More

    ಮಾರುಕಟ್ಟೆಗಿಂತ ಕಡೆ ಮಿನಿ ವಿಧಾನಸೌಧ

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

    ಕುಂದಾಪುರದ ಮಿನಿ ವಿಧಾನಸೌಧ ಮುಂಭಾಗದಲ್ಲಿ ನಿಂತ ವಾಹನಗಳ ಸರತಿ ನೋಡಿ ಸರ್ಕಾರಿ ನೌಕರರ ಜೀವನಮಟ್ಟ ಸುಧಾರಿಸಿ ಎಲ್ಲರೂ ಕಚೇರಿಗೆ ವಾಹನದಲ್ಲಿ ಬರುತ್ತಿದ್ದಾರೆ ಎಂದು ಭಾವಿಸಿದರೆ ತಪ್ಪಾಗುತ್ತದೆ. ಒಂದಿಬ್ಬರು ವಾಹನದಲ್ಲಿ ಬರುವುದು ಹೌದಾದರೂ ಮಿನಿ ವಿಧಾನಸೌಧ ಮುಂದೆ ನಿಲ್ಲುವುದು ಬೀಡಾಡಿ ವಾಹನಗಳು.

    ಒಂದುಕಡೆ ವಾಹನದ ಅಡ್ಡೆಯಾದರೆ, ಮತ್ತೊಂದು ಕಸಕಡ್ಡಿಗಳ ಗುಡ್ಡೆ. ಸರ್ಕಾರದ ಸ್ವಚ್ಛ ಭಾರತ್ ಯೋಜನೆ ಮಿನಿ ವಿಧಾನಸೌಧದಲ್ಲಿ ಸತ್ತು ಮಲಗಿದೆ. ಕಚೇರಿಗೆ ಬರುವ ಸಿಬ್ಬಂದಿ ಹಾಗೂ ಜನರಿಗೆ ಭದ್ರತೆ ಇಲ್ಲದ ಸ್ಥಿತಿ. ಸೆಕ್ಯುರಿಟಿ ಗಾರ್ಡ್ ಕೂಡ ಇಲ್ಲ.

    ಮಿನಿ ವಿಧಾನಸೌಧ ಅಪಸವ್ಯ

    ಮಿನಿ ವಿಧಾನಸೌಧದ ಅಪಸವ್ಯಗಳ ಪಟ್ಟಿ ಮಾಡುತ್ತಾ ಹೋದರೆ ಅದಕ್ಕೆ ಕೊನೆ ಎಂಬುದಿಲ್ಲ. ದೃಷ್ಟಿಬೊಟ್ಟಿನಂತಿರುವ ಪಾಳು ಕಟ್ಟಡ, ಸೋರುವ ಮಾಡು, ಕಸಕಡ್ಡಿಗಳ ಅಡ್ಡೆ ಹೀಗೆ ಮುಂದುವರಿಯುತ್ತದೆ. ಬಿರುಕುಬಿಟ್ಟ ಗೋಡೆ, ಪಾಚಿಕಟ್ಟಿದ ಮಾಡು, ಹಪ್ಪಳಿಕೆ ಏಳುವ ಸಿಮೆಂಟ್ ಗಿಲಾಯಿ ಮಿನಿ ವಿಧಾನಸೌಧದ ಲಕ್ಷಣ.

    ಉತ್ತರ ಕೊಡೋದು ಯಾರು?

    ಮಿನಿ ವಿಧಾನಸೌಧಕ್ಕೆ ಯಾರು ಬೇಕಾದರೂ ಬರಬಹುದು. ವಾಹನ ಪಾರ್ಕ್ ಮಾಡಿ ಹೋಗಬಹುದು. ಗೇಟ್ ಇದ್ದರೂ ಪ್ರಯೋಜನಕ್ಕಿಲ್ಲ. ಮೆಟಲ್ ಡಿಟೆಕ್ಟರ್ ಇಲ್ಲ. ಕಂದಾಯ, ತಹಸೀಲ್ದಾರ್, ಎಸಿ, ಆಹಾರ, ಸಬ್ ರಿಜಿಸ್ಟಾರ್ ಕಚೇರಿ ಅಂತ ಪ್ರತಿದಿನ ಕಡಿಮೆ ಎಂದರೂ ಸಾವಿರ ಜನ ವಿಸಿಟ್ ಮಾಡುತ್ತಾರೆ.ಒಂದು ಡಿಟೆಕ್ಟರ್ ಹಾಕುವುದಕ್ಕೂ ಸರ್ಕಾರದ ಬಳಿ ದುಡ್ಡಿಲ್ವಾ? ಸೆಕ್ಯುರಿಟಿ ನೇಮಕ ಮಾಡಲಾಗದಷ್ಟು ಸರ್ಕಾರ ಪಾಪರ್ ಆಗಿದೆಯಾ ಎನ್ನುವ ನಾಗರಿಕರ ಪ್ರಶ್ನೆಗೆ ಉತ್ತರ ಕೊಡೋದು ಯಾರು?

    Parking

    ಕಳಪೆ ಕಾಮಗಾರಿ

    ಪಂಚಗಂಗಾವಳಿ ತಟದಲ್ಲಿ ಮಿನಿ ವಿಧಾನಸೌಧ 5 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿದ್ದು, ನಗರಕ್ಕೆ ಕಲಶವಾಗದೆ ಕಳಂಕವಾಗುತ್ತಿದೆ. ಆರಂಭದಲ್ಲಿ ಕಟ್ಟಡ ಕಳಪೆ ಕಾಮಗಾರಿ ಕೂಗೆದ್ದು, ತೇಪೆ ಹಾಕಿ ತಿಪ್ಪೆ ಸಾರಲಾಯಿತು. ಮಳೆಗಾಲದಲ್ಲಿ ಸಿಬ್ಬಂದಿ ಕೊಡೆ ಹಿಡಿದು ಕೂತು ಕೆಲಸ ಮಾಡುವ ಪರಿಸ್ಥಿತಿ ಉಂಟಾಗಿದ್ದು ಕಾಮಗಾರಿಯ ಗುಣಮಟ್ಟಕ್ಕೆ ಸಾಕ್ಷಿ. ಸ್ಲ್ಯಾಬ್ ಸೋರುವುದ್ದರಿಂದ ಸ್ಲ್ಯಾಬ್ ಮೇಲೆ ಮತ್ತೆ 5 ಲಕ್ಷ ರೂ.ವೆಚ್ಚದಲ್ಲಿ ಪ್ಲಾಸ್ಟರ್ ಹಾಕಿದರೂ ಸೋರುವುದು ನಿಲ್ಲಲಿಲ್ಲ. ಮತ್ತೆ ಸೂರುವಿಕೆ ತಪ್ಪಿಸಲು ಶೀಟ್ ಮಾಡು ಮಾಡಲಾಗುತ್ತಿದ್ದು, ಕಟ್ಟಡ ಗುತ್ತಿಗೆದಾರರ ಕಪ್ಪುಪಟ್ಟಿಗೆ ಸೇರಿಸಿ, ಕ್ರಮ ತೆಗೆದುಕೊಳ್ಳುವ ಬದಲು ಮಿನಿ ವಿಧಾನಸೌಧ ಅಪಸವ್ಯದ ದುರಸ್ತಿಗೆ ಸರ್ಕಾರ ಪೆನಾಲ್ಟಿ ಕಟ್ಟುತ್ತಿದೆ. ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣಕ್ಕೂ ಮುನ್ನಾ ಅದೇ ಜಾಗದಲ್ಲಿದ್ದ ಬ್ರಿಟಿಷ್ ಕಾಲದ ಕಟ್ಟಡ ತೆರವಿಗೆ ವಿರೋಧದ ದೊಡ್ಡ ಧ್ವನಿ ಎದ್ದಿತ್ತು.

    Mini Vidhanasoudha

    ಹಾಳುಬಿದ್ದ ಕಟ್ಟಡ

    ಮಿನಿ ವಿಧಾನಸೌಧ ಹಿಂಭಾಗ ಅಂದರೆ ಸಬ್ ರಿಜಿಸ್ಟ್ರಾರ್ ಕಚೇರಿ ಬಳಿ ಅಸಹ್ಯ ಹುಟ್ಟಿಸುವಷ್ಟು ಕೊಳಕಾಗಿದೆ. ಅರಣ್ಯ ಇಲಾಖೆ ಕಟ್ಟಡವೊಂದು ಭೂತ ಬಂಗಲೆಯಾಗಿ ಅಸ್ತಿಪಂಜರ ಹೊರ ಚಾಚಿ, ಮಿನಿ ವಿಧಾನಸೌಧಕ್ಕೆ ಇಟ್ಟ ಕಪ್ಪು ಬೊಟ್ಟಂತೆ ಕಾಣುತ್ತದೆ. ಕಟ್ಟಡ ಏಕೆ ಹಾಳು ಬೀಳಿಸಿದರು, ಸಂಪೂರ್ಣ ಶಿಥಿಲವಾದರೂ ಕಟ್ಟಡ ಡೆಮಾಲಿಷ್ ಏಕೆ ಮಾಡಿಲ್ಲ ಎನ್ನೋದಕ್ಕೆ ಉತ್ತರ ಸಿಗೋದಿಲ್ಲ. ಸರ್ಕಾರಿ ಕಟ್ಟಡಗಳ ಹೇಗೆ ಹಾಳು ಬೀಳುತ್ತವೆ ಎನ್ನೋದಕ್ಕೆ ಹಾಳುಬಿದ್ದ ಕಟ್ಟಡ ಸಾಕ್ಷಿ.

    ಮಿನಿ ವಿಧಾನಸೌಧ ಸ್ವಚ್ಛತೆ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಗಮನಕ್ಕೆ ತಂದು ಪ್ರತಿದಿನ ಮಿನಿ ವಿಧಾನಸೌಧ ಸ್ವಚ್ಛವಾಗಿಡಲು ಗಮನ ಕೊಡಲಾಗುತ್ತದೆ. ವಾಹನ ಪಾರ್ಕ್ ಬಗ್ಗೆಯೂ ಗಮನ ಕೊಡಲಾಗುತ್ತದೆ.
    -ರಶ್ಮಿ ಎಸ್.ಆರ್.
    ಎಸಿ ಕುಂದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts