More

    ರೋಹಿತ್ ಶರ್ಮ ಶತಕ ವ್ಯರ್ಥ: ಸಿಎಸ್‌ಕೆಗೆ ಮಣಿದ ಮುಂಬೈ ಇಂಡಿಯನ್ಸ್

    ಮುಂಬೈ: ರೋಹಿತ್ ಶರ್ಮ (105* ರನ್, 63 ಎಸೆತ, 11 ಬೌಂಡರಿ, 5ಸಿಕ್ಸರ್) ಐಪಿಎಲ್‌ನಲ್ಲಿ 12 ವರ್ಷಗಳ ಬಳಿಕ ಸಿಡಿಸಿದ ಶತಕದ ಹೊರತಾಗಿಯೂ ಮುಂಬೈ ಇಂಡಿಯನ್ಸ್ ತಂಡ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಎದುರು 20 ರನ್‌ಗಳಿಂದ ಶರಣಾಗಿದೆ. ಸತತ 2ನೇ ಗೆಲುವು ದಾಖಲಿಸಿದ ಋತುರಾಜ್ ಗಾಯಕ್ವಾಡ್ ಪಡೆ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಕಾಯ್ದುಕೊಂಡರೆ, ಹಾರ್ದಿಕ್ ಪಾಂಡ್ಯ ಬಳಗ 4 ಸೋಲಿಗೆ ತುತ್ತಾಗಿದೆ.

    ವಾಂಖೆಡೆ ಕ್ರೀಡಾಂಗಣದಲ್ಲಿ ಸೂಪರ್ ಸಂಡೇ ನಡೆದ ತಲಾ 5 ಬಾರಿಯ ಚಾಂಪಿಯನ್ನರ ನಡುವಿನ ಕಾದಾಟದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಸಿಎಸ್‌ಕೆ, ನಾಯಕ ಋತುರಾಜ್ ಗಾಯಕ್ವಾಡ್ (69 ರನ್, 40 ಎಸೆತ, 5 ಬೌಂಡರಿ, 5 ಸಿಕ್ಸರ್) ಹಾಗೂ ಶಿವಂ ದುಬೆ (66* ರನ್, 38 ಎಸೆತ, 10 ಬೌಂಡರಿ, 2 ಸಿಕ್ಸರ್) ಅರ್ಧಶತಕ ಹಾಗೂ ಕೊನೆಯಲ್ಲಿ ಎಂಎಸ್ ಧೋನಿ (20* ರನ್, 4 ಎಸೆತ, 3 ಸಿಕ್ಸರ್) ಬಿರುಸಿನಾಟದ ಬಲದಿಂದ 4 ವಿಕೆಟ್‌ಗೆ 206 ರನ್ ಕಲೆಹಾಕಿತು. ಪ್ರತಿಯಾಗಿ ರೋಹಿತ್ ಪ್ರತಿರೋಧದ ನಡುವೆ ವೇಗಿ ಮಥೀಶ ಪಥಿರಣ (28ಕ್ಕೆ 4) ಬಿಗಿ ಬೌಲಿಂಗ್ ದಾಳಿಗೆ ಸಿಲುಕಿದ ಮುಂಬೈ 6 ವಿಕೆಟ್‌ಗೆ 186 ರನ್‌ಗಳಿಸಲಷ್ಟೇ ಶಕ್ತವಾಯಿತು.

    ರೋಹಿತ್ ಶತಕದಾಟ ವ್ಯರ್ಥ: ಬೃಹತ್ ಮೊತ್ತದ ಚೇಸಿಂಗ್ ಇಳಿದ ಮುಂಬೈಗೆ ರೋಹಿತ್, ಇಶಾನ್ ಕಿಶನ್ (23) ಜತೆ ಮೊದಲ ವಿಕೆಟ್‌ಗೆ 43 ಎಸೆತಗಳಲ್ಲಿ 70 ರನ್‌ಗಳಿಸಿ ಸ್ಫೋಟಕ ಆರಂಭ ಒದಗಿಸಿದರು. ಆಗ ದಾಳಿಗಿಳಿದ ಇಂಪ್ಯಾಕ್ಟ್ ಪ್ಲೇಯರ್ ಪಥಿರಣ, ಇಶಾನ್ ಹಾಗೂ ಸೂರ್ಯಕುಮಾರ್ (0) ವಿಕೆಟ್ ಪಡೆದು ಕಡಿವಾಣ ಹೇರಿದರು. ಬಳಿಕ ತಿಲಕ್ ವರ್ಮ (31) ಹಾಗೂ ರೋಹಿತ್ 3ನೇ ವಿಕೆಟ್‌ಗೆ 38 ಎಸೆತಗಳಲ್ಲಿ 60 ರನ್ ಕಸಿದರು. ತಿಲಕ್ ವಿಕೆಟ್ ಪಡೆದ ಪಥಿರಣ ಮುಂಬೈಗೆ ಮತ್ತೆ ಪೆಟ್ಟು ನೀಡಿದರು. ಇದರ ಬೆನ್ನಲ್ಲೇ ನಾಯಕ ಹಾರ್ದಿಕ್ ಪಾಂಡ್ಯ (2) ನಿರಾಸೆ ಮೂಡಿಸಿದರು. 15, 16ನೇ ಓವರ್‌ನಲ್ಲಿ ಒಟ್ಟು 5 ರನ್ ಮಾತ್ರ ನೀಡಿದ ಸಿಎಸ್‌ಕೆ ಕಂಬ್ಯಾಕ್ ಮಾಡಿತು. 61 ಎಸೆತಗಳಲ್ಲಿ ಶತಕ ಸಿಡಿಸಿದ ರೋಹಿತ್‌ಗೆ ಸಮರ್ಥ ಬೆಂಬಲ ಒದಗಿಸುವಲ್ಲಿ ಮುಂಬೈ ಬ್ಯಾಟರ್‌ಗಳು ವಿಲರಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts