More

    ರಂಗಶಂಕರಕ್ಕೀಗ 20ರ ಹರೆಯ-ನೆನಪು ಮೆಲುಕು ಹಾಕಿದ ಅರುಂಧತಿ ನಾಗ್

    ವಿಜಯವಾಣಿ ಸುದ್ದಿಜಾಲ ಉಡುಪಿ

    ನಟ ಶಂಕರ್‌ನಾಗ್ ಅವರ ಕನಸಾಗಿದ್ದ ರಂಗ ಮಂದಿರ ನಿರ್ಮಾಣ ಬಯಕೆ ಈಡೇರಿಸಿದ ತೃಪ್ತಿಯಿದೆ. ‘ರಂಗಶಂಕರ’ ಥಿಯೇಟರ್ ಶ್ರೇಯವೂ ಲಭಿಸಿದೆ. ಆದರೆ, ಅದರ ಹಿಂದೆ ಅನೇಕರ ಕೊಡುಗೆ ಇದೆ. ರಂಗಶಂಕರಕ್ಕೀಗ 20ರ ಹರೆಯ ಎಂದು ಅಭಿನೇತ್ರಿ ಅರುಂಧತಿ ನಾಗ್ ನೆನಪುಗಳನ್ನು ತೆರೆದಿಟ್ಟರು.

    ಶನಿವಾರ ರಂಗಭೂಮಿ ರಂಗೋತ್ಸವದಲ್ಲಿ ರಂಗಭೂಮಿ ಉಡುಪಿ ಪ್ರದಾನ ಮಾಡಿದ ರಂಗಭೂಮಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

    ಶಂಕರ್ ನಾಗ್ ನಿಧನದ ನಂತರ ರಂಗ ಶಂಕರ ಥಿಯೇಟರ್ ಕಟ್ಟಲು ಅನೇಕ ಸಂಕಷ್ಟ, ಸಮಸ್ಯೆ ಎದುರಿಸಿದೆ. ಆದರೆ, ಈ ಕಾರ್ಯ ಮಾಡಲೇಬೇಕೆಂಬ ಉದ್ದೇಶದಿಂದ ನನ್ನ ಕರೆಗೆ ಓಗೊಟ್ಟು ಬಂದವರು ನೂರಾರು ಜನ. ರಂಗಶಂಕರನನ್ನು ಹೆರಲು ಹತ್ತು ವರ್ಷ ಬೇಕಾಯಿತು. ಒಂದು ಮಗುವನ್ನು ಹೆತ್ತು, ಬೆಳೆಸುವಲ್ಲಿ ಏನೆಲ್ಲ ಕೆಲಸ ಮಾಡಬೇಕೋ ಅದನ್ನೆಲ್ಲ ರಂಗಶಂಕರ ಕಟ್ಟಿದ ಬಳಿಕ ಮಾಡಬೇಕಾಯಿತು. ಹೀಗಾಗಿ ರಂಗಶಂಕರ ನನ್ನ ಎರಡನೇ ಮಗು ಎಂದರು.

    ರಂಗಭೂಮಿ ಉಡುಪಿ ಗೌರವಾಧ್ಯಕ್ಷ ಡಾ.ಎಚ್.ಎಸ್.ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ನಾಟಕ ಅಕಾಡೆಮಿ ವಾಜಿ ಅಧ್ಯಕ್ಷ ಡಾ. ಬಿ.ವಿ.ರಾಜಾರಾಂ, ರಂಗಕರ್ಮಿಗಳಾದ ಕೆ.ಎಂ.ಚೈತನ್ಯ, ಗುಂಡಣ್ಣ ಸಿ.ಕೆ., ಯುವ ಉದ್ಯಮಿ ಅಜಯ್ ಶೆಟ್ಟಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿಯ ಯು.ವಿಶ್ವನಾಥ ಶೆಣೈ, ರಂಗಭೂಮಿ ಉಡುಪಿಯ ಉಪಾಧ್ಯಕ್ಷರಾದ ಭಾಸ್ಕರ ರಾವ್ ಕಿದಿಯೂರು, ರಾಜಗೋಪಾಲ ಬಲ್ಲಾಳ್ ಉಪಸ್ಥಿತರಿದ್ದರು.
    ರಂಗಭೂಮಿ ಉಡುಪಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಂ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರದೀಪಚಂದ್ರ ಕುತ್ಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗಭೂಮಿ ಜತೆ ಕಾರ್ಯದರ್ಶಿ ವಿವೇಕಾನಂದ ಎನ್. ಪ್ರಶಸ್ತಿ ಪತ್ರ ವಾಚಿಸಿದರು. ಹರೀಶ್ ಕಲ್ಮಾಡಿ ವಂದಿಸಿದರು. ಹೆಬ್ರಿ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಡಾ. ವಿಷ್ಣುಮೂರ್ತಿ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಂಗಳೂರಿನ ರಂಗ ಅಧ್ಯಯನ ಕೇಂದ್ರ, ಸಂತ ಅಲೋಶಿಯಸ್ ಕಾಲೇಜಿನ ತಂಡದಿಂದ ‘ಹ್ಯಾಂಗ್ ಆನ್’ ನಾಟಕ ಪ್ರದರ್ಶನ ನಡೆಯಿತು.

    ಕನ್ನಡ ರಂಗಭೂಮಿ ಮಾರ್ಗದರ್ಶಕಿ

    ಬೆಂಗಳೂರಿನ ಹಿರಿಯ ರಂಗಕರ್ಮಿ ಶ್ರೀನಿವಾಸ್ ಜಿ.ಕಪ್ಪಣ್ಣ ಅಭಿನಂದನಾ ಮಾತುಗಳನ್ನಾಡಿ, ರಂಗಭೂಮಿಯಲ್ಲಿ ತರಬೇತಿ ಪಡೆದು ಚಿತ್ರರಂಗ ಸೇರಿ ಅಪಾರ ಹಣ ಗಳಿಸಿ ಉನ್ನತಿಯಲ್ಲಿದ್ದರೂ ತನ್ನನ್ನು ಬೆಳೆಸಿದ ರಂಗಭೂಮಿಯತ್ತ ನೋಡದ ಅನೇಕ ಖ್ಯಾತ ನಟ-ನಟಿಯರು ಇದ್ದಾರೆ. ತಾನು ನಟರನ್ನು ತೆಗಳುತ್ತಿಲ್ಲ. ಅವರು ರಂಗಭೂಮಿಗೂ ಕೊಡುಗೆ ಕೊಟ್ಟು, ಈ ಕ್ಷೇತ್ರವನ್ನು ಬೆಳೆಸಲಿ ಎನ್ನುವುದು ನಮ್ಮ ಆಸೆ. ರಂಗಭೂಮಿಗೆ ಮಹತ್ತರ ಕೊಡುಗೆ ನೀಡುತ್ತಿರುವ ಅರುಂಧತಿ ನಾಗ್ ಕನ್ನಡ ರಂಗಭೂಮಿಯ ತಾಯಿಯಾಗಿ ನಿಂತು ಮಾರ್ಗದರ್ಶನ ಮಾಡಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts