More

    ಕಾರ್ಯಕರ್ತನ ಗಡಿಪಾರು ಖಂಡಿಸಿ ಬಿಜೆಪಿ ಧರಣಿ

    ಶಿವಮೊಗ್ಗ: ಬಿಜೆಪಿ ಕಾರ್ಯಕರ್ತನನ್ನು ಮತದಾನದ ಮುನ್ನ ದಿನ ಬೀದರ್ ಜಿಲ್ಲೆಗೆ ಗಡಿಪಾರು ಮಾಡಿರುವ ಸಾಗರ ಉಪವಿಭಾಗಾಧಿಕಾರಿ ಆದೇಶ ಖಂಡಿಸಿ ಶಿವಮೊಗ್ಗ ಲೋಕಸಭಾ ಸದಸ್ಯ, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪಕ್ಷದ ಕಾರ್ಯಕರ್ತರು ಧರಣಿ ನಡೆಸಿದರು.

    ಸಾಗರ ಎಸ್.ಎನ್.ನಗರ ಹೊಸ ಬಡಾವಣೆ ನಿವಾಸಿ ವಿನೋದ್ ರಾಜ್ (29) ಎಂಬಾತನನ್ನು ಬೀದರ್‌ಗೆ ಏಕಾಏಕಿ ಗಡಿಪಾರು ಮಾಡಿರುವುದು ಅಕ್ಷಮ್ಯವಾಗಿದ್ದು, ತಕ್ಷಣವೇ ಗಡಿಪಾರು ಆದೇಶ ಹಿಂಪಡೆಯಬೇಕು ಎಂದು ಪಟ್ಟು ಹಿಡಿದರು. ಕಾರು ಚಾಲಕ ಮತ್ತು ಸಿಮೆಂಟ್ ಇಟ್ಟಿಗೆ ತಯಾರಿಸುವ ಕೆಲಸ ಮಾಡಿಕೊಂಡಿದ್ದ ವಿನೋದ್ ರಾಜ್ ಮೇಲೆ ವಿನಾಕಾರಣ ಇಲ್ಲಸಲ್ಲದ ಆರೋಪ ಮಾಡಿ ಗಡಿಪಾರಿಗೆ ಆದೇಶಿಸಿರುವುದು ಸರಿಯಲ್ಲ. ತಕ್ಷಣವೇ ಆದೇಶ ರದ್ದುಪಡಿಸುವಂತೆ ಒತ್ತಾಯಿಸಿದರು.
    ವಿನೋದ್ ರಾಜ್ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ, ಸಾಗರ ಒಬಿಸಿ ಮೋರ್ಚಾ ತಾಲೂಕು ಅಧ್ಯಕ್ಷನಾಗಿದ್ದು, ಸಮಾಜಮುಖಿ ಕೆಲಸ ಮಾಡಿಕೊಂಡಿದ್ದಾರೆ. ಹಲವಾರು ವರ್ಷಗಳಿಂದ ಪಕ್ಷದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗಡಿಪಾರು ಮಾಡಿರುವ ಆದೇಶವನ್ನು ಪುನಃ ಪರಿಶೀಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
    ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಸಾಗರ ವಿಧಾನಸಭಾ ಕ್ಷೇತ್ರದ ಸಂಜಯ್ ಅಲಿಯಾಸ್ ತಿಮ್ಮಪ್ಪ ಎಂಬುವರನ್ನು ಒಸಿ ಕೇಸ್‌ನಡಿ ಬಂಧಿಸಿ ಬಲವಂತವಾಗಿ ಆತನಿಂದ ವಿನೋದರಾಜ್ ಹೆಸರು ಹೇಳಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಿಜೆಪಿ ಒಬಿಸಿ ಮೋರ್ಚಾ ತಾಲೂಕು ಅಧ್ಯಕ್ಷರಾಗಿರುವ ವಿನೋದ್ ರಾಜ್ ನಾಲ್ಕು ವರ್ಷಗಳಿಂದ ಪಕ್ಷದಲ್ಲಿ ಶಾಂತಿಯುತವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಪೂರ್ವ ನಿಯೋಜಿತವಾಗಿ ಆತನ ಮೇಲೆ ಕೇಸ್ ದಾಖಲಿಸಲಾಗಿದೆ. ಜಾಮೀನು ಕೂಡ ಸಿಗದಂತೆ ಮಾಡಿ ಭಾನುವಾರ ರಾತ್ರಿ ಏಕಾಏಕಿ ಜೀಪ್‌ನಲ್ಲಿ ಕರೆದೊಯ್ದು ಬೀದರ್‌ಗೆ ಬಿಟ್ಟು ಬಂದಿದ್ದಾರೆ ಎಂದು ಕಿಡಿಕಾರಿದರು.
    ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದರೂ ಇಂದಿರಾ ಗಾಂಧಿ ಕಾಲದಲ್ಲಿದ್ದ ತುರ್ತು ಪರಿಸ್ಥಿತಿ ರೀತಿ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. 135 ಸೀಟುಗಳನ್ನು ಗೆದ್ದಿರುವ ದರ್ಪದಲ್ಲಿ ರಾಜ್ಯ ಸರ್ಕಾರ ದುರಾಡಳಿತ ನಡೆಸುತ್ತಿದೆ. ಅಧಿಕಾರದ ಮದದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಗಡಿಪಾರಿನ ಅಸ್ತ್ರ ಬಳಸಲಾಗಿದೆ. ಕಾನೂನಿನಲ್ಲಿ ಅವಕಾಶವಿದ್ದರೆ ಅಂಬೇಡ್ಕರ್ ಕೊಟ್ಟಂತಹ ಮತದಾನದ ಹಕ್ಕನ್ನು ಚಲಾಯಿಸಲು ವಿನೋದ್ ರಾಜ್‌ಗೆ ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಮನವಿ ಸಲ್ಲಿಸಿದರು.
    ಇನ್ಮುಂದೆ ಬಿಜೆಪಿಯ ಯಾವುದೇ ಕಾರ್ಯಕರ್ತರ ಮೇಲೆ ವಿನಾಕರಣ ಕೇಸ್ ದಾಖಲಿಸಿ ಅಮಾನವೀಯ ಕ್ರಮ ಕೈಗೊಂಡರೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ. ಪಕ್ಷದಲ್ಲಿ ಹಗಲು-ರಾತ್ರಿ ಎನ್ನದೇ ಕಷ್ಟಪಟ್ಟು ಕೆಲಸ ಮಾಡುತ್ತಿರುವ ಕಾರ್ಯಕರ್ತರ ಬೆನ್ನಿಗೆ ನಿಲ್ಲುವುದು ನಮ್ಮ ಕರ್ತವ್ಯವಾಗಿದೆ ಎಂದರು.
    ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ, ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿಗಳಾದ ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಮುಖಂಡರಾದ ಎಸ್.ದತ್ತಾತ್ರಿ, ಎಸ್.ಎಸ್.ಜ್ಯೋತಿಪ್ರಕಾಶ್, ಸಂತೋಷ್ ಬಳ್ಳೆಕೆರೆ, ದಿವಾಕರ್ ಹೆಗಡೆ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts