More

    ಉದ್ಯಮಿ ರತನ್ ಟಾಟಾರಿಂದ ಲಕ್ಷದ್ವೀಪಕ್ಕೆ ಸ್ಪೆಷಲ್​ ಗಿಫ್ಟ್​! ಪ್ರವಾಸೋದ್ಯಮಕ್ಕೆ ಸಿಗಲಿದೆ ಬೂಸ್ಟ್​

    ನವದೆಹಲಿ: ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿ ಅಲ್ಲಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದ್ದನ್ನು ಸಹಿಸಲಾಗದೇ ಮಾಲ್ಡೀವ್ಸ್​ ರಾಜಕಾರಣಿಗಳು ನಾಲಿಗೆ ಹರಿಬಿಟ್ಟ ಬೆನ್ನಲ್ಲೇ ಇಡೀ ಲಕ್ಷದ್ವೀಪದ ಕಡೆಗೆ ತಿರುಗಿ ನೋಡುತ್ತಿದ್ದು, ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್​ ಆಗುತ್ತಿದೆ.

    ಯಾವಾಗ ಮೋದಿ ಲಕ್ಷದ್ವೀಪಕ್ಕೆ ಹೊಗಿ ಬಂದರೋ ಇದನ್ನು ಅರಗಿಸಿಕೊಳ್ಳಲಾಗದೇ ಭಾರತ ಮತ್ತು ಮೋದಿ ಬಗ್ಗೆ ಮಾಲ್ಡೀವ್ಸ್ ರಾಜಕೀಯ ನಾಯಕರು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದರು. ನಮ್ಮ ದೇಶ ಹಾಗೂ ಪ್ರಧಾನಿ ವಿರುದ್ಧ ಹಗುರವಾಗಿ ಮಾತನಾಡಿದ ಮಾಲ್ಡೀವ್ಸ್​ ವಿರುದ್ಧ ಸೆಲೆಬ್ರಿಟಿಗಳು ತಿರುಗಿಬಿದ್ದಿದ್ದು, ಇದರ ಪರಿಣಾಮ ಸಾಮಾಜಿಕ ಜಾಲತಾಣದಲ್ಲಿ ಬಾಯ್ಕಾಟ್​ ಮಾಲ್ಡೀವ್ಸ್​ ಅಭಿಯಾನ ಸಹ ಶುರುವಾಗಿದೆ. ಅಲ್ಲದೆ, ಮಾಲ್ಡೀವ್ಸ್​ ರಾಜಕಾರಣಿಗಳ ಮಾತನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಮಾಲ್ಡೀವ್ಸ್​ಗೆ ಸರಿಯಾದ ಪಾಠ ಕಲಿಸಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಮಾಲ್ಡೀವ್ಸ್​ಗೆ ಪರ್ಯಾಯವಾಗಿ ಲಕ್ಷದ್ವೀಪವನ್ನು ಪ್ರವಾಸಿಗರ ಹಬ್​​ ಆಗಿ ಪರಿವರ್ತಿಸಲು ಪ್ರಚಾರ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರ, ಲಕ್ಷದ್ವೀಪದ ಮಿನಿಕಾಯ್​ ದ್ವೀಪದಲ್ಲಿ ನಾಗರಿಕ ಮತ್ತು ಮಿಲಿಟರಿ ಜಂಟಿ ಬಳಕೆಗಾಗಿ ಹೊಸ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸುತ್ತಿದೆ ಎಂದು ತಿಳಿದುಬಂದಿದೆ.

    ರತನ್​ ಟಾಟಾ ಕೊಡುಗೆ
    ಇನ್ನು ಕೈಗಾರಿಕೋದ್ಯಮಿ ರತನ್​ ಟಾಟಾ ಅವರು ಲಕ್ಷದ್ವೀಪದಲ್ಲಿ ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ಎರಡು ತಾಜ್​ ಹೋಟೆಲ್​ಗಳನ್ನು ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಅಂದಹಾಗೆ ಒಂದು ವರ್ಷದ ಹಿಂದೆಯೇ ಈ ಘೋಷಣೆ ಮಾಡಿದ್ದರು. ಆದರೆ, ಮಾಲ್ಡೀವ್ಸ್​ ಮತ್ತು ಭಾರತದ ನಡುವಿನ ರಾಜತಾಂತ್ರಿಕ ಸಂಬಂಧ ಹಳಸಿರುವ ಹಿನ್ನೆಲೆಯಲ್ಲಿ ತಾಜ್​ ಹೋಟೆಲ್ ಮತ್ತೆ ಮುನ್ನೆಲೆಗೆ ಬಂದಿದೆ. ​ ಲಕ್ಷದ್ವೀಪವನ್ನು ಪ್ರವಾಸಿಗರ ಹಬ್​ ಆಗಿ ಮಾಡಲು ಹಲವು ಸೌಕರ್ಯವನ್ನು ನಿರ್ಮಿಸುವ ಅವಶ್ಯಕತೆ ಇದೆ. ಇದೀಗ ರತನ್​ ಟಾಟಾ ಅವರು ಹೋಟೆಲ್​ ಘೋಷಣೆ ಮಾಡಿರುವುದು ಲಕ್ಷದ್ವೀಪ ಪ್ರವಾಸೋದ್ಯಮಕ್ಕೆ ಬೂಸ್ಟ್​ ನೀಡಲಿದೆ

    ತಾಜ್​ ಬ್ರ್ಯಾಂಡ್​ನ ಹೋಟೆಲ್​ಗಳನ್ನು ನಿರ್ಮಾಣ ಮಾಡಲು ಟಾಟಾ ಗ್ರೂಪ್​ ಇಂಡಿಯನ್​ ಹೋಟೆಲ್​ ಕಂಪನಿ ಮುಂದಾಗಿದೆ. 2026ಕ್ಕೆ ಹೋಟೆಲ್​ ನಿರ್ಮಾಣ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಈ ಹೋಟೆಲ್​ಗಳನ್ನು ಇಂಡಿಯನ್​ ಹೋಟೆಲ್​ ಕಂಪನಿ ಲಿಮಿಟೆಡ್​ (ಐಎಚ್​ಸಿಎಲ್​) ಅಭಿವೃದ್ಧಿಪಡಿಸಲಿದೆ. ಲಕ್ಷದ್ವೀಪದ ಸುಹೇಲಿ ಮತ್ತು ಕಡಮತ್​ ದ್ವೀಪಗಳಲ್ಲಿ ಈ ಹೋಟೆಲ್‌ಗಳನ್ನು ಪ್ರಾರಂಭಿಸಲಾಗುತ್ತದೆ.

    36 ದ್ವೀಪಗಳನ್ನು ಒಳಗೊಂಡಿರುವ ಲಕ್ಷದ್ವೀಪದಲ್ಲಿ ಬಂಗಾರಮ್, ಅಗತ್ತಿ, ಕಡಮತ್​, ಮಿನಿಕೋಯ್, ಕವರಟ್ಟಿ ಮತ್ತು ಸುಹೇಲಿ ದ್ವೀಪಗಳು ಪ್ರಸಿದ್ಧ ಪ್ರವಾಸಿ ತಾಣಗಳಾಗಿವೆ. ಕಡಮತ್​ ಭಾರತದ ಅತ್ಯುತ್ತಮ ಡೈವಿಂಗ್ ಕೇಂದ್ರಗಳಲ್ಲಿ ಒಂದಾಗಿದೆ. ಕಳೆದ ವರ್ಷವೇ ಲಕ್ಷದ್ವೀಪದಲ್ಲಿ ರೆಸಾರ್ಟ್ ಆರಂಭಿಸುವ ಒಪ್ಪಂದಕ್ಕೆ ಐಎಚ್‌ಸಿಎಲ್ ಎಂಡಿ ಮತ್ತು ಸಿಇಒ ಪುನೀತ್ ಚಟ್ವಾಲ್ ಸಹಿ ಹಾಕಿದ್ದರು. ಎರಡು ವಿಶ್ವದರ್ಜೆಯ ಹೋಟೆಲ್​ ಪ್ರವಾಸಿಗರನ್ನು ಸೆಳೆಯಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

    ಸುಹೇಲಿ ದ್ವೀಪದಲ್ಲಿರುವ ಹೋಟೆಲ್ 60 ವಿಲ್ಲಾಗಳು ಮತ್ತು 50 ವಾಟರ್ ವಿಲ್ಲಾಗಳೊಂದಿಗೆ 110 ಕೊಠಡಿಗಳನ್ನು ಹೊಂದಿರುತ್ತದೆ. ಕಡಮತ್ ದ್ವೀಪದಲ್ಲಿರುವ ಹೋಟೆಲ್ 75 ಬೀಚ್ ವಿಲ್ಲಾಗಳು ಮತ್ತು 35 ವಾಟರ್ ವಿಲ್ಲಾಗಳೊಂದಿಗೆ 110 ಕೊಠಡಿಗಳನ್ನು ಹೊಂದಿದೆ. ಸ್ಕೂಬಾ ಡೈವಿಂಗ್, ವಿಂಡ್‌ಸರ್ಫಿಂಗ್, ಸ್ನಾರ್ಕ್ಲಿಂಗ್, ಸರ್ಫಿಂಗ್, ವಾಟರ್ ಸ್ಕೀಯಿಂಗ್ ಸೇರಿದಂತೆ ಹಲವು ಜಲ ಕ್ರೀಡೆಗಳು ಲಕ್ಷದ್ವೀಪದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತವೆ.

    ಏನಿದು ವಿವಾದ?
    ಕಡಲತಡಿಯ ಪ್ರವಾಸೋದ್ಯಮವನ್ನೇ ದೊಡ್ಡ ಆದಾಯವಾಗಿ ಹೊಂದಿರುವ ಮಾಲ್ದೀವ್ಸ್, ಲಕ್ಷದ್ವೀಪಕ್ಕೆ ಸಿಗುತ್ತಿರುವ ಪ್ರಚಾರ-ಮನ್ನಣೆ ಸಹಿಸಿಕೊಳ್ಳಲಾಗದೆ ಅಲ್ಲಿನ ಜನಪ್ರತಿನಿಧಿಗಳು ಭಾರತವನ್ನು ಅವಹೇಳನ ಮಾಡುವಂತೆ ಅಭಿಪ್ರಾಯ ವ್ಯಕ್ತಪಡಿಸಿರುವುದು ಕೋಲು ಕೊಟ್ಟು ಪೆಟ್ಟು ತಿಂದಂಥ ಪರಿಸ್ಥಿತಿ ಸೃಷ್ಟಿಯಾಗಿಸಿದೆ. ಮಾಲ್ದೀವ್ಸ್ ಉಪ ಸಚಿವೆ ಮರಿಯಂ ಶಿಯುನಾ ಮುಂತಾದವರು ಪ್ರವಾಸೋದ್ಯಮದ ವಿಚಾರದಲ್ಲಿ ಭಾರತವನ್ನು ಅವಮಾನಿಸಿ ಸೋಷಿಯಲ್ ಮೀಡಿಯಾ ತಾಣವಾದ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೆ ಭಾರತ ಮಾಲ್ದೀವ್ಸ್​ನ ಗುರಿಯಾಗಿಸುತ್ತಿದೆ, ಕಡಲತಡಿಯ ಪ್ರವಾಸೋದ್ಯಮದಲ್ಲಿ ಮಾಲ್ದೀವ್ಸ್ ಜತೆ ಸ್ಪರ್ಧೆಗಿಳಿದರೆ ಭಾರತ ಸವಾಲೆದುರಿಸಬೇಕಾಗುತ್ತದೆ ಎಂದಿರುವ ಅವರು ಮೋದಿಯನ್ನೂ ನಿಂದಿಸಿ ಪೋಸ್ಟ್ ಮಾಡಿದ್ದರು. ಮಾಲ್ದೀವ್ಸ್ ಎಂಪಿ ಜಹಿದ್ ರಮೀಜ್ ಎಂಬಾತ, ಶ್ರೀಲಂಕಾದಂಥ ರಾಷ್ಟ್ರದ ಸಣ್ಣ ಆರ್ಥಿಕತೆಯನ್ನು ಭಾರತ ನಕಲು ಮಾಡಿ ಹಣ ಮಾಡುತ್ತಿದೆ ಎಂದು ಟೀಕಿಸಿದ್ದು ಕೂಡ ತೀವ್ರ ಆಕ್ರೋಶಕ್ಕೆ ಒಳಗಾಗಿದೆ.

    ಮೂವರು ಸಚಿವರ ಅಮಾನತು
    ವಿದೇಶಿ ನಾಯಕರು ಮತ್ತು ಉನ್ನತ ಶ್ರೇಣಿಯ ವ್ಯಕ್ತಿಗಳ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವುದು ಮಾಲ್ದೀವ್ಸ್ ಸರ್ಕಾರದ ಗಮನಕ್ಕೆ ಬಂದಿದೆ. ಅದು ಅವರ ವೈಯಕ್ತಿಕ ಅಭಿಪ್ರಾಯವೇ ಹೊರತು, ಸರ್ಕಾರದ ದೃಷ್ಟಿಕೋನವಲ್ಲ ಎಂದು ಮಾಲ್ದೀವ್ಸ್ ಸರ್ಕಾರ ಬಳಿಕ ಸ್ಪಷ್ಟೀಕರಣ ನೀಡಿದೆ. ಮಾತ್ರವಲ್ಲ, ಇದಾದ ಕೆಲವೇ ಹೊತ್ತಲ್ಲಿ ಭಾರತದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಮಾಲ್ದೀವ್ಸ್ ಯುವ ಸಬಲೀಕರಣ ಸಚಿವಾಲಯದ ಉಪ ಸಚಿವೆಯರಾದ ಮರಿಯಂ ಶಿಯುನಾ, ಮಾಲ್​ಷಾ, ಸಾರಿಗೆ ಸಚಿವಾಲಯ ಉಪ ಸಚಿವ ಹಸನ್ ಜಿಹಾನ್ ಅವರನ್ನು ಮಾಲ್ದೀವ್ಸ್ ಸರ್ಕಾರ ಅಮಾನತುಗೊಳಿಸಿದೆ. (ಏಜೆನ್ಸೀಸ್​)

    ಮಾಲ್ಡೀವ್ಸ್​ನಲ್ಲಿ 1 ಪಿಜ್ಜಾ ಖರಿದೀಸುವ ದುಡ್ಡಲ್ಲಿ ಭಾರತದಲ್ಲಿ ಚಿನ್ನವನ್ನೇ ಕೊಳ್ಳಬಹುದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts