More

    ಭಾವನಾತ್ಮಕ ಚುನಾವಣೆಗೆ ಅಂತ್ಯ ಗ್ಯಾರಂಟಿ

    ಶಿವಮೊಗ್ಗ:ಕಳೆದ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಜನರಿಂದ ಉತ್ತಮ ಸ್ಪಂದನೆ ದೊರೆತಿದ್ದ ವಾತಾವರಣ ಈಗ ಲೋಕಸಭೆ ಚುನಾವಣೆ ಕಣದಲ್ಲೂ ಕಾಣುತ್ತಿದೆ. ಈ ಬಾರಿ ಭಾವನಾತ್ಮಕ ಚುನಾವಣೆಗೆ ಜನರು ಅಂತ್ಯ ಹಾಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

    ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಟ ಶಿವರಾಜ್‌ಕುಮಾರ್ ಪ್ರಚಾರದ ವೇಳೆ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಇದರಿಂದ ಗೀತಾ ಅವರಿಗೆ ಅನುಕೂಲವಾಗಿದೆ. ಗೀತಾ ಬಂಗಾರಪ್ಪ ಪುತ್ರಿ ಮಾತ್ರವಲ್ಲ, ರಾಜ್‌ಕುಮಾರ್ ಸೊಸೆಯೂ ಹೌದು. ಈ ಅಂಶಗಳು ಜನರಿಗೆ ತಿಳಿದಿವೆ ಎಂದರು.
    ಗೀತಾ ಡಮ್ಮಿ ಅಭ್ಯರ್ಥಿ ಎಂಬ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಕಿಡಿಕಾರಿದ ಮಧು ಬಂಗಾರಪ್ಪ, ಈಶ್ವರಪ್ಪ ಬಹಳ ಹಗುರವಾಗಿ ಮಾತನಾಡಿದ್ದಾರೆ. ಅವರ ಮಗನಿಗೆ ಟಿಕೆಟ್ ನೀಡಿಲ್ಲ ಎಂಬ ಕಾರಣಕ್ಕೆ ಅಸಮಾಧಾನಗೊಂಡಿದ್ದಾರೆ. ಬಿಜೆಪಿಯವರು ಅವರ ಸಮಸ್ಯೆ ಪರಿಹರಿಸಿಕೊಳ್ಳಲಿ. ನಮ್ಮ ಅಭ್ಯರ್ಥಿ ಬಗ್ಗೆ ಮಾತನಾಡುವುದು ಬೇಡ ಎಂದು ತಿವಿದರು.
    ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿ.ವೈ.ರಾಘವೇಂದ್ರ ಸಾಧನೆ ಶೂನ್ಯ. ಅವರು ಏನೂ ಅಭಿವೃದ್ಧಿ ಮಾಡಿಲ್ಲ. ಜಿಲ್ಲೆಯಲ್ಲಿ ಏನಾದರೂ ಕೆಲಸಗಳು ಆಗಿದ್ದರೆ ಅದರಲ್ಲಿ ರಾಜ್ಯ ಸರ್ಕಾರದ ಪಾಲಿದೆ ಎಂದರು.
    ಮಲೆನಾಡಿನ ಸಮಸ್ಯೆ ಪರಿಹರಿಸುವೆ: ನಾನು ಚುನಾವಣೆಯಲ್ಲಿ ಗೆದ್ದರೆ ನಿಶ್ಚಿತವಾಗಿಯೂ ಮತದಾರರ ಋಣ ತೀರಿಸುತ್ತೇನೆ. ಮಲೆನಾಡಿನ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ. ಅಡಕೆ ಬೆಳಗಾರರು, ಮುಳುಗಡೆ ಸಂತ್ರಸ್ತರು, ಬಗರ್‌ಹುಕುಂ ಸಾಗುವಳಿ ರೈತರ ಸಮಸ್ಯೆಗಳನ್ನು ತಿಳಿದಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಹೇಳಿದರು. ನಗರದ ಕೋಟೆ ಮಾರಿಕಾಂಬ ದೇವಾಲಯದಲ್ಲಿ ಮಂಗಳವಾರ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭದ್ರಾವತಿ ಕಾರ್ಖಾನೆಗಳ ಪುನಶ್ಚೇತನದ ಅನಿವಾರ್ಯತೆಯ ಅರಿವಿದೆ. ಪ್ರಚಾರಕ್ಕೆ ತೆರಳಿದ ಕಡೆಗಳಲ್ಲಿ ಉತ್ತಮ ವಾತಾವರಣ ಕಂಡುಬರುತ್ತಿದೆ. ಜತೆಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳೂ ಕೈ ಹಿಡಿಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ಬೇಕಿದೆ ಬದಲಾವಣೆ: ನಾನು ಪ್ರಚಾರಕ್ಕೆ ಹೋದಾಗ ಅಲ್ಲಿ ಸೇರುವ ಜನರು ಕೇವಲ ನನ್ನನ್ನು ನೋಡಲು ಬರುವವರಲ್ಲ. ಅವರಿಗೆಲ್ಲ ಬದಲಾವಣೆ ಬೇಕಾಗಿದೆ. ಗೀತಾ ಅವರನ್ನು ಗೆಲ್ಲಿಸಬೇಕೆಂಬ ಭಾವನೆಯನ್ನು ನಾನು ಅವರಲ್ಲಿ ಗಮನಿಸಿದ್ದೇನೆ ಎಂದು ಚಿತ್ರನಟ ಶಿವರಾಜ್‌ಕುಮಾರ್ ಹೇಳಿದರು. ಪತ್ನಿ ಗೀತಾ ಪರ ಪ್ರಚಾರ ಕಣದಲ್ಲಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಜನರಿಗೆ ಹೊಸ ಬದಲಾವಣೆ ಬೇಕಾಗಿದೆ. ಈಗಾಗಲೇ ಗೀತಾ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ಮಲೆನಾಡಿನ ಸಮಸ್ಯೆಗಳ ಬಗ್ಗೆ ಅರಿವಿದೆ. ಶಕ್ತಿಧಾಮದ ಮೂಲಕ ಶೈಕ್ಷಣಿಕ ಸೇವೆ ಮಾಡುತ್ತಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts