More

  ಮರವಂತೆಯಲ್ಲಿ ಮಕ್ಕಳ ಹಬ್ಬ: ನೂರಾರು ಬೇಡಿಕೆಗಳ ಸರಮಾಲೆ

  ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
  ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇಂದು ಪರಿಸ್ಥಿತಿ ಸಾಕಷ್ಟು ಸುಧಾರಿಸಿದ್ದರೂ ಬಗೆಹರಿಸಬೇಕಿರುವ ಸಮಸ್ಯೆಗಳು ಬಹಳಷ್ಟಿವೆ. ತೊಂದರೆಗಳನ್ನು ಹಿಮ್ಮೆಟ್ಟಿಸಿ ಜೀವನದಲ್ಲಿ ಮುಂದೆ ಬರಲು ಪ್ರಯತ್ನಪಡಬೇಕು ಎಂದು ರಾಜ್ಯದ ಪಂಚಾಯತ್ ರಾಜ್ ಸಂಪನ್ಮೂಲ ವ್ಯಕ್ತಿ ಎಸ್.ಜನಾರ್ದನ್ ಹೇಳಿದರು.

  ಮರವಂತೆ ಗ್ರಾಮ ಪಂಚಾಯಿತಿ, ಉಡುಪಿ ಜಿಲ್ಲಾ ಪಂಚಾಯಿತಿ, ಕುಂದಾಪುರ ತಾಲೂಕು ಪಂಚಾಯಿತಿ ಹಾಗೂ ಸಿಡಬ್ಲುೃಸಿ ಸ್ವಯಂಸೇವಾ ಸಂಸ್ಥೆ ಆಶ್ರಯದಲ್ಲಿ ಮರವಂತೆ ಗ್ರಾಮದ ಬ್ರೇಕ್‌ವಾಟರ್ ಪರಿಸರದಲ್ಲಿ ಮಂಗಳವಾರ ಆಯೋಜಿಸಿದ್ದ ಮಕ್ಕಳ ಹಬ್ಬದಲ್ಲಿ ಅತಿಥಿಯಾಗಿ ಮಾತನಾಡಿದರು.
  ಮುಖ್ಯ ಅತಿಥಿಯಾಗಿದ್ದ ಬೆಂಗಳೂರಿನ ಸಿಆರ್‌ಎಲ್‌ಜಿ ಸಮಾಲೋಚಕಿ ಡಾ.ಸೈಯದ್ ನೂರ್ ಫಾತಿಮಾ ಮಾತನಾಡಿ, ಮಕ್ಕಳಿಗೆ ಸೂಕ್ತ ವಾತಾವಣ, ಪರಿಸರ ಕಲ್ಪಿಸಿದಾಗ ಅವರು ಜವಾಬ್ದಾರಿಯುತ ನಾಗರಿಕರಾಗುತ್ತಾರೆ. ನಮ್ಮ ಸುತ್ತಮುತ್ತ ಸಾಕಷ್ಟು ಸಮಸ್ಯೆಗಳಿದ್ದು, ಅವುಗಳನ್ನೇ ಪಟ್ಟಿ ಮಾಡಿ ವಿಶೇಷ ಗ್ರಾಮಸಭೆಯ ಮೂಲಕ ಕ್ರಿಯಾಶೀಲರಾಗಿ ನಮ್ಮ ಮುಂದೆ ತೆರೆದಿಟ್ಟಿರುವುದು ಶ್ಲಾಘನೀಯ ಎಂದರು.

  ಮರವಂತೆ ಗ್ರಾ.ಪಂ ಅಧ್ಯಕ್ಷ ಲೋಕೇಶ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸುಶೀಲಾ ಪೂಜಾರಿ, ನೋಡೆಲ್ ಅಧಿಕಾರಿ ಪ್ರವೀಣ್, ಮರವಂತೆ ವೈದ್ಯಾಧಿಕಾರಿ ಡಾ. ಗಣೇಶ ಭಟ್, ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ (ತನಿಖೆ) ಬಸವರಾಜ್ ಕನಹಟ್ಟಿ, ರಾಜ್ಯ ಮಕ್ಕಳ ಹಕ್ಕುಗಳ ತಜ್ಞ ಕಿಶನ್ ರಾಮಮೂರ್ತಿ, ನಮ್ಮ ಭೂಮಿ ಸಂಸ್ಥೆಯ ಆಶಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬೇಬಿ, ಮರವಂತೆ ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು. ಮಕ್ಕಳು ಮರವಂತೆ ಕಡಲ ತೀರದಲ್ಲಿ ಗಾಳಿಪಟ ಉತ್ಸವ ನಡೆಸಿದರು.

  ಮರವಂತೆಯಲ್ಲಿ ಮಕ್ಕಳ ಹಬ್ಬ: ನೂರಾರು ಬೇಡಿಕೆಗಳ ಸರಮಾಲೆ

  ಮರವಂತೆ ಪಿಡಿಒ ಶೋಭಾ ಸ್ವಾಗತಿಸಿದರು. ಕಾರ್ಯದರ್ಶಿ ದಿನೇಶ ಶೇರುಗಾರ್ ಅನುಪಾಲನಾ ವರದಿ ಮಂಡಿಸಿದರು. ಗ್ರಾ.ಪಂ ಸದಸ್ಯ ಕರುಣಾಕರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

  ಹಲವರಿಂದ ನೆರವಿಗೆ ಮೊರೆ

  ಅಂಗವಿಕಲೆ ಸಿಂಚನಾ ಅವರಿಗೆ ಔಷಧ ಮತ್ತಿತರ ಖರ್ಚು ಹೆಚ್ಚುತ್ತಿರುವುದರಿಂದ ಸರ್ಕಾರ ನೆರವು ಅಗತ್ಯವಿದೆ. ಅನ್ವಿತಾ ಎಂಬ ಬಾಲಕಿಯ ಶ್ರವಣದೋಷಕ್ಕೆ ಯಂತ್ರ ಖರೀದಿಸಲು ಸಹಾಯ ಮಾಡಬೇಕು ಎಂಬ ಬೇಡಿಕೆ ಸಭೆಯಲ್ಲಿ ವ್ಯಕ್ತವಾಯಿತು. ತಾಂತ್ರಿಕ ಸಮಸ್ಯೆಯಿಂದ ಂಗವಿಕಲ ಯು.ಖಾರ್ವಿ ಅವರಿಗೆ ಪಿಂಚಣಿ ಸಿಗುತ್ತಿಲ್ಲ. ಮರವಂತೆಯ ಹಿರಿಯಣ್ಣ ಆಚಾರ್ಯ ಸಮುದ್ರದ ನೀರಿಗೆ ಬಿದ್ದು ನಾಪತ್ತೆಯಾಗಿ ಅನೇಕ ವರ್ಷ ಕಳೆದಿದ್ದು, ಅವರ ಕುಟುಂಬಕ್ಕೆ ಸರ್ಕಾರದ ಯಾವುದೇ ಸೌಲಭ್ಯ ಪಡೆಯಲು ಆಗುತ್ತಿಲ್ಲ. ಹೀಗಾಗಿ ಅವರ ಮರಣ ಪ್ರಮಾಣಪತ್ರ ದೊರಕುವಂತೆ ಮಾಡಬೇಕು ಎಂದು ಅವರ ಮಕ್ಕಳು ಒತ್ತಾಯಿಸಿದರು. ಹಲವು ಪ್ರಮುಖ ಬೇಡಿಕೆಗಳನ್ನು ಸಭೆಯಲ್ಲಿ ಇಡುವ ಮೂಲಕ ಸಿಂಚನಾ ಪೂಜಾರಿ ಗಮನ ಸೆಳೆದರು.

  ಬೇಡಿಕೆಗಳ ಸರಮಾಲೆ

  ಮರವಂತೆಯಲ್ಲಿ ಫಿಸಿಯೋಥರಪಿ ಕೇಂದ್ರ ಸ್ಥಾಪನೆ ಮಾಡಬೇಕು, ಮರವಂತೆಯ ಸಾಧನಾ ರಸ್ತೆಯಲ್ಲಿರುವ ಕೆರೆಗೆ ಭದ್ರತೆ ಒದಗಿಸಬೇಕು, ಶಾಲೆಯಲ್ಲಿ ಬಿಸಿ ನೀರಿನ ವ್ಯವಸ್ಥೆ ಮಾಡಬೇಕು, ಶಾಲೆಯ ಮೈದಾನದಲ್ಲಿರುವ ಗಾಜಿನ ಚೂರು ತೆರವುಗೊಳಿಸಿ ಆಡಲು ಅವಕಾಶ ಮಾಡಿಕೊಡಬೇಕು, ಬೀದಿ ನಾಯಿ ಹಾವಳಿ ನಿಯಂತ್ರಿಸಬೇಕು, ಶಾಲೆಗಳಲ್ಲಿ ಹೆಣ್ಣು ಮಕ್ಕಳ ಶೌಚಗೃಹ ನಿರ್ಮಿಸಬೇಕು, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸಿಗುವಂತಾಗಬೇಕು, ಮರವಂತೆ ಪೂರ್ವ ಶಾಲೆಯಲ್ಲಿ ದೈಹಿಕ ಶಿಕ್ಷಕರನ್ನು ನಿಯೋಜಿಸಬೇಕು ಎಂಬ ಮನವಿ ನೀಡಲಾಯಿತು.

  ಮಕ್ಕಳು ಸೂಕ್ಷ್ಮವಾಗಿ ಸಮಸ್ಯೆಗಳನ್ನು ನಮ್ಮ ಮುಂದಿಟ್ಟಿದ್ದಾರೆ. ಮಕ್ಕಳ ಮಾತಿಗೆ ಧ್ವನಿಯಾಗಬೇಕು. ಬೈಂದೂರು ತಾಲೂಕಿಗೆ ಸಂಬಂಧಿಸಿ ಮರವಂತೆಯಲ್ಲಿ ಫಿಸಿಯೋಥರಪಿ ಕೇಂದ್ರದ ಕಟ್ಟಡ ನಿರ್ಮಾಣವಾಗುತ್ತಿದ್ದು, ಕೆಲವೇ ತಿಂಗಳಿನಲ್ಲಿ ಇದರ ಪ್ರಯೋಜನ ಸಿಗಲಿದೆ. ಇಲ್ಲಿನ ಮಕ್ಕಳ ಅಹವಾಲುಗಳ ಪಟ್ಟಿ ತರಿಸಿಕೊಂಡು ಶೀಘ್ರ ಪರಿಹರಿಸಲು ಪ್ರಯತ್ನಿಸುವೆ.
  -ಭಾರತಿ, ಬೈಂದೂರು ತಾಪಂ ಸಿಇಒ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts