More

    ಕನ್ನಡಿಗ ರಾಹುಲ್​ ಫಿಟ್​; ಅಧಿಕೃತವಾಗಿ ಪ್ರಕಟಿಸುವ ಮುನ್ನವೇ ವಿಶ್ವಕಪ್​ಗೆ ಭಾರತ ತಂಡ ಬಹುತೇಕ ಅಂತಿಮ!

    ಬೆಂಗಳೂರು/ಪಲ್ಲೆಕಿಲೆ: ಸಣ್ಣಪುಟ್ಟ ಗಾಯದ ಸಮಸ್ಯೆ ಎದುರಿಸಿದ್ದ ಕನ್ನಡಿಗ ಹಾಗೂ ವಿಕೆಟ್​ ಕೀಪರ್​&ಬ್ಯಾಟರ್​ ಕೆಎಲ್​ ರಾಹುಲ್​ ಫಿಟ್ನೆಸ್​ ಬಗ್ಗೆ ಬೆಂಗಳೂರಿನ ಎನ್​ಸಿಎ ಸಂಪೂರ್ಣ ತೃಪ್ತಿ ಹೊಂದಿದ್ದು, ಏಷ್ಯಾಕಪ್​ಗಾಗಿ ಶ್ರೀಲಂಕಾದಲ್ಲಿರುವ ಭಾರತ ತಂಡವನ್ನು ಕೂಡಿಕೊಳ್ಳಲು ಹಸಿರು ನಿಶಾನೆ ತೋರಿದೆ. ಇದರಿಂದ ಕೆಎಲ್​ ರಾಹುಲ್​ ಅವರನ್ನು ವಿಶ್ವಕಪ್​ ತಂಡಕ್ಕೂ ಸೇರ್ಪಡೆಗೊಳಿಸುವುದು ಬಹುತೇಕ ಖಚಿತಗೊಂಡಿದೆ. ವಿಶ್ವಕಪ್​ ಟೂರ್ನಿಗೆ ಆತಿಥೇಯ ಭಾರತ ತಂಡ ಮಂಗಳವಾರ ಅಧಿಕೃತವಾಗಿ ಪ್ರಕಟಗೊಳ್ಳಲಿದ್ದರೂ, ಅದಕ್ಕೆ ಮೊದಲೇ ತಂಡ ಬಹುತೇಕ ಅಂತಿಮಗೊಂಡಂತಾಗಿದೆ.

    ಪೂರ್ಣ ಫಿಟ್ನೆಸ್​ ಕಂಡುಕೊಳ್ಳದ ಕಾರಣ ಏಷ್ಯಾಕಪ್​ನ ಮೊದಲ 2 ಪಂದ್ಯಗಳಿಗೆ ಅಲಭ್ಯರೆನಿಸಿದ್ದ ರಾಹುಲ್​, ಬೆಂಗಳೂರಿನಲ್ಲೇ ಉಳಿದುಕೊಂಡಿದ್ದರು. ಇದೀಗ ಅವರು ಎನ್​ಸಿಎಯಲ್ಲಿ ನೆಟ್ಸ್​&ಡ್ರಿಲ್​ನಲ್ಲಿ ಪಾಲ್ಗೊಂಡು ಫಿಟ್ನೆಸ್​ ಸಾಬೀತುಪಡಿಸಿದ್ದಾರೆ. ಹೀಗಾಗಿ ಭಾರತಕ್ಕೆ ಸೂಪರ್​-4 ಹಂತದ ಪಂದ್ಯಗಳಿಗೆ ಲಭ್ಯರಾಗಿದ್ದಾರೆ. ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್​ ಅಗರ್ಕರ್​ ಈಗಾಗಲೆ ಶ್ರೀಲಂಕಾ ತಲುಪಿದ್ದು, ನಾಯಕ ರೋಹಿತ್​ ಶರ್ಮ ಮತ್ತು ಕೋಚ್​ ರಾಹುಲ್​ ದ್ರಾವಿಡ್​ ಜತೆಗೆ ಚರ್ಚಿಸಿ ವಿಶ್ವಕಪ್​ ತಂಡವನ್ನು ಬಹುತೇಕ ಅಂತಿಮಗೊಳಿಸಿದ್ದಾರೆ ಎನ್ನಲಾಗಿದೆ.

    ಸ್ಯಾಮ್ಸನ್​, ತಿಲಕ್​, ಪ್ರಸಿದ್ಧ ಕೃಷ್ಣಗೆ ನಿರಾಸೆ?
    ಏಷ್ಯಾಕಪ್​ಗೆ ಭಾರತ ಒಟ್ಟು 18 ಆಟಗಾರರ ತಂಡವನ್ನು ಆರಿಸಿದೆ. ಈ ಪೈಕಿ ರಾಹುಲ್​ಗೆ ಮೀಸಲು ಆಟಗಾರರಾಗಿ ಸಂಜು ಸ್ಯಾಮ್ಸನ್​ ಹೋಗಿದ್ದಾರೆ. ಆದರೆ ಈಗ ರಾಹುಲ್​ ಫಿಟ್​ ಆಗಿರುವುದರಿಂದ ಸ್ಯಾಮ್ಸನ್​ ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆಯುವ ಬಾಗಿಲು ಮುಚ್ಚಿದಂತಾಗಿದೆ. ಇನ್ನು ತಿಲಕ್​ ವರ್ಮ ಮತ್ತು ಕನ್ನಡಿಗ ಪ್ರಸಿದ್ಧ ಕೃಷ್ಣ 17ರ ಬಳಗದಲ್ಲಿದ್ದರೂ, ವಿಶ್ವಕಪ್​ಗೆ 15 ಆಟಗಾರ ತಂಡವನ್ನಷ್ಟೇ ಆರಿಸಬೇಕಾಗಿರುವುದರಿಂದ ಇವರಿಬ್ಬರು ಹೊರಬೀಳಲಿದ್ದಾರೆ. ಸೂರ್ಯಕುಮಾರ್​ ಅನುಭವಕ್ಕೆ ಭಾರತ ಆದ್ಯತೆ ನೀಡಲಿರುವುದರಿಂದ ತಿಲಕ್​ ವರ್ಮಗೆ ವಿಶ್ವಕಪ್​ ತಂಡ ಸೇರುವ ಅವಕಾಶ ಕೈತಪ್ಪಲಿದೆ. ಇನ್ನು ಶಾರ್ದೂಲ್​ ಠಾಕೂರ್​ ಬ್ಯಾಟಿಂಗ್​ ಕೂಡ ಮಾಡಬಲ್ಲವರಾಗಿರುವುದರಿಂದ ವಿಶ್ವಕಪ್​ ತಂಡದ 4ನೇ ವೇಗಿಯ ಸ್ಥಾನ ಪ್ರಸಿದ್ಧ ಕೃಷ್ಣ ಕೈತಪ್ಪಲಿದೆ ಎನ್ನಲಾಗಿದೆ.

    ವಿಶ್ವಕಪ್​ಗೆ ಸಂಭಾವ್ಯ ತಂಡ: ರೋಹಿತ್​ ಶರ್ಮ (ನಾಯಕ), ಹಾರ್ದಿಕ್​ ಪಾಂಡ್ಯ (ಉಪನಾಯಕ), ಶುಭಮಾನ್​ ಗಿಲ್​, ವಿರಾಟ್​ ಕೊಹ್ಲಿ, ಶ್ರೇಯಸ್​ ಅಯ್ಯರ್​, ಕೆಎಲ್​ ರಾಹುಲ್​ (ವಿ.ಕೀ), ರವೀಂದ್ರ ಜಡೇಜಾ, ಶಾರ್ದೂಲ್​ ಠಾಕೂರ್​, ಜಸ್​ಪ್ರೀತ್​ ಬುಮ್ರಾ, ಮೊಹಮದ್​ ಸಿರಾಜ್​, ಮೊಹಮದ್​ ಶಮಿ, ಕುಲದೀಪ್​ ಯಾದವ್​, ಅಕ್ಷರ್​ ಪಟೇಲ್​, ಇಶಾನ್​ ಕಿಶನ್​ (2ನೇ ವಿ.ಕೀ), ಸೂರ್ಯಕುಮಾರ್​ ಯಾದವ್​.

    VIDEO| ಅಮಿತಾಭ್​ ಬಚ್ಚನ್​ ಸ್ಟೈಲ್​ನಲ್ಲಿ ಮಿಂಚಿದ ಟೀಮ್​ ಇಂಡಿಯಾ ಕೋಚ್​ ದ್ರಾವಿಡ್​! ವಿಡಿಯೋ ವೈರಲ್​…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts