More

    ಬದುಕಿಗೆ ನೆರವಾದ ಕುರಿ ಉಣ್ಣೆ ಕತ್ತರಿಸುವ ವೃತ್ತಿ

    ಕೊಟ್ಟೂರು: ಕುರಿಗಳ ಉಣ್ಣೆಯಿಂದ ತಯಾರಿಸಿದ ಕಂಬಳಿ ಶುಭಕಾರ್ಯಕ್ಕೆ ಮತ್ತು ಚಳಿಗಾಲದಲ್ಲಿ ಬೆಚ್ಚನೆಯ ಹೊದಿಕೆಯಾಗಿ ಉಪಯುಕ್ತ. ಆದರೆ, ಉಣ್ಣೆ ಕತ್ತರಿಸುವುದನ್ನೇ ವೃತ್ತಿಯಾಗಿಸಿಕೊಂಡಿರುವ ಕಾರ್ಮಿಕರದು ಅಲೆಮಾರಿ ಜೀವನವಾಗಿದೆ.

    ದಸರಾದಿಂದ ಕುರಿ ಉಣ್ಣೆ ಕತ್ತರಿಸಲು ಆರಂಭಿಸಿದರೆ ಶಿವರಾತ್ರಿಗೆ ಮುಕ್ತಾಯಗೊಳ್ಳುತ್ತದೆ. ನಂತರ ಕಾರ ಹುಣ್ಣಿಮೆಯಿಂದ ಆರಂಭವಾಗಿ ಮೂರು ತಿಂಗಳು ಕುರಿ ಉಣ್ಣೆ ಕತ್ತರಿಸಲಾಗುತ್ತದೆ. 5 ರಿಂದ 10 ಜನರ ತಂಡ ಮೂರು ತಿಂಗಳ ಕಾಲ ಊರಿಂದ ಊರಿಗೆ ಹೋಗಿ ಕುರಿ ಉಣ್ಣೆ ಕತ್ತರಿಸುತ್ತಾರೆ.

    ಇದನ್ನೂ ಓದಿ: ಅನುಗ್ರಹ ಯೋಜನೆ ಮುಂದುವರಿಸಿ; ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ ಆಗ್ರಹ

    ಕುರಿ ಮಾಲೀಕರು ಇವರಿಗೆ ಊಟ, ತಿಂಡಿ ನೀಡಿ, ಒಂದು ಕುರಿ ಉಣ್ಣೆ ಕತ್ತರಿಸಲು 25 ರೂ. ಕೊಡುತ್ತಾರೆ. ಒಬ್ಬ ವ್ಯಕ್ತಿ ದಿನಕ್ಕೆ ಕನಿಷ್ಠ 50 ಕುರಿಗಳ ಉಣ್ಣೆ ಕತ್ತರಿಸುತ್ತಾರೆ.

    ಕೂಡ್ಲಿಗಿ ತಾಲೂಕಿನ ಕೆಂಚಮ್ಮನಹಳ್ಳಿಯಲ್ಲಿ 100 ಜನ, ಕಾನಮಡುಗುನಲ್ಲಿ 50 ಜನ, ಲೋಕಿಕೆರೆ, ಮಾಡನಾಯ್ಕನಹಳ್ಳಿಯಲ್ಲಿ ಕುರಿ ಉಣ್ಣೆ ಕತ್ತರಿಸುವ ತಂಡಗಳಿವೆ. ಕಡೂರು, ಬೀರೂರು, ಚಿಕ್ಕಮಗಳೂರು, ಶಿರಾ, ಮೈಸೂರು, ಹೊಸಪೇಟೆ, ಶಿವಮೊಗ್ಗ, ಬಳ್ಳಾರಿ, ನೆಲಮಂಗಲಗಳಿಗೆ ತೆರಳಿ ಉಣ್ಣಿ ಕತ್ತರಿಸುತ್ತಾರೆ.

    ಒಂದು ಅಡಿ ಉದ್ದದ ಉಣ್ಣಿ ಕತ್ತರಿಸುವ ಕಬ್ಬಿಣದ ಕತ್ತರಿಗಳು ಹಳ್ಳಿಗಳಲ್ಲಿ ಕಮ್ಮಾರರು ಸಿದ್ಧಪಡಿಸುತ್ತಿದ್ದರು. ಈಗ ಕತ್ತರಿಗಳಿಗೆ ಪರ್ಯಾಯವಾಗಿ ವಿದ್ಯುತ್ ಚಾಲಿತ ಉಣ್ಣೆ ಕತ್ತರಿಸುವ ಯಂತ್ರಗಳು ಬಂದಿದ್ದು, ಎಚ್ಚರಿಕೆ ವಹಿಸಬೇಕು. ಹಳ್ಳಿಗಳಲ್ಲಿ ನುರಿತ ಕಮ್ಮಾರರು ಕತ್ತರಿಗಳನ್ನು ತಯಾರಿಸುತ್ತಿದ್ದರು.

    ಈಗ ಅವರ ಸಂಖ್ಯೆಯೂ ವಿರಳವಾಗಿದೆ. ಈ ಒಂದು ಕತ್ತರಿಯ ಬೆಲೆ 500 ರೂ., ಆರು ತಿಂಗಳು ಮಾತ್ರ ಬಳಕೆಗೆ ಬರುತ್ತದೆ. ಇವುಗಳನ್ನು ಖರೀದಿಸಲು, ಶಾರ್ಪ್ ಮಾಡಲು ಚಳ್ಳಕೆರೆ ತಾಲೂಕು ಮಲ್ಲಸಮುದ್ರ ಗ್ರಾಮಕ್ಕೆ ಹೋಗಬೇಕು ಎನ್ನುತ್ತಾರೆ ಕಾನಮಡುಗು ಗ್ರಾಮದ ದಿನೇಶ ಮತ್ತು ಚನ್ನಪ್ಪ.

    ತಾಯಕನಹಳ್ಳಿಯಲ್ಲಿ ಕಂಬಳಿ ತಯಾರಿಕೆ

    ಕೂಡ್ಲಿಗಿ ತಾಲೂಕಿನ ತಾಯಕನಹಳ್ಳಿಯಲ್ಲಿ ಕಂಬಳಿ ತಯಾರಿಸಲಾಗುತ್ತಿದೆ. ಒಂದು ಕೆಜಿ ಕಪ್ಪು ಉಣ್ಣೆಗೆ 30 ರೂ. ಬಿಳಿ ಉಣ್ಣೆಗೆ 10 ರಿಂದ 14 ರೂ. ದರ ನಿಗದಿಪಡಿಸಲಾಗಿದೆ. ಹೀಗೆ ಕತ್ತರಿಸಿದ ಉಣ್ಣೆ ಚಳ್ಳಕೆರೆ ಉಣ್ಣೆ ಮತ್ತು ಕಂಬಳಿ ಮಾರುಕಟ್ಟೆಗೆ ಹೋಗುತ್ತದೆ. ಇಲ್ಲಿಂದ ಕಂಬಳಿ ತಯಾರಿಸುವ ಕಂಪನಿ, ಕಾರ್ಖಾನೆಗಳು ಉಣ್ಣೆ ಖರೀದಿಸಿ ಮಿಲ್‌ಗೆ ಸಾಗಿಸುತ್ತಾರೆ.

    ಒಂದು ವರ್ಷದಲ್ಲಿ ಎರಡು ಸೀಜನ್‌ಗಳು ಉಣ್ಣೆ ಕತ್ತರಿಸುವ ವೃತ್ತಿ ಬಡ ಕುಟುಂಬಗಳಿಗೆ ಜೀವನ ಭದ್ರತೆ ಒದಗಿಸಿದೆ. ಮೊದಲೆಲ್ಲ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಕುರಿಗಳು ಹೆಚ್ಚಾಗಿದ್ದರಿಂದ ಕಂಬಳಿ ನೇಯುವ ಮಗ್ಗಗಳು ಹೆಚ್ಚಾಗಿದ್ದವು. ಆದರೆ, ಯುವ ಪೀಳಿಗೆ ಕಂಬಳಿ ನೇಯಲು ಮುಂದಾಗದ ಕಾರಣ ಮಗ್ಗಗಳು ನೇಪಥ್ಯಕ್ಕೆ ಸರಿದಿವೆ.

    ಕುರಿ ಸಾಕಣೆದಾರರಿಗೆ ಉಣ್ಣೆ ಕತ್ತರಿಸುವ ನೈಪುಣ್ಯತೆ ಇರುವುದಿಲ್ಲ. ಆದ್ದರಿಂದ ಕುರಿ ಉಣ್ಣೆ ಕತ್ತರಿಸಲು ಇವರನ್ನು ಕರೆಸಿ ಊಟ, ತಿಂಡಿ ಕೊಟ್ಟು, ಒಂದು ಕುರಿಗೆ 25 ರೂ. ಕೊಡುತ್ತೇವೆ. ಈ ಉಣ್ಣೆಯನ್ನು ಚಳ್ಳಕೆರೆ ಮಾರುಕಟ್ಟೆಗೆ ಸಾಗಿಸುತ್ತೇವೆ. ಆದರೆ ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ ಸಿಗುತ್ತಿಲ್ಲ ಎಂಬುದೇ ಚಿಂತೆ. ಸರ್ಕಾರ ನೇರವಾಗಿ ಈ ಉಣ್ಣೆಯನ್ನು ಖರೀದಿಸಿದರೆ ನಮಗೆ ಅನುಕೂಲವಾಗುತ್ತದೆ.
    | ಎನ್.ಮೂಗಪ್ಪ, ಕುರಿ ಸಾಕಣೆದಾರ, ಹೊಸಕೋಡಿಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts