More

    84 ಸಾವಿರ ಜನರಿಗಿಲ್ಲ ಧನಭಾಗ್ಯ, ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಬದಲು ಹಣ

    ಬಳ್ಳಾರಿ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಸ್ಕೀಂಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಐದು ಕೆಜಿ ಅಕ್ಕಿ ಸಿಗದ ಕಾರಣ ಪ್ರತಿ ಬಿಪಿಎಲ್ ಕಾರ್ಡ್‌ದಾರರ ಖಾತೆಗೆ ನೇರ ನಗದು ವರ್ಗಾವಣೆ (ಡಿಬಿಟಿ) ಮಾಡುತ್ತಿದೆ. ಆದರೆ, ಜಿಲ್ಲೆಯಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ 33 ಸಾವಿರ ಕಾರ್ಡ್‌ದಾರರಿಗೆ ಹಣ ಪಾವತಿ ಆಗಿಲ್ಲ.

    ಚುನಾವಣೆಗೂ ಮುನ್ನ ಕಾಂಗ್ರೆಸ್, ಪಡಿತರದಾರರಿಗೆ ತಲಾ 10 ಕೆಜಿ ಅಕ್ಕಿ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ ಅಧಿಕಾರಕ್ಕೆ ಬಂದ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಸಂಘರ್ಷದಿಂದಾಗಿ ಐದು ಕೆಜಿ ಅಕ್ಕಿ ಮಾತ್ರ ಸಿಗುತ್ತಿದೆ. ಉಳಿದ ಐದು ಕೆ.ಜಿ ಅಕ್ಕಿ ಸಿಗದ ಕಾರಣ ಅದರ ಬದಲಿಗೆ ಬಿಪಿಎಲ್ ಕಾರ್ಡ್ ಹೊಂಂದಿರುವ ಪ್ರತಿಯೊಬ್ಬರಿಗೆ ಕೆಜಿಗೆ 34 ರೂ. ನಂತೆ 170 ರೂ. ನೇರವಾಗಿ ನಗದು ಪಾವತಿಸಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 2.29 ಲಕ್ಷ ಕಾರ್ಡ್‌ದಾರರಿಗೆ 14.54 ಕೋಟಿ ರೂ. ಡಿಬಿಟಿ ಮೂಲಕ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ. ಇನ್ನು 33 ಸಾವಿರ ಕಾರ್ಡ್‌ದಾರರಿಗೆ ತಾಂತ್ರಿಕ ಸಮಸ್ಯೆಯಿಂದಾಗಿ ಹಣ ದೊರಕಿಲ್ಲ.

    ಅಂತ್ಯೋದಯ ಅನ್ನ (ಎ.ಎ.ವೈ) ಮತ್ತು ಆದ್ಯತಾ ಪಡಿತರ ಚೀಟಿ (ಬಿಪಿಎಲ್) ಹೊಂದಿರುವ ಫಲಾನುಭವಿಗಳು ಬ್ಯಾಂಕ್ ಖಾತೆಗೆ ಆಧಾರ್‌ಲಿಂಕ್ ಅಥವಾ ಖಾತೆ ಹೊಂದದೇ ಇರುವುದು ಹಾಗೂ ಇತರ ತಾಂತ್ರಿಕ ಕಾರಣಗಳಿಂದ ಯೋಜನೆಯ ಪ್ರಯೋಜನ ಪಡೆಯಲು ಸಮಸ್ಯೆ ಉಂಟಾಗಿದೆ.

    2.62 ಲಕ್ಷ ಕಾರ್ಡ್‌ದಾರರು

    ಜಿಲ್ಲೆಯಲ್ಲಿ ಒಟ್ಟು 2.62 ಲಕ್ಷ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್‌ದಾರರಿದ್ದಾರೆ. ಅದರಲ್ಲಿ 2.29 ಲಕ್ಷ ಕಾರ್ಡ್ ಹೊಂದಿರುವ 10.32 ಲಕ್ಷ ಸದಸ್ಯರಿಗೆ ತಲಾ 170 ರೂ. ನಂತೆ ಹಣ ಪಾವತಿಯಾಗಿದೆ. ಉಳಿದಂತೆ 33,178 ಕಾರ್ಡ್ ಹೊಂದಿರುವ 84,661 ಸದಸ್ಯರಿಗೆ ಇನ್ನು ಹಣ ಸಂದಾಯವಾಗಿಲ್ಲ. ಅದರಲ್ಲಿ ಶೇ.92 ಇ-ಕೆವೈಸಿ ಮಾಡಿಸಿಕೊಂಡಿದ್ದಾರೆ. 6,835 ಕಾರ್ಡ್‌ಗಳು ನಿಷ್ಕ್ರಿಯಗೊಂಡಿವೆ. 26,266 ಕಾರ್ಡ್‌ದಾರರ ಬ್ಯಾಂಕ್ ಖಾತೆಗಳಲ್ಲಿ ನ್ಯೂನತೆ ಕಂಡುಬಂದಿದೆ. 77 ಕಾರ್ಡ್‌ದಾರರು ಆಧಾರ್ ಕಾರ್ಡ್ ಲಿಂಕ್ ಮಾಡಿಸದ ಕಾರಣ ಹಣ ಜಮಾ ಆಗಿಲ್ಲ ಎಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ತಿಂಗಳಿಗೆ 17.24 ಕೋಟಿ ರೂ. ಅವಶ್ಯ

    ಜಿಲ್ಲೆಯ ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್‌ದಾರರಿಗೆ ಅಕ್ಕಿಗೆ ಪ್ರತಿಯಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಬೇಕಾದರೆ ಪ್ರತಿ ತಿಂಗಳು 17.24 ಕೋಟಿ ರೂ. ನೀಡಬೇಕಾಗುತ್ತದೆ. ಜುಲೈನಲ್ಲಿ 2,29,498 ಕಾರ್ಡ್ ಹೊಂದಿರುವ 10,32,886 ಫಲಾನುಭವಿಗಳಿಗೆ 14.54 ಕೋಟಿ ರೂ. ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಪಾವತಿಸಲಾಗಿದೆ. ಇನ್ನು 2.69 ಕೋಟಿ ರೂ. ಉಳಿದಿದ್ದು, ತಾಂತ್ರಿಕ ಸಮಸ್ಯೆ ಸರಿಯಾದ ನಂತರ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗುತ್ತದೆ.

    ಅಪ್‌ಡೇಟ್‌ಗೆ 20ರವರೆಗೆ ಅವಕಾಶ

    ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್‌ದಾರರು ಬ್ಯಾಂಕ್ ಖಾತೆ ಸಂಖ್ಯೆ ಸರಿಯಾಗಿ ನೀಡದಿರುವುದು. ಆಧಾರ್ ಕಾರ್ಡ್ ಲಿಂಕ್ ಆಗದಿರುವುದು. ಚಾಲ್ತಿ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡದಿರುವುದು. ಪಡಿತರ ಚೀಟಿಯಲ್ಲಿ ಒಂದಕ್ಕಿಂತ ಹೆಚ್ಚು ಮುಖ್ಯಸ್ಥರಿದ್ದಾಗ ಅಥವಾ ಮುಖ್ಯಸ್ಥರೇ ಇಲ್ಲದಿದ್ದ ಸಂದರ್ಭ ಆಧಾರ್ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿರುವುದು, ಬ್ಯಾಂಕ್‌ನಲ್ಲಿ ಇ-ಕೆವೈಸಿ ಕಾರ್ಯ ಪೂರ್ಣಗೊಳಿಸದಿರುವುದು, ಕಳೆದ ಮೂರು ತಿಂಗಳಲ್ಲಿ ಒಂದು ತಿಂಗಳಾದರೂ ಪಡಿತರ ಸಾಮಗ್ರಿ ಪಡೆಯದೆ ಇದ್ದಲ್ಲಿಯೂ ನಗದು ಮೊತ್ತ ಫಲಾನುಭವಿಯ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಲ್ಲ. ಹಾಗಾಗಿ ನ್ಯೂನತೆ ಸರಿಪಡಿಸಿಕೊಳ್ಳಲು ಜು.20ರವರೆಗೆ ಕಾಲಾವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ಸರಿಪಡಿಸಿಕೊಂಡಲ್ಲಿ ಆಗಸ್ಟ್‌ನಲ್ಲಿ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲಾಗುತ್ತದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

    ಏನು ಮಾಡಬೇಕು ?

    ಪಡಿತರ ಚೀಟಿಯ ಫಲಾನುಭವಿಯು ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯ ವಿವರಗಳನ್ನು ಚ್ಟ.ಚ್ಟ.್ಞಜ್ಚಿ.ಜ್ಞಿ ವೆಬ್‌ಸೈಟ್‌ನಲ್ಲಿ ಪಡಿತರ ಚೀಟಿ ವಿವರ ನಮೂದಿಸಿ ಪರಿಶೀಲಿಸಬಹುದು. ಫಲಾನುಭವಿಯು ನೇರವಾಗಿ ಡಿಬಿಟಿ ಕರ್ನಾಟಕ ಆ್ಯಪ್ ಅನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಫಲಾನುಭವಿಯ ಆಧಾರ್ ಸಂಖ್ಯೆ ನಮೂದಿಸಿ ಡಿಬಿಟಿ ಮೂಲಕ ಜಮೆ ಆಗಿರುವ ಮೊತ್ತದ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಬ್ಯಾಂಕ್ ಖಾತೆ ಹೊಂದದೆ ಇರುವ ಫಲಾನುಭವಿಗಳು ಸಂಬಂಧಪಟ್ಟ ಆಹಾರ ನಿರೀಕ್ಷಕರಿಗೆ ನ್ಯಾಯಬೆಲೆ ಅಂಗಡಿ ಅವರ ಸಹಯೋಗದೊಂದಿಗೆ ಹತ್ತಿರದ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಬ್ಯಾಂಕ್ ಖಾತೆ ತೆರೆಯಲು ಅವಕಾಶವಿದೆ.

    ಅಂತ್ಯೋದಯ ಹಾಗೂ ಆದ್ಯತಾ ಪಡಿತರ ಚೀಟಿದಾರರಿಗೆ ಐದು ಕೆಜಿ ಅಕ್ಕಿ ಬದಲಾಗಿ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ. ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯನ್ನು ಪಡಿತರ ಚೀಟಿದಾರರು ಸದುಪಯೋಗ ಪಡಿಸಿಕೊಳ್ಳಬೇಕು.
    | ಮೊಹಮ್ಮದ್ ಖೈಜರ್, ಜಂಟಿ ನಿರ್ದೇಶಕ, ಆಹಾರ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts