More

    ನಮ್ಮ ಕಾಲ ಹೀಗಿತ್ತು | ಆಗಿನ ಕಾಲದಲ್ಲಿ ಕಾರ್ಯಕರ್ತರಿಗೆ ಮಂಡಕ್ಕಿ- ಮೆಣಸಿನಕಾಯಿ ಕೊಡಿಸಿದರೆ ಸಾಕಾಗಿತ್ತು!

    ಕಳೆದ ಶತಮಾನದ 80-90ರ ದಶಕದ ರಾಜಕಾರಣ ಹೆಚ್ಚು ಮೌಲ್ಯಯುತವಾಗಿತ್ತು, ಜಾತಿ ಘರ್ಷಣೆಗೆ ಅವಕಾಶ ನೀಡದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದೆವು ಎಂದು ತಮ್ಮ ಹಳೇ ಚುನಾವಣೆಯ ಪ್ರಚಾರ ವೈಖರಿಯನ್ನು ನೆನಪಿಸಿಕೊಳ್ಳುತ್ತಾರೆ ಹಿರಿಯೂರಿನ ಮಾಜಿ ಶಾಸಕ ಮಸ್ಕಲ್ ರಾಮಯ್ಯ. ಈ ಸಂದರ್ಭ ಅವರು ಚುನಾವಣೆಯಲ್ಲಿ ಮಂಡಕ್ಕಿ- ಮೆಣಸಿನಕಾಯಿ ಪಾತ್ರವನ್ನು ನೆನಪಿಸಿಕೊಂಡಿದ್ದಾರೆ

    1985ರಲ್ಲಿ ಹಿರಿಯೂರು ಕ್ಷೇತ್ರ ಪ್ರತಿನಿಧಿಸುತ್ತಿದ್ದ ಕೆ.ಎಚ್. ರಂಗನಾಥ್, ಲೋಕಸಭೆಗೆ ಆಯ್ಕೆಯಾದಾಗ ಅಲ್ಲಿಂದ ವಿಧಾನಸಭೆಗೆ ಸ್ಪರ್ಧಿಸುವ ಅವಕಾಶ ಸಿಕ್ಕದ್ದು ಮಸ್ಕಲ್ ರಾಮಯ್ಯ ಅವರಿಗೆ. ರಾಮಯ್ಯ ಮೊದಲ ಯತ್ನದಲ್ಲೇ 7 ಸಾವಿರ ಲೀಡ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

    ‘‘ಅಂದು ಚುನಾವಣೆ ಪಾರದರ್ಶಕವಾಗಿ ನಡೆಯುತ್ತಿತ್ತು. ಮತದಾರರನ್ನು ತಲುಪಲು, ಪ್ರಚಾರಕ್ಕೆ ಅಂಬಾಸಿಡರ್ ಕಾರು, ಸೈಕಲ್, ಕಾಲ್ನಡಿಗೆಯನ್ನೇ ನೆಚ್ಚಿಕೊಂಡಿದ್ದೆವು. ಪ್ರಚಾರಕ್ಕೆ ಹಳ್ಳಿಗಳಿಗೆ ತೆರಳಲು ನಾಲ್ಕೈದು ಜನರ ಜತೆ ಅಂಬಾಸಿಡರ್ ಕಾರು ಬಳಸುತ್ತಿದ್ದೆವು. ಕೆಲವೆಡೆ ಹಳ್ಳ-ಕೊಳ್ಳ, ರಸ್ತೆ ಸಂಪರ್ಕ ಇಲ್ಲದ ಕಡೆ, ಕಾಲ್ನಡಿಗೆ ಮೂಲಕ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದೆವು. ಅಂದು ವೀರಪ್ಪ ಮೊಯಿಲಿ, ನಟಿ ವೈಜಯಂತಿ ಮಾಲಾ ಹಿರಿಯೂರಿಗೆ ಭೇಟಿ ನೀಡಿ, ನಮ್ಮ ಪರ ಮತಯಾಚನೆ ಮಾಡಿದ್ದರು. ಆಗ ಚುನಾವಣೆಗೆ ವೆಚ್ಚವಾಗಿದ್ದು 42 ಸಾವಿರ ರೂ. ಮಾತ್ರ ಎಂಬುದು ಸ್ಮರಣೀಯ. ಅಂದು ಮತದಾರರಲ್ಲಿ ನಿಷ್ಠೆ, ಬದ್ಧತೆ ಇತ್ತು. ಮತದಾನದ ಮೌಲ್ಯ ಅರಿತು ಯೋಗ್ಯ ವ್ಯಕ್ತಿಗೆ ಮತ ಚಲಾಯಿಸುತ್ತಿದ್ದರು, ಮತದಾನದ ದಿನ ಮಾತ್ರ ಕಾರ್ಯಕರ್ತರು, ಬೆಂಬಲಿಗರಿಗೆ ಮಂಡಕ್ಕಿ-ಮೆಣಸಿನಕಾಯಿ ವ್ಯವಸ್ಥೆಯನ್ನು ಸ್ಥಳೀಯ ಮುಖಂಡರೇ ಮಾಡುತ್ತಿದ್ದರು. ಮದ್ಯಪಾನ ಮಾಡಲು ಜನರು ಹಿಂದೇಟು ಹಾಕುತ್ತಿದ್ದರು. ನಕಲಿ ಮತ ಚಲಾವಣೆ ಇರಲಿಲ್ಲ. ಮತದಾರರಲ್ಲಿ ಗಾಂಭೀರ್ಯ ಇತ್ತು. ಮತದಾನದ ದಿನ ಗ್ರಾಮಸ್ಥರು ಒಂದೆಡೆ ಸೇರಿ ಯಾರಿಗೆ ಮತ ಚಲಾಯಿಸಬೇಕು ಎಂಬುದನ್ನು ಠರಾವು ಮಾಡುತ್ತಿದ್ದರು. ಗಲಾಟೆ, ಗದ್ದಲಕ್ಕೆ ಅವಕಾಶ ನೀಡದೆ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯುತ್ತಿತ್ತು’’ ಎಂದು ನೆನಪಿನ ಬುತ್ತಿ ಬಿಚ್ಚಿಡುತ್ತಾರೆ ಮಸ್ಕಲ್ ರಾಮಯ್ಯ.

    (2023ರ ವಿಜಯವಾಣಿ ಯುಗಾದಿ ವಿಶೇಷಾಂಕದಲ್ಲಿ ಪ್ರಕಟವಾದ ಬರಹ ಇದು.)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts