More

    ಕೆಪಿಎಸ್​ಸಿ ನೇಮಕಾತಿಗಳ ಸ್ಥಿತಿ-ಗತಿಯ ರಿಪೋರ್ಟ್​ ಕಾರ್ಡ್​ ಸಿದ್ಧ: ವೆಬ್​ಸೈಟ್​ನಲ್ಲಿ ಮಾಹಿತಿ ಲಭ್ಯ

    ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್​ಸಿ) ಹೊರಡಿಸಿರುವ ಅಧಿಸೂಚನೆಗಳು ಮತ್ತು ನೇಮಕಾತಿ ಸ್ಥಿತಿ-ಗತಿಯ ಸಂಪೂರ್ಣ ವಿವರವನ್ನು ಆಯೋಗ ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸಿದೆ.

    ಪ್ರತಿ ಬಾರಿ ಕೆಪಿಎಸ್​ಸಿಗೆ ಕರೆ ಮಾಡಿ ನೇಮಕಾತಿ ವಿಚಾರಗಳ ಬಗ್ಗೆ ಅಭ್ಯರ್ಥಿಗಳು ವಿಚಾರಣೆ ಮಾಡುತ್ತಿದ್ದರು. ಹಾಗಾಗಿ ಎಲ್ಲ ಅಭ್ಯರ್ಥಿಗಳಿಗೂ ನೇಮಕಾತಿಯ ಸ್ಥಿತಿ-ಗತಿ ತಿಳಿಯಲಿ ಎಂದು ಸಂಪೂರ್ಣ ಮಾಹಿತಿಯನ್ನು ಅಪ್ಲೋಡ್​ ಮಾಡಿದೆ. ಈ ರೀತಿ ರಿಪೋರ್ಟ್​ ಕಾರ್ಡ್​ ಪ್ರಕಟಿಸಿರುವುದು ಇದೇ ಮೊದಲೇನಲ್ಲ, ಈ ಹಿಂದೆ ಆಯೋಗದ ಕಾರ್ಯದರ್ಶಿಯಾಗಿದ್ದ ಸುಭೋದ್​ ಯಾದವ್​ ಮತ್ತು ಪ್ರಸನ್ನ ಕುಮಾರ್​ ಇದ್ದಾಗಲೂ ಈ ರೀತಿ ಪ್ರಕಟಿಸಿದ್ದರು. ಆನಂತರ ಬಂದ ಕಾರ್ಯದರ್ಶಿಗಳು ಇದಕ್ಕೆ ಪ್ರಾಮುಖ್ಯತೆ ನೀಡಿರಲಿಲ್ಲ. ಇದೀಗ ಮತ್ತೆ ಸ್ಥಿತಿ-ಗತಿ ಪ್ರಕಟಿಸುವ ಪರಿಪಾಠ ಆರಂಭವಾಗಿದೆ.

    ಪತ್ರಾಂಕಿತ ಅಧಿಕಾರಿಗಳ ನೇಮಕದಿಂದ ಹಿಡಿದು ದ್ವಿತೀಯ ದರ್ಜೆ, ಪ್ರಥಮ ದರ್ಜೆ ಸಹಾಯಕರ ನೇಮಕದವರೆಗೆ ಸುಮಾರು 28 ಬಗೆಯ ನೇಮಕಗಳು ಯಾವ ಹಂತದಲ್ಲಿವೆ ಎಂಬ ಮಾಹಿತಿಯನ್ನು ಅಭ್ಯರ್ಥಿಗಳು ವೆಬ್​ಸೈಟ್​ಗೆ ಭೇಟಿ ನೀಡಿ ಪರಿಶೀಲಿಸಿಕೊಳ್ಳಬಹುದು.
    ಇದರಲ್ಲಿ ನೇಮಕಕ್ಕೆ ಅಧಿಸೂಚನೆ ಹೊರಡಿಸಿದ ದಿನಾಂಕ, ಇಲಾಖೆ, ಹುದ್ದೆಗಳ ಪದನಾಮ, ಹುದ್ದೆಗಳ ಸಂಖ್ಯೆ ಮತ್ತು ಸದ್ಯದ ಸ್ಥಿತಿ, ಪರೀಕ್ಷಾ ದಿನಾಂಕ ನಿಗದಿ, ಸಂದರ್ಶನ ಮಾಹಿತಿ ಹೀಗೆ ಎಲ್ಲ ಸಂಪೂರ್ಣ ವಿವರವನ್ನು ನೀಡಿದೆ.

    ಬಹುತೇಕ ನೇಮಕಾತಿಗಳ ವಿರುದ್ಧ ಅಭ್ಯರ್ಥಿಗಳು ಹೈಕೋರ್ಟ್​ಗೆ ಹೋಗಿದ್ದು, ನ್ಯಾಯಾಲಯದ ತಡೆಯಾಜ್ಞೆ ಹೊರತಾಗಿ ಉಳಿದ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಯೋಜನೆ ರೂಪಿಸುತ್ತಿದೆ.

    ರಿಪೋರ್ಟ್​ ಕಾರ್ಡ್​: ಸಾಮಾನ್ಯವಾಗಿ ಕೆಪಿಎಸ್​ಸಿ ಅರ್ಜಿ ಆಹ್ವಾನಿಸಿದ ನಂತರದಿಂದ ನೇಮಕಾತಿ ಆದೇಶ ನೀಡುವವರೆಗೂ ಅಭ್ಯರ್ಥಿಗಳು ಆಯೋಗದ ಮಾಹಿತಿಯ ನಿರೀಕ್ಷೆಯಲ್ಲಿರುತ್ತಾರೆ. ನಿತ್ಯ ನೂರಾರು ಅಭ್ಯರ್ಥಿಗಳು ಆಯೋಗದ ಸಹಾಯವಾಣಿಗೆ ಕರೆ ಮಾಡಿ ವಿಚಾರಣೆ ನಡೆಸುತ್ತಲೇ ಇರುತ್ತಾರೆ. ಇದರಿಂದ ನಿತ್ಯ ನೂರಾರು ಜನರಿಗೆ ಮಾಹಿತಿ ನೀಡುವುದು ಕೂಡ ಆಯೋಗಕ್ಕೆ ಕಿರಿಕಿರಿ ತಂದಂತಾಗಿದೆ. ಇದರಿಂದ ಆಯೋಗಕ್ಕೆ ಕಳಂಕ ಕೂಡ ಉಂಟಾಗಿದೆ. ಈ ಎಲ್ಲದರಿಂದ ಹೊರಬಂದು ಆಯೋಗ ಪಾರದರ್ಶಕತೆಯಲ್ಲಿ ಕೆಲಸ ಮಾಡುತ್ತಿದೆ ಎಂಬ ವಿಶ್ವಾಸವನ್ನು ಅಭ್ಯರ್ಥಿಗಳಲ್ಲಿ ಮೂಡಿಸಲು ಇದೊಂದು ಉತ್ತಮ ಮಾರ್ಗೋಪಾಯವಾಗಿದೆ. ಇನ್ಮುಂದೆ ಪ್ರತಿ ತಿಂಗಳಿಗೆ ಎರಡು ಬಾರಿ ನೇಮಕ ವಿಚಾರದ ಸ್ಥಿತಿ-ಗತಿ ಕುರಿತು ಅಪ್​ಡೇಟ್​ ಮಾಹಿತಿಯನ್ನು ರಿಪೋರ್ಟ್​ ಕಾರ್ಡ್​ ಮಾದರಿಯಲ್ಲಿ ಆಯೋಗದ ವೆಬ್​ಸೈಟ್​ನಲ್ಲಿ ಪ್ರಕಟಿಸಲು ಆಲೋಚನೆ ನಡೆಸಲಾಗುತ್ತಿದೆ ಎಂಬ ವಿಚಾರ ತಿಳಿದು ಬಂದಿದೆ.

    ನೇಮಕಾತಿಗೆ ಆರಂಭ: ವಿವಿಧ ಇಲಾಖೆಯಲ್ಲಿ ಸ್ಥಗಿತವಾಗಿರುವುದಕ್ಕೆ ಪ್ರಮುಖ ಕಾರಣ ಕರೊನಾ. ಇದು ನೇಮಕಾತಿ ಮೇಲೂ ಹೆಚ್ಚಿನ ಪ್ರಭಾವ ಬೀರಿದ್ದು, ಹಲವಾರು ಪರೀಕ್ಷೆಗಳನ್ನು ಮುಂದೂಡಲಾಯಿತು. ಆದ್ಯತೆ ಮೇರೆಗೆ ಶ್ರೀಘ್ರದಲ್ಲೇ ಪರೀಕ್ಷೆಗಳ ದಿನಾಂಕವನ್ನು ಪ್ರಕಟಿಸಲಿದ್ದು, ಇದಾದ ಬಳಿಕ 2020 ಜೂನ್​- ಜುಲೈನಲ್ಲಿ ಹೊರಡಿಸಲಾದ ಅಧಿಸೂಚನೆಗಳಿಗೆ ಪರೀಕ್ಷೆ ದಿನಾಂಕ ನಿಗದಿ ಪಡಿಸಲಾಗುತ್ತದೆ.
    ಕೆಲವು ಇಲಾಖೆಗಳ ಹುದ್ದೆಗಳ ನೇಮಕಾತಿಗೆ ಅಕ್ಷೇಪಣೆ ವ್ಯಕ್ತವಾಗಿದ್ದು, ಇಲಾಖೆಗಳಿಂದ ಸ್ಪಷ್ಟೀಕರಣ ಕೇಳಿದೆ.

    ನಾನು ಬೀದಿಗೆ ಬಂದಿರುವೆ, ನನ್ನ ಕೈ ಹಿಡಿಯಿರಿ… ಎಂದು ಬೇಡಿದ ಅಖಂಡ ಶ್ರೀನಿವಾಸ ಮೂರ್ತಿ

    ‘ಗ್ರಾಮ ಒನ್’ಗೆ ಸಿಎಂ ಚಾಲನೆ, ಇನ್ಮುಂದೆ ವಿವಿಧ ಇಲಾಖೆಯ ಈ ಸೇವೆಗಳು ಹಳ್ಳಿಯಲ್ಲೇ ಲಭ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts