More

    ಕುಂಭಾಶಿಯಲ್ಲಿ ಹಸು ಘಟಕ, ಅವಿಭಜಿತ ದ.ಕ.ಜಿಲ್ಲೆಯಲ್ಲಿ ಮೊದಲ ಬಾರಿಗೆ ಅನುಷ್ಠಾನ

    ಕುಂದಾಪುರ: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ (ಎನ್‌ಆರ್‌ಎಲ್‌ಎಂ) ಸಂಜೀವಿನಿ ಯೋಜನೆಯಡಿ ಕೊರಗ ಮಹಿಳೆಯರು ಒಟ್ಟಾಗಿ ಹಸು ಘಟಕವೊಂದನ್ನು ಆರಂಭಿಸಿದ್ದಾರೆ. ಐಟಿಡಿಪಿ, ತೋಟಗಾರಿಕೆ, ಪಶುಸಂಗೋಪನಾ ಇಲಾಖೆ ಮೂಲಕ ವಿನೂತನ ಯೋಜನೆ ಜಾರಿಗೆ ತಂದಿದ್ದು,ಅವಿಭಜಿತ ದ.ಕ ಜಿಲ್ಲೆಯ ಪ್ರಥಮ ಘಟಕ ಕುಂಭಾಶಿಯಲ್ಲಿ ಆರಂಭವಾಗಿದೆ.

    ಕುಂಭಾಶಿ ಕೊರಗ ಮಕ್ಕಳ ಮನೆ ಬಳಿ ಸಂಜೀವಿನಿ ಯೋಜನೆಯಲ್ಲಿ 17 ಲಕ್ಷ ರೂ. ವೆಚ್ಚದಲ್ಲಿ ಆಧುನಿಕ ಹಟ್ಟಿ ನಿರ್ಮಿಸಿದ್ದು, ಆರಂಭಿಕವಾಗಿ ಎರಡು ಹಸುಗಳು ಹಟ್ಟಿಯಲ್ಲಿವೆ. ಮತ್ತೆ ಎಂಟು ಹಸು ಕರು ಹಟ್ಟಿ ಸೇರಲಿವೆ. ಸಂಘದ ಸದಸ್ಯರಿಗೆ 1.20 ಲಕ್ಷ ರೂ.ನಲ್ಲಿ 2 ಹಸು ನೀಡಲಾಗುತ್ತದೆ. ಕೊರಗ ಸಮುದಾಯದ ಮಹಿಳೆಯರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಹಸು ಘಟಕ ಪ್ರಾರಂಭಿಸಿ ಯಶಸ್ವಿಯಾದರೆ ಮುಂದೆ ಮೂಲನಿವಾಸಿ ಮಹಿಳೆಯರಿಗಾಗಿ ಚಿಕ್ಕಿ, ಕೋಳಿ ಘಟಕ ನಿರ್ಮಿಸುವ ಯೋಜನೆ ಕೂಡ ಎನ್‌ಆರ್‌ಎಲ್‌ಎಂ ಮೂಲಕ ಕಾರ್ಯರೂಪಕ್ಕೆ ಬರಲಿದೆ.

    ಹಟ್ಟಿಗೆ ಆಧುನಿಕ ಸ್ಪರ್ಶ: ಸಂಜೀವಿನಿ ಯೋಜನೆಯಲ್ಲಿ ನಿರ್ಮಿಸಿದ ಹಟ್ಟಿಗೆ ಆಧುನಿಕತೆಯ ಸ್ಪರ್ಷ ನೀಡಲಾಗಿದೆ. ಎನ್‌ಆರ್‌ಎಲ್‌ಎಂ ಅನುದಾನ ನೀಡಿದರೆ, ಹಸು ವಿಕ್ರಯ, ಅವುಗಳ ಜತನ ಮಾಡುವುದಕ್ಕೆ ಬೇಕಾದ ಅನುದಾನ ಐಟಿಡಿಪಿ ನೀಡಲಿದ್ದು, ಶೇ.90ರಷ್ಟು ಸಹಾಯಧನವಿದೆ. ತೋಟಗಾರಿಕೆ ಇಲಾಖೆ ಮೂಲಕ ಹಸುಗಳಿಗೆ ಹುಲ್ಲು ಕೃಷಿ, ನೀರು ಪೂರೈಕೆಗೆ ಸ್ಪಿಂಕ್ಲರ್ ಸೌಲಭ್ಯ ಕಲ್ಪಿಸಲಾಗುತ್ತದೆ. ಪಶು ವೈದ್ಯರು ವಾರದಲ್ಲಿ ಎರಡು ಬಾರಿ ಹಟ್ಟಿಗೆ ಭೇಟಿ ನೀಡಿ, ಅವುಗಳ ಆರೋಗ್ಯ, ಹಾಲಿನ ಗುಣಮಟ್ಟ, ಆರೈಕೆ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ. ಹಟ್ಟಿಯಲ್ಲಿ ಸಿಮೆಂಟ್ ಹಾಸು, ನೆಲ ಹಾಸಿನ ಮೇಲೆ ಮ್ಯಾಟ್, ಹಟ್ಟಿ ತೊಳೆಯಲು ಯಂತ್ರಚಾಲಿತ ಸ್ಪ್ರೇಯರ್, ವಿದ್ಯುತ್ ವ್ಯವಸ್ಥೆ, ಹತ್ತು ಹಸುಕರು ಕಟ್ಟಲು ಅವಕಾಶವಿರುವ ಹಟ್ಟಿಯಲ್ಲಿ ನಾಲ್ಕು ಫ್ಯಾನ್ ಕೂಡ ಅಳವಡಿಸಲಾಗಿದೆ. ಹುಲ್ಲುಗಾವಲು, ನೀರು ಪೂರೈಕೆ ಐಟಿಡಿಪಿ ಜತೆ ಸ್ಥಳೀಯ ಗ್ರಾಪಂ ಕೈ ಜೋಡಿಸುತ್ತದೆ. ಘಟಕದ ಒಟ್ಟು ವೆಚ್ಚ 21 ಲಕ್ಷ ರೂ. ಹಾಲು ಕರೆದು ಸ್ಥಳೀಯ ಡೇರಿಗೆ ನೀಡುವ ಕೆಲಸ ಸಂಘದ ಸದಸ್ಯರು ಮಾಡಬೇಕು.

    ಸಂಜೀವಿನಿ ಯೋಜನೆ ಮೂಲಕ ಹಸು ಘಟಕ ಹಾಗೂ ನಿರ್ವಹಣೆ ಹಿನ್ನೆಲೆಯಲ್ಲಿ ಕೊರಗ ಮಹಿಳೆಯರಿಗೆ ಬ್ರಹ್ಮಾವರ ರುಡ್‌ಸೆಡ್ ಮೂಲಕ ಐಟಿಡಿಪಿ ತರಬೇತಿ ನೀಡಿ ಸಜ್ಜುಗೊಳಿಸಿದೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಇದು ಮೊದಲ ಘಟಕವಾಗಿದ್ದು, ಫಲಿತಾಂಶ ನೋಡಿ ಯೋಜನೆ ಮತ್ತಷ್ಟು ವಿಸ್ತರಿಸಲಾಗುತ್ತದೆ.
    ವಿಶ್ವನಾಥ ಶೆಟ್ಟಿ, ತನಿಖಾಧಿಕಾರಿ, ಐಟಿಡಿಪಿ, ಉಡುಪಿ

    ಜಿಲ್ಲೆಯಲ್ಲಿ ಈಗಾಗಲೇ ಕೊರಗ ಜನಗಣತಿ, ಆರೋಗ್ಯ, ಶೈಕ್ಷಣಿಕ ಪ್ರಗತಿ ಬಗ್ಗೆ ವರದಿ ಸಿದ್ಧವಾಗುತ್ತಿದೆ.ಕಾಲನಿಗೆ ಭೇಟಿ ನೀಡಿ ಅವರ ಬದುಕು ಅರಿಯುವ ಪ್ರಯತ್ನ ಮಾಡಿ ಸಮಸ್ಯೆ ಬಗೆಹರಿಸಲಾಗುವುದು.
    ಡಾ.ನವೀನ್ ಭಟ್, ಜಿಪಂ ಮುಖ್ಯಕಾರ‌್ಯನಿರ್ವಹಣಾಧಿಕಾರಿ ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts