More

    ಕೊಪ್ಪಳ ಜಿಲ್ಲೆಯಲ್ಲಿ 700ಕ್ಕೂ ಹೆಚ್ಚು ಕುಟುಂಬಕ್ಕೆ ಬಾರದ ಹಣ

    ಕೊಪ್ಪಳ: ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಐದು ಕೆಜಿ ಪಡಿತರ ಬದಲು ಹಣ ಖಾತೆಗೆ ಜಮೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 16.05 ಕೋಟಿ ರೂ. ಫಲಾನುಭವಿ ಖಾತೆಗೆ ವರ್ಗಾಯಿಸಲಾಗಿದೆ. ಕುಟುಂಬ ಮುಖ್ಯಸ್ಥರ ಮರಣ, ಬ್ಯಾಂಕ್ ಖಾತೆ ಚಾಲ್ತಿ ಇಲ್ಲದಿರುವುದು ಮುಂತಾದ ಕಾರಣದಿಂದ 700ಕ್ಕೂ ಹೆಚ್ಚು ಕುಟುಂಬಸ್ಥರಿಗೆ ಹಣ ವರ್ಗಾವಣೆಯಾಗಿಲ್ಲ.

    ರಾಜ್ಯ ಸರ್ಕಾರ ಘೋಷಿಸಿದ ಗ್ಯಾರಂಟಿಯಲ್ಲಿ ಅನ್ನಭಾಗ್ಯದಡಿ 10 ಕೆಜಿ ಅಕ್ಕಿ ವಿತರಣೆಯೂ ಒಂದಾಗಿದೆ. ಸದ್ಯ ಆಹಾರ ಭದ್ರತೆ ಕಾಯ್ದೆ ಅನ್ವಯ ಬಿಪಿಎಲ್ ಕುಟುಂಬದ ಪ್ರತಿ ಸದಸ್ಯನಿಗೆ ತಿಂಗಳಿಗೆ ಮೂರು ಕೆಜಿ ಅಕ್ಕಿ ಹಾಗೂ ಎರಡು ಕೆಜಿ ಜೋಳ ವಿತರಿಸಲಾಗುತ್ತಿದೆ.

    ಇದನ್ನೂ ಓದಿ: 84 ಸಾವಿರ ಜನರಿಗಿಲ್ಲ ಧನಭಾಗ್ಯ, ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಬದಲು ಹಣ

    ಅದರಂತೆ ಅಂತ್ಯೋದಯ ಕಾರ್ಡ್ ಹೊಂದಿದ ಕುಟುಂಬಕ್ಕೆ 21 ಕೆಜಿ ಅಕ್ಕಿ, 14 ಕೆಜಿ ಜೋಳ ನೀಡಲಾಗುತ್ತಿದೆ. ಹೆಚ್ಚುವರಿ 5 ಕೆಜಿ ಅಕ್ಕಿ ಬದಲು ಪ್ರತಿ ಕೆಜಿಗೆ 34ರೂ.ನಂತೆ ಬಿಪಿಎಲ್‌ನ ಎಲ್ಲ ಸದಸ್ಯರಿಗೆ ತಲಾ 170ರೂ.ನಂತೆ ಕುಟುಂಬದ ಮುಖ್ಯಸ್ಥರ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಜುಲೈ ತಿಂಗಳ ಪಡಿತರ ಬದಲಿಗೆ 16,05,65,680 ರೂ. ಹಣವನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗಿದೆ.

    9,83,713 ಅಂತ್ಯೋದಯ ಅನ್ನ ಯೋಜನೆ, 2,61,996 ಬಿಪಿಎಲ್ ಕಾರ್ಡ್ ಮುಖ್ಯಸ್ಥರು ಹಾಗೂ 10,38,361 ಫಲಾನುಭವಿಗಳಿದ್ದಾರೆ. ಪ್ರತಿ 20 ಸಾವಿರ ಫಲಾನುಭವಿಗಳ ಖಾತೆಗೆ ಒಂದು ಗುಂಪು ರಚಿಸಿ ಖಜಾನೆಗೆ ಸಲ್ಲಿಸಿದ್ದು, ಆಧಾರ್ ಸಂಖ್ಯೆ ಆಧರಿಸಿ ಖಾತೆಗೆ ಹಣ ಹಾಕಲಾಗುತ್ತಿದೆ.

    ಜಿಲ್ಲೆಯಲ್ಲಿ ಬಿಪಿಎಲ್, ಅಂತ್ಯೋದಯ, ಎಪಿಎಲ್ ಸೇರಿ 3.56ಲಕ್ಷ ಪಡಿತರ ಚೀಟಿಗಳಿವೆ. ಈ ಪೈಕಿ 20,560 ಪಡಿತರ ಚೀಟಿದಾರರಿಗೆ ಬ್ಯಾಂಕ್ ಖಾತೆ ಇಲ್ಲದಿರುವುದು ಪತ್ತೆಯಾಗಿದೆ. ಅಂಥವರು ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಖಾತೆ ತೆರೆದು ಪಡಿತರ ಚೀಟಿಯೊಂದಿಗೆ ಲಿಂಕ್ ಮಾಡಿಸಿದಲ್ಲಿ ಖಾತೆಗೆ ಹಣ ಜಮೆ ಆಗಲಿದೆ.

    ಬಿಪಿಎಲ್ ಕುಟುಂಬದಲ್ಲಿ ಎಷ್ಟೇ ಸದಸ್ಯರಿದ್ದರೂ ಪ್ರತಿಯೊಬ್ಬರಿಗೆ ತಲಾ 170ರೂ. ಜಮೆ ಆದರೆ, ಅಂತ್ಯೋದಯ ಪಡಿತರ ಚೀಟಿ ಹೊಂದಿದ ಕುಟುಂಬದಲ್ಲಿ ಮೂರಕ್ಕಿಂತ ಹೆಚ್ಚು ಜನರಿದ್ದಲ್ಲಿ ಹೆಚ್ಚುವರಿ ಫಲಾನುಭವಿಗಳಿಗೆ ಮಾತ್ರ ಯೋಜನೆ ಅನ್ವಯ ಆಗಲಿದೆ.

    ನ್ಯಾಯಬೆಲೆ ಅಂಗಡಿಯಲ್ಲಿ ವಿಚಾರಿಸಿ

    ಬ್ಯಾಂಕ್ ಖಾತೆ ಹೊಂದಿದರ 20,560 ಕುಟುಂಬಗಳಷ್ಟೇ ಅಲ್ಲದೆ, ಆಧಾರ್ ಇಕೆವೈಸಿ ಮಾಡಿಸದವರು, ಖಾತೆ ಇದ್ದರೂ ನಾನಾ ಕಾರಣಗಳಿಗೆ ನಿಷ್ಕ್ರಿಯವಾಗಿದ್ದಲ್ಲಿ, ಆಧಾರ್ ಸಕ್ರಿಯವಾಗಿದಲ್ಲದಿದ್ದಲ್ಲಿ, ಒಂದೆಡೆಯಿಂದ ಮತ್ತೊಂದೆಡೆ ವರ್ಗಾವಣೆಯಾಗಿದ್ದಲ್ಲಿ, ಆಧಾರ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಗೆ ಹೊಂದಾಣಿಕೆ ಆಗದ ಕಾರಣ 700ಕ್ಕೂ ಹೆಚ್ಚು ಕುಟುಂಬದವರ ಖಾತೆಗೆ ಹಣ ಜಮೆ ಆಗಿಲ್ಲ.

    ಖಾತೆಗೆ ಹಣ ಬಾರದಿದ್ದಲ್ಲಿ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗೆ ತೆರಳಿ ವಿಚಾರಿಸಿದಲ್ಲಿ ಕಾರಣ ಗೊತ್ತಾಗಲಿದೆ. ಬಳಿಕ ಅದನ್ನು ಸರಿಪಡಿಸಿದಲ್ಲಿ ಹಣ ಮರು ಜಮೆ ಆಗಲಿದೆ ಎನ್ನುತ್ತಾರೆ ಆಹಾರ ಇಲಾಖೆ ಅಧಿಕಾರಿಗಳು.

    ಮುಖ್ಯಸ್ಥ ಮರಣಿಸಿದಲ್ಲಿ ವಿವರ ಬದಲಿಸಿ

    ವಿವಿಧ ಕಾರಣಗಳ ಜತೆಗೆ ಪಡಿತರ ಚೀಟಿಯಲ್ಲಿನ ಮುಖ್ಯಸ್ಥ ಮರಣಿಸಿದಲ್ಲಿ ಅದನ್ನ ಬದಲಾವಣೆ ಮಾಡಬೇಕು. ಒಂದೊಮ್ಮೆ ಅವರ ಖಾತೆ ಸಕ್ರಿಯವಾಗಿದ್ದಲ್ಲಿ ಹಣ ವರ್ಗಾವಣೆಯಾಗುತ್ತದೆ. ಇಲ್ಲದಿದ್ದಲ್ಲಿ ಅಂಥಹಾ ಕುಟುಂಬದವರಿಗೆ ಹಣ ಬಂದಿರುವುದಿಲ್ಲ. ಕುಟುಂಬ ಮುಖ್ಯಸ್ಥ ಮರಣಿಸಿದಲ್ಲಿ ಅದರ ವಿವರ ಇಲಾಖೆ ಅಧಿಕಾರಿಗಳ ಗಮನಕ್ಕೆ ಬರುವುದಿಲ್ಲ.

    ಹೀಗಾಗಿ ಕುಟುಂಬದವರೇ ಮರಣಿಸಿದವರ ಮರಣ ಪ್ರಮಾಣ ಪತ್ರದೊಂದಿಗೆ ಸಂಬಂಧಿಸಿದ ಆಹಾರ ನಿರೀಕ್ಷಕರ ಮೂಲಕ ಬದಲಾವಣೆ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಪ್ರತಿ ತಾಲೂಕಿನಲ್ಲಿ ನಿತ್ಯ 40-50 ಪ್ರಕರಣಗಳು ಕಂಡುಬರುತ್ತಿದ್ದು, ಅಂಥವರು ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆ ಸರಿಪಡಿಸಿಕೊಳ್ಳಬೇಕು.

    ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿ ಪಡಿತರ ಚೀಟಿದಾರರಿಗೆ 16.05 ಕೋಟಿ ರೂ. ಆನ್‌ಲೈನ್ ಮೂಲಕ ವರ್ಗಾವಣೆ ಮಾಡಲಾಗಿದೆ. ಬಹುಪಾಲು ಜನರ ಖಾತೆಗೆ ಹಣ ಜಮೆ ಆಗಿದೆ. ಆಧಾರ್ ಅಪ್ಡೇಟ್ ಆಗದಿದ್ದಲ್ಲಿ, ಖಾತೆ ವಿವರ ಹೊಂದಾಣಿಕೆ ಆಗದಿರುವುದು, ಕುಟುಂಬದ ಮುಖ್ಯಸ್ಥರು ಮರಣಿಸಿ ಅವರ ಖಾತೆ ನಿಷ್ಕ್ರಿಯವಾಗಿರುವ ಕುಟುಂಬದವರಿಗೆ ಹಣ ವರ್ಗಾವಣೆಯಾಗಿಲ್ಲ. ಈವರೆಗೆ 700ಕ್ಕೂ ಹೆಚ್ಚು ಪ್ರಕರಣಗಳು ಗಮನಕ್ಕೆ ಬಂದಿವೆ.
    | ಕೆ.ಆರ್. ದೇವರಾಜ, ಸಹಾಯಕ ನಿರ್ದೇಶಕ ಆಹಾರ ಇಲಾಖೆ ಕೊಪ್ಪಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts