ಧೋನಿ ನಿವೃತ್ತಿ ಪ್ರಶ್ನಿಸಿದವರಿಗೆ ಕಪಿಲ್ ದೇವ್ ಕೊಟ್ಟ ಉತ್ತರ ಹೇಗಿದೆ ನೋಡಿ

Kapil Dev
Published on

ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಐಪಿಎಲ್ ನಿವೃತ್ತಿ ಬಗ್ಗೆ ಸಾಕಷ್ಟು ಚರ್ಚೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆನ್ನಲ್ಲೇ ಇದೀಗ ಕಪಿಲ್ ದೇವ್ ತಮ್ಮದೇ ಶೈಲಿಯಲ್ಲಿ ಉತ್ತರವನ್ನು ನೀಡಿದ್ದಾರೆ.

ಐಪಿಎಲ್ 2023ರ ಫೈನಲ್ ಪಂದ್ಯ ಮುಗಿಯುವ ಮುನ್ನವೇ ಕ್ರಿಕೆಟ್ ಅಭಿಮಾನಿಗಳು ಈ ಬಾರಿಯ ಐಪಿಎಲ್ ಧೋನಿ ಅವರಿಗೆ ಕೊನೆಯಾಗಲಿದೆ! ಈ ಸೀಸನ್ ಬಳಿಕ ಧೋನಿ ನಿವೃತ್ತಿ ಘೋಷಿಸಲಿದ್ದಾರೆ ಎಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಈ ಚರ್ಚೆಗೆ ತೆರೆ ಎಳೆಯಲು ಮುಂದಾದ ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರ ಕಪಿಲ್ ದೇವ್, ಖಡಕ್ ಆಗಿ ಉತ್ತರ ನೀಡಿದ್ದಾರೆ.

ಕಳೆದ 15 ವರ್ಷಗಳಿಂದ ಧೋನಿ ಅವರು ತಮ್ಮ ಸಾಮರ್ಥ್ಯವೇನು ಎಂಬುದನ್ನು ಸಾಬೀತುಪಡಿಸಿದ್ದಾರೆ. ತಮ್ಮ ಪಾತ್ರವನ್ನು ಎಂ.ಎಸ್ ಧೋನಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಧೋನಿಯ ಅಪಾರ ಕೊಡುಗೆಗಳಿಗೆ ನಾವು ಸದಾ ಆಭಾರಿಯಾಗಿರಬೇಕು ಎಂದು ಕಪಿಲ್ ದೇವ್ ಹೇಳಿದ್ದಾರೆ.

ಧೋನಿ ನಾಯಕನಾಗಿ ತಮ್ಮ ತಂಡ ಚೆನ್ನೈ ಸೂಪರ್ ಕಿಂಗ್ಸ್​ಗೆ ಐದು ಬಾರಿ ಟ್ರೋಫಿಯನ್ನು ಗೆಲ್ಲಿಸಿಕೊಟ್ಟಿದ್ದಾರೆ. ತಮ್ಮ ಕೆಲಸವನ್ನು ಧೋನಿ ಈಗಾಗಲೇ ಮಾಡಿ ಮುಗಿಸಿದ್ದಾರೆ. ಇನ್ನು ಧೋನಿ ಅವರಿಂದ ನೀವೇನು ಬಯಸುತ್ತೀರಾ? ಜೀವನದುದ್ದಕ್ಕೂ ಅವರು ಆಟವನ್ನು ಆಡುತ್ತಿರಬೇಕಾ? ಅದು ಸಾಧ್ಯವಿಲ್ಲ! ಬದಲಾಗಿ ಕಳೆದ 15 ವರ್ಷಗಳ ಅವರ ಕೊಡುಗೆಗೆ ನಾವು ಧನ್ಯವಾದ ತಿಳಿಸಬೇಕು ಎಂದು ಕಪಿಲ್ ಹೇಳಿದ್ದಾರೆ.

ಒಬ್ಬ ಕ್ಯಾಪ್ಟನ್ ಆಗಿ ಧೋನಿ ತಮ್ಮ ಜವಾಬ್ದಾರಿಯುತ ಆಟವನ್ನು ಆಡಿದ್ದಾರೆ. ತಮ್ಮ ತಂಡವನ್ನು ಫೈನಲ್ ಹಂತಕ್ಕೆ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಸಾಧನೆಗಳು ಇಂದಿಗೂ ನಮ್ಮ ಮನದಲ್ಲಿ ಹಸಿರಾಗಿ ಉಳಿದಿವೆ. ಧೋನಿ ಅತ್ಯಧಿಕ ರನ್​​ಗಳನ್ನು ಗಳಿಸದೆ ಇರಬಹುದು. ಆದ್ರೆ, ನಾಯಕನಾಗಿ ಧೋನಿ ಮಾಡಿರುವ ಜಾದು ಕ್ರಿಕೆಟ್ ಲೋಕದಲ್ಲಿ ನೆನಪಿಟ್ಟುಕೊಳ್ಳುವಂಥದ್ದು ಎಂದು ಕಪಿಲ್ ದೇವ್ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net