More

    ಸಭೆಗೆ ಗೈರಾದ ಮುಖ್ಯಾಧಿಕಾರಿ ವಿರುದ್ಧ ಆಕ್ರೋಶ: ವರ್ಗಾವಣೆ ಮಾಡಲು ಕುಷ್ಟಗಿ ಪುರಸಭೆ ಸದಸ್ಯರ ಒತ್ತಾಯ

    ಕುಷ್ಟಗಿ: ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಪುರಸಭೆ ಸಾಮಾನ್ಯ ಸಭೆಗೆ ಹಾಜರಾಗದ ಮುಖ್ಯಾಧಿಕಾರಿ ಬಿ.ಟಿ.ಬಂಡಿವಡ್ಡರ್‌ರನ್ನು ವರ್ಗಾವಣೆ ಮಾಡುವಂತೆ ಸರ್ವ ಸದಸ್ಯರು ಒತ್ತಾಯಿಸಿದರು.

    ಸಭೆ ಇರುವುದು ಗೊತ್ತಿದ್ದರೂ ಬಂದಿಲ್ಲ. ಅಪೂರ್ಣ ಕಾಮಗಾರಿಗಳು ಸೇರಿದಂತೆ ಪಟ್ಟಣದ ಅಭಿವೃದ್ಧಿಗೆ ಸಂಬಂಧಿಸಿದಂತೆ ಉತ್ತರಿಸಬೇಕಿರುವ ಮುಖ್ಯಾಧಿಕಾರಿಯೇ ಇಲ್ಲವೆಂದ ಮೇಲೆ ಸಭೆ ನಡೆಸುವುದಾದರೂ ಏಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಅಧ್ಯಕ್ಷ ಜಿ.ಕೆ.ಹಿರೇಮಠ ಧ್ವನಿಗೂಡಿಸಿ, ಮುಖ್ಯಾಧಿಕಾರಿ ಕಚೇರಿಗೂ ಸರಿಯಾಗಿ ಬರಲ್ಲ. ಎಲ್ಲ ವಿಚಾರಗಳಲ್ಲೂ ನಿರ್ಲಕ್ಷೃ ವಹಿಸುತ್ತಿದ್ದಾರೆ. ಈ ಸಂಬಂಧ ನಗರಾಭಿವೃದ್ಧಿ ಕೋಶದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಬೇರೆ ಮುಖ್ಯಾಧಿಕಾರಿಯನ್ನು ನಿಯೋಜಿಸುವುದಾಗಿ ಅವರು ತಿಳಿಸಿದ್ದಾರೆ. ಸದ್ಯ ವ್ಯವಸ್ಥಾಪಕ, ಇಂಜಿನಿಯರ್ ಇತರ ಅಧಿಕಾರಿಗಳು ಎಲ್ಲದಕ್ಕೂ ಉತ್ತರಿಸುತ್ತಾರೆ ಎಂದು ತಿಳಿಸಿದರು.

    ಗಜೇಂದ್ರಗಡ ರಸ್ತೆ ಪಕ್ಕದ ಸಾಯಿಬಾಬಾ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಪುರಾತನ ಬಾವಿ ಭಾಗಶಃ ಭರ್ತಿಯಾಗಿದೆ. ಸಾರ್ವಜನಿಕರು ತ್ಯಾಜ್ಯ ಹಾಕುತ್ತಿರುವುದರಿಂದ ನೀರು ಮಲಿನಗೊಂಡು ದುರ್ವಾಸನೆ ಹರಡಲಾರಂಭಿಸಿದೆ. ಬಾವಿಯ ಸುತ್ತ ಮೂರು ಅಡಿ ಎತ್ತರದ ಕಾಂಪೌಂಡ್ ನಿರ್ಮಿಸಿ ಗೇಟ್ ಅಳವಡಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.

    ಯಾವುದೇ ಯೋಜನೆ ಅನುಷ್ಠಾನ ಹಾಗೂ ಫಲಾನುಭವಿಗಳ ಆಯ್ಕೆಗೆ ಸಂಬಂಧಿಸಿದಂತೆ ಸದಸ್ಯರಿಗೆ ಮಾಹಿತಿ ಇರುವುದಿಲ್ಲ. ಇದರಿಂದ ಅನರ್ಹರೂ ಯೋಜನೆಗಳ ಲಾಭ ಪಡೆಯುವಂತಾಗುತ್ತಿದೆ ಎಂದು ದೂರಿದರು. ಈ ಸಂಬಂಧ ಸದಸ್ಯರ ವಾಟ್ಸ್ಯಾಪ್ ಗೆ ಮಾಹಿತಿ ಹಾಕುವಂತೆ ಅಧಿಕಾರಿಗೆ ಅಧ್ಯಕ್ಷ ಜಿ.ಕೆ.ಹಿರೇಮಠ ಸೂಚಿಸಿದರು. ವಾರ್ಡ್‌ಗಳಲ್ಲಿ ಅಗತ್ಯವಿರುವ ತುರ್ತು ಕಾಮಗಾರಿ ಕೈಗೊಳ್ಳುವ ಕುರಿತು ಸದಸ್ಯರು ಮನವಿ ಸಲ್ಲಿಸಿದರು. ಪತ್ರಿಕಾ ಭವನ ನಿರ್ಮಾಣಕ್ಕೆ ನಿವೇಶನ ಒದಗಿಸುವಂತೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಆಲಮೇಲ, ಉಪಾಧ್ಯಕ್ಷ ಶ್ರೀಕಾಂತ್ ಸರಗಣಾಚಾರಿ ಇತರರು ಕೋರಿದರು.

    ಕಳೆದ ಜುಲೈಯಿಂದ ಅಕ್ಟೋಬರ್‌ವರೆಗಿನ ಜಮಾ ಖರ್ಚಿನ ವಿವರವನ್ನು ಅಧ್ಯಕ್ಷ ಜಿ.ಕೆ.ಹಿರೇಮಠ ಓದಿ ಹೇಳಿದರು. ಉಪಾಧ್ಯಕ್ಷೆ ಹನುಮವ್ವ ಕೋರಿ, ಸ್ಥಾಯಿ ಸಮಿತಿ ಅಧ್ಯಕ್ಷ ರಾಜೇಶ್ ಪತ್ತಾರ್, ವ್ಯವಸ್ಥಾಪಕ ಷಣ್ಮುಖ, ಸದಸ್ಯರಾದ ಕಲ್ಲೇಶ್ ತಾಳದ್, ಜೆ.ಜಿ.ಆಚಾರ್, ರಾಮಣ್ಣ ಬಿನ್ನಾಳ, ಗೀತಾ ಕೋಳೂರು, ಅಂಬಣ್ಣ ಭಜಂತ್ರಿ ಇತರರಿದ್ದರು.

    ಫಲಾನುಭವಿಗಳ ಖಾತೆಗೆ ಹಣ ಹಾಕಿ: ನಮ್ಮ ಮನೆ ಯೋಜನೆ ಅಡಿ ಮನೆ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ. 2015-16ನೇ ಸಾಲಿನಲ್ಲಿ ನಿರ್ಮಿಸಿದವರಿಗೂ ಹಣ ಸಂದಾಯವಾಗಿಲ್ಲ. ಸಾಲ ಪಡೆದವರು ಸಾಲಗಾರರ ಕಾಟಕ್ಕೆ ಮನೆ ಮಾರಾಟ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆದು ಫಲಾನುಭವಿಗಳ ಖಾತೆಗೆ ಹಣ ಜಮಾ ಆಗುವಂತೆ ಕ್ರಮ ಕೈಗೊಳ್ಳಿ ಎಂದು ಪುರಸಭೆ ಸದಸ್ಯರು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts