More

    ‘ಏರೋ ಇಂಡಿಯಾ’ದಲ್ಲಿ ಯಾವೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ?

    ಬೆಂಗಳೂರು: ಈ ಬಾರಿಯ ಏರೋ ಇಂಡಿಯಾ ಜನರಲ್ಲಿ ಭಾರೀ ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದು ಕುತೂಹಲ ಭರಿತರಾಗಿ ನೋಡುತ್ತಿದ್ದಾರೆ. ಏರ್​ ಶೋ ಈ ಬಾರಿ ವಾಣಿಜ್ಯ ದೃಷ್ಟಿಯಿಂದಲೂ ಪ್ರಾಮುಖ್ಯತೆ ಪಡೆದಿದ್ದು ಅನೇಕ ಕಾರ್ಯಕ್ರಮಗಳನ್ನು ಈ ಸಂದರ್ಭ ಆಯೋಜಿಸಲಾಗಿದೆ. ಈ ಬಾರಿಯ ಏರ್​ ಶೋನಲ್ಲಿ ಅನೇಕ ದೇಶಗಳ ರಕ್ಷಣಾ ಮಂತ್ರಿಗಳು, ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯಮಿಗಳು, ಹೀಗೆ ಅನೇಕ ಗಣ್ಯರು ಆಗಮಿಸಲಿದ್ದಾರೆ.

    ಈ ಬಾರಿ ಆಯೋಜಿಸಲಾಗಿರುವ ಪ್ರಮುಖ ಕಾರ್ಯಕ್ರಮಗಳ ವಿವರ ಹೀಗಿದೆ:
    1. ರಕ್ಷಣಾ ಸಚಿವರ ಸಮಾವೇಶ:
    ಫೆಬ್ರವರಿ 14ರಂದು ಬೇರೆ ಬೇರೆ ದೇಶಗಳ ರಕ್ಷಣಾ ಸಚಿವರ ಜೊತೆಗಿನ ಸಮಾವೇಶವನ್ನು ಆಯೋಜಿಸಲಾಗಿದೆ. ‘ರಕ್ಷಣೆಯಲ್ಲಿ ವರ್ಧಿತ ಕಾರ್ಯಕ್ರಮಗಳ ಮೂಲಕ ಹಂಚಿಕೆಯ ಸಮೃದ್ಧಿ (ಎಸ್.ಪಿ.ಇ.ಇ.ಡಿ -ಸ್ಪೀಡ್) ಎಂಬ ವಿಷಯದ ಮೇಲೆ ಆಯೋಜಿಸಲಾಗಿರುವ ಸಭೆಯಲ್ಲಿ ಸ್ನೇಹಪರ ರಾಷ್ಟ್ರಗಳ ರಕ್ಷಣಾ ಸಚಿವರು ಭಾಗವಹಿಸಲಿದ್ದಾರೆ. ಈ ಸಮಾವೇಶ ಸಾಮರ್ಥ್ಯ ವರ್ಧನೆ (ಹೂಡಿಕೆಗಳು, ಸಂಶೋಧನೆ ಮತ್ತು ಅಭಿವೃದ್ಧಿ, ಜಂಟಿ ಸಹಯೋಗ, ಸಹ-ಅಭಿವೃದ್ಧಿ, ಸಹ-ಉತ್ಪಾದನೆ ಮತ್ತು ರಕ್ಷಣಾ ಸಲಕರಣೆಗಳ ಒದಗಿಸುವಿಕೆ), ತರಬೇತಿ, ಬಾಹ್ಯಾಕಾಶ, ಕೃತಕ ಬುದ್ಧಿಮತ್ತೆ (ಎಐ) ಮತ್ತು ಕಡಲ ಭದ್ರತೆಗೆ ಸಂಬಂಧಿಸಿದ ಅಂಶಗಳನ್ನು ಚರ್ಚಿಸಲಿದೆ. ‘ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದಿ ವರ್ಲ್ಡ್’ ದೃಷ್ಟಿಕೋನವನ್ನು ಮುಂದುವರಿಸಲು ರಕ್ಷಣಾ ಸಚಿವರಿಗಾಗಿ ಈ ಸಮಾವೇಶ ಒಂದು ಅವಕಾಶವಾಗಿದೆ.

    ರಕ್ಷಣಾ ಸಚಿವರ ಸಮಾವೇಶ ಒಂದು ಅತ್ಯಂತ ಮಹತ್ವದ ಕಾರ್ಯಕ್ರಮವಾಗಿದ್ದು, ಅದು ಮಿತ್ರ ರಾಷ್ಟ್ರಗಳೊಂದಿಗಿನ ರಕ್ಷಣಾ ಸಹಕಾರ ಹೆಚ್ಚಳಕ್ಕೆ ವೇಗ ಒದಗಿಸುವ ಮೂಲಕ ಧ್ಯೇಯವಾಕ್ಯವನ್ನು ಸಮರ್ಥಿಸುತ್ತದೆ ಎಂದು ರಾಜನಾಥಸಿಂಗ್ ಬಣ್ಣಿಸಿದರು.

    2. ದ್ವಿಪಕ್ಷೀಯ ಸಭೆಗಳು:
    ಏರೋ ಇಂಡಿಯಾ 2023 ರ ಹೊರತಾಗಿ, ರಕ್ಷಣಾ ಸಚಿವರು, ರಕ್ಷಣಾ ರಾಜ್ಯ ಸಚಿವರು, ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು ಮತ್ತು ರಕ್ಷಣಾ ಕಾರ್ಯದರ್ಶಿ ಮಟ್ಟದಲ್ಲಿ ಹಲವಾರು ದ್ವಿಪಕ್ಷೀಯ ಸಭೆಗಳು ನಡೆಯಲಿವೆ. ಪಾಲುದಾರಿಕೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಹೊಸ ಮಾರ್ಗಗಳನ್ನು ಅನ್ವೇಷಿಸುವ ಮೂಲಕ ಸ್ನೇಹಪರ ರಾಷ್ಟ್ರಗಳೊಂದಿಗೆ ರಕ್ಷಣಾ ಮತ್ತು ವೈಮಾನಿಕ ಕ್ಷೇತ್ರದ ಸಂಬಂಧಗಳ ವರ್ಧನೆಗೆ ಗಮನ ಹರಿಸಲಾಗುವುದು.

    3. ಸಿಇಓಗಳ ರೌಂಡ್​ ಟೇಬಲ್​ ಕಾನ್ಫರೆನ್ಸ್​:
    ಇಂದು (ಫೆ.13) ರಕ್ಷಣಾ ಸಚಿವರ ಅಧ್ಯಕ್ಷತೆಯಲ್ಲಿ ‘ಸಿಇಓಗಳ ದುಂಡು ಮೇಜಿನ ಸಭೆ’ ನಡೆಯಲಿದ್ದು ಅದರ ಹೆಸರು ‘ಲಿಮಿಟ್​ಲೆಸ್​ ಸ್ಕೈ: ಗಡಿಗಳನ್ನು ಮೀರಿದ ಅವಕಾಶಗಳು’ ಎಂಬ ವಿಷಯದ ಮೇಲೆ ನಡೆಯಲಿದೆ. ಇದು ‘ಮೇಕ್ ಇನ್ ಇಂಡಿಯಾ’ ಅಭಿಯಾನವನ್ನು ಉತ್ತೇಜಿಸುವ ದೃಷ್ಟಿಯಿಂದ ಕೈಗಾರಿಕಾ ಪಾಲುದಾರರು ಮತ್ತು ಸರ್ಕಾರದ ನಡುವೆ ಹೆಚ್ಚು ದೃಢವಾದ ಸಂಬಂಧಕ್ಕೆ ಅಡಿಪಾಯ ಹಾಕುವ ನಿರೀಕ್ಷೆಯಿದೆ. ಇದು ಭಾರತದಲ್ಲಿ ಸುಗಮ ವ್ಯಾಪಾರವನ್ನು ಹೆಚ್ಚಿಸಲಿದ್ದು ಭಾರತದಲ್ಲಿ ಉತ್ಪಾದನೆಗೆ ಬೇಕಾಗುವ ಮೂಲ ಸಲಕರಣೆ ತಯಾರಕರಿಗೆ (ಒಇಎಂ) ಅನುಕೂಲಕರ ವೇದಿಕೆಯನ್ನು ಒದಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

    ದುಂಡುಮೇಜಿನ ಸಭೆಯಲ್ಲಿ ಬೋಯಿಂಗ್, ಲಾಕ್ಹೀಡ್, ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್, ಜನರಲ್ ಅಟಾಮಿಕ್ಸ್, ಲೀಬೆರ್ ಗ್ರೂಪ್, ರೇಥಿಯಾನ್ ಟೆಕ್ನಾಲಜೀಸ್, ಸಫ್ರಾನ್, ಜನರಲ್ ಅಥಾರಿಟಿ ಆಫ್ ಮಿಲಿಟರಿ ಇಂಡಸ್ಟ್ರೀಸ್ (ಗಾಮಿ) ಸೇರಿದಂತೆ ಜಾಗತಿಕ ಹೂಡಿಕೆದಾರರು, 26 ದೇಶಗಳ ಅಧಿಕಾರಿಗಳು, ಪ್ರತಿನಿಧಿಗಳು ಮತ್ತು ಜಾಗತಿಕ ಸಿಇಒಗಳು ಭಾಗವಹಿಸಲಿದ್ದಾರೆ. ದೇಶೀಯ ಪಿಎಸ್.ಯುಗಳಾದ ಎಚ್.ಎಎಲ್, ಬಿಇಎಲ್, ಬಿಡಿಎಲ್, ಬಿಇಎಂಎಲ್ ಲಿಮಿಟೆಡ್ ಮತ್ತು ಮಿಶ್ರಾ ಧಾತು ನಿಗಮ್ ಲಿಮಿಟೆಡ್ ಸಹ ಭಾಗವಹಿಸಲಿವೆ. ಭಾರತದ ಪ್ರಮುಖ ಖಾಸಗಿ ರಕ್ಷಣಾ ಮತ್ತು ವೈಮಾನಿಕ ಕ್ಷೇತ್ರದ ಉತ್ಪಾದನಾ ಕಂಪನಿಗಳಾದ ಲಾರ್ಸನ್ ಮತ್ತು ಟೂಬ್ರೊ, ಭಾರತ್ ಫೋರ್ಜ್, ಡೈನಾಮ್ಯಾಟಿಕ್ ಟೆಕ್ನಾಲಜೀಸ್, ಬ್ರಹ್ಮೋಸ್ ಏರೋಸ್ಪೇಸ್ ಸಹ ಈ ಕಾರ್ಯಕ್ರಮದ ಭಾಗವಾಗುವ ಸಾಧ್ಯತೆಯಿದೆ.

    ಸಿಇಓಗಳ ದುಂಡು ಮೇಜಿನ ಸಭೆಯು ವಿಶ್ವದ ಉನ್ನತ ವಾಣಿಜ್ಯ ನಾಯಕರ ಉಪಸ್ಥಿತಿಯಲ್ಲಿ ಭಾರತೀಯ ರಕ್ಷಣಾ ಉದ್ಯಮದ ಶಕ್ತಿ ಮತ್ತು ಸಾಮರ್ಥ್ಯಗಳನ್ನು ಅನ್ವೇಷಿಸಲು ಅವಕಾಶವನ್ನು ಒದಗಿಸುತ್ತದೆ ಎಂದು ಶ್ರೀ ರಾಜನಾಥ್ ಸಿಂಗ್ ಹೇಳಿದ್ದಾರೆ.

    4. ಬಂಧನ್ ಸಮಾರಂಭ:
    ತಿಳಿವಳಿಕಾ ಒಡಂಬಡಿಕೆಗಳು/ಒಪ್ಪಂದಗಳು, ತಂತ್ರಜ್ಞಾನಗಳ ವರ್ಗಾವಣೆ, ಉತ್ಪನ್ನ ಬಿಡುಗಡೆ ಮತ್ತು ಇತರ ಪ್ರಮುಖ ಪ್ರಕಟಣೆಗಳಿಗೆ ಸಹಿ ಹಾಕುವ ಬಂಧನ್ ಸಮಾರಂಭವು ಫೆ.15ರಂದು ನಡೆಯಲಿದೆ. ರಕ್ಷಣಾ ಸಚಿವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ವಿವಿಧ ಭಾರತೀಯ/ವಿದೇಶಿ ರಕ್ಷಣಾ ಕಂಪನಿಗಳು ಮತ್ತು ಸಂಸ್ಥೆಗಳ ನಡುವಿನ ಪಾಲುದಾರಿಕೆಗಾಗಿ 75,000 ಕೋಟಿ ರೂ.ಗಳ ನಿರೀಕ್ಷಿತ ಹೂಡಿಕೆಯೊಂದಿಗೆ 251 ಎಂಒಯು ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಯಿದೆ. ಈ ಕಾರ್ಯಕ್ರಮವು ದೇಶ ಮತ್ತು ವಿದೇಶದ ಸಂಸ್ಥೆಗಳೊಂದಿಗೆ ಹೊಸ ಪಾಲುದಾರಿಕೆಯನ್ನು ರೂಪಿಸುತ್ತದೆ ಮತ್ತು ಒಟ್ಟಾಗಿ ಮುಂದೆ ಸಾಗುವ ಮೂಲಕ ಸಾಮೂಹಿಕ ಬೆಳವಣಿಗೆಯನ್ನು ಸಾಧಿಸುವುದನ್ನು ಖಚಿತಪಡಿಸುತ್ತದೆ ಎಂದು ರಕ್ಷಣಾ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

    5. ಮಂಥನ್:
    ವಾರ್ಷಿಕ ರಕ್ಷಣಾ ನಾವೀನ್ಯತೆ ಕಾರ್ಯಕ್ರಮ ಮಂಥನ್ ಫೆಬ್ರವರಿ 15 ರಂದು ನಡೆಯಲಿರುವ ಪ್ರಮುಖ ತಂತ್ರಜ್ಞಾನ ಪ್ರದರ್ಶನ ಕಾರ್ಯಕ್ರಮವಾಗಿದೆ. ರಕ್ಷಣಾ ಉತ್ಕೃಷ್ಟತೆಗಾಗಿ ನಾವೀನ್ಯತೆ (ಐಡೆಕ್ಸ್) ಆಯೋಜಿಸಿರುವ ಮಂಥನ್ ವೇದಿಕೆಯು ಪ್ರಮುಖ ಆವಿಷ್ಕಾರಕರು, ನವೋದ್ಯಮಗಳು, ಎಂಎಸ್ಎಂಇಗಳು, ಇನ್ಕ್ಯುಬೇಟರ್ ಗಳು, ಶಿಕ್ಷಣ ತಜ್ಞರು ಮತ್ತು ರಕ್ಷಣಾ ಮತ್ತು ವೈಮಾನಿಕ ಕ್ಷೇತ್ರ ಪರಿಸರ ವ್ಯವಸ್ಥೆಯ ಹೂಡಿಕೆದಾರರನ್ನು ಒಂದೇ ಸೂರಿನಡಿ ತರಲಿದೆ. ರಕ್ಷಣಾ ಸಚಿವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

    ಸೈಬರ್ ಭದ್ರತೆಯ ಸವಾಲುಗಳ ಪ್ರಾರಂಭ, ಐಡೆಕ್ಸ್ ಇನ್ವೆಸ್ಟರ್ ಹಬ್ ಸ್ಥಾಪನೆ, ಹೂಡಿಕೆದಾರರೊಂದಿಗೆ ತಿಳಿವಳಿಕಾ ಒಡಂಬಡಿಕೆಗಳು ಸೇರಿದಂತೆ ಮಂಥನ್ ಅನೇಕ ಪ್ರಥಮಗಳನ್ನು ಹೊಂದಿರುತ್ತದೆ. ಮಂಥನ್ 2023 ರಕ್ಷಣಾ ಕ್ಷೇತ್ರದಲ್ಲಿ ನಾವೀನ್ಯತೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯನ್ನು ಉತ್ತೇಜಿಸಲು ನವೋದ್ಯಮ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು ಐಡೆಕ್ಸ್ ನ ಭವಿಷ್ಯದ ದೃಷ್ಟಿಕೋನ / ಮುಂದಿನ ಉಪಕ್ರಮಗಳ ಅವಲೋಕನವನ್ನು ಒದಗಿಸುತ್ತದೆ.

    6. ಇಂಡಿಯಾ ಪೆವಿಲಿಯನ್:
    ‘ಫಿಕ್ಸೆಡ್ ವಿಂಗ್ ಪ್ಲಾಟ್ ಫಾರ್ಮ್’ ವಿಷಯ ಆಧರಿಸಿದ ‘ಇಂಡಿಯಾ ಪೆವಿಲಿಯನ್’ ಭವಿಷ್ಯದ ನಿರೀಕ್ಷೆಗಳು ಸೇರಿದಂತೆ ಈ ಪ್ರದೇಶದಲ್ಲಿ ಭಾರತದ ಪ್ರಗತಿಯನ್ನು ಪ್ರದರ್ಶಿಸುತ್ತದೆ. ಒಟ್ಟು 115 ಕಂಪನಿಗಳು 227 ಉತ್ಪನ್ನಗಳನ್ನು ಪ್ರದರ್ಶಿಸಲಿವೆ. ಖಾಸಗಿ ಪಾಲುದಾರರು ಉತ್ಪಾದಿಸುತ್ತಿರುವ ಎಲ್.ಸಿ.ಎ-ತೇಜಸ್ ವಿಮಾನಗಳ ವಿವಿಧ ರಚನಾತ್ಮಕ ಮಾದರಿಗಳು, ಸಿಮ್ಯುಲೇಟರ್ ಗಳು, ವ್ಯವಸ್ಥೆಗಳು (ಎಲ್.ಆರ್.ಯು.ಗಳು) ಇತ್ಯಾದಿಗಳನ್ನು ಪ್ರದರ್ಶಿಸುವುದನ್ನು ಒಳಗೊಂಡಿರುವ ಫಿಕ್ಸೆಡ್ ವಿಂಗ್ ವೇದೆಕೆ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಭಾರತದ ಪ್ರಗತಿಯನ್ನು ಇದು ಮತ್ತಷ್ಟು ಪ್ರದರ್ಶಿಸುತ್ತದೆ. ರಕ್ಷಣಾ ಕ್ಷೇತ್ರ, ನ್ಯೂ ಟೆಕ್ನಾಲಜೀಸ್ ಮತ್ತು ಯುಎವಿ ವಿಭಾಗವೂ ಇರಲಿದ್ದು, ಇದು ಪ್ರತಿ ಕ್ಷೇತ್ರದಲ್ಲೂ ಭಾರತದ ಪ್ರಗತಿಯ ಬಗ್ಗೆ ಒಳನೋಟವನ್ನು ನೀಡುತ್ತದೆ.

    ಪೂರ್ಣ ಕಾರ್ಯಾಚರಣೆ ಸಾಮರ್ಥ್ಯ (ಎಫ್ಒಸಿ) ಸಂರಚನೆಯಲ್ಲಿ ಪೂರ್ಣ ಪ್ರಮಾಣದ ಎಲ್.ಸಿ.ಎ-ತೇಜಸ್ ವಿಮಾನವು ಇಂಡಿಯಾ ಪೆವಿಲಿಯನ್ ನ ಕೇಂದ್ರವಾಗಿರುತ್ತದೆ. ಎಲ್.ಸಿ.ಎ ತೇಜಸ್ ಏಕ ಎಂಜಿನ್, ಕಡಿಮೆ ತೂಕ, ಹೆಚ್ಚು ಚುರುಕಾದ, ಬಹು ಪಾತ್ರದ ಸೂಪರ್ ಸಾನಿಕ್ ಯುದ್ಧವಿಮಾನವಾಗಿದೆ. ಇದು ಕ್ವಾಡ್ರಪ್ಲೆಕ್ಸ್ ಡಿಜಿಟಲ್ ಫ್ಲೈ-ಬೈ-ವೈರ್ ಫ್ಲೈಟ್ ಕಂಟ್ರೋಲ್ ಸಿಸ್ಟಮ್ (ಎಫ್.ಸಿ.ಎಸ್) ಅನ್ನು ಸಂಬಂಧಿತ ಸುಧಾರಿತ ವಿಮಾನ ನಿಯಂತ್ರಣ ಕಾನೂನುಗಳೊಂದಿಗೆ ಹೊಂದಿದೆ. ಡೆಲ್ಟಾ ರೆಕ್ಕೆಯನ್ನು ಹೊಂದಿರುವ ವಿಮಾನವನ್ನು ‘ವಾಯು ಯುದ್ಧ’ ಮತ್ತು ‘ಆಕ್ರಮಣಕಾರಿ ವಾಯು ಬೆಂಬಲ’ಕ್ಕಾಗಿ ವಿನ್ಯಾಸಗೊಳಿಸಲಾಗಿದ್ದು, ‘ಕಣ್ಗಾವಲು’ ಮತ್ತು ‘ಹಡಗು ನಿಗ್ರಹ’ ಅದರ ಎರಡನೇ ಪಾತ್ರಗಳಾಗಿವೆ. ವಾಯು ಚೌಕಟ್ಟಿನಲ್ಲಿ ಸುಧಾರಿತ ಸಂಯುಕ್ತಗಳ ವ್ಯಾಪಕ ಬಳಕೆಯು ತೂಕದ ಅನುಪಾತಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ, ದೀರ್ಘ ಬಳಲಿಕೆಯ ಜೀವಿತಾವಧಿ ಮತ್ತು ಕಡಿಮೆ ರೇಡಾರ್ ಸಿಗ್ನೇಚರ್ ಗಳನ್ನು ನೀಡುತ್ತದೆ.

    7. ವಿಚಾರಗೋಷ್ಠಿಗಳು:
    ಐದು ದಿನಗಳ ಈ ಕಾರ್ಯಕ್ರಮದಲ್ಲಿ ಹಲವಾರು ವಿಚಾರಗೋಷ್ಠಿಗಳು ನಡೆಯಲಿವೆ. ಇದರಲ್ಲಿ ‘ಭಾರತೀಯ ರಕ್ಷಣಾ ಉದ್ಯಮಕ್ಕಾಗಿ ಮಾಜಿ ಸೈನಿಕರ ಸಾಮರ್ಥ್ಯವನ್ನು ಬಳಸಿಕೊಳ್ಳುವುದು; ಭಾರತದ ರಕ್ಷಣಾ ಬಾಹ್ಯಾಕಾಶ ಉಪಕ್ರಮ: ಭಾರತೀಯ ಖಾಸಗಿ ಬಾಹ್ಯಾಕಾಶ ಪರಿಸರ ವ್ಯವಸ್ಥೆಯನ್ನು ರೂಪಿಸುವ ಅವಕಾಶಗಳು; ಏರೋ ಎಂಜಿನ್ ಗಳು ಸೇರಿದಂತೆ ಭವಿಷ್ಯದ ಬಾಹ್ಯಾಕಾಶ ತಂತ್ರಜ್ಞಾನಗಳ ಸ್ಥಳೀಯ ಅಭಿವೃದ್ಧಿ; ಗಮ್ಯಸ್ಥಾನ ಕರ್ನಾಟಕ: ಯುಎಸ್-ಇಂಡಿಯಾ ರಕ್ಷಣಾ ಸಹಕಾರ ನಾವೀನ್ಯತೆ ಮತ್ತು ಮೇಕ್ ಇನ್ ಇಂಡಿಯಾ; ಕಡಲ ಕಣ್ಗಾವಲು ಉಪಕರಣಗಳು ಮತ್ತು ಸ್ವತ್ತುಗಳಲ್ಲಿ ಪ್ರಗತಿ; ಎಂ.ಆರ್.ಓ.ಯಲ್ಲಿ ಪೋಷಣೆ ಮತ್ತು ರಕ್ಷಣಾ ದರ್ಜೆಯ ಡ್ರೋನ್ ಗಳಲ್ಲಿ ಉತ್ಕೃಷ್ಟತೆಯನ್ನು ಸಾಧಿಸುವುದು ಮತ್ತು ವಾಯು ಶಸ್ತ್ರಾಸ್ತ್ರ ಪೋಷಣೆಯಲ್ಲಿ ಆತ್ಮನಿರ್ಭರತೆ ಮೊದಲಾದವು ಸೇರಿವೆ.

    8. ಕರ್ನಾಟಕ ಪೆವಿಲಿಯನ್:
    ಏರೋ ಇಂಡಿಯಾ 2023 ರಲ್ಲಿ ಪ್ರತ್ಯೇಕ ಕರ್ನಾಟಕ ಪೆವಿಲಿಯನ್ ಇರಲಿದ್ದು, ಇದರಲ್ಲಿ ಭಾಗವಹಿಸುವವರಿಗೆ ರಾಜ್ಯದಲ್ಲಿ ಲಭ್ಯವಿರುವ ಅವಕಾಶಗಳ ಬಗ್ಗೆ ಪ್ರದರ್ಶಿಸಲಾಗುವುದು. ದೇಶದ ಆರ್ಥಿಕ ಪ್ರಗತಿಗೆ ಕೊಡುಗೆ ನೀಡುತ್ತಿರುವ ಕರ್ನಾಟಕವನ್ನು ಮುಂಚೂಣಿಯಲ್ಲಿರುವ ರಾಜ್ಯ ಎಂದು ರಕ್ಷಣಾ ಸಚಿವರು ಬಣ್ಣಿಸಿದರು. “ಈ ರಾಜ್ಯವು ನುರಿತ ಮಾನವ ಸಂಪನ್ಮೂಲ ಮತ್ತು ದೃಢವಾದ ರಕ್ಷಣಾ ಉತ್ಪಾದನಾ ಪರಿಸರ ವ್ಯವಸ್ಥೆಗೆ ಹೆಸರುವಾಸಿಯಾಗಿದೆ. ಇದು ದೇಶೀಯ ಮತ್ತು ಬಹುರಾಷ್ಟ್ರೀಯ ರಕ್ಷಣಾ ಮತ್ತು ವಾಯುಯಾನ ಕಂಪನಿಗಳಿಗೆ ಉತ್ಪಾದನೆ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಆದ್ಯತೆಯ ಕೇಂದ್ರವಾಗಿದೆ. ಬಿಇಎಂಎಲ್, ಡಿಆರ್.ಡಿಒ, ಇಸ್ರೋ, ಐಐಎಸ್ಸಿ, ಮಹೀಂದ್ರಾ ಏರೋಸ್ಪೇಸ್, ಏರ್ಬಸ್, ಬೋಯಿಂಗ್ ಮುಂತಾದ ರಕ್ಷಣಾ ಸಂಬಂಧಿತ ಸಾರ್ವಜನಿಕ ಮತ್ತು ಖಾಸಗಿ ಕಂಪನಿಗಳು ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳ ಉಪಸ್ಥಿತಿಯು ಕರ್ನಾಟಕವನ್ನು ಭಾರತದ ಏರೋಸ್ಪೇಸ್ ಉದ್ಯಮದ ಪ್ರಮುಖ ರಾಜ್ಯವನ್ನಾಗಿ ಮಾಡುತ್ತದೆ. ಮುಂದಿನ ದಿನಗಳಲ್ಲಿ ರಾಜ್ಯವು ಇಡೀ ಜಗತ್ತಿಗೆ ರಕ್ಷಣಾ ಮತ್ತು ಏರೋಸ್ಪೇಸ್ ಉತ್ಪಾದನೆಯ ಕೇಂದ್ರವಾಗಲಿದೆ” ಎಂದು ಅವರು ಆಶಿಸಿದರು.

    ಏರೋ ಇಂಡಿಯಾದ ಪ್ರಯೋಜನಗಳನ್ನು ಕರ್ನಾಟಕದ ಯುವಕರಿಗೆ ಒತ್ತಿಹೇಳಿದ ರಕ್ಷಣಾ ಸಚಿವರು, ಅವರ ಪೆವಿಲಿಯನ್ ರಾಜ್ಯದ ಅವಕಾಶಗಳು ಮತ್ತು ಸಾಧ್ಯತೆಗಳನ್ನು ಪ್ರದರ್ಶಿಸುತ್ತದೆ ಮತ್ತು ಹೂಡಿಕೆಗಳು ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತವೆ ಎಂದು ಹೇಳಿದರು. ಯುವಜನರ ಭವಿಷ್ಯದ ಬಗ್ಗೆ ಸರ್ಕಾರ ಗಮನ ಹರಿಸಿದೆ ಎಂದು ಅವರು ಪುನರುಚ್ಚರಿಸಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts