More

    ಶೇ.50 ರಿಯಾಯಿತಿ ಆಫರ್​: 9 ದಿನದಲ್ಲಿ 120 ಕೋಟಿ ರೂ. ದಂಡ ಸಂಗ್ರಹ, ನ್ಯಾ. ಬಿ. ವೀರಪ್ಪ ಸಲಹೆ ಫಲಪ್ರದ

    ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇ.50ರ ರಿಯಾಯಿತಿ ದರದಲ್ಲಿ ದಂಡ ಪಾವತಿಗೆ ಅವಕಾಶ ಕಲ್ಪಿಸಿದ್ದೇ ತಡ, ಹಲವು ವರ್ಷಗಳಿಂದ ದಂಡ ಬಾಕಿ ಉಳಿಸಿಕೊಂಡಿದ್ದವರೂ ತಾವಾಗಿಯೇ ಪೊಲೀಸರ ಬಳಿ ತೆರಳಿ ದಂಡ ಪಾವತಿಸಿದ್ದಾರೆ. ರಿಯಾಯಿತಿ ಕೊಟ್ಟ 9 ದಿನದಲ್ಲಿ 120 ಕೋಟಿ ರೂ.ಗೂ ಅಧಿಕ ದಂಡ ಸಂಗ್ರಹವಾಗಿದೆ. ಕೊನೆಯ ದಿನವಾದ ಶನಿವಾರ ಒಂದೇ ದಿನ 31.26 ಕೋಟಿ ರೂ. ದಂಡ ವಸೂಲಿಯಾಗಿದೆ.

    ದಂಡ ಪಾವತಿಗೆ ಶೇ.50 ರಿಯಾಯಿತಿ ಕೊಡುವ ಯೋಜನೆಯ ಹಿಂದೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್​ಎಲ್​ಎಸ್​ಎ) ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಅವರ ಪಾತ್ರ ಪ್ರಮುಖ ವಾಗಿದೆ. ಫೆ.3ರಿಂದ ಶೇ.50 ರಿಯಾಯಿತಿ ಪಾವತಿಗೆ ಅವಕಾಶ ಕಲ್ಪಿಸಲಾಗಿತ್ತು. ಶನಿವಾರ (ಫೆ.11) ರಾತ್ರಿ -ಠಿ;9 ಗಂಟೆವರೆಗೆ ನೇರವಾಗಿ ಸಂಚಾರ ಪೊಲೀಸರ ಬಳಿ 52.85 ಕೋಟಿ ಪೇಟಿಎಂನಲ್ಲಿ 51.47 ಕೋಟಿ ರೂ, ಸಂಚಾರ ನಿರ್ವಹಣಾ ಕೇಂದ್ರಗಳ (ಟಿಎಂಸಿ) ಕೌಂಟರ್​ನಲ್ಲಿ 19.14 ಲಕ್ಷ ರೂ. ಹಾಗೂ ಬೆಂಗಳೂರು ಒನ್ ಕೇಂದ್ರಗಳಲ್ಲಿ -ಠಿ;16.23 ಕೋಟಿ ಸೇರಿ ಒಟ್ಟು 120,02,28,098 ರೂ. ದಂಡ ಸಂಗ್ರಹವಾಗಿದೆ. ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಒಟ್ಟು 41,20,626 ಪ್ರಕರಣಗಳಿಂದ ಈ ದಂಡದ ಮೊತ್ತ ಸಂಗ್ರಹಿಸಲಾಗಿದೆ. ಶನಿವಾರ ಕೊನೇ ದಿನವಾಗಿದ್ದರಿಂದ, ನಗರದ ಬಹುತೇಕ ಸಂಚಾರ ಪೊಲೀಸ್ ಠಾಣೆಗಳಿಗೆ ಸಾರ್ವಜನಿಕರು ಮುಗಿಬಿದ್ದಿದ್ದ ದೃಶ್ಯ ಸಾಮಾನ್ಯವಾಗಿತ್ತು.

    ಲೋಕ ಅದಾಲತ್​ನಲ್ಲಿ ಮೊದಲ ಪ್ರಯತ್ನ
    ಕೆಎಸ್​ಎಲ್​ಎಸ್​ಎ ವತಿಯಿಂದ 2022ರ ಜೂ.25ರಂದು ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಲೋಕ ಅದಾಲತ್​ನಲ್ಲಿ ಮೊದಲ ಬಾರಿಗೆ ಟ್ರಾಫಿಕ್ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣಗಳನ್ನೂ ರಾಜೀ ಸಂಧಾನಕ್ಕೆ ನಿಗದಿಪಡಿಸಲಾಗಿತ್ತು. ಅದಾಲತ್​ನಲ್ಲಿ 2,23,590 ಪ್ರಕರಣಗಳನ್ನು ವ್ಯಾಜ್ಯಪೂರ್ವ ಪ್ರಕರಣಗಳಾಗಿ ವಿಲೇವಾರಿ ಮಾಡಿ, 22,36,77,373 ರೂ. ದಂಡ ಸಂಗ್ರಹಿಸಲಾಗಿತ್ತು. ರಾಜೀ ಮೂಲಕ ಪ್ರಕರಣಗಳನ್ನು ಬಗೆಹರಿಸಿಕೊಳ್ಳಲು ಸಾರ್ವಜನಿಕರು ಹೆಚ್ಚು ಉತ್ಸಾಹ ತೋರಿದ್ದರು. ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಕೋಟ್ಯಂತರ ಪ್ರಕರಣಗಳು ಬಾಕಿ ಇರುವ ಹಾಗೂ ಸರ್ಕಾರಕ್ಕೆ ನೂರಾರು ಕೋಟಿ ರೂ. ದಂಡದ ಮೊತ್ತ ಬರಬೇಕಿರುವ ವಿಚಾರ ಮನಗಂಡ ನ್ಯಾಯಮೂರ್ತಿ ಬಿ. ವೀರಪ್ಪ, ರಿಯಾಯಿತಿ ದರದಲ್ಲಿ ಟ್ರಾಫಿಕ್ ದಂಡ ಪಾವತಿಗೆ ಅವಕಾಶ ಕಲ್ಪಿಸುವ ಬಗ್ಗೆ ಚಿಂತಿಸಿದ್ದರು. ಇದರಿಂದ, ಪ್ರಕರಣಗಳು ಶೀಘ್ರ ಇತ್ಯರ್ಥವಾಗುದಷ್ಟೇ ಅಲ್ಲದೆ, ಸಾರ್ವಜನಿಕರಿಗೂ ಹೊರೆ ಕಡಿಮೆಯಾಗುವ ಜತೆಗೆ ಸರ್ಕಾರದ ಬೊಕ್ಕಸಕ್ಕೂ ಕೋಟ್ಯಂತರ ರೂ. ಹರಿದು ಬರಲಿದೆ ಎಂದೆಣಿಸಿದ್ದರು.

    ಸಾರಿಗೆ ಇಲಾಖೆ ಜತೆ ನ್ಯಾಯಮೂರ್ತಿ ಚರ್ಚೆ
    ನ್ಯಾಯಮೂರ್ತಿ ಬಿ. ವೀರಪ್ಪ ಅಧ್ಯಕ್ಷತೆಯಲ್ಲಿ ಜ.27ರಂದು ನಡೆದ ಸಭೆಯಲ್ಲಿ ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಎಲ್ಲರಿಗೂ ನ್ಯಾಯ ಒದಗಿಸುವ ಸಲುವಾಗಿ ಬಾಕಿ ಇರುವ ಟ್ರಾಫಿಕ್ ಫೈನ್ ಪಾವತಿಗೆ ವಿನಾಯಿತಿ ನೀಡುವಂತೆ ಸಲಹೆ ನೀಡಿದ್ದರು. ಇದಕ್ಕೆ ರಾಜ್ಯ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರೂ ಸಮ್ಮತಿಸಿದ್ದರು. ಇದರಿಂದ, ರಾಜ್ಯದಾದ್ಯಂತ ಸಂಚಾರ ಪೊಲೀಸರು ದಾಖಲಿಸಿರುವ ಸಂಚಾರ ಉಲ್ಲಂಘನೆ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50 ವಿನಾಯಿತಿ ನೀಡುವಂತೆ ಕೆಎಸ್​ಎಲ್​ಎಸ್​ಎ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಕಾನೂನು ಇಲಾಖೆಯ ಒಪ್ಪಿಗೆ ಪಡೆದ ಸಾರಿಗೆ ಇಲಾಖೆ, ಫೆ.3ರಿಂದ ಫೆ.11ರವರೆಗೆ ಶೇ.50 ರಿಯಾಯಿತಿ ದರದಲ್ಲಿ ದಂಡ ಪಾವತಿಸಲು ಅವಕಾಶ ಕಲ್ಪಿಸಿತ್ತು. ಸಂಚಾರ ಉಲ್ಲಂಘನೆಗೆ ಸಂಬಂಧಿಸಿದಂತೆ ಎಷ್ಟೇ ದಂಡ ಬಾಕಿ ಇದ್ದರೂ ನಿಗದಿತ ದಿನಾಂಕದಂದು ದಂಡ ಪಾವತಿಸಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳುವವರಿಗೆ ಶೇ.50 ರಿಯಾಯಿತಿ ನೀಡಲಾಗುವುದು. ನಂತರ ಬಂದವರಿಗೆ ವಿನಾಯಿತಿ ಸಿಗುವುದಿಲ್ಲ ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿತ್ತು. ಇದೀಗ ನ್ಯಾಯಮೂರ್ತಿ ವೀರಪ್ಪ ಸಲಹೆಯಂತೆ ನಡೆಸಿದ ಪ್ರಯತ್ನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆಯೂ ದೊರೆತಿದೆ.

    ಕಣ್ಣಿಗೊಂದು ಸವಾಲ್​: ಸಾಧ್ಯವಾದ್ರೆ ಕೇವಲ 10 ಸೆಕೆಂಡ್​ನಲ್ಲಿ ಈ ಫೋಟೋದಲ್ಲಿರೋ ಬೆಕ್ಕು ಪತ್ತೆ ಹಚ್ಚಿ

    ಪತ್ನಿಗೆ ವಾಟ್ಸ್​ಆ್ಯಪ್​ ಮೆಸೇಜ್​ ಕಳುಹಿಸಿ ಬೆಂಗ್ಳೂರಲ್ಲಿ ರೈಲಿಗೆ ತಲೆಕೊಟ್ಟು ಸಾವಿಗೆ ಶರಣಾದ ಇನ್​ಸ್ಪೆಕ್ಟರ್

    ಆನ್​ಲೈನ್​ನಲ್ಲಿ ಆರ್ಡರ್​ ಮಾಡಿದ್ದ ಬ್ರೆಡ್​ ಪ್ಯಾಕೆಟ್​ನಲ್ಲಿ ಜೀವಂತ ಇಲಿ ಕಂಡು ಗ್ರಾಹಕ ಶಾಕ್​! ಕಂಪನಿ ಸ್ಪಷ್ಟನೆ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts