More

  ಪ್ರಸೂತಿ ತಜ್ಞ ವೈದ್ಯರಿಲ್ಲದೆ ಗರ್ಭಿಣಿಯರಿಗೆ ಸಮಸ್ಯೆ

  ಸೊರಬ: ಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಂದು ವರ್ಷದಿಂದ ಪ್ರಸೂತಿ ವೈದ್ಯರಿಲ್ಲದೆ, ಗರ್ಭಿಣಿ ಹಾಗೂ ಬಾಣಂತಿಯರಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಇದರಿಂದ ಚಿಕಿತ್ಸೆಗಾಗಿ ಅಕ್ಕಪಕ್ಕದ ತಾಲೂಕಿಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ.

  ಒಂದು ವರ್ಷದ ಹಿಂದೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾಯಂ ಪ್ರಸೂತಿ ವೈದ್ಯರಿದ್ದರು. ಗರ್ಭಿಣಿಯರ ತಪಾಸಣೆ ಮತ್ತು ಉತ್ತಮ ಚಿಕಿತ್ಸೆ ದೊರೆಯುತ್ತಿತ್ತು. ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಎಲ್ಲವೂ ಸರಿ ಇದೆ ಎನ್ನುವಷ್ಟರಲ್ಲಿ ಅರಿವಳಿಕೆ ಹಾಗೂ ಪ್ರಸೂತಿ ತಜ್ಞ ವೈದ್ಯರಿಬ್ಬರು ವರ್ಗಾವಣೆ ಆಗಿದ್ದರಿಂದ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಸಮಸ್ಯೆಯಾಯಿತು.
  ಮೇಲಧಿಕಾರಿಗಳು ಆನವಟ್ಟಿ ಸಮುದಾಯ ಆಸ್ಪತ್ರೆಯ ಪ್ರಸೂತಿ ವೈದ್ಯರನ್ನು ವಾರಕ್ಕೆ ಮೂರು ದಿನ ಸೊರಬ ಆಸ್ಪತ್ರೆಗೆ ನಿಯೋಜಿಸಿದರು. ಕ್ರಮೇಣ ಎರಡು ದಿನಕ್ಕೊಮ್ಮೆ ಬರತೊಡಗಿದರು. ನಂತರ ಆನವಟ್ಟಿ ಆಸ್ಪತ್ರೆಯಲ್ಲೇ ಕೆಲಸದ ಒತ್ತಡ ಹೆಚ್ಚಾಗಿ ಈಗ ಅವರು ಬರಲು ನಿರಾಕರಿಸಿದ್ದಾರೆ. ಇದರಿಂದ ಪ್ರಸೂತಿ ತಜ್ಞ ವೈದ್ಯರಿಲ್ಲದೆ ಗರ್ಭಿಣಿಯರ ಮಾಸಿಕ ತಪಾಸಣೆಗೆ ಸಮಸ್ಯೆಯಾಗಿದೆ. ಸಾಮಾನ್ಯ ಹೆರಿಗೆಯನ್ನು ಆಸ್ಪತ್ರೆಯ ಶುಶ್ರೂಷಾಧಿಕಾರಿ ಹಾಗೂ ಕರ್ತವ್ಯನಿರತ ತಜ್ಞ ವೈದರು ಮಾಡಿಸುತ್ತಾರೆ. ಆದರೆ ಕಠಿಣ ಹೆರಿಗೆ ಹಾಗೂ ತಪಾಸಣೆಗೆ ಪ್ರಸೂತಿ ವೈದ್ಯರಿಲ್ಲ. ಹಾಗಾಗಿ ಸಾಗರ, ಸಿದ್ದಾಪುರ, ಶಿರಸಿ, ಶಿಕಾರಿಪುರ, ಶಿವಮೊಗ್ಗ ಹೀಗೆ ದೂರದ ಊರುಗಳಿಗೆ ಅಲೆಯುವಂತಾಗಿದೆ.
  ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ ಸಮಸ್ಯೆ: ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತವರು ಕ್ಷೇತ್ರದಲ್ಲೇ ಸಮಸ್ಯೆ ಎದುರಾಗಿರುವುದು ವಿಪರ್ಯಾಸ. ಪಟ್ಟಣ ಆಸ್ಪತ್ರೆಯಲ್ಲಿ ಮಾಸಿಕ 80-100 ಹೆರಿಗೆಗಳು ಆಗುತ್ತವೆ. ಇದರಲ್ಲಿ ಶೇ.25ರಷ್ಟು ಶಸ್ತ್ರಚಿಕಿತ್ಸೆ ಆಗುತ್ತವೆ. ಪ್ರತಿದಿನ ಆಸ್ಪತ್ರೆಗೆ 20ರಿಂದ 25 ಗರ್ಭಿಣಿಯರು ತಪಾಸಣೆಗೆ ಪ್ರಸೂತಿ ವೈದ್ಯರನ್ನು ಕಾಣಲು ಬಂದು ನಿರಾಸೆಯಿಂದ ವಾಪಸ್ ಹೋಗುತ್ತಿದ್ದಾರೆ. ಇದನ್ನು ಕಂಡು ಶುಶ್ರೂಷಕಿಯರೂ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆಶಾ ಕಾರ್ಯಕರ್ತೆಯರಿಗೂ ತಮ್ಮ ಭಾಗದ ಗರ್ಭಿಣಿಯರನ್ನು ತಪಾಸಣೆ ಮಾಡಿಸಲು ಸಾಧ್ಯವಾಗದೆ ಬೇರೆ ಊರುಗಳಿಗೆ ಕಳಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರಿಲ್ಲದ್ದನ್ನು ಕಂಡು ಬೇಸರಗೊಂಡು ಗರ್ಭಿಣಿಯರು ಮತ್ತು ಬಾಣಂತಿಯರು ಹಿಡಿಶಾಪ ಹಾಕುತ್ತ ಹೋಗುತ್ತಿದ್ದಾರೆ.
  ಸೊರಬ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಸೂತಿ ವೈದ್ಯರ ಕೊರತೆ ಇರುವುದು ಗಮನದಲ್ಲಿದೆ. ಇತ್ತೀಚೆಗೆ ವೈದ್ಯರ ನೇಮಕಾತಿಯಲ್ಲಿ ಸೊರಬವನ್ನು ಯಾರೂ ಆಯ್ಕೆ ಮಾಡಿಕೊಂಡಿಲ್ಲ. ಇಲ್ಲಿ ಪ್ರಸೂತಿ ವೈದ್ಯರ ಅಗತ್ಯವಿದೆ. ಒಂದು ವಾರ ಅಥವಾ 15 ದಿನಗಳಲ್ಲಿ ಕಾಯಂ ವೈದ್ಯರನ್ನು ನೇಮಕ ಮಾಡಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ನಟರಾಜ್ ಮಾಹಿತಿ ನೀಡಿದರು.
  ಒಂದು ವರ್ಷದಿಂದ ಕಾಯಂ ಪ್ರಸೂತಿ ವೈದ್ಯರಿಲ್ಲದೆ ವಾರಕ್ಕೆ ಎರಡು ದಿನ ಆನವಟ್ಟಿ ವೈದ್ಯರನ್ನು ನಿಯೋಜಿಸಲಾಗಿತ್ತು. ಆದರೆ ಅವರು ಕಾರ್ಯದ ಒತ್ತಡದಿಂದ ನಿರಾಕರಿಸಿದ್ದಾರೆ. ಸದ್ಯಕ್ಕೆ ಸೊರಬ ಆಸ್ಪತ್ರೆ ಶುಶ್ರೂಷ ಅಧಿಕಾರಿಗಳು ಹಾಗೂ ಕರ್ತವ್ಯನಿರತ ತಜ್ಞ ವೈದರು ಹೆರಿಗೆ ಮಾಡಿಸುತ್ತಾರೆ. ಇಲಾಖೆ 1.30 ಲಕ್ಷ ರೂ. ವೇತನ ನೀಡುತ್ತದೆ. ಆದರೂ ವೈದರು ಬರುತ್ತಿಲ್ಲ ಎಂದು ಸೊರಬ ಆಸ್ಪತ್ರೆ ಆಡಳಿತಾಧಿಕಾರಿ ಪ್ರಭು ಸಾಹುಕಾರ್ ಅಸಹಾಕತೆ ವ್ಯಕ್ತಪಡಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts