More

    ನಾಗಮ್ಮಜ್ಜಿಗೆ ಮನೆ ಸಿದ್ಧ, 26ರಂದು ಗೃಹಪ್ರವೇಶ: ಹಲವರ ಸಹಕಾರದಲ್ಲಿ ಸುಸಜ್ಜಿತ ಆಸರೆ, ಬಡ ಕುಟುಂಬದಲ್ಲಿ ಸಂಭ್ರಮ..

    ಬಂಟ್ವಾಳ (ದ.ಕ.): ಕಳ್ಳಿಗೆ ಗ್ರಾಮದ ಜಾರಂದಗುಡ್ಡೆಯಲ್ಲಿ ‘ವಿಜಯವಾಣಿ’ ಮಾಧ್ಯಮ ಬಳಗದ ಮುತುವರ್ಜಿ, ಜೆಸಿಐ ಬಂಟ್ವಾಳ ನೇತೃತ್ವ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರ, ದಾನಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಕಾರದಲ್ಲಿ ನಿರ್ಮಾಣಗೊಂಡ ನಾಗಮ್ಮಜ್ಜಿಯ ನೂತನ ಮನೆ ವಾಸಕ್ಕೆ ಸಿದ್ಧಗೊಂಡಿದೆ. ಬಡ ಕುಟುಂಬದಲ್ಲಿ ಗೃಹಪ್ರವೇಶದ ಸಂಭ್ರಮ ಕಾಣಿಸಿಕೊಂಡಿದೆ.

    ಅಂತಿಮ ಹಂತದ ಕೆಲಸ ನಡೆಯುತ್ತಿದ್ದು, ಡಿ.26ರಂದು ಗೃಹಪ್ರವೇಶ ನಡೆಯಲಿದ್ದು, ಬಡ ಕುಟುಂಬದವರ ಮೊಗದಲ್ಲಿ ಆನಂದ, ಸಂಭ್ರಮ ಮನೆ ಮಾಡಿದೆ. ನಾಗಮ್ಮಜ್ಜಿಯ ಹಳೇ ಮನೆಯ ಗೋಡೆಗಳು ಬಿರುಕು ಬಿಟ್ಟು ಕುಸಿಯುವ ಸ್ಥಿತಿಯಲ್ಲಿತ್ತು. ಶೌಚಗೃಹದ ಗೋಡೆ ಕುಸಿದಿತ್ತು. ಇಂಥ ದಯನೀಯ ಸ್ಥಿತಿಯಲ್ಲಿ, ಅಪಾಯಕಾರಿ ಮನೆಯಲ್ಲಿ ಕುಟುಂಬ ವಾಸಿಸುತ್ತಿರುವ ಬಗ್ಗೆ ‘ವಿಜಯವಾಣಿ’ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

    ಸರ್ವಧರ್ಮೀಯರ ಸಹಕಾರ

    ‘ವಿಜಯವಾಣಿ’ ಪತ್ರಕರ್ತರಿಬ್ಬರು ನಾಗಮ್ಮಜ್ಜಿಗೆ ಮನೆ ಕಟ್ಟೋಣ ಅಭಿಯಾನ ಆರಂಭಿಸಿ ಮನೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದರು. ಜೂ.11ರಂದು ಶಾಸ್ತ್ರೋಕ್ತವಾಗಿ ಶಿಲಾನ್ಯಾಸ ನೆರವೇರಿತ್ತು. ನಾಗಮ್ಮಜ್ಜಿ ಮನೆಗೊಂದು ಕಲ್ಲು ನೀಡೋಣ ಅಭಿಯಾನ, ಸಿಮೆಂಟ್ ಅಭಿಯಾನ ಮೂಲಕ ವಸ್ತು ರೂಪದ ದೇಣಿಗೆ ಹಾಗೂ ಆರ್ಥಿಕ ಸಹಕಾರ ಪಡೆಯಲಾಯಿತು.

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜೆಸಿಐ ಬಂಟ್ವಾಳದ ಸದಸ್ಯರು, ಮಾಜಿ ಸಚಿವ ಬಿ.ರಮಾನಾಥ ರೈ, ಉಳ್ಳಾಲ ದರ್ಗಾ, ಸಂಘ ಸಂಸ್ಥೆಗಳ ಸಹಿತ ಅನೇಕರು, ಸರ್ವಧರ್ಮೀಯ ದಾನಿಗಳು ಸ್ವಯಂಪ್ರೇರಣೆಯಿಂದ ಮನೆ ನಿರ್ಮಾಣಕ್ಕೆ ಸಹಕಾರ, ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರ ಶ್ರಮದಾನದಿಂದ ಆರು ತಿಂಗಳಲ್ಲಿ ಸುಂದರ, ಸುಸಜ್ಜಿತ ಮನೆ ನಿರ್ಮಾಣಗೊಂಡಿದೆ.

    ಮನೆ ನಿರ್ಮಾಣದಲ್ಲಿ ಸ್ಥಳೀಯ ಸಿವಿಲ್ ಗುತ್ತಿಗೆದಾರ ಅಶ್ವಿನ್ ಮುಂಡಾಜೆ ಸೇವೆ ಅಪಾರ. ಮನೆಯ ಪಂಚಾಂಗ, ಗೋಡೆ ಉಚಿತವಾಗಿ ನಿರ್ಮಿಸಿಕೊಟ್ಟಿದ್ದಾರೆ. ಬಳಿಕ ರಿಯಾಯತಿ ದರದಲ್ಲಿ ಉಳಿದ ಕೆಲಸ ನಿರ್ವಹಿಸಿ ಮಾನವೀಯತೆ ಮೆರೆದಿದ್ದಾರೆ.


    ಹೆಗಲು ಕೊಟ್ಟ ‘ವಿಜಯವಾಣಿ’ ಬಳಗ

    ಮನೆ ನಿರ್ಮಾಣದ ಆರ್ಥಿಕ ಕ್ರೋಡೀಕರಣ ಹಿನ್ನೆಲೆಯಲ್ಲಿ ವಿಜಯವಾಣಿ ಬಳಗದ ವರದಿಗಾರರು ದಾನಿಗಳನ್ನು ಸಂಪರ್ಕಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಪತ್ರಿಕೆಯ ಹಿರಿಯ ಉಪಸಂಪಾದಕ, ಬಂಟ್ವಾಳ, ಉಳ್ಳಾಲ, ಬೆಳ್ತಂಗಡಿ, ವಿಟ್ಲದ ವರದಿಗಾರರು ಮನೆ ನಿರ್ಮಾಣದ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ.

    26ರಂದು ಸಮಾರಂಭ

    ಗೃಹಪ್ರವೇಶ ಡಿ.26ರಂದು ಬೆಳಗ್ಗೆ 8.05ರ ಮುಹೂರ್ತದಲ್ಲಿ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಕೃತಜ್ಞತೆ ಸಲ್ಲಿಕೆ ಕಾರ್ಯಕ್ರಮ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್ ಉದ್ಘಾಟಿಸುವರು. ಮಾಜಿ ಸಚಿವ ಬಿ. ರಮಾನಾಥ ರೈ ದೀಪ ಬೆಳಗಿಸುವರು. ವಿಜಯವಾಣಿ ಸಂಪಾದಕ ಕೆ.ಎನ್. ಚನ್ನೇಗೌಡ ಕೀ ಹಸ್ತಾಂತರಿಸುವರು. ಜೆಸಿಐ ಬಂಟ್ವಾಳ ಅಧ್ಯಕ್ಷ ಉಮೇಶ್ ಆರ್. ಮೂಲ್ಯ ಅಧ್ಯಕ್ಷತೆ ವಹಿಸುವರು.

    ಮಂಗಳೂರು ಆಟೋಮೇಶನ್ ಕ್ಲೌಡ್ ಸೊಲ್ಯುಶನ್ಸ್ ಆಡಳಿತ ನಿರ್ದೇಶಕ ಜಗದೀಶ್ ರಾಮ, ಕುದ್ರೋಳಿ ಗೋಕರ್ಣನಾಥ ದೇವಸ್ಥಾನ ಸಮಿತಿ ಉಪಾಧ್ಯಕ್ಷೆ ಊರ್ಮಿಳಾ ರಮೇಶ್ ಕುಮಾರ್, ಕುಂಪಲ ಶ್ರೀ ಬಾಲಕೃಷ್ಣ ಮಂದಿರ ಅಧ್ಯಕ್ಷ ಸತೀಶ್ ಕುಂಪಲ, ಹಿತೈಷಿ ಶೃತಿ ಪ್ರಸನ್ನ ಭಂಡಾರಿಬೆಟ್ಟು, ಉಳ್ಳಾಲ ಸೈಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್, ಭಗತ್‌ಸಿಂಗ್ ಸೇವಾ ಪ್ರತಿಷ್ಠಾನದ ಜೀವನ್ ಕುಮಾರ್ ತೊಕ್ಕೊಟ್ಟು, ಅಬ್ಬೆಟ್ಟು ಉದಯ ಯುವಕ ಮಂಡಲ ಅಧ್ಯಕ್ಷ ಅಶೋಕ್ ಶೆಟ್ಟಿ ಮೊದಲಾದವರು ಪಾಲ್ಗೊಳ್ಳುವರು.

    ನೀನೇ ಸಾಕಿದ ಗಿಣಿ ನಿನ್ನ ಹದ್ದಾಗಿ ಕುಕ್ಕಿತಲ್ಲೋ..; ಆರ್​ಟಿಐ ಕಾರ್ಯಕರ್ತನನ್ನೇ ಇಕ್ಕಟ್ಟಿಗೆ ಸಿಲುಕಿಸಿದ ಮಹಿಳಾ ಅಧಿಕಾರಿ!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts