More

    ಅನಧಿಕೃತ ಬಡಾವಣೆಗೆ ಮೂಗುದಾರ: 11ಇ ನಕ್ಷೆ ನೀಡದಂತೆ ತಡೆಹಿಡಿದ ಜಿಲ್ಲಾಧಿಕಾರಿ

    ವಿಜಯವಾಣಿ ಸುದ್ದಿಜಾಲ ಉಡುಪಿ
    ಉಡುಪಿ ಜಿಲ್ಲೆಯಲ್ಲಿ 11ಇ ನಕ್ಷೆ ನೀಡುವುದನ್ನು ತಡೆಹಿಡಿಯುವ ಮೂಲಕ ಅನಧಿಕೃತ ಬಡಾವಗಳಿಗೆ ಕಡಿವಾಣ ಹಾಕಲು ಸರಕಾರ ಮುಂದಾಗಿದೆ.
    ಜಿಲ್ಲಾಧಿಕಾರಿಗಳ ಜನ ಸಂಪರ್ಕ ಸಭೆ ಹಾಗೂ ಇತ್ತೀಚೆಗೆ ಉಡುಪಿಯಲ್ಲಿ ಉಪಲೋಕಾಯುಕ್ತ ನಡೆಸಿದ್ದ ಅಹವಾಲು ಸ್ವೀಕಾರ ಸಭೆಯಲ್ಲಿ ಶೇ.50ಕ್ಕಿಂತ ಹೆಚ್ಚು ಅರ್ಜಿಗಳು ದಾರಿ ಸಮಸ್ಯೆಯ ಕುರಿತೇ ಇತ್ತು. ಇದಕ್ಕೆ ಮುನ್ನಚ್ಚರಿಕೆ ಕ್ರಮವಾಗಿ ಹಆಗೂ ಸಮಸ್ಯೆಯನ್ನು ಬಗೆಹರಿಸುವ ಉದ್ದೇಶದಿಂದ 11ಇ ನಕ್ಷೆ ನೀಡದಂತೆ ಡಿಸಿ ಆದೇಶ ಹೊರಡಿಸಿದ್ದಾರೆ.

    ಖಾಸಗಿಯವರಲ್ಲಿ ಜಾಗ

    ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಸಾಕಷ್ಟು ಕಂದಾಯ ಬಡಾವಣೆಗಳಿದ್ದು, ಅವುಗಳಲ್ಲಿ ಹಲವು ಅನಧಿಕೃತ ಆಗಿವೆ. ಅಲ್ಲದೆ, ಇಂತಹ ಲೇಔಟ್‌ಗಳಲ್ಲಿ ರಸ್ತೆಗಾಗಿ ಬಿಟ್ಟ ಜಾಗ ಇನ್ನೂ ಖಾಸಗಿಯವರ ಹೆಸರಿನಲ್ಲೇ ಇದೆ. ಅಲ್ಲದೆ, ಹೆಚ್ಚಿನ ಕಡೆಗಳಲ್ಲಿ ಕೇವಲ 6 ಅಡಿ ಅಗಲ ಮಾತ್ರ ಜಾಗ ಬಿಟ್ಟಿದ್ದಾರೆ. ಅನೇಕ ಕಡೆಗಳಲ್ಲಿ ಓಡಾಡಲು ದಾರಿ ಸಮಸ್ಯೆ ಉಂಟಾಗುತ್ತಿದೆ.

    ಸರ್ಕಾರದಿಂದ ಸೂಚನೆ

    ರಸ್ತೆಗೆ ಬಿಟ್ಟ ಜಾಗ ಕಿರಿದಾಗಿರುವುದರಿಂದ ಹಾಗೂ ಖಾಸಗಿಯವರ ಹೆಸರಿನಲ್ಲೇ ಜಾಗ ಇರುವುದರಿಂದ ಸ್ಥಳೀಯ ಗ್ರಾಪಂಗಳಿಗೆ ಇಂತಹ ಅನಧಿಕೃತ ಲೇಔಟ್‌ಗಳಿಗೆ ರಸ್ತೆ, ಕುಡಿಯುವ ನೀರು, ದಾರಿದೀಪ ಒದಗಿಸಲು ಸಮಸ್ಯೆ ಆಗಿದೆ. ಹೀಗಾಗಿ ಇತ್ತೀಚೆಗೆ ಡಿಸಿ ಹಾಗೂ ಸಿಇಒಗಳೊಂದಿಗೆ ಸಭೆ ನಡೆಸಿದ್ದ ಸರ್ಕಾರ, ಜಿಲ್ಲೆಗಳಲ್ಲಿ ಕಂದಾಯ ಭೂಮಿಯಲ್ಲಿ ಅನಧಿಕೃತ ಬಡಾವಣೆ ನಿರ್ವಾಣಕ್ಕೆ ಅವಕಾಶ ನೀಡಬಾರದೆಂದು ಸೂಚನೆ ನೀಡಿದೆ.

    ಸರ್ಕಾರಕ್ಕೂ ತಪ್ಪುತ್ತಿದೆ ಆದಾಯ

    ಸಣ್ಣ ಪ್ರಮಾಣದಲ್ಲಿ ರಿಯಲ್ ಎಸ್ಟೇಟ್ ದಂಧೆ ಮಾಡುವವರು ಕೃಷಿಕರಿಂದ ಜಮೀನು ಖರೀದಿಸಿ, ತಮ್ಮ ಹೆಸರಿನಲ್ಲೇ ಪ್ರತಿ ಸೈಟ್‌ಗೆ ಒಂದರಂತೆ ಭೂಪರಿವರ್ತನೆ ಮಾಡುವಂತೆ ಅರ್ಜಿ ಸಲ್ಲಿಸುತ್ತಿದ್ದಾರೆ. ಇನ್ನೂ ಕೆಲ ಪ್ರಕರಣಗಳಲ್ಲಿ ಅಣ್ಣ-ತಮ್ಮಂದಿರು ಜಮೀನಿನ ವಿಭಾಗಕ್ಕಾಗಿ ಅರ್ಜಿ ಸಲ್ಲಿಸಿ, ಒಬ್ಬೊಬ್ಬರಿಗೆ ಪರ್ಯಾಯ ಬ್ಲಾಕ್ ಹಾಗೂ ರಸ್ತೆಗಾಗಿ ಜಂಟಿ ಸ್ಥಳ ಎಂಬುದಾಗಿ ನಮೂದಿಸಿ, 11ಇ ಅರ್ಜಿ ದಾಖಲಿಸಿ ಅನಧಿಕೃತ ಬಡಾವಣೆ ನಿರ್ಮಿಸುತ್ತಿದ್ದಾರೆ. ಅವರ ಹೆಸರಿನಲ್ಲಿ ಜಾಗ ನೋಂದಣಿ ಆದ ನಂತರ ಪ್ರತಿ ಸೈಟ್‌ಗೂ ಐಎಂಪಿಯಂತೆ ಪ್ರತ್ಯೇಕ ಆರ್‌ಟಿಸಿ ಸಿದ್ಧವಾಗುತ್ತದೆ. ನಂತರ ಆ ಸೈಟ್‌ಗಳನ್ನು ಕೃಷಿ ಜಮೀನು ಎಂಬುದಾಗಿಯೇ ಮಾರಾಟ ಮಾಡುತ್ತಾರೆ. ಇದು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಉಲ್ಲಂಘನೆ ಆಗುತ್ತಿದ್ದು, ಸರ್ಕಾರಕ್ಕೂ ಆದಾಯ ತಪ್ಪುತ್ತಿದೆ.

    ಅನಧಿಕೃತ ಬಡಾವಣೆಗೆ ಮೂಗುದಾರ: 11ಇ ನಕ್ಷೆ ನೀಡದಂತೆ ತಡೆಹಿಡಿದ ಜಿಲ್ಲಾಧಿಕಾರಿ

    ಶೇ.70ರಷ್ಟು ಮನೆಗಳಿಗಿಲ್ಲ ಸಂಪರ್ಕ ರಸ್ತೆ

    ಉಡುಪಿ ಜಿಲ್ಲೆಯಲ್ಲಿ ರೈತರ ಜಮೀನುಗಳು ತುಂಡು ಭೂಮಿಯಾಗಿದ್ದು, ಜಿಲ್ಲೆಯಲ್ಲಿ ಗ್ರಾಮ ಠಾಣ ವ್ಯವಸ್ಥೆಯೂ ಇಲ್ಲ. ರೈತರು ಅವರ ಜಮೀನಿನಲ್ಲೇ ಮನೆ ಕಟ್ಟಿಕೊಂಡಿದ್ದು, ಶೇ.70ರಷ್ಟು ಮನೆಗಳಿಗೆ ಸಂಪರ್ಕ ರಸ್ತೆ ಇಲ್ಲ. ರಸ್ತೆ ಇದ್ದರೂ ಅವು ಖಾಸಗಿ ಜಮೀನಿನಲ್ಲಿ ಇದೆ. ಇದಲ್ಲದೆ, ಕುಟುಂಬ ವಿಭಾಗವಾದಾಗ ಪುನಃ ಹೊಸ ಮನೆ ನಿರ್ವಾಣವಾಗುತ್ತಿದ್ದು, ಖಾಸಗಿ ಸ್ಥಳದಲ್ಲಿ ರಸ್ತೆ/ದಾರಿ ಇದ್ದರೂ ಈಗಲೂ ಭೂಪರಿವರ್ತನೆ ನೀಡಲಾಗುತ್ತಿದೆ. ತುಂಡು ಭೂಮಿ, ಸಣ್ಣ ಭೂಮಿ ಎಂಬ ಕಾರಣಕ್ಕೆ ಅನುಮತಿ ನೀಡಿದರೆ ಅನಧಿಕೃತ ಬಡಾವಣೆ ನಿರ್ಮಾಣಕ್ಕೆ ಸರ್ಕಾರವೇ ಪ್ರೇರಣೆ ನೀಡಿದಂತಾಗುತ್ತದೆ. ಹೀಗಾಗಿ ಅನಧಿಕೃತ ಲೇಔಟ್ ನಿರ್ವಾಣಕ್ಕಾಗಿ ಕೋರುವ 11ಇ ಅರ್ಜಿಗಳಿಗೆ ಮಾತ್ರ ನಕ್ಷೆ ನೀಡದಂತೆ ಉಡುಪಿ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

    ರಿಯಲ್ ಎಸ್ಟೇಟ್ ಉದ್ಯಮಕ್ಕೆ ಹೊಡೆತ?

    ಉಡುಪಿ ಜಿಲ್ಲಾಧಿಕಾರಿಯ ಈ ಕ್ರಮದಿಂದ ಜಿಲ್ಲೆಯ ಅಭಿವೃದ್ಧಿಗೆ ಹಾಗೂ ಸಣ್ಣ ಜಾಗ ಖರೀದಿಸಿ ಮನೆ ಕಟ್ಟಬೇಕು ಎಂದು ಕನಸು ಕಂಡವರಿಗೆ ನಿರಾಸೆಯಾಗಲಿದೆ ಎಂಬ ಆರೋಪ ಕೇಳಿ ಬಂದಿದೆ. ಪಟ್ಟಣ ಪ್ರದೇಶಕ್ಕೆ ಮಾತ್ರ ಅನ್ವಯವಾಗಿದ್ದ ಸಿಂಗಲ್ ಲೇಔಟ್ ಇನ್ನು ಗ್ರಾಮೀಣ ಪ್ರದೇಶಕ್ಕೂ ಕಡ್ಡಾಯವಾಗಲಿದೆ. ಇದರಿಂದ ನಿವೇಶನಗಳ ದರ ಹತ್ತಾರು ಪಟ್ಟು ಹೆಚ್ಚಲಿದೆ. ಒಂದು ಎಕರೆಯಲ್ಲಿ ಸಿಂಗಲ್ ಲೇಔಟ್ ಮಾಡಿ ಮಾರಾಟ ಮಾಡುವಾಗ 55 ಸೆಂಟ್ಸ್ ಜಾಗ ಮಾತ್ರ ಮಾರಾಟ ಮಾಡಲು ಆಗುತ್ತದೆ. ಉಳಿದ 45 ಸೆಂಟ್ಸ್ ಜಾಗದಲ್ಲಿ 30 ಅಡಿ ಅಗಲ ರಸ್ತೆ ಹಾಗೂ ಇತರ ಉದ್ದೇಶಗಳಿಗೆ ಸ್ಥಳೀಯಾಡಳಿತಕ್ಕೆ ದಾನ ಬರೆದುಕೊಡಬೇಕಾಗುತ್ತದೆ. ಇದು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಭಾರೀ ಹೊಡೆತ ಬೀಳಲಿದೆ ಎಂಬ ಆತಂಕ ಉದ್ಯಮಿಗಳದ್ದು.

    ಸಾರ್ವಜನಿಕರಿಗೆ ಮನೆ ಕಟ್ಟಲು, ವಿಭಾಗ ಬಾಬ್ತು ಮಾಡಲು ಅಥವಾ ಯಾವುದೇ ಭೂ ಪರಿವರ್ತನೆ ಮಾಡಲು 11ಇ ಅರ್ಜಿ ಸಲ್ಲಿಸಿದರೆ ಅಂತಹವರಿಗೆ ನಕ್ಷೆ ನೀಡುವುದನ್ನು ನಿಲ್ಲಿಸಿಲ್ಲ. ಕೇವಲ ಅನಧಿಕೃತ ಲೇಔಟ್‌ಗಳಿಗೆ ನಕ್ಷೆ ವಿತರಿಸದಂತೆ ಆದೇಶ ನೀಡಿದ್ದೇನೆ. ಪ್ರಸ್ತುತ ಜನವರಿಯಲ್ಲಿ 974 ಅರ್ಜಿ ಬಂದಿದ್ದು, 510 ಭೂ ಪರಿವರ್ತನೆ ಮಾಡಲಾಗಿದೆ. 102 ಅನಧಿಕೃತ ಲೇಔಟ್ ತಡೆಹಿಡಿಯಲಾಗಿದೆ. ಸಮಾಜದ ಹಾಗೂ ಸಾರ್ವಜನಿಕರ ಹಿತಾಸಕ್ತಿ ಕಾಪಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ.
    -ಡಾ.ಕೆ.ವಿದ್ಯಾಕುಮಾರಿ. ಜಿಲ್ಲಾಧಿಕಾರಿ, ಉಡುಪಿ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts