More

  ಮಹಿಳೆ ಎಲ್ಲ ತರಹದ ಜವಾಬ್ದಾರಿ ನಿಭಾಯಿಸಬಲ್ಲಳು: ನ್ಯಾಯಾಧೀಶೆ ಪ್ರಭಾವತಿ ಎಂ.ಹಿರೇಮಠ ಬಣ್ಣನೆ

  ಮೈಸೂರು: ಮಹಿಳೆಯರು ಹಿಂದಿನಿಂದಲೂ ಸಮಾಜದಲ್ಲಿ ಎಲ್ಲ ತರಹದ ಜವಾಬ್ದಾರಿಗಳನ್ನು ನಿಭಾಯಿಸುತ್ತಾ ಬಂದಿದ್ದು, ಅವಳು ತ್ಯಾಗಮಯಿ, ಮಮತಾಮಯಿ, ಕಷ್ಟ ಸಹಿಷ್ಣಳು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಪ್ರಭಾವತಿ ಎಂ.ಹಿರೇಮಠ ಬಣ್ಣಿಸಿದರು.
  ನಗರದ ನೇಗಿಲಯೋಗಿ ಸಭಾಂಗಣದಲ್ಲಿ ಅಧಿವಕ್ತಾ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ, ಮೈಸೂರು ಜಿಲ್ಲಾ ಘಟಕ ಹಾಗೂ ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್‌ನಿಂದ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಹಿರಿಯ ವಕೀಲರಿಗೆ ಸನ್ಮಾನ ಹಾಗೂ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
  ಹಿಂದೆ ಆದಿಮಾನವರ ಕಾಲದಲ್ಲಿ ಕಾಡಿನಲ್ಲಿ ಜೀವನ ಮಾಡಬೇಕಾದ ಪರಿಸ್ಥಿತಿಯಲ್ಲಿ ಗಂಡಸರಂತೆಯೇ ಮರ ಹತ್ತುವುದು ಜಿಗಿದಾಟಗಳಂತಹ ಕೆಲಸಗಳನ್ನು ಲೀಲಾಜಾಲವಾಗಿ ಮಾಡುವಂತಹ ಸಾಮರ್ಥ್ಯ ಮಹಿಳೆಯರಲ್ಲೂ ಇತ್ತು. ನಂತರ ಗರ್ಭವತಿಯಾಗಿ ಕಾಡಿನ ಗುಹೆಯಲ್ಲಿ ತನ್ನನ್ನು ರಕ್ಷಿಸಿಕೊಂಡು ನಂತರ ಮಕ್ಕಳ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾ ಮನೆ ಕಾರ್ಯಗಳನ್ನು ಮಾಡುತ್ತಾ ಮನೆಗೆ ಸೀಮಿತವಾಗಿ ಉಳಿದಳು. ಹಾಗೆ ಕಾಲ ಉರುಳುತ್ತಾ ಎಲ್ಲ ಜವಾಬ್ದಾರಿಯ ಜತೆ ಈಗ ಪುರುಷರು ಅಧಿಪತ್ಯ ಸ್ಥಾಪಿಸಿರುವ ಕೆಲಸಗಳನ್ನು ಸಹ ಮಹಿಳೆಯರು ಮಾಡುತ್ತಿದ್ದಾರೆ ಎಂದು ವಿಶ್ಲೇಷಿಸಿದರು.
  ನೇಗಿಲಯೋಗಿ ಸೇವಾ ಟ್ರಸ್ಟ್ ಅಧ್ಯಕ್ಷ ಡಿ. ರವಿಕುಮಾರ್ ಮಾತನಾಡಿ, ಎರಡು ಜಡೆ ಒಟ್ಟಿಗೆ ಸೇರಿದರೆ ಜಗಳ ಎನ್ನುವ ಗಾದೆ ಇದೆ. ಆದರೆ ಈಗ ಹಾಗಿಲ್ಲ. ಮಹಿಳೆಯರು ಒಟ್ಟಿಗೆ ಸೇರಿ ಕೆಲಸವನ್ನು ಅಚ್ಚುಕಟ್ಟಾಗಿ ಯಶಸ್ವಿಯಾಗಿ ಮಾಡುತಿದ್ದಾರೆ ಎಂದು ಪ್ರಶಂಸಿಸಿದರು.
  ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ಎನ್.ಬಿ.ಶ್ರೀದೇವಿ, ಡಿ.ಸುಕನ್ಯಾ, ಸಿ.ಶಶಿ, ಅಜಿತನೆಲೆ ಆಶ್ರಯ ರಹಿತ ಹೆಣ್ಣು ಮಕ್ಕಳ ಪುನರ್ವವಸತಿ ಕೇಂದ್ರದ ಮಕ್ಕಳ ಶಿಶುಪಾಲಕರಾದ ಪಂಕಜಾ ರಾಮಚಂದ್ರ ಇತರರನ್ನು ಸನ್ಮಾನಿಸಲಾಯಿತು.
  ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಯಾದ ನ್ಯಾಯಾಧೀಶ ದಿನೇಶ್ ಇದ್ದರು. ಅಧಿವತ್ತಾ ಪರಿಷತ್ ಜಿಲ್ಲೆಯ ಅಧ್ಯಕ್ಷೆಯಾದ ವಕೀಲೆ ವಿ.ಶಾರದಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಕೆ.ಎಸ್.ಸವಿತಾ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts