More

    ಟ್ಯಾಂಕರ್ ನೀರು ಪೂರೈಸಲು ಟೆಂಡರ್ ಕರೆಯಿರಿ

    ಎನ್.ಆರ್.ಪುರ: ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಬೇರೆ ಯಾವುದೇ ನೀರಿನ ಮೂಲಗಳು ಇಲ್ಲದಿದ್ದರೆ ಅನುಮತಿ ಪಡೆದು ಟೆಂಡರ್ ಕರೆದು ಟ್ಯಾಂಕರ್‌ನಿಂದ ನೀರು ಪೂರೈಸಿ ಎಂದು ತಾಪಂ ಇಒ ಎಚ್.ಡಿ.ನವೀನ್‌ಕುಮಾರ್ ಪಿಡಿಒಗಳಿಗೆ ಸೂಚಿಸಿದರು.

    ತಾಪಂನಲ್ಲಿ ಮಂಗಳವಾರ ಆಯೋಜಿಸಿದ್ದ ಬರ ನಿರ್ವಹಣೆ, ಕುಡಿಯುವ ನೀರಿನ ಸಮಸ್ಯೆಗಳ ಕುರಿತ ಎಲ್ಲ ಪಿಡಿಒಗಳ ಸಭೆಯಲ್ಲಿ ಮಾತನಾಡಿ, ಅಗತ್ಯವಾಗಿರುವ ಕಡೆ ತುರ್ತಾಗಿ ಕುಡಿಯುವ ನೀರಿನ ಕಾಮಗಾರಿ ಪೂರ್ಣಗೊಳಿಸಬೇಕು. ಗ್ರಾಪಂಗಳಿಂದ ಹೊಸ ಬೋರ್‌ವೆಲ್‌ಗಳ ಮಾಹಿತಿ, ಪೈಪ್‌ಲೈನ್ ಕಾಮಗಾರಿ ಮಾಹಿತಿ ಪಡೆದು ತುರ್ತಾಗಿ ಕ್ರಮಕೈಗೊಳ್ಳಬೇಕು. ಜೆಜೆಎಂ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಂಜಿನಿಯರ್ ರಕ್ಷತ್ ಅವರಿಗೆ ನಿರ್ದೇಶನ ನೀಡಿದರು.
    ಕರ್ಕೇಶ್ವರ ಪಿಡಿಒ ಪ್ರೇಮ್‌ಕುಮಾರ್ ಮಾತನಾಡಿ, ಹೊಸಬೀಡಿನಲ್ಲಿ ನೀರಿನ ಸಮಸ್ಯೆ ಉದ್ಭವವಾಗಿತ್ತು, ಹತ್ತಿರವಿದ್ದ ಖಾಸಗಿ ಬೋರ್‌ವೆಲ್‌ನಿಂದ ನೀರು ಪೂರೈಸಿ ಸಮಸ್ಯೆ ಬಗೆಹರಿಸಲಾಗಿದೆ ಎಂದರು. ಕಡಹಿನಬೈಲು ಪಿಡಿಒ ವಿಂಧ್ಯಾ ಮಾತನಾಡಿ, ಗ್ರಾಮಗಳಲ್ಲಿ ಕುಡಿಯುವ ನೀರಿನ ರೈಸಿಂಗ್ ಪೈಪ್‌ಲೈನ್ ಕಾಮಗಾರಿ ನಡೆಸಿದರೆ ನೀರಿನ ಸಮಸ್ಯೆ ಬಗೆಹರಿಸಬಹುದು. ನೇರಲೆಕೊಪ್ಪದಲ್ಲಿ ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು 185 ಮೀ. ಪೈಪ್‌ಲೈನ್ ಅವಶ್ಯಕತೆ ಇದೆ ಎಂದರು.
    ಸೀತೂರು ಪಿಡಿಒ ಶ್ರೀನಿವಾಸ್ ಮಾತನಾಡಿ, ರಾಗೋಡಿನಲ್ಲಿ ನೀರಿನ ಸಮಸ್ಯೆ ಇದೆ ಎಂದು ತಿಳಿಸಿದರು. ಇಂಜಿನಿಯರ್ ರಕ್ಷತ್ ಮಾತನಾಡಿ, ಹೊಸ ಬೋರ್‌ವೆಲ್ ಕೊರೆಸಲಾಗಿದ್ದು, ಪೈಪ್‌ಲೈನ್ ಕಾಮಗಾರಿ ಆಗಬೇಕಿದೆ ಎಂದು ತಿಳಿಸಿದರು. ಬಿ.ಕಣಬೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಇತ್ತೀಚೆಗೆ 5 ಹೊಸ ಬೋರ್‌ವೆಲ್‌ಗಳನ್ನು ಕೊರೆಸಲಾಗಿದ್ದು, ಮೂರು ಬೋರ್‌ವೆಲ್‌ಗಳಲ್ಲಿ ಮಾತ್ರ ನೀರು ದೊರೆತಿದೆ ಎಂದರು.
    ಬೋರ್‌ವೆಲ್‌ಗಳಿಗೆ ವಿದ್ಯುತ್ ಸಂಪರ್ಕ ಇರದ ಮಾಹಿತಿ ಪಡೆದು ತುರ್ತಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲು ಮೆಸ್ಕಾಂ ಎಇಇ ಗೌತಮ್ ಅವರಿಗೆ ಎಚ್.ಡಿ.ನವೀನ್‌ಕುಮಾರ್ ತಿಳಿಸಿದರು.
    ಗ್ರಾಪಂ ವ್ಯಾಪ್ತಿಯಲ್ಲಿ ಜೆಜೆಎಂನಡಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ಆದರೆ ಕಾಮಗಾರಿ ಸರಿ ಆಗಿಲ್ಲ ಎಂದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಯಾವುದೇ ಕಾರಣಕ್ಕೂ ಕಾಮಗಾರಿಯನ್ನು ಗ್ರಾಪಂಗೆ ಹಸ್ತಾಂತರಿಸಿಕೊಳ್ಳಬಾರದು ಎಂಬುದಾಗಿ ಒತ್ತಾಯಿಸಿದ್ದಾರೆ ಎಂದು ಗುಬ್ಬಿಗಾ ಪಿಡಿಒ ಸೀಮಾ ತಿಳಿಸಿದರು. ಕಾಮಗಾರಿ ಸರಿಯಾಗಿಲ್ಲ ಎಂದರೆ ಹಸ್ತಾಂತರಿಸಿಕೊಳ್ಳಬೇಡಿ ಎಂದು ಇಒ ಎಚ್.ಡಿ.ನವೀನ್‌ಕುಮಾರ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts