More

    ನೆರೆ ಸಂತ್ರಸ್ತರಿಗೆ ಶೀಘ್ರ ಪರಿಹಾರಕ್ಕೆ ಕ್ರಮ: ಮೇಯರ್ ಪ್ರೇಮಾನಂದ ಶೆಟ್ಟಿ ಸೂಚನೆ

    ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಮಳೆಯಿಂದ ಸಂಭವಿಸಿದ ಹಾನಿಗೆ ಪರಿಹಾರ ಸಹಾಯಧನದ ಎಲ್ಲ ಪ್ರಸ್ತಾವನೆಗಳನ್ನು ಮುಂದಿನ ಪರಿಷತ್ತಿನ ಸಭೆಯಲ್ಲಿ ಮಂಡಿಸಿ ಶೀಘ್ರ ಹಣ ಒದಗಿಸುವುದು ಹಾಗೂ ಸರ್ಕಾರದ ವತಿಯಿಂದ ಒದಗಿಸಲಾಗುವ ನೆರೆ ಪರಿಹಾರ ಹಣವನ್ನು ತಹಸೀಲ್ದಾರ್ ಮೂಲಕ ತ್ವರಿತಗತಿಯಲ್ಲಿ ಮಂಜೂರು ಮಾಡುವ ಕುರಿತು ಮೇಯರ್ ಪ್ರೇಮಾನಂದ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಪಾಲಿಕೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

    ಪಾಲಿಕೆ ಸದಸ್ಯರೊಂದಿಗೆ ಸಮನ್ವಯತೆ ಸಾಧಿಸಿಕೊಂಡು ಮುಂದಿನ ದಿನಗಳಲ್ಲಿ ಮಳೆಯಿಂದ ಯಾವುದೇ ಹಾನಿ ಉಂಟಾಗದಂತೆ ರಾಜಕಾಲುವೆ ಹಾಗೂ ಸಣ್ಣ ಚರಂಡಿಗಳ ಹೂಳೆತ್ತುವಿಕೆ ಹಾಗೂ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಮೇಯರ್ ಅಧಿಕಾರಿಗಳಿಗೆ ಕಟ್ಟುನಿಟ್ಟಾದ ನಿರ್ದೇಶನ ನೀಡಿದರು.

    ಇದುವರೆಗೂ ಪಾಲಿಕೆ ವ್ಯಾಪ್ತಿಯಲ್ಲಿ ಹಾನಿಯಾಗಿರುವ ಪ್ರದೇಶಗಳನ್ನು ಯಥಾಸ್ಥಿತಿಗೆ ತರುವ ನಿಟ್ಟಿನಲ್ಲಿ ಅಧಿಕಾರಿಗಳು ಹಾನಿಯಾದ ಪ್ರದೇಶಗಳ ಪಟ್ಟಿ ಸಿದ್ಧಪಡಿಸಿ ಪ್ರಾಥಮಿಕ ವರದಿ ತಯಾರಿಸಿದ್ದಾರೆ. ಮನಪಾ ಸದಸ್ಯರು ಸದ್ರಿ ವರದಿ ಅವಲೋಕಿಸಿ ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಹಾನಿಯಾದ ಪ್ರದೇಶಗಳ ಮಾಹಿತಿ ಪರಿಶೀಲಿಸುವಂತೆ ಹಾಗೂ ಬಿಟ್ಟುಹೋದ ಪ್ರದೇಶಗಳಿದ್ದಲ್ಲಿ ಸೇಪಡೆಗೊಳಿಸಿ ಪ್ರಸ್ತಾವನೆಯನ್ನು ಅಂತಿಮೆಗೊಳಿಸಿ ಪ್ರಾಕೃತಿಕ ವಿಕೋಪದಡಿ ಅನುದಾನ ಬಿಡುಗಡೆಗೊಳಿಸುವಂತೆ ಕೋರಿ ಜಿಲ್ಲಾಧಿಕಾರಿಗೆ ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಮೇಯರ್ ನಿದೇಶನ ನೀಡಿದರು.

    ನಗರದಾದ್ಯಂತ ಸುರಿದ ಭಾರಿ ಮಳೆಯಿಂದ ವಿವಿಧೆಡೆ ಕೃತಕ ನೆರೆ ಉಂಟಾಗಿ ಗುಡ್ಡಕುಸಿತ, ರಾಜಕಾಲುವೆಗಳ ತಡೆಗೋಡೆ, ರಸ್ತೆಗಳ ಕುಸಿತ ಉಂಟಾಗಿ ಹಲವಾರು ಮನೆಗಳಿಗೆ ಹಾನಿಯಾಗಿ ಅಪಾರ ಆಸ್ತಿ ಪಾಸ್ತಿ ನಷ್ಟ ಉಂಟಾಗಿದೆ. ಹಲವೆಡೆ ರಸ್ತೆಗಳು ಹಾಳಾಗಿ ಸಾರ್ವಜನಿಕರ ಸಂಚಾರ ಅಸ್ತವ್ಯಸ್ತವಾಗಿದೆ ಎಂದು ಸದಸ್ಯರು ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಭೆಯ ಗಮನ ಸೆಳೆದರು.


    ರೈಲ್ವೆ, ಹೆದ್ದಾರಿ ಇಲಾಖೆಯಿಂದ ಸಮಸ್ಯೆ: ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲ್ವೆ ಇಲಾಖೆಯಿಂದ ಅವೈಜ್ಞಾನಿಕ ಕಾಮಗಾರಿ ನಡೆಯುತ್ತಿರುವುದರಿಂದ ಬಹಳಷ್ಟು ಸಮಸ್ಯೆಗಳು ಉಂಟಾಗುತ್ತಿದ್ದು, ಯಾವುದೇ ದೂರುಗಳಿಗೆ ಸ್ಪಂದಿಸದೆ ಇರುವ ಅಧಿಕಾರಿಗಳ ಬಗ್ಗೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರೈಲ್ವೆ ಇಲಾಖೆ, ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳನ್ನು ಮುಂದಿನ ಸಾಮಾನ್ಯ ಸಭೆಗೆ ಆಹ್ವಾನಿಸಿ ಚರ್ಚಿಸುವುದಾಗಿ ಮೇಯರ್ ತಿಳಿಸಿದರು.

    ಉಪ ಮೇಯರ್ ಸುಮಂಗಳ, ಆಯುಕ್ತ ಅಕ್ಷಿ ಶ್ರೀಧರ್ ಉಪಸ್ಥಿತರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts