More

    ತೆಲಂಗಾಣದಲ್ಲಿ ಆಪರೇಷನ್​ ಕಮಲ: ವಿಡಿಯೋ ಸಾಕ್ಷಿ ಮೂಲಕ ಬಿಜೆಪಿಗೆ ತಿರುಗೇಟು ನೀಡಿದ ಸಿಎಂ ಕೆಸಿಆರ್​

    ಹೈದರಾಬಾದ್​: ಕೆಲವು ದಿನಗಳ ಹಿಂದೆ ತೆಲಂಗಾಣದಲ್ಲಿ ಭಾರಿ ಸುದ್ದಿಯಾಗಿದ್ದ “ಆಪರೇಷನ್​ ಕಮಲ” ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್​ಎಸ್​) ಸಂಸ್ಥಾಪಕ ಹಾಗೂ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​ ಅವರು ವಿಡಿಯೋ ಸಾಕ್ಷಿ ಬಿಡುಗಡೆ ಮಾಡಿದ್ದಾರೆ.

    ಶಾಸಕರನ್ನು ಖರೀದಿ ಮಾಡಿ, ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಬಿಜೆಪಿ ಮಾಡಿದೆ ಎಂದು ಆರೋಪಿಸಿರುವ ಕೆಸಿಆರ್​, ಗುರುವಾರ ದಿಢೀರ್​ ಸುದ್ದಿಗೋಷ್ಠಿ ನಡೆಸಿ, ಆಪರೇಷನ್​ ಕಮಲಕ್ಕೆ ಸಂಬಂಧಿಸಿದ ವಿಡಿಯೋ ಸಾಕ್ಷಿಯನ್ನು ಮಾಧ್ಯಮಗಳ ಮುಂದೆ ಪ್ರದರ್ಶನ ಮಾಡಿದರು.

    ಆಳವಾದ ದುಃಖದಿಂದ ನಾನಿಂದು ಈ ಪತ್ರಿಕಾಗೋಷ್ಠಿಯನ್ನು ಕರೆದಿದ್ದೇನೆ. ಇಂದು ಪ್ರಜಾಪ್ರಭುತ್ವದ ಕೊಲೆಯಾಗುತ್ತಿದೆ. ಈ ಬಿಜೆಪಿ ಇಡೀ ದೇಶವನ್ನೇ ಹಾಳು ಮಾಡುತ್ತಿದೆ. ಕಳಪೆ ರಾಜಕೀಯ ಮಾಡಿ ನಕಲಿ ಸುದ್ದಿಗಳನ್ನು ಹಬ್ಬಿಸುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಜೊತೆ ನನ್ನ ಮಾರ್ಫ್ ಮಾಡಿದ ಚಿತ್ರ ವೈರಲ್ ಆಗಿದೆ. ಬಿಜೆಪಿ ಅವರು ಪತ್ರಿಕಾ ಮಾಧ್ಯಮವನ್ನು ಹೇಗೆ ಬಳಸುತ್ತಿದ್ದಾರೆ ಎಂಬುದು ತುಂಬಾ ಆಘಾತಕಾರಿಯಾಗಿದೆ ಎಂದು ಕೆಸಿಆರ್​ ಹೇಳಿದರು.

    ಬಿಜೆಪಿ ವಿರುದ್ಧದ ಆಪರೇಷನ್​ ಕಮಲ ಆರೋಪದ ಬಗ್ಗೆ ಮಾತನಾಡಿದ ಕೆಸಿಆರ್, ದೀದಿ (ಮಮತಾ ಬ್ಯಾನರ್ಜಿ), ನಿಮ್ಮ ಪಕ್ಷದ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಸ್ವತಃ ಪ್ರಧಾನಿ ಹೇಳುತ್ತಾರೆ. ಇದನ್ನು ಯಾರಾದರೂ ಹೇಳಬಹುದೇ? ಅವರ ಹಿಂದೆ ಯಾರಿದ್ದಾರೆ? ಪ್ರಧಾನಿಯಾಗಿ ಹೀಗೆ ಮಾತನಾಡುತ್ತಾರಾ? ಎಂದು ಅಸಮಾಧಾನ ಹೊರಹಾಕಿದರು.

    ಒಂದು ತಿಂಗಳ ಹಿಂದೆ ರಾಮಚಂದ್ರ ರೆಡ್ಡಿ ಎಂಬ ವ್ಯಕ್ತಿಯೊಬ್ಬ ನಮ್ಮ ಶಾಸಕ ರೋಹಿತ್ ರೆಡ್ಡಿ ಮೇಲೆ ಒತ್ತಡ ಹೇರಿದ್ದರು. ಇದನ್ನು ರೋಹಿತ್​, ನಮ್ಮ ಗೃಹ ಸಚಿವರ ಗಮನಕ್ಕೆ ತಂದರು. ಈ ವಿಡಿಯೋ ತುಣಕಲ್ಲಿ ನೀವು ನೋಡಬಹುದು, ಅವರು ದೊಡ್ಡವರ ಹೆಸರುಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ನೀವು ನಮ್ಮ ಜೊತೆ ಇದ್ದರೆ, ಇಡಿ ಮತ್ತು ಸಿಬಿಐ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಬೆದರಿಕೆವೊಡ್ಡುತ್ತಿದ್ದಾರೆ. ಇದು ಅತ್ಯಂತ ದೊಡ್ಡ ಮಟ್ಟದ ಸಂಘಟಿತ ಅಪರಾಧವಾಗಿದೆ ಎಂದು ಕೆಸಿಆರ್ ಹೇಳಿದರು.

    ವಯನಾಡಿನಲ್ಲಿ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿದ್ದ ತುಷಾರ್ ಎಂಬ ವ್ಯಕ್ತಿ, ಗೃಹ ಸಚಿವಾಲಯದಿಂದಲೇ ನೇರ ಆದೇಶವಿದೆ ಎಂದು ಆಪರೇಷನ್​ ಕಮಲದ ವೇಳೆ ಹೇಳಿದ್ದಾರೆ. ಅಮಿತ್​ ಷಾ ಜೊತೆ ಲೈವ್​​ನಲ್ಲೇ ಮಾತನಾಡಿದ್ದಾನೆ. ಅನೇಕ ಬಾರಿ ಅಮಿತ್​ ಷಾ ಮತ್ತು ಪ್ರಧಾನಿ ಮೋದಿ ಹೆಸರನ್ನು ಆತ ಉಲ್ಲೇಖಿಸಿದ್ದಾನೆ. ಭಾರತದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳು ಮತ್ತು ದೇಶದ ಎಲ್ಲಾ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು ದಯವಿಟ್ಟು ಈ ವಿಷಯವನ್ನು ಚರ್ಚಿಸಬೇಕೆಂದು ಕೆಸಿಆರ್​ ವಿನಂತಿಸಿಕೊಂಡಿದ್ದಾರೆ.

    ಅಗತ್ಯವಿದ್ದರೆ, ನಾವು ನಮ್ಮ ಪ್ರಾಣವನ್ನು ಬಿಡುತ್ತೇವೆ ಹೊರತು ನಾವು ಸುಮ್ಮನಿರುವುದಿಲ್ಲ ಎಂದು ಕೆಸಿಆರ್​ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.

    ಏನಿದು ಪ್ರಕರಣ?
    ಅಜೀಜ್​ ನಗರದ ಫಾರ್ಮ್​ಹೌಸ್​ನಲ್ಲಿ ಅ.26ರ ಸಂಜೆ ನಡೆದ ಶೋಧ ಕಾರ್ಯದ ಸಮಯದಲ್ಲಿ ಆಪರೇಷನ್​ ಕಮಲ ಪ್ರಕರಣ ಬೆಳಕಿಗೆ ಬಂದಿದೆ. ಪಕ್ಷ ಬದಲಿಸಲು ಹಣದ ಆಮಿಷವೊಡ್ಡುತ್ತಿದ್ದಾರೆ ಎಂದು ಟಿಆರ್​ಎಸ್​ ಪಕ್ಷದ ಶಾಸಕರು ಕರೆ ಮಾಡಿ ಮಾಹಿತಿ ನೀಡಿದ ಕೂಡಲೇ ಕಾರ್ಯಪ್ರವೃತ್ತರಾದ ಹೈದರಾಬಾದ್ ಪೊಲೀಸರು, ದಾಳಿ ನಡೆಸಿ ಮೂವರನ್ನು ಬಂಧಿಸಿದ್ದರು. ಬಂಧಿತರನ್ನು ಹರಿಯಾಣ ಮೂಲದ ಪೂಜಾರಿ ಸತೀಶ್​ ಶರ್ಮಾ ಅಲಿಯಾಸ್​ ರಾಮ್​ ಚಂದ್ರ ಭಾರತಿ, ತಿರುಪತಿ ಮೂಲದ ಸಂತ ಡಿ. ಸಿಂಹಯಾಜಿ ಮತ್ತು ಓರ್ವ ಉದ್ಯಮಿ ನಂದಕುಮಾರ್​ ಎಂದು ಗುರುತಿಸಲಾಗಿದೆ. ತಾಂಡೂರು ಶಾಸಕ ಪೈಲಟ್ ರೋಹಿತ್ ರೆಡ್ಡಿ ಅವರ ಫಾರ್ಮ್‌ಹೌಸ್‌ನಲ್ಲಿ ಡೀಲ್ ನಡೆದಿದ್ದು, ರೋಹಿತ್​ ರೆಡ್ಡಿ ಅವರನ್ನು ಸಹ ದೂರುದಾರ ಎಂದು ಉಲ್ಲೇಖಿಸಲಾಗಿದೆ. ತೆಲಂಗಾಣ ರಾಷ್ಟ್ರೀಯ ಸಮಿತಿ ಸರ್ಕಾರವನ್ನು ದುರ್ಬಲಗೊಳಿಸುವ ಪ್ರಯತ್ನ ಇದಾಗಿದ್ದು, ಕುದುರೆ ವ್ಯಾಪರಕ್ಕೆ ಗುರಿಯಾಗಿದ್ದ ನಾಲ್ವರು ಶಾಸಕರಲ್ಲಿ ಪ್ರಮುಖ ಶಾಸಕರೊಬ್ಬರಿಗೆ 100 ಕೋಟಿ ರೂಪಾಯಿಗು ಅಧಿಕ ಹಣದ ಆಮಿಷವೊಡ್ಡಿದ್ದರು ಎನ್ನಲಾಗಿದೆ. ಉಳಿದ ಶಾಸಕರಿಗೆ ತಲಾ 50 ಕೋಟಿ ರೂಪಾಯಿ ಆಸೆ ಹುಟ್ಟಿಸಿದ್ದರು ಎಂದು ಸೈಬರಾಬಾದ್​ ಪೊಲೀಸ್ ಮುಖ್ಯಸ್ಥ ಸ್ಟೆಫೆನ್​ ರವೀಂದ್ರ ಅವರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

    ವಿಜಯವಾಣಿ ಅಚ್ಚಗನ್ನಡ ಅಭಿಯಾನ: ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

    ಪ್ರತಿದಿನ ಎಷ್ಟು ಪ್ರಮಾಣದ ಪ್ರೊಟೀನ್ ಸೇವಿಸಬೇಕೆಂಬ ಗೊಂದಲಕ್ಕೆ ಇಲ್ಲಿದೆ ಪರಿಹಾರ…

    ರೇಣುಕಾಚಾರ್ಯ ಸೋದರನ ಪುತ್ರ ನಿಗೂಢ ಸಾವು; ಕೊಲೆ ದೂರು ದಾಖಲಿಸಿದ ಕುಟುಂಬಸ್ಥರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts