More

    ಅವೈಜ್ಞಾನಿಕ ಕಾಮಗಾರಿ ಆತಂಕ, ಮಳೆಗಾಲದಲ್ಲಿ ಅವಾಂತರ ಸೃಷ್ಟಿಸುವ ಸಾಧ್ಯತೆ, ಸ್ಪಂದಿಸದ ಹೆದ್ದಾರಿ ಪ್ರಾಧಿಕಾರ

    ಬಿ.ರಾಘವೇಂದ್ರ ಪೈ ಗಂಗೊಳ್ಳಿ

    ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಪೂರ್ಣಗೊಂಡಿದ್ದರೂ, ಹಲವು ಕಡೆ ನಡೆಸಿದ ಅವೈಜ್ಞಾನಿಕ ಕಾಮಗಾರಿಗಳು ಮಳೆಗಾಲದಲ್ಲಿ ಸಮಸ್ಯೆ ಸೃಷ್ಟಿಸುವ ಸಾಧ್ಯತೆ ಇದೆ.

    ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಅವ್ಯವಸ್ಥೆಯಿಂದ ಕೂಡಿದ್ದು, ಕಳೆದ ಮಳೆಗಾಲದಲ್ಲೂ ಸಾಕಷ್ಟು ಅವಾಂತರ ಸೃಷ್ಟಿಸಿತ್ತು. ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಬಗ್ಗೆ ಕಳೆದ ಅನೇಕ ವರ್ಷಗಳಿಂದ ಗಮನ ಸೆಳೆದಿದ್ದರೂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಮಸ್ಯೆ ಸರಿಪಡಿಸುವ ಗೋಜಿಗೆ ಹೋಗಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಅಧಿಕಾರಿಗಳ ಅಸಡ್ಡೆಯಿಂದ ಈ ಬಾರಿಯೂ ಮಳೆಗಾಲದಲ್ಲಿ ಸಾಕಷ್ಟು ಅವಾಂತರ ಸೃಷ್ಟಿಯಾಗುವ ಸಾಧ್ಯತೆಯಿದೆ. ಬೈಂದೂರಿನಿಂದ ಕುಂದಾಪುರ ತನಕ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಹಲವೆಡೆ ಅಪೂರ್ಣವಾಗಿದೆ. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಬಗ್ಗೆ ಈಗಾಗಲೇ ಅಪಸ್ವರ ಎದ್ದಿದ್ದು, ಅರೆಬರೆ ಕಾಮಗಾರಿಗಳು ಪ್ರಯಾಣಿಕರ ಮತ್ತು ವಾಹನ ಚಾಲಕರ ನಿದ್ದೆಗೆಡಿಸಿದೆ.

    ತೇಪೆ ಹಾಕುವ ಕೆಲಸ

    ಹೆಮ್ಮಾಡಿಯಿಂದ ಮರವಂತೆ ತನಕ ಹೊಸದಾಗಿ ನಿರ್ಮಾಣಗೊಂಡಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾದ ಹೊಂಡಗಳನ್ನು ಅವೈಜ್ಞಾನಿಕವಾಗಿ ಮುಚ್ಚಲಾಗಿದೆ. ಹಲವು ಕಡೆಗಳಲ್ಲಿ ಸುಮಾರು 50-100 ಮೀಟರ್ ಮಾತ್ರ ಮರು ಡಾಂಬರು ಕಾಮಗಾರಿ ಮಾಡಲಾಗಿದ್ದರೆ, ಹೊಂಡ ಬಿದ್ದ ಕಡೆಗಳಲ್ಲಿ ಕೇವಲ ತೇಪೆ ಹಾಕುವ ಕೆಲಸ ಮಾತ್ರ ನಡೆದಿದೆ. ಮಳೆಗಾಲದಲ್ಲಿ ಬಿದ್ದ ಹೊಂಡಗಳನ್ನು ಅವೈಜ್ಞ್ಞಾನಿಕವಾಗಿ ಮುಚ್ಚಿರುವುದರಿಂದ ಈ ಬಾರಿಯ ಮಳೆಗಾಲದಲ್ಲಿ ಹೊಂಡಗಳು ಮತ್ತೊಮ್ಮೆ ಬಾಯ್ದೆರೆಯುವ ಸಾಧ್ಯತೆಗಳಿದೆ.

    ಹೆದ್ದಾರಿ ಅಪೂರ್ಣ

    ಹೆಮ್ಮಾಡಿಯಿಂದ ಮರವಂತೆಗೆ ಸಾಗುವ ಪ್ರದೇಶದಲ್ಲಿ ಹೆದ್ದಾರಿ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದರೂ ಮುಳ್ಳಿಕಟ್ಟೆ ಮತ್ತು ತ್ರಾಸಿ ಜಂಕ್ಷನ್ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ನಾಲ್ಕು ರಸ್ತೆಗಳು ಸೇರುವ ಮುಳ್ಳಿಕಟ್ಟೆ ಮತ್ತು ತ್ರಾಸಿ ಜಂಕ್ಷನ್ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಅಪೂರ್ಣವಾಗಿದೆ. ವಾಹನ ಚಾಲಕರು ಜಾಗರೂಕತೆಯಿಂದ ವಾಹನ ಚಲಾಯಿಸಬೇಕಾಗಿದೆ. ರಾಷ್ಟ್ರೀಯ ಹೆದ್ದಾರಿ ಚತುಷ್ಪಥಗೊಂಡು ನಾಲ್ಕೈದು ವರ್ಷ ಪೂರ್ಣಗೊಂಡಿದ್ದರೂ, ಈ ಎರಡೂ ಪ್ರಮುಖ ಸ್ಥಳಗಳಲ್ಲಿ ಸರ್ವಿಸ್ ರಸ್ತೆ ಈವರೆಗೆ ನಿರ್ಮಾಣಗೊಂಡಿಲ್ಲ.

    ಬೇಕಿದೆ ಅಂಡರ್‌ಪಾಸ್

    ನಾಲ್ಕು ರಸ್ತೆಗಳು ಸೇರುವ, ಅತ್ಯಂತ ಜನನಿಬಿಡವಾದ ತ್ರಾಸಿ ಜಂಕ್ಷನ್ ಮತ್ತು ಮುಳ್ಳಿಕಟ್ಟೆ ಪ್ರದೇಶದಲ್ಲಿ ಅಂಡರ್‌ಪಾಸ್ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ. ಸ್ಥಳೀಯ ಶಾಸಕರು ಹಾಗೂ ಸಂಸದರಿಗೆ ಈ ಸಂಬಂಧ ಮನವಿ ಸಲ್ಲಿಸಿರುವ ಸ್ಥಳೀಯರು, ತ್ರಾಸಿಯಲ್ಲಿ ಸುಸಜ್ಜಿತ ಅಂಡರ್‌ಪಾಸ್ ನಿರ್ಮಿಸುವಂತೆ ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ಮಳೆಗಾಲ ಆರಂಭಕ್ಕೂ ಮುನ್ನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಧ್ಯೆ ಕಂಡು ಬಂದಿರುವ ಕುಸಿತವನ್ನು ಸರಿಪಡಿಸಬೇಕು. ಅವೈಜ್ಞಾನಿಕವಾಗಿ ತುಂಬಿರುವ ಹೊಂಡಗಳನ್ನು ಸರಿಯಾಗಿ ತುಂಬಬೇಕು ಹಾಗೂ ಸಾರ್ವಜನಿಕರ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಸರ್ವಿಸ್ ರಸ್ತೆ ಕಾಮಗಾರಿಯನ್ನು ಆದಷ್ಟು ಶೀಘ್ರ ಕೈಗೆತ್ತಿಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ನಾಲ್ಕು ರಸ್ತೆಗಳು ಸೇರುವ, ಅತ್ಯಂತ ಜನನಿಬಿಡ ತ್ರಾಸಿ ಜಂಕ್ಷನ್ ಮತ್ತು ಮುಳ್ಳಿಕಟ್ಟೆ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕಾಮಗಾರಿಯನ್ನು ಅವೈಜ್ಞಾನಿಕವಾಗಿ ನಡೆಸಲಾಗಿದ್ದು, ಅಪಘಾತ ಆಹ್ವಾನಿಸುತ್ತಿದೆ. ತ್ರಾಸಿ ಮತ್ತು ಮುಳ್ಳಿಕಟ್ಟೆಯಲ್ಲಿ ಸುಸಜ್ಜಿತ ಅಂಡರ್‌ಪಾಸ್ ನಿರ್ಮಿಸಬೇಕು ಮತ್ತು ಹೆದ್ದಾರಿ ಮಧ್ಯೆ ಕುಸಿತವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಪರಿಹಾರ ಮಾಡಬೇಕು.
    ರಾಘವೇಂದ್ರ ಮುಳ್ಳಿಕಟ್ಟೆ, ಸ್ಥಳೀಯ ನಿವಾಸಿ

    ಮಳೆಗಾಲ ಸಮೀಪಿಸುತ್ತಿದ್ದರೂ ಕೆಲವು ಅತ್ಯಂತ ಪ್ರಮುಖ ಸ್ಥಳದಲ್ಲಿ ಕಾಮಗಾರಿ ಅಪೂರ್ಣವಾಗಿದೆ. ತ್ರಾಸಿ ಜಂಕ್ಷನ್ ಮತ್ತು ಮುಳ್ಳಿಕಟ್ಟೆಯಲ್ಲಿ ಕಾಮಗಾರಿ ಅಪೂರ್ಣಗೊಂಡಿದ್ದು, ಸ್ಥಳೀಯರ ಬೇಡಿಕೆಗಳಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮನ್ನಣೆ ನೀಡುತ್ತಿಲ್ಲ. ಪ್ರಯಾಣಿಕರ ಹಿತದೃಷ್ಟಿಯಿಂದ ಅಂಡರ್‌ಪಾಸ್ ನಿರ್ಮಾಣ ಮಾಡಲು ಕ್ರಮಕೈಗೊಳ್ಳಬೇಕು.
    ಮಾರ್ಕ್ ಡಿ’ಅಲ್ಮೇಡಾ, ತ್ರಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts