

ರಾಂಚಿ: ಭಾರತ ತಂಡದ ಮಾಜಿ ಎಂಎಸ್ ಧೋನಿ ಮಂಗಳವಾರವಷ್ಟೇ 39ನೇ ವರ್ಷ ಹುಟ್ಟುಹಬ್ಬ ಆಚರಿಸಿಕೊಂಡರು. ಕಳೆದ ಒಂದು ವರ್ಷದಿಂದ ಕ್ರಿಕೆಟ್ನಿಂದ ದೂರ ಉಳಿದಿರುವ ಧೋನಿ ನಿವೃತ್ತಿಯದ್ದೇ ಎಲ್ಲೆಡೆ ಚರ್ಚೆಯಾಗುತ್ತಿದೆ. ಧೋನಿ ವೃತ್ತೀಜಿವನ ಮುಗಿಯಿತು, ರಾಂಚಿಯ ತಮ್ಮ ಫಾರ್ಮ್ ಹೌಸ್ನಲ್ಲಿ ಪೂರ್ಣಪ್ರಮಾಣದಲ್ಲಿ ಕೃಷಿಯಲ್ಲಿ ತೊಡಗಲಿದ್ದಾರಂತೆ, ಅಂತೆ, ಕಂತೆಗಳೇ ಧೋನಿ ಕ್ರಿಕೆಟ್ ಜೀವನವನ್ನು ಆವರಿಸಿಕೊಂಡಿವೆ. ಧೋನಿ ನಿವೃತ್ತಿ ಹೊಂದುವ ಬಗ್ಗೆ ಯೋಚಿಸುತ್ತಿಲ್ಲ, ಐಪಿಎಲ್ನಲ್ಲಿ ಆಡಲು ಉತ್ಸುಕರಾಗಿದ್ದಾರೆ ಎಂದು ಧೋನಿ ಬಾಲ್ಯದ ಗೆಳೆಯ ಹಾಗೂ ಮ್ಯಾನೇಜರ್ ಮಿಹಿರ್ ದಿವಾಕರ್ ಸ್ಪಷ್ಟನೆ ನೀಡಿದ್ದಾರೆ. ಇದರೊಂದಿಗೆ ಧೋನಿ ನಿವೃತ್ತಿ ಕುರಿತು ಎದ್ದಿರುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಇದನ್ನೂ ಓದಿ: ಸಿಎಸ್ಕೆ ತಂಡಕ್ಕೆ ಬಾಸ್ ಆಗಲಿದ್ದಾರೆ ಎಂಎಸ್ ಧೋನಿ..!
ಸಿಎಸ್ಕೆ ತಂಡದ ನಾಯಕನಾಗಿರುವ ಧೋನಿ, ಐಪಿಎಲ್ ಸಿದ್ಧತೆಗಾಗಿ ತಂಡದ ಸಹ ಸದಸ್ಯರಾದ ಸುರೇಶ್ ರೈನಾ, ಪೀಯುಷ್ ಚಾವ್ಲ, ಅಂಬಟಿ ರಾಯುಡು ಜತೆಗೂಡಿ ಚೆನ್ನೈನಲ್ಲಿ ಅಭ್ಯಾಸ ಆರಂಭಿಸಿದ್ದರು. ಕರೊನಾ ವೈರಸ್ ಭೀತಿಯಿಂದಾಗಿ ಲಾಕ್ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಅಭ್ಯಾಸ ಮೊಟಕುಗೊಳಿಸಿ ತವರಿಗೆ ವಾಪಸಾಗಿದ್ದರು. ತವರು ರಾಂಚಿಯಲ್ಲಿರುವ ಫಾರ್ಮ್ ಹೌಸ್ನಲ್ಲಿ ಧೋನಿ ಪತ್ನಿ ಹಾಗೂ ಮಗಳೊಂದಿಗೆ ಲಾಕ್ ಆಗಿದ್ದಾರೆ.