More

    ಕ್ವಾರಂಟೈನ್ ವ್ಯಕ್ತಿ ಕರೆಸಿಕೊಳ್ಳಲು ಅಂಬುಲೆನ್ಸ್ ಕಳಿಸಿದ ಕೇರಳ ಸರ್ಕಾರ!

    ಉಡುಪಿ : ಲಾಕ್‌ಡೌನ್ ಕಾರಣದಿಂದಾಗಿ ನಗರದ ಬನ್ನಂಜೆ ಸರ್ಕಾರಿ ಹಾಸ್ಟೆಲ್‌ನಲ್ಲಿ ಒಂದೂವರೆ ತಿಂಗಳಿನಿಂದ ಬಂಧಿಯಾಗಿದ್ದ ಕೇರಳ ರಾಜ್ಯದ ಕಾಸರಗೋಡಿನ ನಿರ್ಗತಿಕ ಅಶ್ರಫ್ (68)ಎಂಬವರನ್ನು ಕರೆಸಿಕೊಳ್ಳಲು ಕೇರಳ ಸರ್ಕಾರ ಉಡುಪಿಗೆ ಆಂಬುಲೆನ್ಸ್ ಕಳುಹಿಸಿಕೊಟ್ಟಿದೆ. ಸಾಕಷ್ಟು ದಿನಗಳಿಂದ ಹಾಸ್ಟೆಲ್‌ನಲ್ಲೇ ವಾಸವಾಗಿದ್ದ ಅವರನ್ನು ಸೋಮವಾರ ಸಾಯಂಕಾಲ ಸೂಕ್ತ ಭದ್ರತೆಯೊಂದಿಗೆ ಕಾಸರಗೋಡಿಗೆ ಕರೆದೊಯ್ಯಲಾಯಿತು.

    ಉಡುಪಿ ಜಿಲ್ಲಾಡಳಿತ, ಹಿಂದು ಪರ ಸಂಘಟನೆ ಮುಖಂಡರು ಅಶ್ರಫ್ ಅವರನ್ನು ಮನೆಗೆ ಕಳುಹಿಸಲು ಸಾಕಷ್ಟು ಪ್ರಯತ್ನ ಮಾಡಿದ್ದರೂ ಸಾಧ್ಯವಾಗಿರಲಿಲ್ಲ. ಕಾಸರಗೋಡು ಪೊಲೀಸರನ್ನು ಸಂಪರ್ಕಿಸಿ, ಅಶ್ರಫ್ ಅವರ ವಿಳಾಸ ಪತ್ತೆ ಹಚ್ಚಲು ಪ್ರಯತ್ನಿಸಿದ್ದರು. ಕೊನೆಗೆ ಕಾಸರಗೋಡು ಜಿಲ್ಲಾಡಳಿತ ಕೇರಳ ಸರ್ಕಾರ ಪೊಲೀಸ್ ಇಲಾಖೆ ಮೂಲಕ ಅಶ್ರಫ್ ಅವರನ್ನು ಕಾಸರಗೋಡಿಗೆ ಕರೆಸಿಕೊಂಡಿದೆ. ಸೋಮವಾರ ಕಾಸರಗೋಡು ಪೊಲೀಸ್ ಉಪವಿಭಾಗದ ಉಪಾಧೀಕ್ಷಕರ ಪತ್ರದೊಂದಿಗೆ ಪೊಲೀಸ್ ಸಿಬ್ಬಂದಿ ಮತ್ತು ಚಾಲಕ ಸಹಿತ ಆಂಬುಲೆನ್ಸ್ ಬಂದಿದ್ದು, ಹಾಸ್ಟೆಲ್‌ನ ಮೇಲ್ವಿಚಾರಕಿ ಸುಚಿತ್ರಾ ಸಂತೋಷ್ ಅವರಿಂದ ಬಿಡುಗಡೆ ಪತ್ರ ಪಡೆದು ಅಶ್ರಫ್ ಅವರನ್ನು ಕರೆದುಕೊಂಡು ಹೋಗಿದ್ದಾರೆ.

    ಅಶ್ರಫ್ ಅವರ ಗಂಟಲದ್ರವ ಮಾದರಿಯನ್ನು ಪರೀಕ್ಷೆ ಒಳಪಡಿಸಲಾಗಿದ್ದು, ವರದಿ ನೆಗೆಟಿವ್ ಬಂದಿದೆ. ವರದಿ ಜತೆಗೆ ಅವರನ್ನು ಕಳುಹಿಸಿಕೊಡಲಾಗಿದೆ. ಕೆಲವೊಮ್ಮೆ ಊಟ ಮಾಡುತ್ತಿರಲಿಲ್ಲ. ಕೆಲವೊಮ್ಮೆ ಬೇಸರದಲ್ಲಿರುತ್ತಿದ್ದರು. ಎಲ್ಲರ ಸಹಕಾರದಿಂದಾಗಿ ಅಶ್ರಫ್ ಊರಿಗೆ ತೆರಳುವಂತಾಗಿದೆ ಎಂದು ಸುಚಿತ್ರಾ ಸಂತೋಷ್ ಹೇಳಿದರು.

    ಲಾಕ್‌ಡೌನ್‌ನಿಂದಾಗಿ ವೃದ್ಧರೊಬ್ಬರು ಹಾಸ್ಟೆಲ್‌ನಲ್ಲಿ ಅಸಹಾಯಕರಾಗಿರುವ ಮಾಹಿತಿ ಸಿಕ್ಕಿತ್ತು. ಇವರ ವಿಳಾಸ ಪತ್ತೆ ಮಾಡಿ ಮನೆಗೆ ಕಳಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗಿತ್ತು. ಇತ್ತ ಜಿಲ್ಲಾಡಳಿತದ ವತಿಯಿಂದಲೂ ಪ್ರಯತ್ನ ಮುಂದುವರಿದಿತ್ತು. ಸಾಮಾಜಿಕ ಜಾಲತಾಣ, ಪತ್ರಿಕೆಯಲ್ಲೂ ಸುದ್ದಿ ತಲುಪಿದ್ದರಿಂದ ನಿತ್ಯ ಕರೆಗಳು ಬರುತಿದ್ದವು. ಇದೀಗ ಅವರು ಊರಿಗೆ ಮರಳಿರುವುದು ತೃಪ್ತಿ ತಂದಿದೆ ಎಂದು ಹಿಂದೂಪರ ಸಂಘಟನೆ ಮುಖಂಡ ಸಂತೋಷ್ ಸುವರ್ಣ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts