More

    VIDEO | ಸಿಡ್ನಿಯಲ್ಲಿ ಟೀಮ್​ ಇಂಡಿಯಾ ವೇಗಿ ಮೊಹಮದ್ ಸಿರಾಜ್ ಭಾವುಕರಾಗಿದ್ದು ಯಾಕೆ ಗೊತ್ತೇ?

    ಸಿಡ್ನಿ: ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯ ಆರಂಭಕ್ಕೆ ಮುನ್ನ ಗುರುವಾರ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಎಂದಿನ ಸಂಪ್ರದಾಯದಂತೆ ಪ್ರವಾಸಿ ಭಾರತ ತಂಡದ ರಾಷ್ಟ್ರಗೀತೆ ಮೊಳಗಿತು. ಈ ವೇಳೆ ಭಾರತ ತಂಡದ ಆಟಗಾರರೆಲ್ಲರೂ ರಾಷ್ಟ್ರಗೀತೆಯನ್ನು ಹಾಡುತ್ತ ಗಾಂಭಿರ್ಯದಿಂದ ನಿಂತಿದ್ದರೆ, ವೇಗಿ ಮೊಹಮದ್ ಸಿರಾಜ್ ಆ ಕ್ಷಣದಲ್ಲಿ ಭಾವುಕರಾದರು. ಅವರ ಕಣ್ಣಂಚಲಿ ನೀರು ಕೂಡ ಹರಿಯಿತು. ಸಿರಾಜ್ ಅವರ ಕಣ್ಣೀರು ಹರಿಸಿದ ಆ ಕ್ಷಣದ ವಿಡಿಯೋ ಮತ್ತು ಚಿತ್ರಗಳು ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದವು.

    ಸಿಡ್ನಿ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಬಳಿಕ, ರಾಷ್ಟ್ರಗೀತೆಯ ವೇಳೆ ಭಾವುಕರಾಗಿದ್ದು ಯಾಕೆ ಎಂದು 26 ವರ್ಷದ ಸಿರಾಜ್ ವಿವರಿಸಿದರು. ‘ಆ ಕ್ಷಣದಲ್ಲಿ ನಾನು ತಂದೆಯನ್ನು ನೆನೆದ ಕಾರಣ ಭಾವುಕನಾದೆ. ನಾನು ಭಾರತ ಪರ ಟೆಸ್ಟ್ ಆಡುವುದನ್ನು ಅವರು ನೋಡಲು ಬಯಸಿದ್ದರು. ನಾನು ಆಡುತ್ತಿರುವುದನ್ನು ನೋಡಲು ಅವರು ಇರಬೇಕಿತ್ತು’ ಎಂದು ಸಿರಾಜ್ ದಿನದಾಟದ ಬಳಿಕ ಹೇಳಿದರು.

    ಇದನ್ನೂ ಓದಿ: ಸಿಡ್ನಿಯಲ್ಲಿ ಕಾಡಿದ ಮಳೆ, ಆಸೀಸ್ ಎಚ್ಚರಿಕೆಯ ಬ್ಯಾಟಿಂಗ್

    ಕಳೆದ ನವೆಂಬರ್‌ನಲ್ಲಿ ಆಸೀಸ್‌ಗೆ ಕಾಲಿಟ್ಟ ಬೆನ್ನಲ್ಲೇ ಸಿರಾಜ್ ತಂದೆ ಹೈದರಾಬಾದ್‌ನಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದರೂ, ಆದರೂ ಅವರು ತವರಿಗೆ ಮರಳದೆ ಪ್ರವಾಸದಲ್ಲಿ ಮುಂದುವರಿದಿದ್ದರು. ಸಿರಾಜ್ ಅವರ ಈ ದಿಟ್ಟ ನಡೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸಹಿತ ಹಲವರಿಂದ ಮೆಚ್ಚುಗೆಗೆ ಪಾತ್ರವಾಗಿತ್ತು.

    ಹೈದರಾಬಾದ್‌ನಲ್ಲಿ ಆಟೋ ರಿಕ್ಷಾ ಚಾಲಕರಾಗಿದ್ದ ಸಿರಾಜ್ ತಂದೆ, ಪುತ್ರನ ಕ್ರಿಕೆಟ್ ವೃತ್ತಿಜೀವನದ ಏಳ್ಗೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ಸಿಡ್ನಿಯಲ್ಲಿ ಭಾವುಕರಾದ ಸಿರಾಜ್‌ಗೆ ಮಾಜಿ ಕ್ರಿಕೆಟಿಗರಾದ ವಾಸಿಂ ಜಾಫರ್, ಮೊಹಮದ್ ಕೈಫ್​ ಮತ್ತಿತರಿಂದ ಸಮಾಧಾನದ ನುಡಿಗಳೂ ಬಂದಿವೆ. ‘ನಿಮ್ಮನ್ನು ಹುರಿದುಂಬಿಸಲು ಪ್ರೇಕ್ಷಕರು ಸ್ವಲ್ಪ ಅಥವಾ ಇಲ್ಲದೇ ಇದ್ದರೂ, ದೇಶವನ್ನು ಪ್ರತಿನಿಧಿಸುವುದಕ್ಕಿಂತ ದೊಡ್ಡ ಪ್ರೇರಣೆ ಯಾವುದೂ ಇಲ್ಲ’ ಎಂದಿರುವ ವಾಸಿಂ ಜಾಫರ್ ಜತೆಗೆ, ‘ದೇಶಕ್ಕಾಗಿ ಆಡುತ್ತೇವೆ. ಜನರಿಗಾಗಿ ಅಲ್ಲ’ ಎಂಬ ಎಂಎಸ್ ಧೋನಿ ಅವರ ಜನಪ್ರಿಯ ಹೇಳಿಕೆಯನ್ನೂ ಉಲ್ಲೇಖಿಸಿದ್ದಾರೆ. ‘ಈ ಚಿತ್ರವನ್ನು ಕೆಲ ಜನರು ನೆನಪಿಟ್ಟುಕೊಳ್ಳಬೇಕೆಂದು ನಾನು ಬಯಸುತ್ತೇನೆ. ಇವರ ಹೆಸರು ಮೊಹಮದ್ ಸಿರಾಜ್ ಮತ್ತು ಇವರಿಗೆ ರಾಷ್ಟ್ರಗೀತೆ ಎಷ್ಟು ಮಹತ್ವದ್ದು ಎಂಬುದನ್ನು ನೋಡಿ’ ಎಂದು ಮೊಹಮದ್ ಕೈಫ್​ ಟ್ವೀಟಿಸಿದ್ದಾರೆ.

    ಇದನ್ನೂ ಓದಿ: ಸುರೇಶ್ ರೈನಾ ಭಾರತ ಪರ ಪದಾರ್ಪಣೆ ಮಾಡಿದಾಗ 5 ವರ್ಷದ ಬಾಲಕ, ಈಗ ಅವರಿಗೆ ನಾಯಕ!

    ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೇಶವನ್ನು ಪ್ರತಿನಿಧಿಸುವುದು ಎಷ್ಟು ಅಮೂಲ್ಯವಾದುದು ಎಂಬುದರ ಝಲಕ್ ಅನ್ನು ಮೊಹಮದ್ ಸಿರಾಜ್ ಅವರಿಲ್ಲಿ ಪ್ರದರ್ಶಿಸಿದ್ದಾರೆ ಎಂದು ಐಸಿಸಿ ಕೂಡ ಸಿರಾಜ್ ಭಾವುಕ ಕ್ಷಣದ ವಿಡಿಯೋ ಪ್ರಕಟಿಸಿದೆ. ಬಿಸಿಸಿಐ ಕೂಡ ಈ ಚಿತ್ರದೊಂದಿಗೆ ‘ಜೈ ಹಿಂದ್’ ಎಂದು ಟ್ವೀಟಿಸಿದೆ.

    ಸೌದಿಯಲ್ಲಿ ನಡೆಯುತ್ತಿರುವ ಡಕಾರ್ ರ‍್ಯಾಲಿಯಲ್ಲಿ ಅವಘಡ: ಕೋಮಾಕ್ಕೆ ಜಾರಿದ ಕನ್ನಡದ ಕುವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts