More

    ಮಿಷನ್ ದಿವ್ಯಾಸ್ತ್ರ ಯಶಸ್ವಿ: ಇವರೇ ನೋಡಿ ಅಗ್ನಿ-5 ಕ್ಷಿಪಣಿ ಹಿಂದಿರುವ ಮಹಿಳಾ ಶಕ್ತಿ!

    ನವದೆಹಲಿ: ಬಹು ಸಿಡಿತಲೆಗಳನ್ನು ನಿಯೋಜಿಸುವ ಸಾಮರ್ಥ್ಯವಿರುವ ದೇಶೀಯವಾಗಿ ಅಭಿವೃದ್ಧಿಪಡಿಸಿದ ಅಗ್ನಿ-5 ಕ್ಷಿಪಣಿಯ ಮೊದಲ ಪರೀಕ್ಷೆ ಯಶಸ್ವಿಯಾಗಿದೆ. ಈ ಯಶಸ್ಸಿನ ಹಿಂದೆ ಹಲವಾರು ವ್ಯಕ್ತಿಗಳಿದ್ದಾರೆ. ಆದರೆ, ಪ್ರಮುಖವಾಗಿ ಕೇಳಿಬರುವ ಹೆಸರೆಂದರೆ, ಅದು ಕ್ಷಿಪಣಿ ತಜ್ಞೆ ಆರ್​. ಶೀನಾ ರಾಣಿ.

    ರಾಣಿ ಅವರು ಅಗ್ನಿ-5 ಕ್ಷಿಪಣಿ ಅಭಿವೃದ್ಧಿಪಡಿಸಿದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ)ಯ ತಂಡದ ಮುಂದಾಳತ್ವವನ್ನು ವಹಿಸಿದ್ದರು. ಒಡಿಶಾ ಕರಾವಳಿ ಪ್ರದೇಶದಲ್ಲಿರುವ ಡಾ. ಎಪಿಜೆ ಅಬ್ದುಲ್​ ಕಲಾಂ ದ್ವೀಪದಲ್ಲಿ ಸೋಮವಾರ ನಡೆದ ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿದೆ.

    57 ವರ್ಷದ ಶೀನಾ ರಾಣಿ ಅವರು ಡಿಆರ್​ಡಿಒದ ಹೈದರಾಬಾದ್ ಮೂಲದ ಅಡ್ವಾನ್ಸ್ಡ್​ ಸಿಸ್ಟಮ್ಸ್ ಲ್ಯಾಬೋರೇಟರಿ (ಎಎಸ್​ಎಲ್​)ಯಲ್ಲಿ ಪ್ರೋಗ್ರಾಮ್​ ಡೈರೆಕ್ಟರ್​ ಆಗಿ ಕ್ಷಿಪಣಿ ಪ್ರಾಜೆಕ್ಟ್​ನ ಮುನ್ನಡೆಸಿದರು. ಒಂದೇ ಕ್ಷಿಪಣಿಯು ವಿವಿಧ ಸ್ಥಳಗಳಲ್ಲಿ ಅನೇಕ ಸಿಡಿತಲೆಗಳಿಂದ ಟಾರ್ಗೆಟ್​ಗಳನ್ನು ಧ್ವಂಸ ಮಾಡುವ ಸಾಮರ್ಥ್ಯ ಹೊಂದಿದೆ. 5000 ಕಿಮೀ ವ್ಯಾಪ್ತಿಯನ್ನು ಹೊಂದಿರುವ ಅಗ್ನಿ-5 ಕ್ಷಿಪಣಿಯನ್ನು ದೇಶದ ದೀರ್ಘಾವಧಿಯ ಭದ್ರತಾ ಅಗತ್ಯಗಳನ್ನು ಪರಿಗಣಿಸಿ ಅಭಿವೃದ್ಧಿಪಡಿಸಲಾಗಿದೆ. ಕ್ಷಿಪಣಿಯು ಚೀನಾದ ಉತ್ತರದ ಭಾಗ ಮತ್ತು ಯುರೋಪಿನ ಕೆಲವು ಪ್ರದೇಶಗಳನ್ನು ಒಳಗೊಂಡಂತೆ ಬಹುತೇಕ ಏಷ್ಯಾವನ್ನು ತಲುಪಬಲ್ಲದು. ಈ ತಂತ್ರಜ್ಞಾನ ಹೊಂದಿರುವ ಕೆಲವೇ ರಾಷ್ಟ್ರಗಳ ಗುಂಪಿಗೆ ಭಾರತ ಸೇರಿದೆ.

    ರಾಣಿ ಅವರು ಈ ಹಿಂದೆ ಇಸ್ರೋದ ವಿಕ್ರಮ್​ ಸಾರಾಭಾಯಿ ಬಾಹ್ಯಕಾಶ ಸಂಶೋಧನಾ ಕೇಂದ್ರದಲ್ಲಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 1999ರಲ್ಲಿ ಡಿಆರ್​ಡಿಒಗೆ ಸೇರಿದರು. ಅಂದಿನಿಂದ ದೇಶದ ಅಗ್ನಿ ಕ್ಷಿಪಣಿ ಪ್ರೋಗ್ರಾಮ್​ಗಾಗಿ ಕೆಲಸ ಮಾಡುತ್ತಿದ್ದಾರೆ. ಕ್ಷಿಪಣಿ ಪ್ರೋಗ್ರಾಮ್​ ಅಡಿಯಲ್ಲಿ ಹಲವಾರು ಅಗ್ನಿ ರೂಪಾಂತರಗಳನ್ನು ಅಭಿವೃದ್ಧಿಪಡಿಲಾಗಿದೆ ಮತ್ತು ಸೇನೆಗೂ ನಿಯೋಜಿಸಲಾಗಿದೆ. ಆದರೂ ಪ್ರಸ್ತುತ MIRV ತಂತ್ರಜ್ಞಾನವು ರಾಣಿ ಅವರಿಗೆ ವೈಭವದ ಕಿರೀಟವೆಂದು ಪರಿಗಣಿಸಲಾಗಿದೆ. ಕ್ಷಿಪಣಿಗಳು ರಾಷ್ಟ್ರದ ಗಡಿಯನ್ನು ರಕ್ಷಿಸುತ್ತಿರುವ ಕಾರಣ ನಾನು ಅಗ್ನಿ ಕ್ಷಿಪಣಿ ಪ್ರೋಗ್ರಾಮ್​ ಭಾಗವಾಗಿರುವುದಕ್ಕೆ ಹೆಮ್ಮೆಪಡುತ್ತೇನೆ ಎಂದು ರಾಣಿ ಹೇಳಿದ್ದಾರೆ.

    ಅಂದಹಾಗೆ ರಾಣಿ ಅವರು ತಿರುವನಂತಪುರಂನಲ್ಲಿ ಜನಿಸಿದರು. 10ನೇ ತರಗತಿಯಲ್ಲಿದ್ದಾಗ ಅವರ ತಂದೆ ನಿಧನರಾದ ಕಾರಣ ತಾಯಿಯ ಆಶ್ರಯದಲ್ಲೇ ಬೆಳೆದರು. ನನ್ನ ಮತ್ತು ಸಹೋದರಿಯ ಜೀವನದಲ್ಲಿ ತಾಯಿಯೇ ನಿಜವಾದ ಆಧಾರ ಸ್ತಂಭ ಎಂದು ರಾಣಿ ಹೇಳಿದ್ದಾರೆ. ಅಂದಹಾಗೆ ರಾಣಿ ಅವರು ಕೇರಳದ ತಿರುವನಂತಪುರಂನಲ್ಲಿರುವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್​ ಮಾಡಿದರು.

    ರಾಣಿ ಅವರು ಅಗ್ನಿ ಕ್ಷಿಪಣಿಯ ವಿವಿಧ ಸಬ್​ಸಿಸ್ಟಮ್​ಗಳನ್ನು ಅಭಿವೃದ್ಧಿಪಡಿಸುವಲ್ಲಿ ತೊಡಗಿರುವ ಹಲವಾರು ಡಿಆರ್‌ಡಿಒ ಘಟಕಗಳೊಂದಿಗೆ ಕೆಲಸ ಮಾಡುತ್ತಿದ್ದರೂ, ಕ್ಷಿಪಣಿಗಳ ಉಡಾವಣೆಗೂ ಮುನ್ನ ಅವುಗಳ ಒಟ್ಟಾರೆ ಆರೋಗ್ಯವನ್ನು ಪರಿಶೀಲಿಸುವುದು ಮತ್ತು ಖಚಿತಪಡಿಸಿಕೊಳ್ಳುವುದು ಅವರ ಮುಖ್ಯ ಕೆಲಸವಾಗಿದೆ. ರಾಣಿ ಅವರ ಪತಿ ಪಿ.ಎಸ್. ಆರ್. ಎಸ್. ಶಾಸ್ತ್ರಿ ಅವರು ಕ್ಷಿಪಣಿಗಳಲ್ಲಿ ಡಿಆರ್‌ಡಿಒ ಜೊತೆ ಕೆಲಸ ಮಾಡಿದ್ದಾರೆ. ರಾಣಿ ಅವರು ಭಾರತದ ‘ಕ್ಷಿಪಣಿ ಮನುಷ್ಯ’ ಮತ್ತು ಮಾಜಿ ಡಿಆರ್‌ಡಿಒ ಮುಖ್ಯಸ್ಥ ಹಾಗೂ ಭಾರತದ ರಾಷ್ಟ್ರಪತಿ ಎ ಪಿಜೆ ಅಬ್ದುಲ್ ಕಲಾಂ ಅವರಿಂದ ಸ್ಫೂರ್ತಿ ಪಡೆದಿದ್ದಾರೆ. ಕ್ಷಿಪಣಿ ತಂತ್ರಜ್ಞ ಡಾ ಅವಿನಾಶ್ ಚಂದರ್ ಅವರು ಡಿಆರ್‌ಡಿಒದಲ್ಲಿ ರಾಣಿ ಅವರ ವೃತ್ತಿಜೀವನವನ್ನು ರೂಪಿಸಲು ಸಹಾಯ ಮಾಡಿದರು.

    ಡಿಆರ್​ಡಿಒ ಅವಧಿಯಲ್ಲಿ ರಾಣಿ ಅವರು 2016 ರಲ್ಲಿ “ವರ್ಷದ ವಿಜ್ಞಾನಿ ಪ್ರಶಸ್ತಿ” ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

    ಎಂಐಆರ್​ವಿ ತಂತ್ರಜ್ಞಾನ ಎಂದರೇನು?
    ಈ ತಂತ್ರಜ್ಞಾನ ಮೂಲಕ ಒಂದೇ ಕ್ಷಿಪಣಿಗೆ ಅನೇಕ ಸಿಡಿತಲೆಗಳನ್ನು ಅಳವಡಿಕೆ ಮಾಡಲಾಗುತ್ತದೆ. ಏಕಕಾಲದಲ್ಲಿ ಅನೇಕ ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸ ಬಹುದು. ಇದು ಹೆಚ್ಚಿನ ನಿಖರತೆ ಒದಗಿಸುತ್ತದೆ. ಅಗ್ನಿ-5 ಇಂಟರ್​ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಕ್ಷಿಪಣಿ ಆಗಿದ್ದು, ಒಮ್ಮೆ ಉಡಾವಣೆಗೊಂಡು ಬಾಹ್ಯಾಕಾಶಕ್ಕೆ ತೆರಳಿದ ನಂತರ ಮತ್ತೆ ಭೂಮಿಯ ವಾತಾವರಣ ವನ್ನು ಪ್ರವೇಶಿಸುತ್ತದೆ. ಆಗ ಎಂಐಆರ್​ವಿ ತಂತ್ರಜ್ಞಾನ ಮೂಲಕ ಹಲವು ಸಿಡಿತಲೆಗಳು ಬೇರ್ಪಟ್ಟು, ವಿವಿಧ ಸ್ಥಳಗಳಲ್ಲಿರುವ ಬಹು ಗುರಿಗಳ ಮೇಲೆ ದಾಳಿ ನಡೆಸುತ್ತವೆ. ಈ ಮೂಲಕ ಒಂದೇ ಕ್ಷಿಪಣಿಯಿಂದ ಹತ್ತಾರು ಕಡೆ ದಾಳಿ ನಡೆಸಬಹುದು.

    ಪ್ರಧಾನಿ ಮೋದಿ ಅಭಿನಂದನೆ
    ಎಂಐಆರ್​ವಿ ತಂತ್ರಜ್ಞಾನದೊಂದಿಗೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಅಗ್ನಿ-5 ಕ್ಷಿಪಣಿಯ ಮೊದಲ ಹಾರಾಟದ ಪರೀಕ್ಷೆಯಾದ ಮಿಷನ್ ದಿವ್ಯಾಸ್ತ್ರ ಯಶಸ್ವಿಯಾಗಿದ್ದು, ವಿಜ್ಞಾನಿಗಳ ಬಗ್ಗೆ ಹೆಮ್ಮೆಯಿದೆ ಎಂದು ಮೋದಿ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿ ಅಭಿನಂದನೆ ಸಲ್ಲಿಸಿದರು. (ಏಜೆನ್ಸೀಸ್​)

    ಪವಿತ್ರಾ ಗೌಡರ 777 ಟ್ಯಾಟೂಗೂ ದರ್ಶನ್​ಗೂ ಇದೆ ಲಿಂಕ್​! ಡಿಕೋಡ್​ ಮಾಡಿದ ಅಭಿಮಾನಿಗಳು

    ಶ್ವಾನ ಪ್ರಿಯರೇ ಗಮನಿಸಿ, ಈ ತಳಿಯ ನಾಯಿಗಳನ್ನು ಖರೀದಿಸೋ ಪ್ಲಾನ್ ಇದ್ದರೆ ಎಚ್ಚರ! ಅದಕ್ಕೂ ಮುನ್ನ ಈ ಸುದ್ದಿ ತಪ್ಪದೇ ಓದಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts