More

    ಕೃಷ್ಣಾ ಟಾಕೀಸ್ ಚಿತ್ರ ವಿಮರ್ಶೆ: ಊಹೆಗೆ ನಿಲುಕುವ ಹಾರರ್ ಕಥೆ

    • ಚೇತನ್ ನಾಡಿಗೇರ್, ಬೆಂಗಳೂರು

    ಪ್ರತಿ ತಿಂಗಳು ಸರಿಯಾಗಿ 13ನೇ ತಾರೀಖಿನಂದು ಒಬ್ಬರು ನಿಗೂಢವಾಗಿ ಅದೇ ಜಾಗದಲ್ಲಿ ಸಾಯುತ್ತಿರುತ್ತಾರೆ. ರಾತ್ರಿ ಒಂದು ಗಂಟೆ ನಂತರವೇ ಆ ಎಲ್ಲ ದುರ್ಘಟನೆಗಳು ಸಂಭವಿಸುತ್ತಿರುತ್ತವೆ. ಸತ್ತವರೆಲ್ಲ ಗಂಡಸರೇ. ಒಂದು ಸಾವು ಬಿಟ್ಟರೆ ಮಿಕ್ಕೆಲ್ಲವೂ ಸಂಭವಿಸುವುದು ದೆವ್ವದ ಕಾಟವಿರುವ ಕಲ್ಮಾಡಿ ಜಂಕ್ಷನ್​ನಲ್ಲಿ. ಎಲ್ಲದಕ್ಕೂ ಮೂಲ ಕೃಷ್ಣ ಟಾಕೀಸ್. ಏಕೆಂದರೆ, ಸತ್ತವರಲ್ಲಿ ಬಹಳಷ್ಟು ಜನ ಅಲ್ಲಿ ನೈಟ್ ಶೋ ನೋಡಿರುತ್ತಾರೆ. ಅದೂ ಬಾಲ್ಕನಿಯ ಎಫ್ 13 ಸೀಟ್​ನಲ್ಲಿ ಕುಳಿತು. ಹಾಗಾದರೆ, ಈ ಎಲ್ಲ ಸಾವುಗಳಿಗೆ ಕಾರಣರ್ಯಾರು? ಇದೆಲ್ಲದರ ಹಿಂದೆ ಯಾವುದಾದರೂ ಕಾಣದ ಶಕ್ತಿ ಇದೆಯಾ?

    ಇಂಥದ್ದೊಂದು ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಉತ್ತರಕ್ಕಾಗಿ ಹುಡುಕಾಡುತ್ತಾನೆ ಪತ್ರಕರ್ತ ಅಜೇಯ್. ಆರಂಭದಲ್ಲಿ ಮೂಡಿಗೆರೆಯ ಕೃಷ್ಣ ಟಾಕೀಸ್ ಸುತ್ತಮುತ್ತ ಇಷ್ಟೆಲ್ಲ ಘಟನೆಗಳು ನಡೆಯುತ್ತಿರುವ ವಿಷಯ ಅವನಿಗೆ ಗೊತ್ತೇ ಇರುವುದಿಲ್ಲ. ಹಲವು ತಿಂಗಳುಗಳ ಹಿಂದೆ ಪರಿಮಳ ಎಂಬ ಹುಡುಗಿ ನಿಗೂಢವಾಗಿ ಕಣ್ಮರೆಯಾಗಿದ್ದರ ಕುರಿತು ತನಿಖೆ ನಡೆಸುವುದಕ್ಕೆ ಮುಂದಾಗುತ್ತಾನೆ. ಆ ಕೇಸ್​ನ ಆಳಕ್ಕೆ ಇಳಿಯುತ್ತಿದ್ದಂತೆಯೇ ಹಲವು ವಿಷಯಗಳು ಅವನ ಅರಿವಿಗೆ ಬರುತ್ತ ಹೋಗುತ್ತವೆ. ಹಾಗಾದರೆ, ಆ ಕೊಲೆಗಳಿಗೂ, ಪರಿಮಳ ಮಿಸ್ಸಿಂಗ್ ಕೇಸ್​ಗೂ ಏನಾದರೂ ಸಂಬಂಧವಿದೆಯಾ? ಈ ರಹಸ್ಯವನ್ನು ಬಿಟ್ಟುಕೊಟ್ಟರೆ ಟಾಕೀಸ್​ನಲ್ಲಿ ಚಿತ್ರ ನೋಡಿದ ಮಜ ಇರುವುದಿಲ್ಲ.

    ‘ಕೃಷ್ಣ ಟಾಕೀಸ್’ ಒಂದು ಹಾರರ್-ಥ್ರಿಲ್ಲರ್ ಚಿತ್ರ. ನಿರ್ದೇಶಕ ವಿಜಯಾನಂದ್ ಥ್ರಿಲ್ ಕೊಡುತ್ತಲೇ, ಕೊನೆಯಲ್ಲಿ ಪ್ರೇಕ್ಷಕರನ್ನು ಬೆಚ್ಚಿಬೀಳಿಸುತ್ತಾರೆ. ಇನ್ನು. ಹೆಜ್ಜೆಹೆಜ್ಜೆಗೂ ತಿರುವುಗಳನ್ನು ಕೊಡುವ ಮೂಲಕ ಪ್ರೇಕ್ಷಕರಿಗೆ ಟೆನ್ಶನ್ ಕೊಡುತ್ತಾರೆ. ಇದು ಚಿತ್ರದ ಪ್ಲಸ್ ಹೌದು, ಮೈನಸ್ ಸಹ ಹೌದು. ಏಕೆಂದರೆ, ಚಿತ್ರದಲ್ಲಿ ಅದೆಷ್ಟು ತಿರುವುಗಳಿವೆಯೆಂದರೆ, ಪ್ರೇಕ್ಷಕ ಚಿತ್ರ ಮುಗಿಯಿತೆಂದುಕೊಂಡರೂ ಮುಗಿಯುವುದೇ ಇಲ್ಲ. ಬೆಳೆಯುತ್ತಾ ಹೋಗುತ್ತದೆ. ಬಹುಶಃ ಇದನ್ನೇ ಚಿಕ್ಕದಾಗಿ, ಚೊಕ್ಕದಾಗಿ ನಿರೂಪಿಸಿದ್ದರೆ, ಪ್ರೇಕ್ಷಕರ ಮನದಲ್ಲಿ ಬಹಳ ಕಾಲ ಇರುತ್ತಿತ್ತೇನೋ? ಆದರೆ, ಪ್ರೇಮಕಥೆ, ನಾಯಕ-ನಾಯಕಿಯ ಕಣ್ಣಾಮುಚ್ಚಾಲೆಯಾಟ, ಹಾಡುಗಳು ಇವೆಲ್ಲ ಸೇರಿ ಚಿತ್ರ ದೀರ್ಘವಾಗಿದೆ. ಚಿತ್ರ ಬೇರೆ ರೀತಿ ಅಂತ್ಯ ಕಾಣಬಹುದು ಎಂದುಕೊಂಡರೆ, ಮಾಮೂಲಿಯಾಗಿ ಮುಗಿದು ಬೇಸರ ಮೂಡಿಸುತ್ತದೆ.

    ‘ಕೃಷ್ಣ ಟಾಕೀಸ್’ ಚಿತ್ರವು ಕನ್ನಡಕ್ಕೆ ಹೊಸದೇನಲ್ಲದಿದ್ದರೂ, ಅಜೇಯ್ ರಾವ್ ವೃತ್ತಿಜೀವನದಲ್ಲಿ ವಿಶೇಷವಾದ ಚಿತ್ರ ಎಂದರೆ ತಪ್ಪಿಲ್ಲ. ಏಕೆಂದರೆ, ಇದುವರೆಗೂ ಲವ್ವರ್ ಬಾಯ್ ಪಾತ್ರಗಳಲ್ಲೇ ಹೆಚ್ಚು ಅಭಿನಯಿಸುತ್ತಿದ್ದ ಅಜೇಯ್ ರಾವ್, ಇಲ್ಲಿ ಬಹಳ ಗಂಭೀರವಾದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ತಮ್ಮ ಅಭಿನಯದಿಂದ ಖುಷಿಕೊಡುತ್ತಾರೆ. ಚಿಕ್ಕಣ್ಣ, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅಭಿಷೇಕ್ ಕಾಸರಗೋಡು ಛಾಯಾಗ್ರಹಣ ಖುಷಿಕೊಡುತ್ತದೆ. ಶ್ರೀಧರ್ ಸಂಭ್ರಮ್ ಸಂಗೀತದಲ್ಲಿ ಮೂಡಿಬಂದಿರುವ ‘ಮನಮೋಹನ …’ ಹಾಡು ಚಿತ್ರದ ಪ್ಲಸ್​ಪಾಯಿಂಟ್​ಗಳಲ್ಲೊಂದು.

    ಹಿರಿಯ ನಟ ದ್ವಾರಕೀಶ್ ಪತ್ನಿ ಅಂಬುಜಾ​ ನಿಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts