More

    ತೂಗುಗತ್ತಿಯಲ್ಲಿ ಕರಾವಳಿ ಗೋಡಂಬಿ ಉದ್ಯಮ

    ವಿಜಯವಾಣಿ ಸುದ್ದಿಜಾಲ ಮಂಗಳೂರು

    ಸೂಯೆಜ್ ಕಾಲುವೆ ಮತ್ತು ಕೆಂಪು ಸಮುದ್ರದಲ್ಲಿ ಸಂಚರಿಸುವ ಹಡಗುಗಳ ಮೇಲೆ ಹೌತಿ ಬಂಡುಕೋರರು ದಾಳಿ ನಡೆಸುತ್ತಿರುವ ಪರಿಣಾಮ ಆಮದು- ರಫ್ತನ್ನು ನಂಬಿಕೊಂಡ ಮಂಗಳೂರಿನ ಗೋಡಂಬಿ ಉದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದಿದೆ.

    ರಾಜ್ಯದಲ್ಲಿ 3 ಲಕ್ಷ ಟನ್ ಗೇರುಬೀಜಕ್ಕೆ ಬೇಡಿಕೆಯಿದೆ. ಈ ಪೈಕಿ ಶೇ.25ರಷ್ಟು (50 ಸಾವಿರ ಟನ್) ಗೇರುಬೀಜ ಮಾತ್ರ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿದೆ. ಉಳಿದ ಶೇ.75ರಷ್ಟು (2.50 ಲಕ್ಷ ಟನ್) ಗೇರುಬೀಜವನ್ನು ಆಫ್ರಿಕಾ ಸಹಿತ ಬೇರೆ ದೇಶದಿಂದ ಆಮದು ಮಾಡಲಾಗುತ್ತಿದೆ. ಸದ್ಯಕ್ಕೆ ಹೌತಿ ಬಂಡುಕೋರರು ಕೆಂಪು ಸಮುದ್ರದಲ್ಲಿ ಸಾಗುವ ಹಡಗುಗಳನ್ನು ಟಾರ್ಗೆಟ್ ಮಾಡಿರುವುದರಿಂದ ಆ ದಾರಿಯಲ್ಲಿ ಗೋಡಂಬಿ ತುಂಬಿದ ಕಂಟೇನರ್ ಹಡಗು ಸಂಚರಿಸಲು ಹಿಂದೇಟು ಹಾಕಿವೆ. ಆಫ್ರಿಕಾ, ಯುರೋಪ್ ಮತ್ತು ಅಮೆರಿಕಾಗೆ ಭಾರತದಿಂದ ಗೋಡಂಬಿ ರಫ್ತು ಮತ್ತು ಆಮದು ವಹಿವಾಟು ಹೆಚ್ಚಾಗಿ ಹಡಗುಗಳ ಮೂಲಕವೇ ನಡೆಯುವುದರಿಂದ ಸದ್ಯಕ್ಕೆ ಹಡಗಿನ ಸಂಚಾರದಲ್ಲಿ ವ್ಯತ್ಯಯ ಆಗಿರುವುದು ವ್ಯಾಪಾರಕ್ಕೆ ತೊಡಕಾಗಿದೆ.

    ಉದ್ಯಮಕ್ಕೆ ಹೊಡೆತ

    ಹೌತಿ ಬಂಡುಕೋರರ ದಾಳಿ ಭಯದಿಂದಾಗಿ ಈ ಬಾರಿ 19 ಸಾವಿರ ಹಡಗು ಮತ್ತಿತರ ವೆಸಲ್ಸ್‌ಗಳು ಸಮುದ್ರ ಮಧ್ಯೆ ಸಿಲುಕಿಕೊಂಡಿದ್ದು, ನಿಗದಿತ ಜಾಗ ತಲುಪಲು ವಿಳಂಬಗೊಂಡು ನಷ್ಟಕ್ಕೀಡಾಗಿವೆ. ಒಂದೆಡೆ ರಫ್ತು ಮತ್ತು ಆಮದು ವಹಿವಾಟಿಗೆ ಇದರಿಂದ ಹೊಡೆತ ಬಿದ್ದಿದ್ದರೆ, ಮತ್ತೊಂದೆಡೆ ಬಂದರುಗಳಲ್ಲಿ ಕಂಟೇನರ್ ನಿಲ್ಲಿಸಲು ಸಾಧ್ಯವಾಗದೆ ಸಂಕಷ್ಟ ಉಂಟಾಗಿದೆ. ಪೂರ್ವ ಮತ್ತು ಪಶ್ಚಿಮ ಆಫ್ರಿಕಾ ದೇಶಗಳಿಂದಲೇ ಹೆಚ್ಚಾಗಿ ಭಾರತಕ್ಕೆ ಕಚ್ಚಾ ಗೋಡಂಬಿ ಪೂರೈಕೆಯಾಗುತ್ತಿದೆ. ಇವುಗಳಿಗೆ ಕೆಂಪು ಸಮುದ್ರ ಮಾರ್ಗ ಅನಿವಾರ್ಯ ಅಲ್ಲದಿದ್ದರೂ, ಕಂಟೇನರ್ ಹಡಗು ಸಂಚಾರ ಕಷ್ಟವಾಗಿರುವುದು, ರಫ್ತು ವಹಿವಾಟಿಗೆ ಪೆಟ್ಟು ಬಿದ್ದಿರುವುದರಿಂದ ಒಟ್ಟಾರೆಯಾಗಿ ಗೋಡಂಬಿ ಉದ್ಯಮಕ್ಕೆ ಹೊಡೆತ ಬಿದ್ದಂತಾಗಿದೆ.

    ಫ್ಯಾಕ್ಟರಿ ಬಂದ್ ಸಾಧ್ಯತೆ

    ಸದ್ಯ ಭಾರತಕ್ಕೆ ಬೇಕಾಗುವ 13 ಲಕ್ಷ ಮೆಟ್ರಿಕ್ ಟನ್ ಕಚ್ಚಾ ಗೋಡಂಬಿ ವಿದೇಶಗಳಿಂದಲೇ ಪೂರೈಕೆಯಾಗುತ್ತದೆ. ಕರ್ನಾಟಕ, ಕೇರಳ ಕರಾವಳಿಯ ಹೆಚ್ಚಿನ ಗೇರು ಬೀಜ ಫ್ಯಾಕ್ಟರಿಗಳು ಆಫ್ರಿಕಾದ ಗೋಡಂಬಿಯನ್ನೇ ನಂಬಿಕೊಂಡಿವೆ. ಕಚ್ಚಾ ಗೋಡಂಬಿ ಸಕಾಲದಲ್ಲಿ ಪೂರೈಕೆಯಾಗದೇ ಇದ್ದರೆ, ಇತ್ತ ಫ್ಯಾಕ್ಟರಿಯಲ್ಲಿ ಕಾರ್ಮಿಕರಿಗೆ ಕೆಲಸ ಇಲ್ಲದಾಗುತ್ತದೆ. ಫ್ಯಾಕ್ಟರಿ ಮಾಲೀಕರು ಕಾರ್ಮಿಕರಿಗೆ ಸುಮ್ಮನೆ ಕೂಲಿ ಕೊಡಲು ತಯಾರಿಲ್ಲದೆ, ಗೋಡಂಬಿ ಪೂರೈಕೆ ಇಲ್ಲವೆಂದು ಫ್ಯಾಕ್ಟರಿ ಬಂದ್ ಮಾಡಲು ಮುಂದಾಗುವ ಸಾಧ್ಯತೆಯಿದೆ.

    ಕಂಟೇನರ್ ಹಡಗಿಗೆ ನಷ್ಟ

    ಮಂಗಳೂರು ಸಹಿತ ಕರಾವಳಿಯ ಬಹುತೇಕ ಗೋಡಂಬಿ ಫ್ಯಾಕ್ಟರಿಗಳಿಗೆ ಕಚ್ಚಾ ಗೋಡಂಬಿ ಆಫ್ರಿಕಾ ದೇಶಗಳಿಂದ ಪೂರೈಕೆ ಆಗುತ್ತದೆ. ಅದನ್ನು ಸಂಸ್ಕರಿಸಿ ಮತ್ತೆ ಗಲ್ಫ್ ಮತ್ತು ಯುರೋಪಿಯನ್ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತದೆ. ಯುರೋಪ್ ಅಥವಾ ಅಮೆರಿಕಾ ಕಡೆಗೆ ಸಾಗಲು ಆಫ್ರಿಕಾ ಖಂಡವನ್ನು ಸುತ್ತು ಬಳಸಿ ಹೋಗಬೇಕಾಗಿದೆ. ಯುರೋಪ್ ತಲುಪಲು ಕೆಂಪು ಸಮುದ್ರ ಅಥವಾ ಸೂಯೆಜ್ ಕಾಲುವೆ ಹತ್ತಿರದ ದಾರಿಯಾಗಿದ್ದರೆ, ಸೌತ್ ಆಫ್ರಿಕಾದ ಕೇಪ್ ಆಫ್ ಗುಡ್ ಹೋಪ್ ಮೂಲಕ ಸುತ್ತು ಬಳಸಿ ಸಾಗಿದರೆ ಹೆಚ್ಚಿನ ದೂರ ಕ್ರಮಿಸಬೇಕಾಗುತ್ತದೆ. ಇದರಿಂದ 6300 ಮೈಲು ಹೆಚ್ಚುವರಿ ದೂರ ಮತ್ತು 15 ದಿನಗಳ ಸಂಚಾರ ಅಗತ್ಯವಿದೆ. ಇದರಿಂದ ಪ್ರತಿ ಕಂಟೇನರ್ ಹಡಗಿನಲ್ಲಿ ಸುಮಾರು ಎರಡು ಸಾವಿರ ಡಾಲರ್‌ನಷ್ಟು ನಷ್ಟವಾಗುತ್ತಿದ್ದು, ಇದರಿಂದ ರಫ್ತು ಉದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದಿದೆ.

    ಆಮದು ದರ ಹೆಚ್ಚಳ

    ಇಸ್ರೇಲ್ ಹಮಾಸ್ ಉಗ್ರರ ಮೇಲೆ ದಾಳಿ ಮುಂದುವರಿಸಿದ್ದರಿಂದ ಪ್ರತಿಯಾಗಿ ಯೆಮನ್ ದೇಶದ ಹೌತಿ ಬಂಡುಕೋರರು ಇಸ್ರೇಲ್ ಪರ ನಿಂತಿರುವ ದೇಶಗಳ ಹಡಗುಗಳನ್ನು ಟಾರ್ಗೆಟ್ ಮಾಡಿದ್ದಾರೆ. ಯೆಮನ್ ಕರಾವಳಿಯಿಂದ ಸಾಗುವ ಕೆಂಪು ಸಮುದ್ರದಲ್ಲಿ ಸಾಗುವ ಹಡಗುಗಳ ಮೇಲೆ ನಿರಂತರ ದಾಳಿ ನಡೆಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಅಮೆರಿಕದಿಂದ ಡ್ರೋಣ್ ದಾಳಿ ಮತ್ತು ಹಡಗುಗಳಿಗೆ ಭದ್ರತೆ ಒದಗಿಸಿದ್ದರೂ ಕದ್ದು ಮುಚ್ಚಿ ಟ್ಯಾಂಕರ್ ಮೇಲೆ ಹೌತಿಗಳು ದಾಳಿ ನಡೆಸುತ್ತಿರುವುದರಿಂದ ಬೃಹತ್ ಕಂಟೇನರ್ ಹಡಗುಗಳು ಆ ದಾರಿಯಲ್ಲಿ ಹೋಗದೆ ಸುರಕ್ಷಿತವಾಗಿರುವ ಸೌತ್ ಆಫ್ರಿಕಾ ಸುತ್ತು ಹಾಕಿಕೊಂಡು ಸಾಗುತ್ತಿವೆ. ಇದರಿಂದ ಭಾರತದ ವಿದೇಶಿ ವಹಿವಾಟಿಗೆ ಪೆಟ್ಟು ಬಿದ್ದಿದ್ದು ರಫ್ತು ಮತ್ತು ಆಮದು ಕ್ಷೇತ್ರದಲ್ಲಿ ದರ ಹೆಚ್ಚಳಕ್ಕೆ ಕಾರಣವಾಗಿದೆ.

    ರಾಜ್ಯದಲ್ಲಿ 400ಕ್ಕೂ ಅಧಿಕ ಗೇರು ಸಂಸ್ಕರಣ ಘಟಕಗಳಿದ್ದರೂ ಇವುಗಳಲ್ಲಿ 320ಕ್ಕೂ ಅಧಿಕ ಕರಾವಳಿಯಲ್ಲೇ ಇದೆ. ಇಲ್ಲಿಗೆ ಆಮದಾಗುವ ಬಹುತೇಕ ಗೋಡಂಬಿಗಳನ್ನು ಆಫ್ರಿಕಾ ಖಂಡದಿಂದಲೇ ಖರೀದಿಸಲಾಗುತ್ತದೆ. ಸಂಸ್ಕರಣೆಯಾದ ಗೋಡಂಬಿ ಹಾಗೂ ಅದರ ಉತ್ಪನ್ನವನ್ನು ಅರಬ್ ರಾಷ್ಟ್ರಗಳು, ಅಮೆರಿಕಾಕ್ಕೆ ರ್ತು ಮಾಡಲಾಗುತ್ತದೆ. ಸಮುದ್ರದಲ್ಲಿ ಹಡಗಿನ ಮೇಲೆ ದಾಳಿ ನಡೆಯುತ್ತಿರುವುದರಿಂದ ಆಮದು, ರಪ್ತು ಮೇಲೆ ಪರಿಣಾಮ ಬಿದ್ದಿದೆ.

    -ನವೀನ್ ಡಿಸೋಜಾ, ಗೋಡಂಬಿ ಉದ್ಯಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts