More

    ಬಿಳಿಯೂರು ಅಣೆಕಟ್ಟು ಜಲ ಸಮೃದ್ಧಿ

    ಉಪ್ಪಿನಂಗಡಿ: ಈ ಬೇಸಿಗೆಯಲ್ಲಿ ಸುಡುತ್ತಿರುವ ಬಿಸಿಲಿನಿಂದಾಗಿ ನೀರ ಸೆಲೆಗಳೆಲ್ಲ ಬತ್ತಿ ಹೋಗುತ್ತಿದ್ದರೆ, ನೇತ್ರಾವತಿ ನದಿಗೆ ಬಿಳಿಯೂರು ಎಂಬಲ್ಲಿ ನಿರ್ಮಿಸಿದ ಅಣೆಕಟ್ಟಿನಿಂದಾಗಿ ಉಪ್ಪಿನಂಗಡಿ ಪ್ರದೇಶದುದ್ದಕ್ಕೂ ಹಿನ್ನೀರು ಸಂಗ್ರಹವಾಗಿ ನೀರಿನ ಕೊರತೆ ನೀಗಿದೆ.

    ಬಂಟ್ವಾಳ ತಾಲೂಕು ವ್ಯಾಪ್ತಿಯ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟ ಬಿಳಿಯೂರು ಎಂಬಲ್ಲಿ 55 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಅಣೆಕಟ್ಟಿನ ಕೆಲಸ ಪೂರ್ಣಗೊಂಡು ಜೂನ್ ತಿಂಗಳಾರಂಭದಲ್ಲಿ ಪ್ರಾಯೋಗಿಕವಾಗಿ ಅಣೆಕಟ್ಟಿನ ಗೇಟು ಅಳವಡಿಸಿ ನೀರು ಸಂಗ್ರಹಣೆಗೊಳ್ಳುವ ಪ್ರದೇಶದ ನಿಖರತೆ ಗುರುತಿಸಲಾಗಿತ್ತು. ಪ್ರಾರಂಭಿಕ ಹಂತದಲ್ಲಿ ನೆಕ್ಕಿಲಾಡಿ ಗ್ರಾಮದವರೆಗೆ ಮಾತ್ರ ನೀರು ಸಂಗ್ರಹಣೆಗೊಳ್ಳಬಹುದೆಂಬ ನಿರೀಕ್ಷೆ ಹೊಂದಿದ್ದರೂ ಒಟ್ಟು 6 ಕಿ.ಮೀ ವ್ಯಾಪ್ತಿಯಲ್ಲಿ ಹಿನ್ನೀರು ಸಂಗ್ರಹಗೊಂಡಾಗ ಸಂತಸ ವ್ಯಕ್ತವಾಗಿತ್ತು.

    ಕಳೆದ ಡಿಸೆಂಬರ್ ಆರಂಭದಿಂದಲೇ ಅಣೆಕಟ್ಟೆಗೆ ಗೇಟ್ ಅಳವಡಿಸಲಾರಂಭಿಸಿದ್ದು, ಒಟ್ಟು 4 ಮೀ. ಎತ್ತರದ ಗೇಟು ಅಳವಡಿಸಲಾಗಿದೆ. ಮೊದಲ ಎರಡೂವರೆ ತಿಂಗಳಲ್ಲಿ ನೀರಿನ ಹರಿವು ಇದ್ದು ಗೇಟು ದಾಟಿ ನೀರು ಹೊರಗೆ ಹರಿಯುತ್ತಿತ್ತು. ಪ್ರಸಕ್ತ ಗೇಟಿನ ಮಿತಿಯಲ್ಲಿ ನೀರಿನ ಸಂಗ್ರಹವಿದೆ. ಹೊರ ಹರಿವು ನಿಂತಿದೆ.
    6 ಕಿ.ಮೀ ಹಿನ್ನೀರಿನ ಪರಿಣಾಮ ಸುತ್ತಮುತ್ತಲಿನ ಪರಿಸರದಾದ್ಯಂತ ಅಂತರ್ಜಲ ವೃದ್ಧಿಸಿದೆ. ಏಳೆಂಟು ಕಿ.ಮೀ ದೂರದ ಕೃಷಿ ಪ್ರದೇಶದಲ್ಲಿ ನೀರಿಲ್ಲದೆ ಸೊರಗಿದ್ದ ಕೊಳವೆ ಬಾವಿಗಳಲ್ಲಿ, ಕೆರೆ ಬಾವಿಗಳಲ್ಲಿ ಈ ಬಾರಿ ನೀರು ಸಮೃದ್ಧವಾಗಿದ್ದು ಕೃಷಿಕರಲ್ಲಿ ಸಂತಸ ಮೂಡಿಸಿದೆ. ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ತಾಲೂಕಿಗೆ ಪ್ರಯೋಜನವಾಗಿದೆ.

    ಕಾಡು ಪ್ರಾಣಿಗಳ ದಾಹ ತೀರುತ್ತಿದೆ

    ಈ ಹಿಂದಿನ ಯಾವುದೇ ವರ್ಷಗಳಲ್ಲಿ ಕಾಣಿಸಿಕೊಳ್ಳದ ಕಾಡಾನೆಗಳು ಈ ಬಾರಿ ನೇತ್ರಾವತಿ ನದಿಯ ಅಂಚಿನಲ್ಲಿ ನಿರಂತರ ಕಾಣಿಸತೊಡಗಿವೆ. ಸುಡು ಬಿಸಿಲ ಝಳಕ್ಕೆ ಈ ನೀರನ್ನು ಆಶ್ರಯಿಸಿ ಕಾಡಾನೆ ಸಹಿತ ಕಾಡು ಪ್ರಾಣಿಗಳು ಈ ಪ್ರದೇಶಕ್ಕೆ ಬರುತ್ತಿವೆ. ಕೆಲ ದಿನಗಳಿಂದ ಮೊಗ್ರು, ಬಂದಾರು ಗ್ರಾಮದಲ್ಲಿ ಕಾಣಿಸಿಕೊಂಡಿರುವ ಕಾಡಾನೆ ನದಿ ನೀರಿನಲ್ಲಿ ನೀರಾಟವಾಡಿತ್ತು. ನೇತ್ರಾವತಿ ನದಿಯ ಉಪನದಿಗಳು ಬತ್ತುತ್ತಿದ್ದರೂ ನೇತ್ರಾವತಿ ಈ ಭಾಗದಲ್ಲಿ ತುಂಬಿದೆ.

    ಜಲಾಧಿವಾಸ ಉದ್ಭವ ಲಿಂಗ

    ಶತಮಾನಗಳಿಂದ ಪೂಜಿಸಿಕೊಂಡು ಬರಲಾಗುತ್ತಿದ್ದ ಉಪ್ಪಿನಂಗಡಿಯ ನೇತ್ರಾವತಿ ನದಿ ಗರ್ಭದ ಉದ್ಭವಲಿಂಗಕ್ಕೆ ಈ ಬಾರಿ ಹಿನ್ನೀರು ನದಿಯಲ್ಲಿ ಆವರಿಸಿಕೊಂಡಿರುವ ಕಾರಣ ನೇರ ಪೂಜೆ ಸಲ್ಲಿಸಲಾಗಲಿಲ್ಲ. ಆದರೆ ಜಲಾಧಿವಾಸ ಸ್ಥಿತಿಯಲ್ಲಿಯೇ ಮಳೆಗಾಲದಲ್ಲಿ ಸಲ್ಲಿಸಲಾಗುತ್ತಿದ್ದ ಪೂಜೆಯ ಕ್ರಮವನ್ನೇ ಈ ಬಾರಿ ವರ್ಷದುದ್ದಕ್ಕೂ ಅನುಷ್ಠಾನಿಸಲಾಯಿತು. ಜಾತ್ರೋತ್ಸವದ ವಿಧಿ-ವಿಧಾನಗಳಲ್ಲಿ ಕಿಂಚಿತ್ ಪರಿವರ್ತನೆ ಮಾಡಲಾಯಿತು. ನದಿಯಲ್ಲಿ ನಡೆಯುತ್ತಿದ್ದ ಗಾಳಿಪಟ ಉತ್ಸವ ಹಿನ್ನೀರಿನ ಕಾರಣಕ್ಕೆ ರದ್ದುಗೊಂಡಿತ್ತು.

    ಅವಶ್ಯಕತೆಯಿದ್ದರೆ ಮಂಗಳೂರಿಗೂ ನೀಡಿಕೆ

    ಅಣೆಕಟ್ಟಿನಲ್ಲಿ ನಾಲ್ಕು ಮೀ. ನೀರು ಸಂಗ್ರಹವಾಗಿದೆ. ಮಂಗಳೂರು ನಗರಕ್ಕೆ ನೀರು ಸರಬರಾಜಿಗಾಗಿ ಈ ಅಣೆಕಟ್ಟಿನ ನೀರು ಪಡೆಯುವ ಅವಶ್ಯಕತೆ ಬಂದಿಲ್ಲ. ಆ ಬಗ್ಗೆ ಸರ್ಕಾರದಿಂದ ಆದೇಶ ಬಂದರೆ ಮಾತ್ರ ಬಿಳಿಯೂರು ಅಣೆಕಟ್ಟಿನಿಂದ ನೀರನ್ನು ಹೊರ ಬಿಡಬೇಕಾಗುತ್ತದೆ. ಅದರ ವಿನಃ ಮೇ ತಿಂಗಳಾಂತ್ಯದವರೆಗೆ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಅಣೆಕಟ್ಟಿನ ಮೇಲ್ವಿಚಾರಕ ಅವಿನಾಶ್ ತಿಳಿಸಿದ್ದಾರೆ.

    ಅಣೆಕಟ್ಟಿನಂತಹ ಯೋಜನೆ ಅನುಷ್ಠಾನವಾದರೆ ಯಾವ ರೀತಿ ಪ್ರಯೋಜನಕಾರಿಯಾಗಬಲ್ಲದು ಎನ್ನುವುದಕ್ಕೆ ಬಿಳಿಯೂರು ಅಣೆಕಟ್ಟು ಸಾಕ್ಷಿ. ಎರಡು ತಾಲೂಕಿನ ಹಲವು ಗ್ರಾಮಗಳಿಗೆ ಸಂಪರ್ಕ ಸೇತುವೆಯಾಗಿ, ಅಂತರ್ಜಲ ವೃದ್ಧಿಗೆ ಕಾರಣವಾಗಿರುವ ಈ ಅಣೆಕಟ್ಟು ಕುಡಿಯುವ ನೀರಿನ ಕೊರತೆಯನ್ನು ನೀಗಿಸಿದ್ದು ಮಾತ್ರವಲ್ಲದೆ ಕೃಷಿ ಕಾರ್ಯಚಟುವಟಿಕೆಗೂ ಅನುಕೂಲಕರವಾಗಿದೆ. ಇಂತಹ ಯೋಜನೆಯು ನದಿಯುದ್ದಕ್ಕೂ ಹಲವೆಡೆ ಅನುಷ್ಠಾನಿಸಲ್ಪಟ್ಟು ನೀರು ಸಂಗ್ರಹಿಸಲ್ಪಟ್ಟರೆ ಎಲ್ಲೆಡೆ ಅಂತರ್ಜಲ ವೃದ್ಧಿಯಾಗುವುದು.
    – ಕಂಗ್ವೆ ವಿಶ್ವನಾಥ ಶೆಟ್ಟಿ, ಹಿರಿಯ ಕೃಷಿಕ

    ಉಪ್ಪಿನಂಗಡಿ ಪೇಟೆ ನೇತ್ರಾವತಿ ಮತ್ತು ಕುಮಾರಾಧಾರ ನದಿ ಸಂಗಮ ತಟದಲ್ಲಿದ್ದು, ಪೇಟೆಯ ತ್ಯಾಜ್ಯ ನದಿ ಒಡಲು ಸೇರುತ್ತದೆ. ಈ ಬಾರಿ ನದಿಯ ಸ್ವಚ್ಛತೆಗಾಗಿ ಕೇಂದ್ರ ಸರ್ಕಾರದ ಯೋಜನೆಯಡಿ 2 ಲಕ್ಷದಷ್ಟು ಮೀನು ಮರಿಗಳನ್ನು ನದಿಗೆ ಬಿಡಲಾಗಿದೆ. ಆದರೆ ದಿನ ನಿತ್ಯ ನದಿಯ ಹಿನ್ನೀರಿನಲ್ಲಿ ತೆಪ್ಪದಲ್ಲಿ ಮೀನುಗಾರಿಕೆ ನಡೆಸುತ್ತಿರುವುದರಿಂದ ಮೀನು ಸಂತತಿ ನಾಶವಾಗುತ್ತಿದೆ. ಸ್ಥಳೀಯಾಡಳಿತ ಕನಿಷ್ಠ ಎರಡು ವರ್ಷ ಮೀನುಗಾರಿಕೆಗೆ ಕಡಿವಾಣ ಹಾಕಬೇಕು.
    – ನವೀನ್ ಹಿರೆಬಂಡಾಡಿ, ಯುವ ಕೃಷಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts