More

    ಕೋಟತಟ್ಟು ಕೆರೆಗಳಿಗೆ ಕಾಯಕಲ್ಪ, ಉದ್ಯೋಗಖಾತ್ರಿ ತಂಡದಿಂದ ಕಾಮಗಾರಿ, ಸಾವಿರಾರು ಎಕರೆ ಕೃಷಿಗೆ ಮರುಜೀವ

    ವಿಜಯವಾಣಿ ಸುದ್ದಿಜಾಲ ಕೋಟ

    ಗ್ರಾಮದ ಅಭಿವೃದ್ಧಿಗೆ ಪೂರಕವಾದ ವಿವಿಧ ಕಾರ್ಯಗಳನ್ನು ಹಮ್ಮಿಕೊಂಡಿರುವ ಕೋಟತಟ್ಟು ಗ್ರಾಮ ಪಂಚಾಯಿತಿ ತನ್ನ ವ್ಯಾಪ್ತಿಯ ಜೀವಜಲಕ್ಕೆ ಕಾಯಕಲ್ಪ ನೀಡಲು ಮುಂದಾಗಿದೆ. ಕೆರೆಗಳಿಗೆ ಪುನರ್ಜೀವ ನೀಡುವ ಮೂಲಕ ಗ್ರಾಮದಲ್ಲಿ ಅಂತರ್ಜಲ ವೃದ್ಧಿಗೆ ಪೂರಕ ವಾತಾವರಣ ರೂಪಿಸಲು ಸಜ್ಜಾಗಿದೆ.
    ಕಳೆದೆರಡು ವರ್ಷಗಳಿಂದ ಕೋಟತಟ್ಟು ಬಾರಿಕೆರೆ ಎರಡು ಬಾರಿ ಸ್ವಚ್ಛಗೊಳಿಸಿ ಹೂಳಿನಿಂದ ಮುಕ್ತಗೊಳಿಸಿದೆ. ಅದಾದ ಬಳಿಕ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರುಣಿಸಬಲ್ಲ ಕೋಟತಟ್ಟು ಬಡುಕನಗುಮ್ಮಿಗೆ ಕಳೆದ ವರ್ಷ ಮರುಜೀವ ನೀಡಲಾಗಿದೆ. ಈ ವರ್ಷ 20 ಸೆಂಟ್ಸ್ ವಿಸ್ತೀರ್ಣದ ಬಾಯರ್ ಗಣಪತಿ ದೇಗುಲದ ಸನಿಹದ ಬಾರಿಕೆರೆಯನ್ನು ಗಿಡಗಂಟಿ ಹಾಗೂ ಹೂಳಿನಿಂದ ಮುಕ್ತಗೊಳಿಸಲು ಮುಂದಾಗಿದ್ದು, 22 ಜನ ಉದ್ಯೋಗಖಾತ್ರಿ ತಂಡದಿಂದ ಕೆಲಸ ಆರಂಭಗೊಂಡಿದೆ.

    ಮಹಾತ್ಮಾಗಾಂಧಿ ಉದ್ಯೋಗಖಾತ್ರಿ ಯೋಜನೆಯಡಿ ಬಾರಿ ಕೆರೆಗೆ ಹೂಳು ಮುಕ್ತಗೊಳಿಸುವ ಕೆಲಸಕ್ಕೆ ಸೋಮವಾರ ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಕುಂದರ್ ಚಾಲನೆ ನೀಡಿದರು. ಜಿಪಂ ಮಾಜಿ ಸದಸ್ಯ ರಾಘವೇಂದ್ರ ಕಾಂಚನ್, ಕೋಟತಟ್ಟು ಪಂಚಾಯಿತಿ ಸದಸ್ಯರಾದ ವಾಸು ಪೂಜಾರಿ, ಪ್ರಕಾಶ್ ಹಂದಟ್ಟು, ರವೀಂದ್ರ ತಿಂಗಳಾಯ, ಕಾರ್ಯದರ್ಶಿ ಸುಮತಿ ಅಂಚನ್, ಪಿಡಿಒ ರವೀಂದ್ರ ರಾವ್, ಕೋಟ ಸಿ.ಎ. ಬ್ಯಾಂಕ್ ನಿರ್ದೇಶಕ ರಂಜೀತ್ ಕುಮಾರ್, ಬಾರಿ ಮನೆತನದ ಮಹೇಶ್ ಬಾಯರಿ, ಸುರೇಶ್ ಬಾಯರಿ, ಪಂಚಾಯಿತಿ ಸಿಬ್ಬಂದಿ ಶಕೀಲ ಎನ್. ಪೂಜಾರಿ, ನವೀನ್ ಕೋಟ ಮತ್ತಿತರರು ಉಪಸ್ಥಿತರಿದ್ದರು.

    ಪ್ರಾಣಿ, ಪಕ್ಷಿ, ಕೃಷಿಗೆ ಆಸರೆ

    ಬಾರಿಕೆರೆ ಹಲವು ಎಕರೆ ಕೃಷಿ ಭೂಮಿಗೆ, ಪ್ರಾಣಿ, ಪಕ್ಷಿಗಳಿಗೆ ಜೀವಸೆಳೆಯಾಗಿದೆ. ಅಲ್ಲದೆ ಅಂತರ್ಜಲ ವೃದ್ಧಿಸುವ ಕೆರೆ ಇದಾಗಿದ್ದು, ಸನಿಹದಲ್ಲಿರುವ ಬಾಯರ್ ಗಣಪತಿ ದೇಗುಲದ ಐತಿಹಾಸಿಕ ಹಿನ್ನೆಲೆಯನ್ನು ಕೂಡ ಹೊಂದಿದೆ.

    ನಮ್ಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಗಿಡಗಂಟಿ ಹಾಗೂ ಹೂಳಿನಿಂದ ಮುಕ್ತಗೊಳಿಸಲು ಪಣತೊಟ್ಟಿದ್ದೇವೆ ಹಾಗೂ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಬದ್ಧರಾಗಿದ್ದೇವೆ, ಈ ಮೂಲಕ ಗ್ರಾಮದಲ್ಲಿ ಅಂತರ್ಜಲ ಹಾಗೂ ಕೃಷಿಗೆ ಪೂರಕವಾದ ವಾತಾವರಣ ರೂಪಿಸಲು ಕ್ರಮಕೈಗೊಳ್ಳಲಾಗುವುದು.
    ಸತೀಶ್ ಕುಂದರ್, ಕೋಟತಟ್ಟು ಗ್ರಾಪಂ ಅಧ್ಯಕ್ಷ


    ಈ ಕೆರೆ ಅನಾದಿ ಕಾಲದಿಂದ ನಮ್ಮೂರಿನ ಜಲ ಸಂರಕ್ಷಣೆ ಕೇಂದ್ರವಾಗಿದ್ದು, ಹೂಳು ಹಾಗೂ ಗಿಡಗಂಟಿಗಳಿಂದ ಮುಕ್ತಿ ನೀಡುವ ಪಂಚಾಯಿತಿ ಕಾರ್ಯಕ್ಕೆ ಧನ್ಯವಾದಗಳು.
    ದ್ಯಾವಕ್ಕ, ಕೋಟತಟ್ಟು ಒಳಮಾಡು ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts