More

    ಗುಂಪಿನಿಂದ ಬೇರ್ಪಟ್ಟ ಮರಿಯಾನೆ

    ವಿಜಯವಾಣಿ ಸುದ್ದಿಜಾಲ ಸುಳ್ಯ

    ತಾಲೂಕಿನ ಮಂಡೆಕೋಲು ಗ್ರಾಮದ ಕನ್ಯಾನದಲ್ಲಿ ಶುಕ್ರವಾರ ಬೆಳಗ್ಗಿನ ಜಾವ ಗುಂಪಿನಿಂದ ಪ್ರತ್ಯೇಕಗೊಂಡ ಮರಿಯಾನೆ ಕಾಣಸಿಕ್ಕಿದೆ. ಈ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.

    ಕೆಲ ತಿಂಗಳಿನಿಂದ ಮಂಡೆಕೋಲಿನಲ್ಲೇ ಬೀಡು ಬಿಟ್ಟಿರುವ ಆನೆಗಳ ಹಿಂಡಿನ ಒಂದು ಗುಂಪು ಗುರುವಾರ ತಡರಾತ್ರಿ ಕನ್ಯಾನ ಸುತ್ತಮುತ್ತ ತಿರುಗಾಡುತ್ತಿತ್ತು. ಆತಂಕದಲ್ಲೇ ರಾತ್ರಿ ಕಳೆದ ಸ್ಥಳೀಯರಿಗೆ ಬೆಳಗ್ಗಿನ ಜಾವ ಮತ್ತೆ ಆನೆ ಘೀಳಿಡುವ ಸದ್ದು ಕೇಳಿಸಿತ್ತು. ಕನ್ಯಾನದ ರಾಜಶೇಖರ ಭಟ್ ಎಂಬುವರ ಜಾಗದಲ್ಲಿ ಮರಿಯಾನೆ ಕಾಣಸಿಕ್ಕಿದೆ.

    ಎರಡು ತಿಂಗಳ ಪ್ರಾಯದ ಮರಿಯಾನೆ ಗುಂಪಿನಿಂದ ಪ್ರತ್ಯೇಕಗೊಂಡು ರಾತ್ರಿಯಿಡಿ ಘೀಳಿಡುತ್ತಿದ್ದ ಪರಿಣಾಮ ಸುಸ್ತಾದಂತೆ ಕಂಡು ಬರುತ್ತಿತ್ತು. ಆನೆ ಕಾಣ ಸಿಕ್ಕಿದ ಕೂಡಲೇ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದು ಸಿಬ್ಬಂದಿ ಆನೆಯನ್ನು ಹಗ್ಗದಲ್ಲಿ ಕಟ್ಟಿ ಸನಿಹದಲ್ಲೇ ಇರುವ ಅರಣ್ಯ ಇಲಾಖೆಯ ಕಳ್ಳಬೇಟೆ ನಿಯಂತ್ರಣ ಶಿಬಿರದಲ್ಲಿರಿಸಿದ್ದಾರೆ.

    ಮರಿಯನ್ನು ತಾಯಿ ಜತೆ ಸೇರಿಸುವ ಪ್ರಯತ್ನ ನಡೆಸಲಾಗುತ್ತದೆ. ಸಾಧ್ಯವಾಗದಿದ್ದರೆ ಆನೆಯನ್ನು ಶಿಬಿರಕ್ಕೆ ಸಾಗಿಸಲಾಗುವುದು ಎಂದು ಅರಣ್ಯ ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.

    ಮರಿ ಮತ್ತೆ ವಾಪಸ್!

    ಮರಿಯಾನೆ ಬೆಳಗ್ಗೆ ಸಿಕ್ಕಿದ ಕೂಡಲೇ ಅದನ್ನು ತಾಯಿ ಜತೆ ಸೇರಿಸುವ ಕಾರ್ಯಾಚರಣೆ ನಡೆಸಲಾಗಿತ್ತು. ಬೆಳಗ್ಗೆ ಕನ್ಯಾನದ ಮೇಲ್ಭಾಗದ ಕಾಡಿನಲ್ಲಿ ಹಿಂಡಾನೆಗಳನ್ನು ಪತ್ತೆ ಹಚ್ಚಿ ಅವುಗಳ ಜತೆ ಬಿಡುವ ಪ್ರಯತ್ನ ನಡೆಸಲಾಗಿತ್ತು. ಆದರೆ ಮರಿಯಾನೆ ಹಿಂಡಾನೆಗಳ ಜತೆ ಸಾಗದೆ, ಅರಣ್ಯ ಸಿಬ್ಬಂದಿ ಹಾಗೂ ವೈದ್ಯರ ತಂಡದ ಜತೆಗೆ ಮರಳಿದೆ. ಸಂಜೆ ಬೇಂಗತ್ತಮಲೆಯಲ್ಲಿ ಕಾಣಸಿಕ್ಕಿದ ಹಿಂಡಾನೆಗಳ ಜತೆ ಮರಿಯಾನೆಯನ್ನು ಮತ್ತೆ ಬಿಡಲಾಗಿದೆ. ಕಾರ್ಯಾಚರಣೆಯಲ್ಲಿ ಸಹಾಯಕ ವಲಯ ಸಂರಕ್ಷಣಾಧಿಕಾರಿ ಪ್ರವೀಣ್ ಶೆಟ್ಟಿ, ಸುಳ್ಯ ವಲಯ ಅರಣ್ಯಾಧಿಕಾರಿ ಮಂಜುನಾಥ್ ಹಾಗೂ ಅರಣ್ಯ ಸಿಬ್ಬಂದಿ ಭಾಗವಹಿಸಿದ್ದರು. ಸುಳ್ಯ ಪಶು ವೈದ್ಯಾಧಿಕಾರಿ ಡಾ.ನಿತಿನ್ ಪ್ರಭು ಹಾಗೂ ವನ್ಯಜೀವಿ ಚಿಕಿತ್ಸಾ ತಜ್ಞ ಡಾ.ಯಶಸ್ವಿ ಮರಿಯಾನೆಯ ಆರೈಕೆ ಮಾಡಿದರು.

    ಹಿಂದೆಯೂ ಹೀಗಾಗಿತ್ತು!

    ಕಳೆದ ವರ್ಷವೂ ಇದೇ ರೀತಿಯ ಘಟನೆ ನಡೆದಿತ್ತು. ಗುಂಪಿನಿಂದ ಪ್ರತ್ಯೇಕಗೊಂಡ ಮರಿಯಾನೆಯೊಂದು ಅಜ್ಜಾವರ ಗ್ರಾಮದ ತುದಿಯಡ್ಕದಲ್ಲಿ ಸಿಕ್ಕಿತ್ತು. ಬಳಿಕ ತಾಯಿ ಜತೆ ಸೇರಿಸುವ ಪ್ರಯತ್ನ ನಡೆಸಲಾಗಿತ್ತಾದರೂ, ಸಾಧ್ಯವಾಗಿರಲಿಲ್ಲ. ಅನಂತರ ಕೊಡಗಿನ ದುಬಾರೆ ಆನೆಗಳ ಶಿಬಿರಕ್ಕೆ ಸಾಗಿಸಲಾಗಿತ್ತು. ಆದರೆ ಕೆಲ ದಿನಗಳಲ್ಲೇ ಅಸುನೀಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts