More

    ವಿವಿ ವಿದ್ಯಾರ್ಥಿ ಸಹಕಾರಿ ಸಂಘಕ್ಕೆ ಮರುಜೀವ, ಅವ್ಯವಹಾರದ ತನಿಖಾ ವರದಿ ಸಲ್ಲಿಕೆ, ಮೂವರ ವಿರುದ್ಧ ವಿವಿ ಶಿಸ್ತುಕ್ರಮ

    ಶ್ರವಣ್ ಕುಮಾರ್ ನಾಳ, ಮಂಗಳೂರು

    ಮದ್ರಾಸ್ ಪ್ರಾಂತ್ಯದ ಆಡಳಿತಕ್ಕೆ ಒಳಪಟ್ಟ ವಿವಿ ವಿದ್ಯಾರ್ಥಿ ಸಹಕಾರಿ ಸಂಘ 2007ರಲ್ಲಿ ಸ್ಥಗಿತಗೊಂಡಿದ್ದ ವಿವಾದವನ್ನು ಗಂಭೀರವಾಗಿ ಪರಿಗಣಿಸಿರುವ ಮಂಗಳೂರು ವಿವಿ ತನಿಖೆ ಪೂರ್ಣಗೊಳಿಸಿ, 11 ತಿಂಗಳ ಬಳಿಕ ವರದಿ ಸಲ್ಲಿಸಿದೆ. ವಿದ್ಯಾರ್ಥಿ ಸಹಕಾರಿ ಸಂಘದ ಅವ್ಯವಹಾರದಲ್ಲಿ 3 ಪ್ರಮುಖ ಅಧಿಕಾರಿಗಳ ಹೆಸರು ಉಲ್ಲೇಖಿಸಿದ ತನಿಖಾ ತಂಡ, ವಿದ್ಯಾರ್ಥಿ ಸಹಕಾರಿ ಸಂಘವನ್ನು ಪುನರಾರಂಭ ಮಾಡಬಹುದು ಎಂದು ವರದಿಯಲ್ಲಿ ಉಲ್ಲೇಖಿಸಿದೆ.
    2005ರಲ್ಲಿ ವಿವಿ ವಿದ್ಯಾರ್ಥಿ ಸಹಕಾರಿ ಸಂಘದ ಚುನಾವಣೆ ನಡೆದು, 2 ವರ್ಷದಲ್ಲೇ ಸಹಕಾರಿ ಸಂಘ ಕಾರ್ಯಚಟುವಟಿಕೆ ಸ್ಥಗಿತಗೊಂಡಿತ್ತು. 2005ರಲ್ಲಿ ಅಂದಿನ ಪ್ರಾಚಾರ್ಯ ಗೋವಿಂದ ನಾಯಕ್ ವಿದ್ಯಾರ್ಥಿ ಸಹಕಾರಿ ಸಂಘದ ಜವಾಬ್ದಾರಿ ವಹಿಸಿದ್ದರು. 3 ತಿಂಗಳ ಬಳಿಕ ಪ್ರಾಚಾರ್ಯ ಸೀತಾರಾಮ ಪೂಜಾರಿ ಸಂಘದ ಜವಾಬ್ದಾರಿ ವಹಿಸಿ ಪ್ರಾಧ್ಯಾಪಕಿ ಇಂದಿರಾ ಅವರಿಗೆ ನಿರ್ವಹಣಾ ಜವಾಬ್ದಾರಿ ನೀಡಿದ್ದರು. 2007ರಲ್ಲಿ ಇಂದಿರಾ ಸಂಘದ ಕಾರ್ಯಚಟುವಟಿಕೆ ಸ್ಥಗಿತಗೊಳಿಸುವುದಾಗಿ ಘೋಷಿಸಿದ್ದರು. ಈ ಮೂವರು ಸಂಘ ಮುಚ್ಚಲು ಪ್ರಮುಖ ಕಾರಣರು. ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.
    ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ರಮೇಶ್ ಕೌಡೂರು ನೇತೃತ್ವದ ತನಿಖಾ ತಂಡ 1937ರಿಂದ 2007ರವರೆಗೆ ಒಟ್ಟು 3 ಲಕ್ಷ ರೂ.ಮಾತ್ರ ಉಳಿತಾಯವಾಗಿರುವ ದಾಖಲೆಯನ್ನು ಪತ್ತೆ ಮಾಡಿದೆ. ಆದರೆ, ಆ ಹಣ ಎಲ್ಲಿದೆ ಎಂಬ ಮಾಹಿತಿ ಇಲ್ಲ. ಈ ಹಣವನ್ನು ತಪ್ಪಿತಸ್ಥ ಮೂವರಿಂದ ವಸೂಲಿ ಮಾಡಿ ಮತ್ತೆ ವಿದ್ಯಾರ್ಥಿ ಸಹಕಾರಿ ಸಂಘ ಕಾರ್ಯಾರಂಭಗೊಳಿಸಲು ತನಿಖಾ ಸಂಸ್ಥೆ ಸೂಚಿಸಿದೆ. ಈ ಬಗ್ಗೆ ವಿವಿ ಕುಲಸಚಿವರು ಸಹಕಾರಿ ಇಲಾಖೆಗೆ ವರದಿ ನೀಡಿದ್ದಾರೆ. ಪ್ರಾಚಾರ್ಯ ಗೋವಿಂದ ನಾಯಕ್, ಸೀತಾರಾಮ ಪೂಜಾರಿ ನಿವೃತ್ತಿ ಹೊಂದಿದ್ದರಿಂದ ಅವರ ಪೆನ್ಶನ್ ಹಣದಿಂದ ಈ ಮೊತ್ತ ವಸೂಲಿ ಮಾಡಲು ಸಿಂಡಿಕೇಟ್ ಸಭೆ ತೀರ್ಮಾನಿಸಿದೆ. ಪ್ರಾಧ್ಯಾಪಕಿ ಇಂದಿರಾ ಅವರನ್ನು ವಿವಿ ಕಾಲೇಜಿನಿಂದ ಎಫ್‌ಎಂಕೆಎಂ ಕಾಲೇಜು ಮಡಿಕೇರಿಗೆ ವರ್ಗಾಯಿಸಿ ವಿವಿ ಆದೇಶಿಸಿದೆ.

    ಏನಿದು ವಿವಾದ?
    1937ರ ಮದ್ರಾಸ್ ಪ್ರಾಂತ್ಯದ ಆಡಳಿತಕ್ಕೆ ಒಳಪಟ್ಟ ದೇಶದ ಮೊದಲ ಹಾಗೂ ಏಕೈಕ ವಿದ್ಯಾರ್ಥಿ ಸಹಕಾರಿ ಸಂಘ ಎಂಬ ಹೆಗ್ಗಳಿಕೆ ಪಡೆದಿದ್ದ ವಿದ್ಯಾರ್ಥಿ ಸಹಕಾರಿ ಸಂಘ ಹಂಪನಕಟ್ಟೆಯ ವಿವಿ ಕಾಲೇಜಿನಲ್ಲಿ(ಹಳೇ ಸರ್ಕಾರಿ ಕಾಲೇಜು) ಕಾರ್ಯನಿರ್ವಹಿಸುತ್ತಿತ್ತು. 1937ರಿಂದ ಮದ್ರಾಸ್ ಸಹಕಾರಿ ಕಾಯ್ದೆಯಡಿ ಕಾರ್ಯನಿರ್ವಹಿಸುತ್ತಿದ್ದ ಮಂಗಳೂರಿನ ವಿದ್ಯಾರ್ಥಿ ಸಹಕಾರಿ ಸಂಘ, ಕರ್ನಾಟಕ ಪ್ರತ್ಯೇಕ ರಾಜ್ಯವಾದ ಬಳಿಕ 1959ರಲ್ಲಿ ಕರ್ನಾಟಕ ಸರ್ಕಾರ ಸಹಕಾರಿ ಕಾಯ್ದೆಯನ್ವಯ ನಡೆಯುತ್ತಿತ್ತು. ಈ ಮಧ್ಯೆ ಪ್ರಾಧ್ಯಾಪಕರ ಆಂತರಿಕ ಕಲಹದಿಂದ 2007ರಲ್ಲಿ ಏಕಾಏಕಿ ಮುಚ್ಚಿ ಹಣ ಗುಳುಂ ಮಾಡಿರುವ ಆರೋಪ ಕೇಳಿ ಬಂದಿತ್ತು.

    ಹೀಗಿತ್ತು ಆಯ್ಕೆ ಪ್ರಕ್ರಿಯೆ
    ಸ್ವಾತಂತ್ರೃಪೂರ್ವ ಮದ್ರಾಸ್ ಪ್ರಾಂತ್ಯದ ಸಹಕಾರಿ ಕಾಯ್ದೆ ಪ್ರಕಾರ, ವಿದ್ಯಾರ್ಥಿಗಳಿಂದ 10 ಪೈಸೆ ಸಹಕಾರಿ ಹಣ ವಸೂಲಿ ಮಾಡಲು ಅವಕಾಶವಿತ್ತು. ಮಂಗಳೂರು ಸರ್ಕಾರಿ ಕಾಲೇಜು ಪ್ರಾಚಾರ್ಯರೇ ಈ ಸಹಕಾರಿ ಸಂಘದ ಅಧ್ಯಕ್ಷರು. ಪ್ರತಿ ವರ್ಷ ಚುನಾವಣೆ ಮೂಲಕ ನಿರ್ದೇಶಕರ ಆಯ್ಕೆ ಮಾಡಲಾಗುತ್ತಿತ್ತು. 1959ರ ನಂತರ ಕರ್ನಾಟಕ ಸರ್ಕಾರ ಸಹಕಾರಿ ಕಾಯ್ದೆ ಅನ್ವಯ 5 ವರ್ಷಗಳಿಗೊಮ್ಮೆ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ನಡೆಯುತ್ತಿತ್ತು. ಸರ್ಕಾರಿ ಕಾಲೇಜು ಪ್ರಾಚಾರ್ಯರೇ ಸಹಕಾರಿ ಸಂಘದ ಅಧ್ಯಕ್ಷ, 8 ವಿದ್ಯಾರ್ಥಿ ಪ್ರತಿನಿಧಿಗಳು, ಇಬ್ಬರು ಪ್ರಾಧ್ಯಾಪಕರು ಹಾಗೂ ಓರ್ವ ನಾಮನಿರ್ದೇಶಿತ ಸದಸ್ಯರನ್ನು ಆಯ್ಕೆ ಮಾಡಲಾಗುತ್ತಿತ್ತು. ಜಿಲ್ಲಾ ಸಹಕಾರಿ ಉಪನಿಬಂಧಕರು ಚುನಾವಣಾಧಿಕಾರಿ ಆಗಿರುತ್ತಿದ್ದರು.

    ದೇಶದ ಮೊದಲ ವಿದ್ಯಾರ್ಥಿ ಸಹಕಾರಿ ಸಂಘದ ಚುನಾವಣೆ 2005ರಲ್ಲಿ ನಡೆದಿತ್ತು. 2 ವರ್ಷದಲ್ಲೇ ಸಂಘ ಕಾರ್ಯಚಟುವಟಿಕೆ ಸ್ಥಗಿತಗೊಳಿಸಿದೆ. ವಿವಿ ಸೂಚನೆ ಹಿನ್ನೆಲೆಯಲ್ಲಿ ಸಮಗ್ರ ತನಿಖಾ ವರದಿ ಸಲ್ಲಿಸಲಾಗಿದೆ. ತಪ್ಪಿತಸ್ಥರಿಂದ ಉಳಿತಾಯ ಹಣ ವಸೂಲಿ ಮಾಡಿ ವಿದ್ಯಾರ್ಥಿ ಸಹಕಾರಿ ಸಂಘ ಮರು ಆರಂಭಿಸುವಂತೆ ಸೂಚಿಸಲಾಗಿದೆ.
    ರಮೇಶ್ ಕೌಡೂರು
    ತನಿಖಾಧಿಕಾರಿ, ಸಿಂಡಿಕೇಟ್ ಸದಸ್ಯ, ಮಂಗಳೂರು ವಿವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts