More

    ಪಿಯಾನೋ ಡ್ಯಾಮ್ ಅಭಿವೃದ್ಧಿಗೆ ಸಹಕಾರ : ಶಾಸಕ ಗುರುರಾಜ ಗಂಟಿಹೊಳೆ ಆಶಯ

    ವಿಜಯವಾಣಿ ಸುದ್ದಿಜಾಲ ಬೈಂದೂರು
    ಧಾರ್ಮಿಕವಾಗಿ ಪವಿತ್ರ ಸ್ಥಳ ಎನಿಸಿಕೊಂಡಿರುವ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಗೆ ದಿನನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಧಾರ್ಮಿಕತೆಯ ಜತೆಗೆ ಈ ಪ್ರದೇಶದ ಸುತ್ತಮುತ್ತಲಿನಲ್ಲಿ ಪ್ರಕೃತಿದತ್ತ ಪ್ರವಾಸಿ ತಾಣಗಳಿವೆ. ಅವುಗಳಲ್ಲಿ ಒಂದಾಗಿರುವ ಕೊಲ್ಲೂರಿನ ಪಿಯಾನೋ ಡ್ಯಾಮ್ ಅನ್ನು ಅಭಿವೃದ್ಧಿಗೊಳಿಸಬೇಕಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

    ಗಣರಾಜ್ಯೋತ್ಸವ ಪ್ರಯುಕ್ತ ಶ್ರೀ ಮೂಕಾಂಬಿಕಾ ಪರಿಸರ ಅಭಿವೃದ್ಧಿ ಸಮಿತಿ ಆಶ್ರಯದಲ್ಲಿ, ಕೊಲ್ಲೂರು ಸೌಪರ್ಣಿಕಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಪಿಯಾನೋ ಡ್ಯಾಮ್ ಸ್ವಚ್ಛತಾ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

    ನಿರೀಕ್ಷಿತ ಸಹಕಾರ ಸಿಗದೆ ಪಿಯಾನೋ ಡ್ಯಾಮ್ ನಿರ್ಲಕ್ಷ್ಯ

    ಕೊಲ್ಲೂರು ಸಮೀಪದ ಅರಸಿನಗುಂಡಿ ಜಲಪಾತಕ್ಕೆ ತೆರಳುವ ಹಾದಿಯಲ್ಲಿ ಸೌಪರ್ಣಿಕಾ ನದಿಗೆ ಅಡ್ಡಲಾಗಿ ಪಿಯಾನೋ ಮಾದರಿಯಲ್ಲಿ ನಿರ್ಮಿಸಲಾಗಿರುವ ಅಣೆಕಟ್ಟು ಈಗ ನಿರುಪಯುಕ್ತವೆನಿಸಿದೆ. ಸರ್ಕಾರಿ ಸವಲತ್ತುಗಳನ್ನು ಸಾರ್ವಜನಿಕರು ತೊಡಗಿಸಿಕೊಳ್ಳದಿದ್ದರೆ ನನೆಗುದಿಗೆ ಬೀಳುವ ಸಾಧ್ಯತೆಗಳೇ ಹೆಚ್ಚು. ಇಲ್ಲೂ ಕೂಡ ಅದೇ ರೀತಿ ಆಗಿದೆ. ಸರ್ಕಾರದ ಕಡೆಯಿಂದಲೂ ನಿರೀಕ್ಷಿತ ಸಹಕಾರ ಸಿಗದೆ ಪಿಯಾನೋ ಡ್ಯಾಮ್ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಶಾಸಕ ಗಂಟಿಹೊಳೆ ಹೇಳಿದರು.

    ದೋಣಿ ವಿಹಾರ ಕೇಂದ್ರವಾಗಲು ಮನವಿ

    ಪರಿಸರದ ಜನರು ಒಗ್ಗಟ್ಟಿನಿಂದ ಮುಂದೆ ಬಂದು ಡ್ಯಾಮ್ ಸ್ವಚ್ಛಗೊಳಿಸುವ ಕಾರ್ಯಕ್ಕೆ ಇಳಿದಿದ್ದು ಶ್ಲಾಘನೀಯ ಎಂದ ಶಾಸಕರು, ಸ್ಥಳೀಯರು ಪಿಯಾನೋ ಅಣೆಕಟ್ಟಿನ ಹೂಳೆತ್ತಿ ಸ್ವಚ್ಛತೆ ಮಾಡುವ ಮೂಲಕ ಅಣೆಕಟ್ಟಿನ ಉಪಯುಕ್ತತೆ ಹೆಚ್ಚಿಸಬೇಕು. ದೋಣಿ ವಿಹಾರ ಕೇಂದ್ರವಾಗಿ ಪರಿವರ್ತಿಸಲು ಮನವಿ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ ಎಂದು ಭರವಸೆ ನೀಡಿದರು.
    ಗ್ರಾಪಂ ಅಧ್ಯಕ್ಷೆ ವನಿತಾ ಶೇರುಗಾರ್, ಮಾಜಿ ಅಧ್ಯಕ್ಷ ಶಿವರಾಮಕೃಷ್ಣ ಭಟ್, ಮೂಕಾಂಬಿಕಾ ಪರಿಸರ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ. ಶ್ರೀಕಾಂತ್, ಸಮಿತಿ ಸದಸ್ಯರು, ಗ್ರಾಮಸ್ಥರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts