More

    ಕ್ಷೇತ್ರವಾರು ಟ್ರೆಂಡ್ ಹೇಗಿದೆ ಗೊತ್ತಾ?: ವಿಜಯವಾಣಿ ಮತದಾನೋತ್ತರ ಸಮೀಕ್ಷೆ; ವಿಧಾನಪರಿಷತ್ ಕಣ ಸಂಭವನೀಯ ಚಿತ್ರಣ

    ವಿಧಾನಪರಿಷತ್​ನಲ್ಲಿ ಬಹುಮತ ಪಡೆದುಕೊಳ್ಳಬೇಕೆಂಬ ಆಡಳಿತ ಪಕ್ಷದ ಛಲ, ತನ್ನ ಹಿಂದಿನ ಸಾಧನೆಯನ್ನು ವಿಸ್ತರಿಸಿಕೊಳ್ಳಬೇಕೆಂಬ ಕಾಂಗ್ರೆಸ್ ಹಠ, ಎರಡೂ ರಾಷ್ಟ್ರೀಯ ಪಕ್ಷಗಳಿಗೆ ತಾನು ಅನಿವಾರ್ಯವಾಗಬೇಕೆಂಬ ಗುರಿ ಹೊಂದಿದ ಜೆಡಿಎಸ್ ನಡುವೆ ಜಿದ್ದಾಜಿದ್ದಿ ಹೋರಾಟಕ್ಕೆ ಕಾರಣವಾದ ಚುನಾವಣೆ ಪ್ರಧಾನ ಹಂತವನ್ನು ತಲುಪಿದೆ. ಜಿಲ್ಲೆಯಿಂದ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳ ಪ್ರತಿನಿಧಿಯಾಗಿ ಆಯ್ಕೆಯಾಗುವ ಚುನಾವಣೆ ರಾಜಕೀಯ ಪಕ್ಷಗಳಿಗೆ ಅಷ್ಟು ಸುಲಭವಲ್ಲ. ಜನಪ್ರತಿನಿಧಿಗಳೇ ಮತದಾರರಾದರೂ ಅವರನ್ನು ಓಲೈಸುವುದು ಅಷ್ಟು ಸಲೀಸಾಗಿರಲಿಲ್ಲ. ಇದೀಗ ಮತದಾನ ಮುಗಿದಿದೆ, ಮತದಾರರು ಯಾವ ಅಭ್ಯರ್ಥಿಯತ್ತ ದೃಷ್ಟಿ ನೆಟ್ಟಿರಬಹುದು ಎಂಬ ಲೆಕ್ಕಾಚಾರದ ವರದಿ ಇಲ್ಲಿದೆ.
    • ವಿಜಯಪುರ-ಬಾಗಲಕೋಟೆ (ದ್ವಿಸದಸ್ಯ ಕ್ಷೇತ್ರ): ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್​ನ ಅಭ್ಯರ್ಥಿಗಳು ಜಯ ಸಾಧಿಸುವ ಸಾಧ್ಯತೆ ಅಧಿಕವಾಗಿದೆ. ಪಕ್ಷೇತರ ಅಭ್ಯರ್ಥಿ ಕೂಡ ಪೈಪೋಟಿ ನೀಡಿದ್ದಾರೆ.
    • ಧಾರವಾಡ (ದ್ವಿಸದಸ್ಯ): ಕಾಂಗ್ರೆಸ್ ಮತ್ತು ಬಿಜೆಪಿ ಅನಾಯಾಸವಾಗಿ ದಡಸೇರುವುದು ಖಚಿತ, ಪಕ್ಷೇತರರು ಪೈಪೋಟಿ ನೀಡುವಷ್ಟು ಬಲಾಢ್ಯರಾಗಿ ಕಾಣಿಸಿಲ್ಲ.
    • ಉತ್ತರ ಕನ್ನಡ: ಬಿಜೆಪಿ-ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಇತ್ತಾದರೂ ಬಿಜೆಪಿಯ ಐವರು ಶಾಸಕರಿರುವುದು ಮತ್ತು ಬಂಡಾಯ ತಣ್ಣಗಾಗಿಸುವ ಆಡಳಿತ ಪಕ್ಷದ ಪ್ರಯತ್ನ ಫಲಕೊಟ್ಟಿದೆ.
    • ಕಲಬುರಗಿ-ಯಾದಗಿರಿ: ಬಿಜೆಪಿ ಪುನರಾಯ್ಕೆ ಸಲೀಸು ಎಂಬಂತೆ ಕಾಣಿಸಿದೆ. 13 ವಿಧಾನಸಭಾ ಕ್ಷೇತ್ರದ ಪೈಕಿ 9 ಕಡೆ ಬಿಜೆಪಿ ಶಾಸಕರಿರುವುದು ಅನುಕೂಲ. ಕಾಂಗ್ರೆಸ್ ಕೂಡ ಗೆಲ್ಲಲು ಶತಪ್ರಯತ್ನ ಮಾಡಿದೆ.
    • ಬೀದರ್: 6 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ, ಎರಡರಲ್ಲಿ ಕಾಂಗ್ರೆಸ್ ಪ್ರಾಬಲ್ಯ ಕಾಣಿಸಿದೆ. ಕೊನೆ ಹಂತದಲ್ಲಿ ಸಿಎಂ ಮತ್ತು ಕೇಂದ್ರ ಸಚಿವ ಖೂಬಾ, ಉಸ್ತುವಾರಿ ಸಚಿವರ ಶ್ರಮದಿಂದ ಗೆಲುವು ಆಡಳಿತ ಪಕ್ಷದ ಕಡೆ ವಾಲಬಹುದು.
    • ದಾವಣಗೆರೆ- ಚಿತ್ರದುರ್ಗ: 11 ವಿಧಾನಸಭಾ ಕ್ಷೇತದಲ್ಲಿ 8ರಲ್ಲಿ ಬಿಜೆಪಿ ಶಾಸಕರಿದ್ದಾರೆ. ಇದೊಂದೇ ಕಾರಣಕ್ಕೆ ಆ ಪಕ್ಷದ ಅಭ್ಯರ್ಥಿಗೆ ಆನೆಬಲ ಬಂದಂತೆ ಕಾಣಿಸಿದೆ. ಕಾಂಗ್ರೆಸ್ ತಯಾರಿ ಸಾಲದಾಯಿತು.
    • ಕೊಪ್ಪಳ- ರಾಯಚೂರು: ಬಿಜೆಪಿಯೊಳಗಿನ ಅಸಮಾಧಾನ ಕಾಂಗ್ರೆಸ್​ಗೆ ಗೆಲುವಿನ ಬಳುವಳಿ ಯಾಗಬಹುದು. ಹಿಂದುಳಿದ ವರ್ಗದ ಟ್ರಂಪ್​ಕಾರ್ಡ್ ಕೆಲಸ ಮಾಡಿದ್ದರೆ ಬಿಜೆಪಿ ಕೂದಲೆಳೆ ಅಂತರದಲ್ಲಿ ಗೆಲ್ಲಬಹುದಷ್ಟೆ.
    • ಬಳ್ಳಾರಿ: ಫೋಟೋ ಫಿನಿಶ್ ಫೈಟ್​ನಲ್ಲಿ ಕೈ ಪ್ರಭಾವ ಮೇಲಾಗಬಹುದೆಂದು ಊಹಿಸಲಾಗುತ್ತಿದೆ. ಚುನಾವಣೆ ಕೊನೆಯ ಹಂತದಲ್ಲಿನ ಪರಿಶ್ರಮ ಕೆಲಸ ಮಾಡಿದ್ದರೆ ಫಲಿತಾಂಶದ ಚಹರೆ ಬದಲಾಗಿ ಬಿಜೆಪಿಗೆ ಅನುಕೂಲವಾಗಬಹುದು.
    • ಶಿವಮೊಗ್ಗ: ಒಂದು ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲ ಕಡೆ ಬಿಜೆಪಿ ಶಾಸಕರಿರುವುದು ಮತ್ತು ಬಿಎಸ್​ವೈ ಹೆಚ್ಚಿನ ಶ್ರಮದಿಂದ ಬಿಜೆಪಿ ಅಭ್ಯರ್ಥಿಗೆ ಅನುಕೂಲವಾಗಿ ರುವುದು ಕಂಡುಬಂದಿದೆ.
    • ಚಿಕ್ಕಮಗಳೂರು: ಕೈ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ ನೀಡಿದರೂ ಬಿಜೆಪಿ ಅಭ್ಯರ್ಥಿ ಜತೆಗೆ ಜೆಡಿಎಸ್ ಮತದಾರರು ಚೆನ್ನಾಗಿರುವುದರಿಂದ ಅವರಿಗೇ ಹೆಚ್ಚು ಲಾಭಕರವಾದಂತಿದೆ. ಸಿ.ಟಿ.ರವಿ ಪ್ರಭಾವ ಕೂಡ ಕೆಲಸ ಮಾಡಿದೆ.
    • ಮಂಗಳೂರು (ದ್ವಿಸದಸ್ಯ): ಬಿಜೆಪಿ ಮತ್ತು ಕಾಂಗ್ರೆಸ್ ಒಂದೊಂದು ಸ್ಥಾನ ಹಂಚಿಕೊಳ್ಳುವುದು ಬಹುತೇಕ ಸ್ಪಷ್ಟವಾಗಿ ಕಾಣಿಸಿದೆ. ಪ್ರಥಮ ಪ್ರಾಶಸ್ತ್ಯಲ್ಲಿ ಗೆಲ್ಲುವವರು ಯಾರೆಂಬುದಷ್ಟೇ ಕುತೂಹಲ.
    • ಬೆಂಗಳೂರು ಗ್ರಾಮಾಂತರ: ಕಾಂಗ್ರೆಸ್- ಜೆಡಿಎಸ್ ಸಮಬಲವಿದೆ. ಗೆಲುವಿನ ತಕ್ಕಡಿ ಕೈಯತ್ತ ವಾಲುವ ಸಾಧ್ಯತೆ ಹೆಚ್ಚಿದೆ. ಹೆಚ್ಚಿರುವ ಜೆಡಿಎಸ್ ಶಾಸಕರು ತಮ್ಮ ಅಭ್ಯರ್ಥಿಗೆ ಎಷ್ಟು ಶ್ರಮಿಸಿದ್ದಾರೆಂಬುದರ ಮೇಲೆ ನಿಚ್ಚಳವಾಗಲಿದೆ.
    • ತುಮಕೂರು: ಒಗ್ಗಟ್ಟಿನಲ್ಲಿ ಚುನಾವಣೆ ಎದುರಿಸಿದ್ದು ಬಿಜೆಪಿಗೆ ಲಾಭತಂದುಕೊಡಬಹುದು. ಕಾಂಗ್ರೆಸ್ ಕೂಡ ಹಿಂದೆಬಿದ್ದಿಲ್ಲ. ಜೆಡಿಎಸ್ ಮತ ಹೆಚ್ಚಿದ್ದರೂ ಮತಗಳು ಛಿದ್ರಗೊಂಡಂತೆ ಕಾಣಿಸಿದೆ.
    • ಕೋಲಾರ- ಚಿಕ್ಕಬಳ್ಳಾಪುರ: ಆರೋಗ್ಯ ಸಚಿವರ ಸರ್ಜರಿ ಬಿಜೆಪಿಗೆ ಲಾಭ ತಂದುಕೊಡಬಹುದು. ಜೆಡಿಎಸ್ ಕೂಡ ಹಿಂದೆ ಬಿದ್ದಿಲ್ಲ. ತ್ರಿಕೋನ ಸ್ಪರ್ಧೆ ನಡೆದಿದ್ದು ಕೊನೇ ಹಂತದಲ್ಲಿ ಬಿಜೆಪಿಗೆ ಅನುಕೂಲವಾಗಿದೆ.
    • ಮೈಸೂರು- ಚಾಮರಾಜ ನಗರ (ದ್ವಿಸದಸ್ಯ): ಜೆಡಿಎಸ್ ಶಾಸಕರ ಕಾರಣದಿಂದ ಕಾಂಗ್ರೆಸ್​ಗೆ ವರದಾನವಾಗಿದೆ. ಹಾಗೆಯೇ ಕೈ-ದಳ ಜಗಳ ಎರಡನೇ ಸ್ಥಾನದಿಂದ ಆಯ್ಕೆಯಾಗಲು ಬಿಜೆಪಿಗೆ ಲಾಭ ಮಾಡಿಕೊಡಬಹುದು.
    • ಹಾಸನ: ಜೆಡಿಎಸ್​ಗೆ ಕಷ್ಟವಾಗಲಿಕ್ಕಿಲ್ಲ. ಗ್ರಾ.ಪಂ.ಸದಸ್ಯರೂ ಹೆಚ್ಚಿದ್ದಾರೆ. ಕಾಂಗ್ರೆಸ್​ನಲ್ಲಿನ ಸಂಘಟಿತ ಪ್ರಚಾರದ ಕೊರತೆ, ಬಿಜೆಪಿ ಸಂಘಟನೆ ಮೂರು ತಾಲೂಕುಗಳಲ್ಲಿ ಮಾತ್ರ ಗಟ್ಟಿಯಾಗಿರುವುದು ಆ ಪಕ್ಷದ ಹಿನ್ನಡೆಗೆ ಕಾರಣ.
    • ಕೊಡಗು: ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಜನಪ್ರತಿನಿಧಿಗಳು ಕೈಜಾರದಂತೆ ಮುಂಜಾಗ್ರತೆ ವಹಿಸಿದ್ದರ ಪರಿಣಾಮ ಬಿಜೆಪಿಗೆ ಹೆಚ್ಚಿನ ಅನುಕೂಲ. ಜಾತಿ ಲೆಕ್ಕಾಚಾರದಲ್ಲಿ ಕೈ ಪರಿಣಾಮ ಬೀರಿದರೂ ಕೊನೆಯ ಹಂತದಲ್ಲಿ ಪ್ರತಾಪ್​ಸಿಂಹ ಶ್ರಮ ಕೆಲಸ ಮಾಡಿದಂತಿದೆ.
    • ಬೆಳಗಾವಿ (ದ್ವಿಸದಸ್ಯ): ಬಿಜೆಪಿ ಅಭ್ಯರ್ಥಿ ಮತ್ತು ಪಕ್ಷೇತರ ಅಭ್ಯರ್ಥಿಗಳು ಪ್ರಥಮ ಮತ್ತು ಎರಡನೇ ಪ್ರಾಶಸ್ತ್ಯ ಮತಗಳ ಮೂಲಕ ಗೆಲ್ಲಬಹುದೆಂಬ ಅಂದಾಜಿದೆ. ಆಡಳಿತ ಪಕ್ಷದ ಶಾಸಕರು ಹೆಚ್ಚಿರುವುದು ಅವರಿಬ್ಬರಿಗೆ ಲಾಭಕರವಾಗಿದೆ.
    • ಮಂಡ್ಯ: ಬಹುಪಾಲು ಶಾಸಕರನ್ನು ಹೊಂದಿದ್ದರೂ ಜೆಡಿಎಸ್​ಗೆ ಸುಲಭವಾಗಿ ಕಾಣಿಸಿಲ್ಲ. ಕಾಂಗ್ರೆಸ್ ಗೆದ್ದು ಬೀಗುವ ಮನಸ್ಥಿತಿಯಲ್ಲೂ ಇಲ್ಲ. ಫೋಟೋ ಫಿನಿಶ್ ಫಲಿತಾಂಶ ಖಚಿತ.

    ಮೇಲ್ಮನೆಯಲ್ಲೂ ಪ್ರಾಬಲ್ಯ

    ಶಿವಮೊಗ್ಗ: ಈ ಚುನಾವಣೆ ಬಳಿಕ ವಿಧಾನಪರಿಷತ್​ನಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮ ಲಿದೆ. ನಮ್ಮ ಪಕ್ಷದ ಕನಿಷ್ಠ 15 ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಶಿಕಾರಿಪುರದಲ್ಲಿ ಶುಕ್ರವಾರ ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಮುಖಂಡರ ಟೀಕೆ ಬಗ್ಗೆ ಮಾತನಾಡುವುದಿಲ್ಲ. ಅದಕ್ಕೆ ಪ್ರತಿಕ್ರಿಯೆ ನೀಡುವ ಅಗತ್ಯವೂ ಇಲ್ಲ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳೀಪಟವಾಗಲಿದೆ ಎಂದರು. ವಾಸ್ತವದಲ್ಲಿ ಈ ಚುನಾವಣೆ ಫಲಿತಾಂಶ ಗ್ರಾಮಾಂತರ ಭಾಗದಲ್ಲಿ ಪಕ್ಷದ ಸಾಮರ್ಥ್ಯವನ್ನು ಸೂಚಿಸುತ್ತದೆ. ಹಳ್ಳಿಗಳಲ್ಲಿ ಬಿಜೆಪಿ ಎಷ್ಟು ಆಳವಾಗಿ ಬೇರುಬಿಟ್ಟಿದೆ ಎಂಬುದನ್ನು ಅನಾವರಣಗೊಳಿಸಲಿದೆ ಎಂದರು.

    ಬಿಜೆಪಿ ಗೆಲುವು ನಿಶ್ಚಿತ

    ಬೆಳಗಾವಿ: ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿರುವ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಉತ್ತಮ ವಾತಾವರಣ ವ್ಯಕ್ತವಾಗಿದೆ. ಪ್ರತಿ ಚುನಾವಣೆಯೂ ಅದರದ್ದೇ ಆದ ಮತದಾರರ ಮೇಲೆ ತೀರ್ವನವಾಗುತ್ತದೆ. ಉಪಚುನಾವಣೆಯೇ ಇರಲಿ, ಪರಿಷತ್ ಚುನಾವಣೆಯೇ ಇರಲಿ, ಸಂದರ್ಭಕ್ಕನುಸಾರವಾಗಿ ಅದರದ್ದೇ ಆದ ನೆಲೆಗಟ್ಟಿನ ಮೇಲೆ ನಡೆಯುತ್ತದೆ. ಅಲ್ಲದೆ, 2023ರ ವಿಧಾನಸಭಾ ಚುನಾವಣೆಯೂ ಆವತ್ತಿನ ಸಂದರ್ಭಕ್ಕನುಸಾರವಾಗಿ ಯಾವ ರಾಜಕೀಯ ಸನ್ನಿವೇಶ ಇರುತ್ತದೆಯೋ ಆ ನೆಲೆಗಟ್ಟಿನ ಮೇಲೆ ನಡೆಯುತ್ತದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

    ಕಾಂಗ್ರೆಸ್ ನಾಯಕರಿಗೆ ಕೃತಜ್ಞತೆ ಇಲ್ಲ

    ಚನ್ನಪಟ್ಟಣ: ಬೆಂಬಲ ಕೊಟ್ಟಂತೆ ನಾಟಕವಾಡಿ ಕತ್ತು ಕುಯ್ಯುವುದೇ ಕಾಂಗ್ರೆಸ್ಸಿಗರ ಕೆಲಸವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ನಗರಸಭೆಯಲ್ಲಿ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಚುನಾವಣೆಯಲ್ಲಿ ಕೆಲ ಕಡೆ ಜೆಡಿಎಸ್ ಬಿಜೆಪಿಗೆ ಬೆಂಬಲ ನೀಡಿದ್ದರೆ, ಮತ್ತೆ ಕೆಲವು ಕಡೆ ಕಾಂಗ್ರೆಸ್​ಗೆ ಬೆಂಬಲ ನೀಡಿದೆ. ಇಷ್ಟಾದರೂ ಕಾಂಗ್ರೆಸ್ ನಾಯಕರಿಗೆ ಸ್ವಲ್ಪವೂ ಕೃತಜ್ಞತೆ ಇಲ್ಲ ಎಂದರು. ಹತಾಶೆಯಿಂದ ಮಾಜಿ ಸಿಎಂ ಯಡಿಯೂರಪ್ಪ ಜೆಡಿಎಸ್ ಬೆಂಬಲ ಕೋರಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ಸತ್ಯಕ್ಕೆ ದೂರವಾದದ್ದು. ನನ್ನನ್ನು ಪ್ರಧಾನಿ ಮಾಡಿ ಎಂದು ದೇವೇಗೌಡರು ಏನಾದರೂ ಅರ್ಜಿ ಹಿಡಿದುಕೊಂಡು ಕಾಂಗ್ರೆಸ್ ನಾಯಕರ ಬಳಿ ಹೋಗಿದ್ದರಾ.. ಅಥವಾ ನನ್ನನ್ನು ಮುಖ್ಯಮಂತ್ರಿ ಮಾಡಿ ಎಂದು ನಾನೇನಾದರೂ ಅರ್ಜಿ ಹಿಡಿದುಕೊಂಡು ಅವರ ಬಳಿ ಹೋಗಿದ್ದೆನಾ.. ಎಂದು ಎಚ್​ಡಿಕೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್​ನ ಆರು ಅಭ್ಯರ್ಥಿಗಳೂ ಜಯ ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಹಕ್ಕು ಚಲಾಯಿಸಿರುವ ಮತಪತ್ರ ವೈರಲ್!

    ಚನ್ನರಾಯಪಟ್ಟಣ: ಜೆಡಿಎಸ್ ಸದಸ್ಯರೊಬ್ಬರು ತಾವು ಹಕ್ಕು ಚಲಾಯಿಸಿರುವ ಮತಪತ್ರವನ್ನು ಮೊಬೈಲ್​ನಲ್ಲಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಿಗೆ ಹಾಕಿದ್ದು, ಅದೀಗ ವೈರಲ್ ಆಗಿದೆ. ಹಾಸನ ಜೆಡಿಎಸ್ ಅಭ್ಯರ್ಥಿ ಡಾ.ಸೂರಜ್ ರೇವಣ್ಣರಿಗೆ ಮತ ನೀಡಿರುವ ಮತಪತ್ರ ಇದಾಗಿದ್ದು, ತಾಲೂಕಿನ ಕುಂದೂರು ಗ್ರಾಪಂ ವ್ಯಾಪ್ತಿಯಲ್ಲಿ ಬೆಳಗ್ಗೆ 7.30ರಿಂದಲೇ ವೈರಲ್ ಆಗಿದೆ. ಮತದಾನ ಗೌಪ್ಯತಾ ನಿಯಮ ಉಲ್ಲಂಘನೆಯಾಗಿರುವುದರಿಂದ ಮತದಾನ ರದ್ದುಪಡಿಸಿ ಮರು ಚುನಾವಣೆ ನಡೆಸಬೇಕು ಎಂದು ವಿಧಾನಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಒತ್ತಾಯಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಗಮನಕ್ಕೆ ತಂದಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ ಎಂದು ತಿಳಿಸಿದರು.

    ಕಣ್ಣೀರಿಟ್ಟ ಮಂಡ್ಯ ಬಿಜೆಪಿ ಅಭ್ಯರ್ಥಿ

    ಮಂಡ್ಯ: ಜಿಲ್ಲೆಯ ವಿಧಾನಪರಿಷತ್ ಚುನಾವಣೆಯಲ್ಲಿ ದಿಢೀರ್ ಬೆಳವಣಿಗೆ ಎಂಬಂತೆ ಶುಕ್ರವಾರ ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಮಂಜು ‘ಕುತಂತ್ರ ಮಾಡಿ ನನಗೆ ಮೋಸ ಮಾಡಿದರು’ ಎಂದು ಕಣ್ಣೀರಿಟ್ಟರು. ಇದರೊಂದಿಗೆ ಯುದ್ಧಕ್ಕೂ ಮುನ್ನವೇ ಬಿಜೆಪಿ ಅಭ್ಯರ್ಥಿ ಶಸ್ತ್ರತ್ಯಾಗ ಮಾಡಿದಂತಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಮಂಜು ಚುನಾವಣೆಯಲ್ಲಿ ಪ್ರಬಲ ಅಭ್ಯರ್ಥಿಯಾಗಿ ಕಾಣಿಸಿಕೊಂಡಿದ್ದರು. ಈವರೆಗೆ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಮಾತ್ರ ನೇರ ಹಣಾಹಣಿ ನಡೆಯುತ್ತಿತ್ತು. ಈ ಬಾರಿ ಬಿಜೆಪಿ ಕೂಡ ಪ್ರಬಲ ಪೈಪೋಟಿ ಕೊಡುವ ಸೂಚನೆ ನೀಡಿದ್ದರಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮ ಹಂತದಲ್ಲಿ ಎಲ್ಲವೂ ತಲೆಕೆಳಗಾಗಿದೆ. ಒಂದು ವರ್ಷದಿಂದ ಸಿದ್ಧತೆ ಮಾಡಿಕೊಂಡಿದ್ದೆ. ಗುರುವಾರ ಸಂಜೆ 4 ಗಂಟೆವರೆಗೂ ಎಲ್ಲವೂ ಸರಿಯಾಗಿತ್ತು. ನಂತರ ಎಲ್ಲವೂ ಬದಲಾವಣೆಯಾಗಿದೆ. ಒಂದು ವರ್ಷದ ಹೋರಾಟ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ಬೂಕಹಳ್ಳಿ ಮಂಜು ಕಣ್ಣೀರಿಟ್ಟರು. ಮಂಡ್ಯದಲ್ಲಿ ಬಿಜೆಪಿ ನೆಲೆಯಾಗುವುದು ಇಷ್ಟವಿಲ್ಲದೇ ಷಡ್ಯಂತ್ರ ಮಾಡುತ್ತಿದ್ದಾರೆ. ಈಗ ನಾನು ಏನು ಹೇಳುವುದಿಲ್ಲ. ಕೊನೇ ಕ್ಷಣದವರೆಗೂ ಹೋರಾಟ ಮಾಡುತ್ತೇನೆ ಎಂದರು.

    ಸೀರೆ, ಬೆಳ್ಳಿ ಕಾಯಿನ್ ವಾಪಸ್ ವಿಡಿಯೋ ವೈರಲ್

    ಕಂಪ್ಲಿ(ಬಳ್ಳಾರಿ): ಹಂಪಾದೇವನಹಳ್ಳಿ ಗ್ರಾಪಂ ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೆ ಬಿಜೆಪಿಯವರು ನೀಡಿದ್ದರು ಎನ್ನಲಾದ ಸೀರೆ, ಬೆಳ್ಳಿ ಕಾಯಿನ್ ವಾಪಸ್ ಮಾಡುತ್ತಿರುವ ವಿಡಿಯೋ ಶುಕ್ರವಾರ ಸಂಜೆ ವೈರಲ್ ಆಗಿದೆ. ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಗೆ ಮತ ನೀಡುವಂತೆ ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೆ 11 ಸೀರೆ ಮತ್ತು 11 ಬೆಳ್ಳಿ ಕಾಯಿನ್ ನೀಡಿದ್ದರು. ಅವನ್ನೆಲ್ಲ ಬಿಜೆಪಿ ಮುಖಂಡರಿಗೆ ವಾಪಸ್ ಮಾಡಿದ್ದಾಗಿ ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ.

    ಮತ ಚಲಾಯಿಸಿ ಬಂದು ಸಾವು

    ಹಳಿಯಾಳ: ವಿಧಾನ ಪರಿಷತ್ ಚುನಾವಣೆಗೆ ಮತ ಚಲಾಯಿಸಿ ಮನೆಗೆ ವಾಪಾಸಾದ ಮುರ್ಕವಾಡ ಗ್ರಾಮದ ಗ್ರಾಪಂ ಸದಸ್ಯರೊಬ್ಬರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ತಾಲೂಕಿನ ಮುರ್ಕವಾಡ ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ ್ಮ ಶಿವಾರಾಯ ಮಾನೆ (60) ಮೃತರಾದವರು. ಅವರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.

    ಸರ್ಕಾರಿ ಯಂತ್ರ ದುರುಪ ಯೋಗ ಆಗಿರುವುದ ರಿಂದ ಒಂದೆರಡು ಕಡೆ ಹೆಚ್ಚು-ಕಮ್ಮಿ ಆಗಬಹುದು. ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಸೀಟುಗಳನ್ನು ಗೆಲ್ಲಲಿದ್ದೇವೆ. ಹಿಂದಿನ ಚುನಾವಣೆಯಲ್ಲಿ ಕಳೆದುಕೊಂಡಿದ್ದ ಸೀಟುಗಳನ್ನೂ ಗೆಲ್ಲುವ ಸೂಚನೆ, ಸಾಧ್ಯತೆಗಳಿವೆ.

    | ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

    ಕೈ ಮುಖಂಡ ಮೇಲೆ ಕೇಸ್

    ವಿಜಯಪುರ: ಪರಿಷತ್ ಚುನಾವಣೆಯಲ್ಲಿ ಚಲಾವಣೆಯಾದ ಮತದಾನದ ಬ್ಯಾಲೆಟ್ ಪೇಪರ್ ಬಹಿರಂಗಗೊಳಿಸಿದ ಕಾಂಗ್ರೆಸ್ ಮುಖಂಡ ಸೋಮನಾಥ ಕಳ್ಳಿಮನಿ ವಿರುದ್ಧ ಬಾದಾಮಿಯ ಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೋಮನಾಥ ಕಳ್ಳಿಮನಿ ಶುಕ್ರವಾರ ಬೆಳಗ್ಗೆ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ಹೆಸರು ಹಾಗೂ ಭಾವಚಿತ್ರ ಇರುವ ಬ್ಯಾಲೆಟ್ ಪೇಪರ್ ಮೇಲೆ ಮತ ಚಲಾಯಿಸಿದ ಪ್ರತಿಯನ್ನು ಗೌಪ್ಯವಾಗಿರಿಸದೆ ಫೋಟೊ ಹೊಡೆದು ಜಾಲತಾಣದಲ್ಲಿ ಹರಿಬಿಟ್ಟಿದ್ದರು.

    ಕೈ ನತ್ತ ಸಚಿವ ಕೆಸಿಎನ್ ಚಿತ್ತ?

    ಮಂಡ್ಯ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಕಾಂಗ್ರೆಸ್ ಸೇರುತ್ತಾರೆನ್ನುವ ಚರ್ಚೆ ನಡೆಯುತ್ತಿದ್ದು, ಇದಕ್ಕೆ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಯಲ್ಲಿ ನಡೆದ ಅಚ್ಚರಿಯ ಬೆಳವಣಿಗೆಗಳು ಪುಷ್ಟಿ ನೀಡುತ್ತಿವೆ. ಈ ಬಾರಿಯ ಪರಿಷತ್ ಚುನಾವಣೆ

    ಬಿಜೆಪಿಗಷ್ಟೇ ಅಲ್ಲದೆ ಕೆ.ಸಿ.ನಾರಾಯಣಗೌಡ ಅವರಿಗೂ ಪ್ರತಿಷ್ಠೆಯಾಗಿತ್ತು. ಅದೇ ರೀತಿ ಪ್ರಾರಂಭದಿಂದಲೂ ಚುನಾವಣೆಯನ್ನು ಸಮರ್ಪಕವಾಗಿ ಎದುರಿಸಿದ ಬಿಜೆಪಿ, ಕೊನೇ ಹಂತದಲ್ಲಿ ನಡೆದ ಬೆಳವಣಿಗೆಯಿಂದ ಕಂಗಾಲಾಯಿತು. ಈ ಬಗ್ಗೆ ಪಕ್ಷದೊಳಗೆ ಮತ್ತು ಕಾರ್ಯಕರ್ತರ ನಡುವೆ ನಡೆಯುತ್ತಿರುವ ಚರ್ಚೆ ಸಚಿವ ನಾರಾಯಣಗೌಡ ಕಾಂಗ್ರೆಸ್ ಸೇರುವುದು ಖಚಿತ ಎನ್ನುವಂತಿದೆ.

    ‘ಕೈ’ ಪರ ನಿಂತ ಸುಮಲತಾ: ವಿಧಾನಪರಿಷತ್ ಚುನಾವಣೆಯಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಷ್, ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗೂಳಿಗೌಡ ಪರ ನಿಂತಿದ್ದಾರೆ. ಲೋಕಸಭಾ ಚುನಾವಣೆ ವೇಳೆ ಜೆಡಿಎಸ್ ಹೊರತುಪಡಿಸಿ ಉಳಿದೆಲ್ಲ ಪಕ್ಷದವರು ಸುಮಲತಾಗೆ ಬೆಂಬಲ ನೀಡಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷದಿಂದಲೂ ಬೆಂಬಲ ಕೇಳಿದ್ದರು. ಆದರೆ ತಟಸ್ಥರಾಗಿರುವುದಾಗಿ ಹೇಳಿಕೊಂಡಿ ದ್ದರು. ಈ ನಡುವೆ ಸಂಸದೆ ಬೆಂಬಲಿಗರು ಕಾಂಗ್ರೆಸ್ ಪರ ಕೆಲಸ ಮಾಡಿದರು ಎನ್ನಲಾಗಿದೆ.

    ಕಾಂಗ್ರೆಸ್ ಅರ್ಭರ್ಥಿ ಜತೆ ಬಿಜೆಪಿ ಸಂಸದನ ಚರ್ಚೆ

    ಕೋಲಾರ: ಕಾಂಗ್ರೆಸ್ ಅಭ್ಯರ್ಥಿ ಅನಿಲಕುಮಾರ್ ಜತೆ ಸಂಭಾಷಣೆ ನಡೆಸುತ್ತಿದ್ದ ಬಿಜೆಪಿ ಸಂಸದ ಮುನಿಸ್ವಾಮಿ, ಅದನ್ನು ಚಿತ್ರೀಕರಿಸುತ್ತಿದ್ದ ಪತ್ರಕರ್ತರ ಮೊಬೈಲ್ ಕಸಿದುಕೊಂಡು ವಿಡಿಯೋ ಡಿಲೀಟ್ ಮಾಡಿ ಎಚ್ಚರಿಕೆ ನೀಡಿರುವ ಘಟನೆ ಬೇತಮಂಗಲದ ಮತದಾನದ ಕೇಂದ್ರದ ಬಳಿ ಶುಕ್ರವಾರ ನಡೆಯಿತು. ಮತದಾನ ಹಿನ್ನಲೆಯಲ್ಲಿ ಕೆಜಿಎಫ್ ತಾಲೂಕಿನ ಗ್ರಾಪಂ ಕೇಂದ್ರಗಳಿಗೆ ಭೇಟಿ ನೀಡಿದ್ದ ಮುನಿಸ್ವಾಮಿ, ಅಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜತೆ ಚರ್ಚೆ ನಡೆಸತೊಡಗಿದರು. ಇದನ್ನು ಕಂಡ ಪತ್ರಕರ್ತರೊಬ್ಬರು ಈ ದೃಶ್ಯ ಚಿತ್ರೀಕರಿಸುತ್ತಿದ್ದರು.

    ಏಳು ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ಸಂಸ್ಕೃತಕ್ಕೆ ಸಿಕ್ಕಿದ್ದು 640 ಕೋಟಿ ರೂಪಾಯಿ; ಆದರೆ ಕನ್ನಡಕ್ಕೆ..?!

    ಜಗತ್ತಿನ 59 ದೇಶಗಳಲ್ಲಿ ಪತ್ತೆಯಾಗಿದೆ ಒಮಿಕ್ರಾನ್​; ಭಾರತದಲ್ಲಿ ಇದುವರೆಗಿನ ಪ್ರಕರಣ ಎಷ್ಟು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts