅನುಭವಗಳನ್ನು ಹಾಸ್ಯದ ಜತೆ ಕಟ್ಟಿಕೊಟ್ಟು ನಿರ್ದೇಶಕ ಮುರಳಿ ಉತ್ತಮ ಕೆಲಸ ಮಾಡಿದ್ದಾರೆ. ಹಾರರ್ ಚಿತ್ರಕ್ಕೆ ಬೇಕಾದ ವಾತಾವರಣವನ್ನು ಸೃಷ್ಟಿಸುವುದರ ಜತೆಗೆ ನಕ್ಕು ನಗಿಸುವ ಹಾಸ್ಯಗಳನ್ನು ಹದವಾಗಿ ಬೆರೆಸಿದ್ದಾರೆ. ಇದೇ ಚಿತ್ರದ ಶಕ್ತಿ. ಇನ್ನು ಕಾಮಿಡಿ ಟೈಮಿಂಗ್ ಮೂಲಕ ಗಮನ ಸೆಳೆಯುವ ಕೋಮಲ್ ಕಳೆದ ಹಲವು ವರ್ಷಗಳಿಂದ ಚಿತ್ರರಂಗದಿಂದ ದೂರವಿದ್ದರು. ಕೋಮಲ್ ಅವರ ನಗಿಸುವ ಪಂಚ್ ಡೈಲಾಗ್‌ಗಳು ಹಾಗೂ ಮುಖಭಾವಗಳನ್ನು ಮತ್ತೊಮ್ಮೆ ತೆರೆಯ ಮೇಲೆ ಕಾಣಬಹುದು.

    ಲೇಖ ಚಂದ್ರಾ, ಮೋನಿಕಾ ಹಾಗೂ ವರುಣ್ ವಿಭಿನ್ನವಾದ ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಗೋವಿಂದೇಗೌಡ ಆಗಾಗ ನಗಿಸಿದರೂ ಇನ್ನಷ್ಟು ಒಳ್ಳೆಯ ನಟನೆಗೆ ಅವಕಾಶವಿತ್ತು. ವೆಂಕಟ್ ಸಂಭಾಷಣೆ, ಅರುಣ್ ಆಂಡ್ರೂಸ್ ಸಂಗೀತ, ಹಾಲೇಶ್ ಚಾಯಾಗ್ರಹಣ ಹಾಗೂ ಅಮಿತ್ ಸಂಕಲನ ಚಿತ್ರಕ್ಕೆ ಪೂರಕವಾಗಿ ಮೂಡಿಬಂದಿದೆ. ಇವೆಲ್ಲದರ ಜತೆ, ಕೆಲವು ಪ್ರಾಂಕ್ ಮತ್ತು ತಮಾಷೆಗಳಿಂದ ಏನು ಅನಾಹುತವಾಗಬಹುದು ಎಂಬ ಸಂದೇಶವನ್ನು ನೀಡುವ ಪ್ರಯತ್ನ ಕಾಣಬಹುದು. ಎರಡು ಗಂಟೆ ಥಿಯೇಟರ್ ಒಳಗೆ ಕುಳಿತು ನಕ್ಕು, ಖುಷಿಯಿಂದ ಹೊರಗೆ ಬರಲು ಇಚ್ಚಿಸುವವರಿಗೆ ‘ನಮೋ ಭೂತಾತ್ಮ 2’ ಒಂದೊಳ್ಳೆ ಆಯ್ಕೆ. ಕುಟುಂಬ ಸಮೇತರಾಗಿ ನೋಡುವಂಥ ಮನರಂಜನಾ ಚಿತ್ರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts