More

    ದ್ವೀಪರಾಷ್ಟ್ರಕ್ಕೆ ಇದೆಂಥಾ ದುರ್ಗತಿ! ಕಾಪಾಡಿ ಎಂದು ಚೀನಾ ಮುಂದೆ ಮಂಡಿಯೂರಿದ ಮಾಲ್ಡೀವ್ಸ್​

    ಮಾಲೆ: ಸುಮ್ಮನೆ ಇರಲಾರದೆ ಮೈಮೇಲೆ ಇರುವೆ ಬಿಟ್ಟುಕೊಂಡರು ಎಂಬಂತೆ ಸುಖಾಸುಮ್ಮನೇ ಭಾರತದ ವಿರುದ್ಧ ಮಾತನಾಡುವ ಮೂಲಕ ಮಾಲ್ಡೀವ್ಸ್​ ತನ್ನ ಮೇಲೆ ತಾನೇ ಚಪ್ಪಡಿ ಕಲ್ಲು ಎಳೆದುಕೊಂಡಿದೆ. ಭಾರತದ ವಿರೋಧ ಕಟ್ಟಿಕೊಂಡ ಪರಿಣಾಮವನ್ನು ಪ್ರವಾಸಿಗರ ಸ್ವರ್ಗ ಎಂದು ಕರೆಸಿಕೊಂಡಿರುವ ಮಾಲ್ಡೀವ್ಸ್​ ಎದುರಿಸುತ್ತಿದ್ದು, ಆರ್ಥಿಕವಾಗಿ ದಿವಾಳಿಯಾಗುವ ಭೀತಿಯನ್ನು ಎದುರಿಸುತ್ತಿದೆ.

    ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಭಾರತದ ವಿರೋಧಿ ಚೀನಾ ಮೊರೆ ಹೋಗಿರುವ ಮಾಲ್ಡೀವ್ಸ್​ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ನಮ್ಮ ಕಾಪಾಡಿ ಅಂದು ಅಂಗಲಾಚಿದ್ದಾರೆ. ದ್ವೀಪ ರಾಷ್ಟ್ರಕ್ಕೆ ಹೆಚ್ಚಿನ ಪ್ರವಾಸಿಗರನ್ನು ಕಳುಹಿಸಿಕೊಡಿ ಎಂದು ಬೇಡಿಕೊಂಡಿದ್ದಾರೆ.

    ಚೀನಾಗೆ ಅಧಿಕೃತ ಪ್ರವಾಸದಲ್ಲಿರುವ ಮುಯಿಜ್ಜು, ಫುಜಿಯಾನ್ ಪ್ರಾಂತ್ಯದಲ್ಲಿ ನಡೆದ ಮಾಲ್ಡೀವ್ಸ್​ ವ್ಯಾಪಾರ ವೇದಿಕೆಯಲ್ಲಿ ಮಾತನಾಡಿ, ಚೀನಾವು ಮಾಲ್ಡೀವ್ಸ್​ನ ಆಪ್ತ ಮಿತ್ರ ಮತ್ತು ನಮ್ಮ ಅಭಿವೃದ್ಧಿಯ ಪಾಲುದಾರ ಎಂದು ಹೇಳಿಕೊಂಡಿದೆ.

    ಕೋವಿಡ್ ಪೂರ್ವದಲ್ಲಿ ಚೀನಾ ನಮ್ಮ ನಂಬರ್ ಒನ್ ಮಾರುಕಟ್ಟೆಯಾಗಿತ್ತು. ಈ ಸ್ಥಾನವನ್ನು ಚೀನಾ ಮರಳಿ ಪಡೆಯಲು ನಾವು ನಮ್ಮ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸಬೇಕೆಂದು ನಾನು ವಿನಂತಿಸುತ್ತೇನೆ ಎಂದು ಮುಯಿಜ್ಜು ಹೇಳಿದ್ದಾರೆ. ಅಲ್ಲದೆ, ಇದೇ ಸಂದರ್ಭದಲ್ಲಿ ಚೀನಾದ ಬೆಲ್ಟ್​ ಅಂಡ್​ ರೋಡ್​ ಇನಿಶಿಯೇಟಿವ್ (ಬಿಆರ್​ಐ) ಯೋಜನೆಯನ್ನು ಹೊಗಳಿದರು ಮತ್ತು ಈ ಯೋಜನೆಯಲ್ಲಿ ಸೇರಿಕೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿದರು.

    ಹಿಂದೂ ಮಹಾಸಾಗರದ ದ್ವೀಪದಲ್ಲಿ ಸಮಗ್ರ ಪ್ರವಾಸೋದ್ಯಮ ವಲಯವನ್ನು ಅಭಿವೃದ್ಧಿಪಡಿಸಲು ಉಭಯ ದೇಶಗಳು 50 ಮಿಲಿಯನ್ ಯುಎಸ್​ ಡಾಲರ್​ ಯೋಜನೆಗೆ ಸಹಿ ಹಾಕಿವೆ ಎಂದು ತಿಳಿದುಬಂದಿದೆ.

    ಏನಿದು ವಿವಾದ?
    ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿ ಅಲ್ಲಿನ ಸೌಂದರ್ಯಕ್ಕೆ ಮಾರುಹೋಗಿ ಕೊಂಡಾಡಿದರು. ಅಲ್ಲದೆ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವಂತಹ ಮಾತುಗಳನ್ನಾಡಿದರು. ಆದರೆ, ಇದು ಪಕ್ಕದ ಮಾಲ್ಡೀವ್ಸ್​ ಸಹಿಸಿಕೊಳ್ಳಲು ಆಗುತ್ತಿಲ್ಲ. ಏಕೆಂದರೆ, ಕಡಲತಡಿಯ ಪ್ರವಾಸೋದ್ಯಮವನ್ನೇ ಮಾಲ್ಡೀವ್ಸ್​ ದೊಡ್ಡ ಆದಾಯವಾಗಿ ಹೊಂದಿದೆ. ಇತ್ತೀಚೆಗೆ ಲಕ್ಷದ್ವೀಪಕ್ಕೆ ಸಿಗುತ್ತಿರುವ ಪ್ರಚಾರ-ಮನ್ನಣೆ ಸಹಿಸಿಕೊಳ್ಳಲಾಗದೆ ಅಲ್ಲಿನ ಜನಪ್ರತಿನಿಧಿಗಳು ಭಾರತವನ್ನು ಅವಹೇಳನ ಮಾಡುವಂತೆ ಅಭಿಪ್ರಾಯ ವ್ಯಕ್ತಪಡಿಸಿರುವುದು ಕೋಲು ಕೊಟ್ಟು ಪೆಟ್ಟು ತಿಂದಂಥ ಪರಿಸ್ಥಿತಿ ಸೃಷ್ಟಿಯಾಗಿಸಿದೆ. ಮಾಲ್ದೀವ್ಸ್ ಉಪ ಸಚಿವೆ ಮರಿಯಂ ಶಿಯುನಾ ಮುಂತಾದವರು ಪ್ರವಾಸೋದ್ಯಮದ ವಿಚಾರದಲ್ಲಿ ಭಾರತವನ್ನು ಅವಮಾನಿಸಿ ಸೋಷಿಯಲ್ ಮೀಡಿಯಾ ತಾಣವಾದ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೆ ಭಾರತ ಮಾಲ್ದೀವ್ಸ್​ನ ಗುರಿಯಾಗಿಸುತ್ತಿದೆ, ಕಡಲತಡಿಯ ಪ್ರವಾಸೋದ್ಯಮದಲ್ಲಿ ಮಾಲ್ದೀವ್ಸ್ ಜತೆ ಸ್ಪರ್ಧೆಗಿಳಿದರೆ ಭಾರತ ಸವಾಲೆದುರಿಸಬೇಕಾಗುತ್ತದೆ ಎಂದಿರುವ ಅವರು ಮೋದಿಯನ್ನೂ ನಿಂದಿಸಿ ಪೋಸ್ಟ್ ಮಾಡಿದ್ದರು. ಮಾಲ್ದೀವ್ಸ್ ಎಂಪಿ ಜಹಿದ್ ರಮೀಜ್ ಎಂಬಾತ, ಶ್ರೀಲಂಕಾದಂಥ ರಾಷ್ಟ್ರದ ಸಣ್ಣ ಆರ್ಥಿಕತೆಯನ್ನು ಭಾರತ ನಕಲು ಮಾಡಿ ಹಣ ಮಾಡುತ್ತಿದೆ ಎಂದು ಟೀಕಿಸಿದ್ದು ಕೂಡ ತೀವ್ರ ಆಕ್ರೋಶಕ್ಕೆ ಒಳಗಾಯಿತು.

    ಭಾರತೀಯರ ಆಕ್ರೋಶ
    ದೇಶದ ಪ್ರಧಾನಿ ಮತ್ತು ಭಾರತದ ಬಗ್ಗೆ ಮಾಲ್ಡೀವ್ಸ್​ ರಾಜಕಾರಣಿಗಳು ಲಘುವಾಗಿ ಮಾತನಾಡಿದ್ದು, ಭಾರತೀಯರ ಆಕ್ರೋಶಕ್ಕೆ ಕಾರಣವಾಯಿತು. ಅನೇಕ ಸೆಲೆಬ್ರಿಟಿಗಳು ಮಾಲ್ಡೀವ್ಸ್​ ವಿರುದ್ಧ ಕಿಡಿಕಾರಿದರು ಮತ್ತು ಮತ್ತೆ ಮಾಲ್ಡೀವ್ಸ್​ ಪ್ರವಾಸ ಕೈಗೊಳ್ಳುವುದಿಲ್ಲ ಎಂದು ಶಪಥ ಸಹ ಮಾಡಿದ್ದಾರೆ. ಇದರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಮಾಲ್ಡೀವ್ಸ್​ ಬಹಿಷ್ಕರಿಸಿ ಎಂಬ ಅಭಿಯಾನವೂ ಕೂಡ ಟ್ರೆಂಡ್​ ಆಯಿತು. ಮುಂಗಡವಾಗಿ ಬುಕ್ಕಿಂಗ್​ ಆಗಿದ್ದ ಅನೇಕ ಬುಕ್ಕಿಂಗ್​ಗಳು ಸಹ ರದ್ದಾದವು. ಇದರಿಂದ ಮಾಲ್ಡೀವ್ಸ್​ ಜನಪ್ರತಿನಿಧಿಗಳು ಬೆಚ್ಚಿಬಿದ್ದಿದ್ದಾರೆ. ಅಲ್ಲದೆ, ಮುಂದೇನು ಮಾಡುವುದು ಎಂಬ ಯೋಚನೆಯಲ್ಲಿ ಮುಳುಗಿದ್ದಾರೆ.

    ಮೂವರು ಸಚಿವರ ಅಮಾನತು
    ವಿದೇಶಿ ನಾಯಕರು ಮತ್ತು ಉನ್ನತ ಶ್ರೇಣಿಯ ವ್ಯಕ್ತಿಗಳ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವುದು ಮಾಲ್ದೀವ್ಸ್ ಸರ್ಕಾರದ ಗಮನಕ್ಕೆ ಬಂದಿದೆ. ಅದು ಅವರ ವೈಯಕ್ತಿಕ ಅಭಿಪ್ರಾಯವೇ ಹೊರತು, ಸರ್ಕಾರದ ದೃಷ್ಟಿಕೋನವಲ್ಲ ಎಂದು ಮಾಲ್ದೀವ್ಸ್ ಸರ್ಕಾರ ಬಳಿಕ ಸ್ಪಷ್ಟೀಕರಣ ನೀಡಿದೆ. ಮಾತ್ರವಲ್ಲ, ಇದಾದ ಕೆಲವೇ ಹೊತ್ತಲ್ಲಿ ಭಾರತದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಮಾಲ್ದೀವ್ಸ್ ಯುವ ಸಬಲೀಕರಣ ಸಚಿವಾಲಯದ ಉಪ ಸಚಿವೆಯರಾದ ಮರಿಯಂ ಶಿಯುನಾ, ಮಾಲ್​ಷಾ, ಸಾರಿಗೆ ಸಚಿವಾಲಯ ಉಪ ಸಚಿವ ಹಸನ್ ಜಿಹಾನ್ ಅವರನ್ನು ಮಾಲ್ದೀವ್ಸ್ ಸರ್ಕಾರ ಅಮಾನತುಗೊಳಿಸಿದೆ. (ಏಜೆನ್ಸೀಸ್​)

    ಉದ್ಯಮಿ ರತನ್ ಟಾಟಾರಿಂದ ಲಕ್ಷದ್ವೀಪಕ್ಕೆ ಸ್ಪೆಷಲ್​ ಗಿಫ್ಟ್​! ಪ್ರವಾಸೋದ್ಯಮಕ್ಕೆ ಸಿಗಲಿದೆ ಬೂಸ್ಟ್​

    VIDEO: ರಾಷ್ಟ್ರಪತಿಯಿಂದ ಅರ್ಜುನ ಪ್ರಶಸ್ತಿ ಸ್ವೀಕರಿಸುವಾಗ ಎಲ್ಲರ ಹೃದಯ ಗೆದ್ದ ಶೀತಲ್​ ದೇವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts