More

    ಮನರಂಜಿಸಿದ ಹಾಲುಗಂಬ ಏರುವ ಸ್ಪರ್ಧೆ; ಸಂಭ್ರಮಿಸಿದ ಜನಸ್ತೋಮ ಭಕ್ತಿ ಮೆರೆದ ಗೊಲ್ಲ ಸಮುದಾಯ


    ಕನಕಗಿರಿ; ಇಲ್ಲಿನ ಐತಿಹಾಸಿಕ ಶ್ರೀ ಕನಕಾಚಲ ಲಕ್ಷ್ಮೀ ನರಸಿಂಹ ದೇವಸ್ಥಾನದ ಮುಂಭಾಗದಲ್ಲಿ ಗೋಕುಲಾಷ್ಟಮಿ ನಿಮಿತ್ತ ಹಾಲುಗಂಬ ಏರುವ ಸ್ಪರ್ಧೆ ಭಾನುವಾರ ಸಂಜೆ ಜರುಗಿತು.

    ಸಾಮಾನ್ಯವಾಗಿ ಮೂಲಾ ನಕ್ಷತ್ರ ವೇಳೆಯಲ್ಲಿ ಸ್ಪರ್ಧೆ ನಡೆಸಲಾಗುತ್ತಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷ ಸಂಪ್ರದಾಯ ಮುರಿದು ಮಧ್ಯಾನ್ಹದ ವೇಳೆಗೆ ಹಾಲುಗಂಭ ಸ್ಪರ್ಧೆ ನಡೆಸಲಾಗಿತ್ತು. ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಾರಿ ಸಂಪ್ರದಾಯದಂತೆ ಹಾಲುಗಂಭ ಏರುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರಿಂದ ಐದು ದಿನಗಳಿಂದ ಪಟ್ಟಣ ಹಾಗೂ ಸುತ್ತಲಿನ ಹಳ್ಳಿಗಳಲ್ಲಿನ ಗೊಲ್ಲರ ಮನೆ, ಹಟ್ಟಿಗಳಲ್ಲಿ ಹಾಲು ಮೊಸರು ಮೀಸಲಿಟ್ಟಿದ್ದರು.

    ದೇವಸ್ಥಾನ ಮುಂಭಾಗ ಸ್ಥಾಪಿಸಿದ್ದ ಹಾಲುಗಂಭದ ಮೇಲ್ಭಾಗದಲ್ಲಿ ಚಕ್ಕಲಿ, ಕೊಬ್ಬರಿ, ಉತ್ತತ್ತಿ ಕಟ್ಟಲಾಗಿತ್ತು. ಸಂಜೆಯಾಗುತ್ತಿದ್ದಂತೆ ಮನೆಯಲ್ಲಿ ಮೀಸಲಿಟ್ಟ ಹಾಲು ಮೊಸರು, ತುಪ್ಪ ಮೆರವಣಿಯೊಂದಿಗೆ ತಂದ ಗೊಲ್ಲ ಸಮುದಾಯ ಕಂಭಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಗೊಲ್ಲ ಸಮುದಾಯದ ಯುವಕರು ಒಬ್ಬರ ಮೇಲೊಬ್ಬರು ಏರಿ ಕಟ್ಟಿದ್ದ ಚಕ್ಕಲಿ, ಕೊಬ್ಬರಿ, ಉತ್ತತ್ತಿ ಹರಿದು ತಿನ್ನಲು ಪ್ರಯತ್ನಿಸಿದರು. ಆದರೆ, ಮೇಲ್ಭಾಗದಲ್ಲಿ ಕುಳಿತ ವ್ಯಕ್ತಿ ಮೇಲಿಂದ ಹಾಲು ಮೊಸರು ಕಂಬಕ್ಕೆ ಸುರಿಯುತ್ತಿದ್ದರಿಂದ ಏರಲು ಪ್ರಯತ್ನಿಸಿ ಯುವಕರು ವಿಫಲರಾಗುತ್ತಿದ್ದರು.

    ಯುವಕರು ತುದಿ ತಲುಪುವ ಹಂತದಲ್ಲಿ ಜಾರಿ ಬೀಳುವಾಗ ನೆರೆದ ಜನಸ್ತೋಮ ಗೊಳ್ಳೆಂದು ನಗುತ್ತ ಮನರಂಜನೆ ಪಡೆದರು. ಗೊಲ್ಲ ಸಮುದಾಯದ ಹಿರಿಯರು ಯುವಕರನ್ನು ಕೇಕೆ ಹಾಕಿ ಹುರಿ ತುಂಬಿಸಿ ಕಂಬ ಏರಲು ಉತ್ತೇಜಿಸುತ್ತಿದ್ದರು. ಐದು ಬಾರಿ ಯತ್ನಿಸಿದಾಗಲೂ ಕಂಬದ ಮೇಲಿನ ಯಾವ ತಿನಿಸುಗಳೂ ಯುವಕರ ಕೈಗೆಟುಕಲಿಲ್ಲ. ಸೇರಿದ್ದ ಇಡೀ ಜನಸ್ತೋಮ ಒಂದು ಗಂಟೆಗೂ ಹೆಚ್ಚು ಸಮಯ ಮನರಂಜನೆಯಲ್ಲಿ ಮಿಂದೆದ್ದತು. ಕೊನೆಯಲ್ಲಿ ಮೇಲಿಂದ ಬಿಟ್ಟ ಹಗ್ಗದ ಸಹಾಯದಿಂದ ತಿನಿಸುಗಳನ್ನು ಕಳಚಿ ತಂದ ಗೊಲ್ಲ ಸಮುದಾಯದ ಯುವಕರು ಕೇಕೆ, ಶಿಳ್ಳೆ ಹಾಕಿ ಹಿಗ್ಗಿದರು.

    ಇದಕ್ಕೂ ಮೊದಲು ರಾಜಬೀದಿಯಲ್ಲಿ ಅಶ್ವಾರೋಹಣ ಉತ್ಸವ ಮೆರವಣಿಗೆ ನಡೆಯಿತು. ಭಕ್ತರು ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts