More

    ರಾಜಧಾನಿಯಲ್ಲಿ ಹೆಚ್ಚಿದ ನಕಲಿ ನಂಬರ್ ಪ್ಲೇಟ್ ಹಾವಳಿ: ದಂಡದಿಂದ ಪಾರಾಗಲು ಕಿಡಿಗೇಡಿಗಳ ಪ್ಲಾನ್, ಅಪರಾಧಕ್ಕೂ ಬಳಕೆ

    | ಮಂಜುನಾಥ ಕೆ. ಬೆಂಗಳೂರು

    ರಾಜಧಾನಿಯಲ್ಲಿ ಸಂಚಾರ ನಿಯಮ ಉಲ್ಲಂಘನೆಯ ದಂಡ ಅಧಿಕವಾಗಿದ್ದು, ಇದರಿಂದ ಪಾರಾಗಲು ಕೆಲ ಕಿಡಿಗೇಡಿಗಳು ತಮ್ಮ ವಾಹನಗಳಿಗೆ ನಕಲಿ ನಂಬರ್ ಪ್ಲೇಟ್ ಮತ್ತು ದೋಷಪೂರಿತ ನಂಬರ್ ಪ್ಲೇಟ್​ಗಳನ್ನು ಬಳಸಿ ನಗರದಲ್ಲಿ ಸಂಚಾರ ನಿಯಮಗಳನ್ನು ಎಗ್ಗಿಲ್ಲದೆ ಉಲ್ಲಂಘನೆ ಮಾಡುತ್ತಿದ್ದಾರೆ. ಇದು ನಿಜವಾದ ವಾಹನ ಮಾಲೀಕರಿಗೆ ತಲೆನೋವಾಗಿ ಪರಿಣಮಿಸಿದೆ.

    ಸಂಚಾರ ನಿಯಮ ಉಲ್ಲಂಘನೆಗೆ ದಂಡ ಪಾವತಿಸಲು ಆಪ್ ಮತ್ತು ಸರ್ಕಾರದ ಅಧಿಕೃತ ವೆಬ್​ಸೈಟ್ ನೋಡಿದ್ದಾಗ ತಮ್ಮ ವಾಹನದ ನಂಬರ್ ಅನ್ನು ಬೇರೊಂದು ವಾಹನ ಸವಾರರು ಹಾಕಿಕೊಂಡು ಹೆಲ್ಮೆಟ್​ರಹಿತ ಸಂಚಾರ, ಸಿಗ್ನಲ್ ಜಂಪ್, ತ್ರಿಬಲ್ ರೈಡ್ ಸೇರಿ ಅನೇಕ ನಿಯಮ ಉಲ್ಲಂಘಿಸಿರುವುದು ಕಂಡುಬಂದಿದೆ. ಇದರಿಂದ ಚಿಂತೆಗೊಳಗಾದ ವಾಹನ ಮಾಲೀಕರು ಟಿಎಂಸಿ ಕೇಂದ್ರಕ್ಕೆ ಭೇಟಿ ಕೊಟ್ಟು ಗಂಟೆಗಟ್ಟಲೆ ಕಾದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ತಮ್ಮ ವಾಹನದ ದಂಡ ತೆಗೆದುಹಾಕಿ ಎಂದು ಮನವಿ ಮಾಡುತ್ತಿದ್ದಾರೆ.

    ಅಪರಾಧ ಕೃತ್ಯಗಳಿಗೂ ಬಳಕೆ: ನಕಲಿ ನಂಬರ್ ಪ್ಲೇಟ್ ಬಳಕೆ ಕೇವಲ ಸಂಚಾರ ನಿಯಮ ಉಲ್ಲಂಘನೆಗೆ ಮಾತ್ರವಲ್ಲದೆ ಸರಗಳ್ಳತನ, ಮನೆಗಳ್ಳತನ ಇನ್ನಿತರ ಅಪರಾಧ ಕೃತ್ಯಗಳಿಗೆ ಬಳಕೆಯಾಗುತ್ತಿದೆ. ಪೊಲೀಸರು ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರ ತನಿಖೆ ಆರಂಭಿಸಿದ್ದಾಗ ಸಿಸಿ ಕ್ಯಾಮರಾ ದೃಶ್ಯ ವಶಕ್ಕೆ ಪಡೆದು ವಾಹನ ಸಂಖ್ಯೆ ಆಧರಿಸಿ ಮಾಲೀಕರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿದ್ದಾಗ ಅಸಲಿ ಕಥೆ ಗೊತ್ತಾಗುತ್ತದೆ.

    ಕಳೆದ ವರ್ಷ 2 ಸಾವಿರ ಕೇಸ್: ಕಳೆದ ವರ್ಷ 2 ಸಾವಿರಕ್ಕೂ ಅಧಿಕ ನಕಲಿ ನಂಬರ್ ಪ್ಲೇಟ್ ಪ್ರಕರಣಗಳ ಬಗ್ಗೆ ಟಿಎಂಸಿಗೆ ದೂರು ಬಂದಿದ್ದು, ಅವುಗಳ ಮೇಲಿದ್ದ ದಂಡವನ್ನು ಪರಿಶೀಲಿಸಿ ತೆಗೆದುಹಾಕಲಾಗಿದೆ. ಅಲ್ಲದೆ ಕಳೆದ ಎರಡು ತಿಂಗಳಿನಲ್ಲಿ 250ರಿಂದ 300 ನಕಲಿ ನಂಬರ್ ಪ್ಲೇಟ್ ಪ್ರಕರಣ ಪತ್ತೆಯಾಗಿವೆ. ಫೆ.11 ರ ನಂತರ ನಕಲಿ ನಂಬರ್ ಪ್ಲೇಟ್ ಪ್ರಕರಣಗಳು ಎಷ್ಟಿವೆ ಎಂದು ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನಕಲಿ ನಂಬರ್ ಪ್ಲೇಟ್ ಬಳಕೆ ಬಗ್ಗೆ ಹಲವು ದೂರುಗಳು ಬರುತ್ತಿದ್ದು, ಟಿಎಂಸಿಗೆ ಆಗಮಿಸಿ ವಾಹನ ಸವಾರರು ದೂರು ದಾಖಲಿಸುತ್ತಿದ್ದಾರೆ. ನಕಲಿ ನಂಬರ್ ಪ್ಲೇಟ್ ಬಳಸುವವರನ್ನು ಪತ್ತೆಹಚ್ಚಿ, ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ. ಸ್ಮಾರ್ಟ್ ಕ್ಯಾಮರಾಗಳಿಂದ ಇಂತಹ ನಕಲಿ ನಂಬರ್ ಇರುವ ವಾಹನಗಳನ್ನು ಪತ್ತೆ ಮಾಡಿಕೊಡುತ್ತದೆ.

    | ಡಾ.ಎಂ.ಎ. ಸಲೀಂ, ಸಂಚಾರ ವಿಭಾಗದ ವಿಶೇಷ ಪೊಲೀಸ್ ಆಯುಕ್ತ

    ನನ್ನದು ಹೀರೋ ಕಂಪನಿಯ ಬಿಳಿ ಬಣ್ಣದ ಸ್ಕೂಟರ್. ಆದರೆ ವ್ಯಕ್ತಿಯೊಬ್ಬರು ತಮ್ಮ ಸುಜುಕಿ ಆಕ್ಸಿಸ್​ನ ನೀಲಿ ಬಣ್ಣದ ಸ್ಕೂಟರ್​ಗೆ ನನ್ನ ವಾಹನದ ನಂಬರ್ ಬಳಸಿಕೊಂಡು ಹೆಲ್ಮೆಟ್ ಹಾಕದೆ ಸಂಚಾರ ಮಾಡಿದ್ದಾರೆ. ಆದರೆ ದಂಡ ಮಾತ್ರ ನನ್ನ ವಾಹನಕ್ಕೆ ಬಿದ್ದಿದೆ. ಕೆಲಸ ಕಾರ್ಯ ಬಿಟ್ಟು ಟಿಎಂಸಿಗೆ ಹೋಗಿ ಗಂಟೆಗಟ್ಟಲೆ ಕಾದು ಈ ಸಂಬಂಧ ಪತ್ರ ಬರೆದು ದಂಡ ತೆಗೆಯುವಂತೆ ಮನವಿ ಮಾಡಿಕೊಂಡು ಬಂದಿದ್ದೇನೆ.

    | ನಾಗೇಶ್ ಗಿರಿನಗರ ನಿವಾಸಿ

    ಶೇ.50 ರಿಯಾಯಿತಿ ಆಫರ್​: 9 ದಿನದಲ್ಲಿ 120 ಕೋಟಿ ರೂ. ದಂಡ ಸಂಗ್ರಹ, ನ್ಯಾ. ಬಿ. ವೀರಪ್ಪ ಸಲಹೆ ಫಲಪ್ರದ

    ಪತ್ನಿಗೆ ವಾಟ್ಸ್​ಆ್ಯಪ್​ ಮೆಸೇಜ್​ ಕಳುಹಿಸಿ ಬೆಂಗ್ಳೂರಲ್ಲಿ ರೈಲಿಗೆ ತಲೆಕೊಟ್ಟು ಸಾವಿಗೆ ಶರಣಾದ ಇನ್​ಸ್ಪೆಕ್ಟರ್

    ಕಣ್ಣಿಗೊಂದು ಸವಾಲ್​: ಸಾಧ್ಯವಾದ್ರೆ ಕೇವಲ 10 ಸೆಕೆಂಡ್​ನಲ್ಲಿ ಈ ಫೋಟೋದಲ್ಲಿರೋ ಬೆಕ್ಕು ಪತ್ತೆ ಹಚ್ಚಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts