More

    ಕಡಲ್ಕೊರೆತ ತಡೆಗೋಡೆ ರಚನೆಗೆ ಒತ್ತಾಯ: ಅಧಿವೇಶನದಲ್ಲಿ ಗಮನ ಸೆಳೆದ ಕಾಪು ಶಾಸಕ ಗುರ್ಮೆ

    ಪಡುಬಿದ್ರಿ: ಕಾಪು ವಿಧಾನಸಭಾ ಕ್ಷೇತ್ರದ ಕಡಲ್ಕೊರೆತ ಪ್ರದೇಶಗಳಲ್ಲಿ ತಡೆಗೋಡೆ ರಚನೆಗೆ ಕ್ರಮ ವಹಿಸುವಂತೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಕಾಪು, ಮೂಳೂರು, ಎರ್ಮಾಳು, ಪಡುಬಿದ್ರಿ, ಹೆಜಮಾಡಿ, ಕೈಪುಂಜಾಲು, ಮಟ್ಟು, ಉದ್ಯಾವರ ಪರಿಸರದ ವಿವಿಧೆಡೆ ಪ್ರತಿವರ್ಷ ಕಡಲ್ಕೊರೆತ ಹಾವಳಿ ಕಂಡು ಬರುತ್ತಿದೆ. ಈ ಬಾರಿಯ ಮಳೆಗಾಲದಲ್ಲಿ ಮೂಳೂರು, ಪಡುಬಿದ್ರಿ, ಎರ್ಮಾಳು ಪರಿಸರದಲ್ಲಿ ತೀವ್ರ ಕಡಲ್ಕೊರೆತ ಉಂಟಾಗಿದ್ದು ಮೀನುಗಾರಿಕಾ ರಸ್ತೆ, ವಾಸದ ಮನೆ, ಜಮೀನು ಮತ್ತು ತೆಂಗಿನಮರಗಳಿಗೆ ಹಾನಿಯುಂಟಾಗಿತ್ತು. ಈ ಬಗ್ಗೆ ಸರ್ಕಾರಕ್ಕೆ ಎರಡು ಬಾರಿ ಪ್ರಸ್ತಾವನೆ ಸಲ್ಲಿಸಿದ್ದೇನೆ. ಪಡುಬಿದ್ರಿ, ಮೂಳೂರಿಗೆ ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯ, ಮೀನುಗಾರಿಕಾ ಸಚಿವ ಮಂಕಾಳ ಎಸ್. ವೈದ್ಯ, ಉಸ್ತುವಾರಿ ಸಚಿವೆ ಲಕ್ಷ್ಮೆ ಹೆಬ್ಬಾಳ್ಕರ್ ಭೇಟಿ ನೀಡಿದ್ದರೂ ಈವರೆಗೂ ಕಾಮಗಾರಿ ಆರಂಭಗೊಂಡಿಲ್ಲ ಎಂದು ದೂರಿದರು.

    ಮೀನುಗಾರರ ಜೀವನ ಕಸಿವ ಕಡಲ್ಕೊರೆತ

    ಮೀನುಗಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿರುವ ಕರಾವಳಿ ತೀರದ ಜನರಿಗೆ ತೊಂದರೆಯಾಗಿದೆ. ಸಮುದ್ರ ತೀರ ಪ್ರದೇಶವೇ ಅವರ ಉಸಿರಾಗಿದ್ದು, ಅವರ ಜೀವನಕ್ಕೆ ತೊಂದರೆ ಉಂಟು ಮಾಡುತ್ತಿರುವ ಕಡಲ್ಕೊರೆತ ತಡೆಗೆ ಸರ್ಕಾರ ಶಾಶ್ವತ ಯೋಜನೆ ಜಾರಿಗೊಳಿಸಬೇಕು. ಸರ್ಕಾರದ ನಿರ್ಲಕ್ಷ್ಯ ಧೋರಣೆಗೆ ಕರಾವಳಿಗರು ತೀವ್ರ ಅಸಮಾಧಾನಗೊಂಡು, ಜನಪ್ರತಿನಿಧಿಗಳಾದ ನಮ್ಮನ್ನು ತೆಗಳುತ್ತಿದ್ದಾರೆ. ಪರಿಸ್ಥಿತಿ ನಿಜವಾಗಿಯೂ ಗಂಭೀರವಾಗಿದೆ ಎಂದು ಶಾಸಕರು ದೂರಿದರು.

    ಉಡುಪಿ ಜಿಲ್ಲೆಯ ಕಡಲ್ಕೊರೆತ ಪ್ರದೇಶಗಳಿಗೆ ತೆರಳಿ ಹಾನಿ ಪರಿಶೀಲಿಸಿದ್ದು, ಈ ಬಗ್ಗೆ ಅವಶ್ಯವಿರುವಲ್ಲಿ ತುರ್ತು ಕಾಮಗಾರಿ ನಡೆಸುವಂತೆ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಶಾಸಕರಾಗಿ ಕ್ಷೇತ್ರದ ಜನತೆಯ ಬಗ್ಗೆ ಕಾಳಜಿ ಹೊಂದಿ ನೀಡಿರುವ ಪ್ರಸ್ತಾವನೆ ಪರಿಶೀಲಿಸುತ್ತೇನೆ.
    -ಮಂಕಾಳ ವೈದ್ಯ, ಬಂದರು ಮತ್ತು ಮೀನುಗಾರಿಕಾ ಸಚಿವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts