More

    ದಿವಾಕರ್ ಮಂಗಳೂರಿಗೆ ನೂತನ ಮೇಯರ್

    ಮಂಗಳೂರು: ನಿರೀಕ್ಷೆಯಂತೆ ಮಂಗಳೂರು ಮಹಾನಗರ ಪಾಲಿಕೆ 21ನೇ ಅವಧಿಯ 32ನೇ ಮೇಯರ್ ಆಗಿ ಬಿಜೆಪಿಯ ಕಂಟೋನ್ಮೆಂಟ್ ವಾರ್ಡ್(ನಂ.46)ನ ದಿವಾಕರ್ ಮತ್ತು ಉಪ ಮೇಯರ್ ಆಗಿ ಕುಳಾಯಿ ವಾರ್ಡ್(ನಂ.9)ನ ವೇದಾವತಿ ಯಾನೆ ಜಾನಕಿ ಆಯ್ಕೆಯಾಗಿದ್ದಾರೆ.

    ಮೈಸೂರು ವಿಭಾಗೀಯ ಪ್ರಾದೇಶಿಕ ಆಯುಕ್ತ ವಿ.ಯಶವಂತ್ ಚುನಾವಣಾ ಪ್ರಕ್ರಿಯೆ ನಿರ್ವಹಿಸಿದರು.
    ಚುನಾವಣೆಯನ್ನು ಕೈ ಎತ್ತುವ ಮೂಲಕ ನಡೆಸಲು ವ್ಯವಸ್ಥೆ ನಡೆಸಲಾಗಿತ್ತು. ಹಿಂದುಳಿದ ವರ್ಗ ‘ಎ’ ಮೀಸಲಾತಿ ನಿಗದಿಯಾಗಿದ್ದ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ ದಿವಾಕರ್ 46 ಹಾಗೂ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಕೇಶವ 15 ಮತ ಪಡೆದರು.
    ಉಪ ಮೇಯರ್ ಚುನಾವಣೆಯಲ್ಲಿ ಬಿಜೆಪಿಯ ವೇದಾವತಿ 46 ಹಾಗೂ ಕಾಂಗ್ರೆಸ್‌ನ ಝೀನತ್ ಸಂಶುದ್ದೀನ್ 17 ಮತ ಪಡೆದರು. ಮೇಯರ್ ಚುನಾವಣೆ ಸಂದರ್ಭ ತಟಸ್ಥವಾಗಿದ್ದ ಎಸ್‌ಡಿಪಿಐನ ಇಬ್ಬರು ಸದಸ್ಯರು ಉಪ ಮೇಯರ್ ಚುನಾವಣೆಯಲ್ಲಿ ಝೀನತ್ ಪರ ಮತ ಚಲಾಯಿಸಿದರು.

    ನೂತನ ಸದಸ್ಯರ ಪ್ರಮಾಣವಚನ, ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಯೂ ಇದೇ ಸಂದರ್ಭ ನಡೆಯಿತು.
    ಅಪರ ಪ್ರಾದೇಶಿಕ ಆಯುಕ್ತೆ ಕೆ.ಎಂ.ಗಾಯತ್ರಿ, ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್, ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ, ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಉಪಸ್ಥಿತರಿದ್ದರು.

    ಗೊಂದಲ ರಹಿತ ಸುಲಲಿತ ಪ್ರಕ್ರಿಯೆ: ಗೊಂದಲಗಳಿಲ್ಲದೆ ಮೀಸಲು ಸ್ಥಾನ ಹಾಗೂ ಹಿರಿತನ ಆಧಾರದಲ್ಲಿ ಮೂರನೇ ಬಾರಿ ಸದಸ್ಯರಾಗಿರುವ ದಿವಾಕರ್ ಹಾಗೂ ಎರಡನೇ ಬಾರಿಗೆ ಸದಸ್ಯರಾಗಿರುವ ವೇದಾವತಿಯನ್ನು ಚುನಾವಣೆ ಪೂರ್ವದಲ್ಲೇ ಅಭ್ಯರ್ಥಿಗಳನ್ನಾಗಿಸಿದ್ದ ಆಡಳಿತ ಪಕ್ಷ ಬಿಜೆಪಿ ಹಾದಿ ಸುಗಮಗೊಳಿಸಿತು. ಪಾಲಿಕೆಯ 60 ವಾರ್ಡ್‌ಗಳಲ್ಲಿ ಬಿಜೆಪಿ 44, ಕಾಂಗ್ರೆಸ್ 14 ಹಾಗೂ ಎಸ್‌ಡಿಪಿಐ 2 ಸದಸ್ಯರ ಬಲ ಹೊಂದಿದೆ. ಪಾಲಿಕೆ ಸದಸ್ಯರ ಜತೆ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಮತ ಚಲಾವಣೆಯ ಅಧಿಕಾರ ಹೊಂದಿದ್ದ ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್, ಉತ್ತರ ಕ್ಷೇತ್ರದ ಡಾ.ವೈ.ಭರತ್ ಶೆಟ್ಟಿ ಬಿಜೆಪಿ ಪರ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಕಾಂಗ್ರೆಸ್ ಪರ ಮತ ಚಲಾಯಿಸಿದರು. ಸಂಸದ ನಳಿನ್ ಕುಮಾರ್ ಕಟೀಲ್ ಗೈರುಹಾಜರಾಗಿದ್ದರು.

    ಆಡಳಿತ ಮತ್ತು ಪ್ರತಿಪಕ್ಷದ ಎಲ್ಲರ ವಿಶ್ವಾಸ ಗಳಿಸುವ ರೀತಿಯಲ್ಲಿ ಕೆಲಸ ಮಾಡುತ್ತೇನೆ. ನೀರಿನ ಶುಲ್ಕ, ತ್ಯಾಜ್ಯ ನಿರ್ವಹಣೆ ಶುಲ್ಕ ಏರಿಕೆ ಸಂಬಂಧಿಸಿ ಜನರ ಆಕ್ಷೇಪ ಗಮನದಲ್ಲಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲು ಶ್ರಮಿಸುತ್ತೇನೆ. ವಿಶ್ವಾಸವಿರಿಸಿ ಮೇಯರ್ ಸ್ಥಾನ ಒದಗಿಸಿದ ಪಕ್ಷದ ಮುಖಂಡರು, ಈ ಸ್ಥಾನಕ್ಕೆ ಏರಲು ನೆರವಾದ ಪಕ್ಷದ ಕಾರ್ಯಕರ್ತರು, ಮತದಾರರಿಗೆ ಚಿರ ಋಣಿಯಾಗಿದ್ದೇನೆ.
    -ದಿವಾಕರ್, ನೂತನ ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts