More

    ಮಂಗಳೂರು ವಿವಿಗೆ ಇ.ಡಿ ಶಾಕ್, ಕೋಚಿಮುಲ್ ನೇಮಕಾತಿ ಹಗರಣದಲ್ಲಿ ನೇರ ಭಾಗಿ ಸಾಧ್ಯತೆ ಹಿನ್ನೆಲೆಯಲ್ಲಿ ತನಿಖೆ

    ವಿಜಯವಾಣಿ ಸುದ್ದಿಜಾಲ ಮಂಗಳೂರು
    ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ(ಕೋಚಿಮುಲ್) ಉದ್ಯೋಗಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿರುವ ಬಗ್ಗೆ ಜಾರಿ ನಿರ್ದೇಶನಾಲಯ (ಇ.ಡಿ) ಆರೋಪಿಸಿದ ಬೆನ್ನಲ್ಲೇ, ಗುರುವಾರ ಸಂಜೆ ಮಂಗಳೂರು ವಿವಿಗೆ ಧಿಡೀರ್ ದಾಳಿ ನಡೆಸಿದ ಇ.ಡಿ ಅಧಿಕಾರಿಗಳು ಶುಕ್ರವಾರ ಬೆಳಗ್ಗಿನವರೆಗೆ ವಿವಿ ಪರಿಕ್ಷಾಂಗ ಕುಲಸಚಿವ, ಕುಲಪತಿಗಳ ವಿಚಾರಣೆ ನಡೆಸಿದೆ.

    ರಾಜ್ಯದಲ್ಲೇ 2ನೇ ದೊಡ್ಡದಾದ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರತೀ ಸೀಟಿಗೆ 20 ಲಕ್ಷ ರೂ.ನಿಂದ 30 ಲಕ್ಷ ರೂ.ಪಡೆಯಲಾಗಿದೆ. ಅವ್ಯವಹಾರದಲ್ಲಿ ಶಾಸಕ ಕೆ.ವೈ.ನಂಜೇಗೌಡ ನೇರ ಭಾಗಿಯಾಗಿದ್ದಾರೆ ಎಂದು ಇ.ಡಿ ಆರೋಪಿಸಿದೆ. 3 ತಿಂಗಳ ಹಿಂದೆ ನಡೆದ ಈ ನೇಮಕಾತಿ ಪ್ರಕ್ರಿಯೆಯ ಪ್ರಶ್ನೆಪತ್ರಿಕೆ ಸಿದ್ಧತೆ, ಪರೀಕ್ಷೆ ಹಾಗೂ ಫಲಿತಾಂಶ ಪ್ರಕಟಣೆಯ ಜವಾಬ್ದಾರಿ ಮಂಗಳೂರು ವಿವಿ ವಹಿಸಿಕೊಂಡಿತ್ತು.

    ಪ್ರಶ್ನೆಪತ್ರಿಕೆ ಮಾರಾಟ ಸಾಧ್ಯತೆಯಲ್ಲಿ ತನಿಖೆ: ಮಂಗಳೂರು ವಿವಿ ಪರಿಕ್ಷಾಂಗ ಕುಲಸಚಿವ ಪ್ರೊ.ರಾಜುಕೃಷ್ಣ ಚಲನ್ನವರ್ ಕೋಚಿಮುಲ್ ನೇಮಕಾತಿ ಪರೀಕ್ಷಾ ಜವಾಬ್ದಾರಿ ವಹಿಸಿಕೊಂಡಿದ್ದು, ಅಭ್ಯರ್ಥಿಗಳಿಗೆ ಪರಿಕ್ಷಾ ಪೂರ್ವದಲ್ಲೇ ಪ್ರಶ್ನೆಪತ್ರಿಕೆ ಮಾರಾಟ ಮಾಡಲಾಗಿದೆ ಎಂಬ ಆರೋಪ ವಿವಿ ಅಧಿಕಾರಿಗಳ ಮೇಲಿದೆ. ಕೋಚಿಮುಲ್ ನೇಮಕಾತಿ ಹಗರಣದಲ್ಲಿ ಮಂಗಳೂರು ವಿವಿ ನೇರ ಭಾಗಿಯಾಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ ತಿಂಗಳ ಹಿಂದೆಯೇ ವಿವಿ ಪರಿಕ್ಷಾಂಗ ಕುಲಸಚಿವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ ಇದಕ್ಕೆ ವಿವಿ ಪ್ರತಿಕ್ರಿಯೆ ನೀಡಿರಲಿಲ್ಲ.

    ವಿವಿ ಅಧಿಕಾರಿಗಳು ಅಭ್ಯರ್ಥಿಗಳಿಗೆ ಪ್ರತಿ ಪ್ರಶ್ನೆಪತ್ರಿಕೆಯನ್ನು 10ರಿಂದ 15 ಲಕ್ಷ ರೂ.ಗೆ ಮಾರಾಟ ಮಾಡಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಶುಕ್ರವಾರ ಇ.ಡಿ ತಂಡ ಆಗಮಿಸಿ ಪರಿಕ್ಷಾಂಗ ಕುಲಸಚಿವ, ಕುಲಪತಿಗಳ ವಿಚಾರಣೆ ನಡೆಸಿದೆ. ಪರಿಕ್ಷಾಂಗ ಕುಲಸಚಿವರ ಇ-ಮೇಲ್, ದೂರವಾಣಿ, ಬ್ಯಾಂಕಿಂಗ್ ವ್ಯವಹಾರವನ್ನು ಬೆಳಗ್ಗಿನವರೆಗೆ ಪರಿಶೀಲಿಸಿದೆ.

    ಏನಿದು ಪ್ರಕರಣ?
    ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ 75 ಹುದ್ದೆಗಳಿಗೆ ಅಭ್ಯರ್ಥಿಗಳ ನೇಮಕಾತಿಗೆ ಪ್ರಕಟಣೆ ಹೊರಡಿಸಲಾಗಿತ್ತು. ಮಂಗಳೂರು ವಿವಿ ಈ ನೇಮಕಾತಿ ಪರೀಕ್ಷಾ ಪ್ರಕ್ರಿಯೆಯ ಏಜೆನ್ಸಿಯಾಗಿ ಕಾರ್ಯನಿರ್ವಹಿಸಿತ್ತು. ಆದರೆ ಕೋಚಿಮುಲ್ ನೇಮಕಾತಿಯಲ್ಲಿ 30 ಅಭ್ಯರ್ಥಿಗಳ ಸಂದರ್ಶನದ ಅಂಕ ತಿದ್ದಿ, ಪ್ರತೀ ಹುದ್ದೆಯನ್ನು 20 ಲಕ್ಷ ರೂ.ನಿಂದ 30 ಲಕ್ಷ ರೂ.ಗೆ ಮಾರಾಟ ಮಾಡಲಾಗಿದೆ ಎಂಬುದನ್ನು ಕೋಚಿಮುಲ್ ನಿರ್ದೇಶಕರು ಹಾಗೂ ನೇಮಕಾತಿ ಸಮಿತಿ ಸದಸ್ಯರು ಶೋಧ ಹಾಗೂ ಜಪ್ತಿ ಪ್ರಕ್ರಿಯೆ ಹೇಳಿ ಒಪ್ಪಿಕೊಂಡಿದ್ದಾರೆ ಎಂಬುದಾಗಿ ಜಾರಿ ನಿರ್ದೇಶನಾಲಯ ಕಳೆದ ವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತ್ತು. ಈಗಾಗಲೇ ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ, ಆಡಳಿತಾತ್ಮಕ ನಿರ್ದೇಶಕ, ಅಧಿಕಾರಿಗಳು ಹಾಗೂ ಕೆಲ ನಿರ್ದೇಶಕರನ್ನು ತನಿಖೆಗೊಳಪಡಿಸಿ ಇ.ಡಿ ಮಾಹಿತಿ ಕಲೆಹಾಕಿದೆ.

    ನೇಮಕಾತಿ ಪರೀಕ್ಷೆಗಳಲ್ಲಿ ಆಸಕ್ತಿ
    ಕಳೆದ ಒಂದೆರಡು ವರ್ಷಗಳಿಂದ ಮಂಗಳೂರು ಅಧಿಕಾರಿಗಳ ಅಸಮರ್ಪಕ ಕಾರ್ಯನಿರ್ವಹಣೆಯಿಂದ ವಿವಿಯು ಪರೀಕ್ಷಾ ನಿರ್ವಹಣೆಯಲ್ಲಿ ಎಡವಿದ್ದು, ನಿಗದಿತ ಸಮಯದಲ್ಲಿ ಫಲಿತಾಂಶ ನೀಡುತ್ತಿಲ್ಲ. ಆದರೆ ವಿವಿಗೆ ಲಾಭವಿಲ್ಲದಿದ್ದರೂ ಹೊರಗಿನ ಸಂಸ್ಥೆಗಳ ಉದ್ಯೋಗ ನೇಮಕಾತಿ ಪರೀಕ್ಷೆಗಳನ್ನು ಆಸಕ್ತಿವಹಿಸಿ ನಿರ್ವಹಿಸುತ್ತದೆ. ವಿವಿ ಪರಿಕ್ಷಾಂಗ ವಿಭಾಗದ ಆಸಕ್ತಿ ವಿವಿ ವಿದ್ಯಾರ್ಥಿಗಳ ಶೈಕ್ಷಣಿಕ ನಿರ್ವಹಣೆಯಲ್ಲಿ ಇರಬೇಕೇ ಹೊರತು, ಸಂಘ-ಸಂಸ್ಥೆ, ಇಲಾಖೆಗಳ ಉದ್ಯೋಗ ನೇಮಕಾತಿ ಪರೀಕ್ಷೆಯಲ್ಲಿ ಅಲ್ಲ. ಈ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ರಮೇಶ್ ಕೆ.ಆಗ್ರಹಿಸಿದ್ದಾರೆ.

    ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯ ಪರೀಕ್ಷೆ ಹಾಗೂ ಫಲಿತಾಂಶವನ್ನು ನೀಡುವ ಜವಾಬ್ದಾರಿ ಮಂಗಳೂರು ವಿವಿಗೆ ನೀಡಲಾಗಿತ್ತು. ಈ ಬಗ್ಗೆ ತನಿಖಾಧಿಕಾರಿಗಳು ಮಾಹಿತಿ ಕೇಳಿದ್ದರು. ಅವರಿಗೆ ಮಾಹಿತಿ ನೀಡಲಾಗಿದೆ.
    ಪ್ರೊ.ಜಯರಾಜ್ ಅಮೀನ್, ವಿವಿ ಕುಲಪತಿ(ಪ್ರಭಾರ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts