More

    ಮಹಾರಾಷ್ಟ್ರ ಸೇರಿ 12 ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಕ: ಕೋಶ್ಯಾರಿ ನಿರ್ಗಮಿಸಿದ್ದಕ್ಕೆ ಪ್ರತಿಪಕ್ಷಗಳ ಸಂಭ್ರಮ

    ನವದೆಹಲಿ: ಮಹಾರಾಷ್ಟ್ರ ಸೇರಿದಂತೆ 12 ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಕವಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಬೆಳಗ್ಗೆ ಮಹತ್ವದ ಸಾಂವಿಧಾನಿಕ ನೇಮಕಾತಿಗಳನ್ನು ಮಾಡಿದ್ದಾರೆ. ಅಲ್ಲದೆ, ಕೇಂದ್ರಾಡಳಿತ ಪ್ರದೇಶ ಲಡಾಖ್​ಗೂ ಸಹ ನೂತನ ಲೆಫ್ಟಿನೆಂಟ್​ ಗವರ್ನರ್ ನೇಮಕವಾಗಿದ್ದಾರೆ.

    ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ಭಗತ್​ ಸಿಂಗ್​ ಕೋಶ್ಯಾರಿ ಅವರ ಜಾಗಕ್ಕೆ ಜಾರ್ಖಂಡ್​ನ ಮಾಜಿ ರಾಜ್ಯಪಾಲ ರಮೇಶ್​ ಬಯಾಸ್​ ಅವರನ್ನು ನೂತನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಈ ಬದಲಾವಣೆಯನ್ನು ಮಹಾರಾಷ್ಟ್ರದ ಪ್ರತಿಪಕ್ಷಗಳು ಸಂಭ್ರಮಿಸಿವೆ. ಅದಕ್ಕೆ ಕಾರಣ ಈ ಹಿಂದೆ ಕೋಶ್ಯಾರಿ ಅವರು ಮರಾಠಿಗಳ ಭಾವನೆಗೆ ಧಕ್ಕೆಯಾಗುವಂತಹ ಮಾತುಗಳನ್ನಾಡಿದ್ದರು. ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

    ಎಂಬತ್ತರ ಹರೆಯದ ಕೋಶ್ಯಾರಿ ಅವರು ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ತಾವು ರಾಜ್ಯಪಾಲ ಹುದ್ಧೆಯಿಂದ ಕೆಳಗಿಳಿಯಲು ಬಯಸುವುದಾಗಿ ತಿಳಿಸಿದ್ದರು. ಉಳಿದ ಜೀವನವನ್ನು ಓದುವುದು, ಬರವಣಿಗೆ ಮತ್ತು ಇತರ ವಿರಾಮ ಚಟುವಟಿಕೆಗಳಲ್ಲಿ ಕಳೆಯುವ ಬಯಕೆಯನ್ನು ವ್ಯಕ್ತಪಡಿಸಿದ್ದರು ಎಂದು ರಾಜಭವನ ಹೊರಡಿಸಿ ಪತ್ರಿಕಾ ಪ್ರಕಟಣೆಯಲ್ಲಿದೆ.

    ಕೋಶ್ಯಾರಿ ಅವರು ಓರ್ವ ಹಿರಿಯ ಆರ್​ಎಸ್​ಎಸ್​ ನಾಯಕ. ಮುಖ್ಯಮಂತ್ರಿಯಾಗಿಯು ಮತ್ತು ಸಂಸತ್ತಿನ ಉಭಯ ಸದನಗಳಲ್ಲಿ ಸಂಸದರಾಗಿಯು ಸೇವೆ ಸಲ್ಲಿಸಿದ್ದಾರೆ. ಕೋಶ್ಯಾರಿ ಅವರು 2019 ರಲ್ಲಿ ರಾಜ್ಯಪಾಲರಾಗಿ ನೇಮಕಗೊಂಡರು. ಅವರ ಅಧಿಕಾರಾವಧಿಯಲ್ಲಿ ಅವರು ಉದ್ಧವ್ ಠಾಕ್ರೆ ಸರ್ಕಾರದೊಂದಿಗಿನ ಕಿತ್ತಾಟ ಮತ್ತು ವಿವಾದಾತ್ಮಕ ಹೇಳಿಕೆಗಳ ಮೂಲಕ ಆಗಾಗಾ ಸುದ್ದಿಯಾಗುತ್ತಿದ್ದರು. ಗುಜರಾತಿಗಳು ಮತ್ತು ರಾಜಸ್ಥಾನಿಗಳು ಮಹಾರಾಷ್ಟ್ರದಿಂದ ಹೊರ ಹೋದರೆ ರಾಜ್ಯದಲ್ಲಿ ಹಣ ಉಳಿಯುವುದಿಲ್ಲ ಎಂಬ ಅವರ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಉದ್ಧವ್​ ಠಾಕ್ರೆ ಸರ್ಕಾರವನ್ನು ಪ್ರತಿ ಹಂತದಲ್ಲೂ ಟೀಕಿಸುತ್ತಿದ್ದರು. ಈ ಎಲ್ಲ ಕಾರಣಗಳಿಂದ ಇದೀಗ ಕೋಶ್ಯಾರಿ ಅವರು ರಾಜ್ಯಪಾಲ ಹುದ್ಧೆಯಿಂದ ಕೆಳಗಿಳಿದಿರುವುದು ಮಹಾರಾಷ್ಟ್ರದ ಪ್ರತಿಪಕ್ಷಗಳಿಗೆ ಸಂತೋಷ ತರಿಸಿದೆ.

    ಮಹಾರಾಷ್ಟ್ರ ಹೊರತುಪಡಿಸಿದರೆ, ಉಳಿದ 11 ರಾಜ್ಯಗಳಿಗೆ ನೂತನ ರಾಜ್ಯಪಾಲರು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಗಳಿಗೆ ಲೆಫ್ಟಿನೆಂಟ್​ ಗವರ್ನರ್ ಸಹ ನೇಮಕವಾಗಿದ್ದಾರೆ.

    ಅರುಣಾಚಲ ಪ್ರದೇಶದ ರಾಜ್ಯಪಾಲರಾಗಿ ಲೆಫ್ಟಿನೆಂಟ್​ ಜನರಲ್ ಕೈವಾಲ್ಯ ತ್ರಿವಿಕ್ರಮ್​ ಪಾರ್ನೈಕ್​ (ನಿವೃತ್ತ), ಸಿಕ್ಕಿ ರಾಜ್ಯಪಾಲರಾಗಿ ಲಕ್ಷ್ಮಣ್​ ಪ್ರಸಾದ್​ ಆಚಾರ್ಯ, ಜಾರ್ಖಂಡ್​ ರಾಜ್ಯಪಾಲರಾಗಿ ಸಿ ಪಿ ರಾಧಾಕೃಷ್ಣನ್​, ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ಶಿವ ಪ್ರತಾಪ್​ ಶುಕ್ಲ,​ ಅಸ್ಸಾಂ ರಾಜ್ಯಪಾಲರಾಗಿ ಗುಲಾಬ್​ ಚಂದ್​ ಕಠಾರಿಯಾ, ಆಂಧ್ರ ಪ್ರದೇಶದ ರಾಜ್ಯಪಾಲರಾಗಿ ಎಸ್​. ಅಬ್ದುಲ್​ ನಜೀರ್​, ಛತ್ತೀಸ್​ಗಢದ ರಾಜ್ಯಪಾಲರಾಗಿ ಬಿಸ್ವಾ ಭೂಸಣ್​ ಹರಿಚಂದನ್​ ಮತ್ತು ಮಣಿಪುರ್​ ರಾಜ್ಯಪಾಲರಾಗಿ ಅನುಸೂಯ್ಯಾ ಉಯಿಕ್ಯೆ ನೇಮಕವಾಗಿದ್ದಾರೆ.

    ಕೇಂದ್ರಾಡಳಿತ ಪ್ರದೇಶ ಲಡಾಖ್​ನ ನೂತನ ಲೆಫ್ಟಿನೆಂಟ್​ ಗವರ್ನರ್​ ಆಗಿ ಬ್ರಿಗೇಡಿಯರ್​ ಬಿ ಡಿ ಮಿಶ್ರಾ (ನಿವೃತ್ತ) ಅವರು ಅಧಿಕಾರ ವಹಿಸಿಕೊಂಡಿದ್ದಾರೆ. (ಏಜೆನ್ಸೀಸ್​)

    ರಾಯಚೂರು: ಪತ್ನಿಯ ಶೀಲ ಶಂಕಿಸಿ, ತನಗೆ ಹುಟ್ಟಿಲ್ಲ ಅಂತಾ ಮಕ್ಕಳಿಬ್ಬರನ್ನು ಕತ್ತು ಹಿಸುಕಿ ಕೊಂದ ಪಾಪಿ ತಂದೆ

    ರಾಜಧಾನಿಯಲ್ಲಿ ಹೆಚ್ಚಿದ ನಕಲಿ ನಂಬರ್ ಪ್ಲೇಟ್ ಹಾವಳಿ: ದಂಡದಿಂದ ಪಾರಾಗಲು ಕಿಡಿಗೇಡಿಗಳ ಪ್ಲಾನ್, ಅಪರಾಧಕ್ಕೂ ಬಳಕೆ

    ಶೇ.50 ರಿಯಾಯಿತಿ ಆಫರ್​: 9 ದಿನದಲ್ಲಿ 120 ಕೋಟಿ ರೂ. ದಂಡ ಸಂಗ್ರಹ, ನ್ಯಾ. ಬಿ. ವೀರಪ್ಪ ಸಲಹೆ ಫಲಪ್ರದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts